ರೊಸಾನ್ನೆ ಮತ್ತು ಉಣ್ಣಿ: ಸೋಶಿಯಲ್ ಮೀಡಿಯಾದ ಸಾಧ್ಯತೆಗಳು ಮತ್ತು ಅಪಾಯಗಳು

0
257

ಅಮೆರಿಕದ ಪ್ರಸಿದ್ಧ ಹಾಸ್ಯ ನಟಿ ರೊಸಾನ್ನೆ ಬಾರ್ ಅವರು ನಡೆಸಿಕೊಡುವ ಟಿವಿ ಕಾರ್ಯಕ್ರಮವನ್ನು ಕಳೆದ ಮೇ ತಿಂಗಳಿನಲ್ಲಿ ಎಬಿಸಿ ನೆಟ್‍ವರ್ಕ್ ಸಂಸ್ಥೆಯು ದಿಢೀರ್ ಆಗಿ ರದ್ದುಪಡಿಸಿತು. ಅದಕ್ಕೆ ಕಾರಣ ಏನೆಂದರೆ, ರೊಸಾನ್ನೆ ಮಾಡಿದ ಒಂದು ಟ್ವೀಟ್.
“Muslim brotherhood & planet of the apes had a baby=vj”
`ಮುಸ್ಲಿಮ್ ಬ್ರದರ್‍ಹುಡ್ ಮತ್ತು ಬಾಲ ಇಲ್ಲದ ಕೋತಿಗಳ ಕೂಡಿಕೆಗೆ ಹುಟ್ಟಿದ ಮಗು ವಿಜೆ.’
ಈ ಟ್ವೀಟ್‍ನ ಹಿನ್ನೆಲೆ ಹೀಗಿದೆ:
“ಫ್ರಾನ್ಸ್ ನ ಅಧ್ಯಕ್ಷೀಯ ಹುದ್ದೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಮೇಲೆ ಅಮೇರಿಕದ ಅಧ್ಯಕ್ಷ ಒಬಾಮ ಅವರು ಬೇಹುಗಾರಿಕೆ ನಡೆಸಿದ್ದರು ಮತ್ತು ಈ ಬೇಹುಗಾರಿಕೆಯ ರಹಸ್ಯವನ್ನು ಕಾಪಾಡಿಕೊಳ್ಳುವಲ್ಲಿ ಅವರ ಆಪ್ತ ಸಲಹೆಗಾರ್ತಿ ವೆಲರಿ ಜಾರೆಟ್ಟ್ ((Valerie Jarrett-vj)) ಸಹಕಾರ ನೀಡಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದ್ದ ಅಭಿಪ್ರಾಯಕ್ಕೆ ಪ್ರತಿಕ್ರಿಯೆಯಾಗಿ ರೊಸಾನ್ನೇ ಈ ರೀತಿ ಟ್ವೀಟ್ ಮಾಡಿದ್ದರು.
ವೆಲರಿ ಜಾರೆಟ್ಟ್ ಅವರು ಹುಟ್ಟಿದ್ದು ಇರಾನ್‍ನಲ್ಲಿ. ಅವರಿಗೆ 7 ವರ್ಷವಾದಾಗ ಹೆತ್ತವರು ಅಮೇರಿಕಕ್ಕೆ ವಲಸೆ ಬಂದಿದ್ದರು. ಜನಾಂಗೀಯವಾಗಿ ಅವರು ಕರಿವರ್ಣದಲ್ಲಿ ಗುರುತಿಸಿಕೊಂಡವರು. ರೊಸಾನ್ನೆಯಾದರೋ ಅತ್ಯಂತ ಜನಪ್ರಿಯ ನಟಿ. ಆಕೆಯ ಶೋವನ್ನು ಪ್ರತಿವಾರ ಜಾಗತಿಕವಾಗಿ 18 ಮಿಲಿಯ ಮಂದಿ ವೀಕ್ಷಿಸುತ್ತಿದ್ದಾರೆ. ಎಬಿಸಿ ನೆಟ್‍ವರ್ಕ್‍ಗೆ ಸಿಗುವ ಜಾಹೀರಾತಿನಿಂದಲೇ ಆಕೆ ವಾರ್ಷಿಕವಾಗಿ 60 ಮಿಲಿಯನ್ ಡಾಲರ್ ಆದಾಯ ಗಳಿಸುತ್ತಿದ್ದರು. ಆದರೆ ರೊಸಾನ್ನೆಯವರ ಈ ಟ್ವೀಟನ್ನು ಜನರು ಇಷ್ಟಪಡಲಿಲ್ಲ. ತೀವ್ರ ಜನಾಂಗೀಯ ವಾದದಿಂದ ಕೂಡಿದ ಟ್ವೀಟ್ ಎಂಬುದಾಗಿ ಅದು ಕರೆಯಿಸಿಕೊಂಡಿತು. ರೊಸಾನ್ನೆ ತಕ್ಷಣ ಆ ಟ್ವೀಟ್‍ನ್ನು ಅಳಿಸಿ ಹಾಕಿದರು. ತಪ್ಪಾಯಿತು ಎಂದು ಕ್ಷಮೆ ಕೋರಿದರು. ಹಾಗಿದ್ದೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ತಣಿಯಲಿಲ್ಲ.ಎಬಿಸಿ ನೆಟ್‍ವರ್ಕ್ ಆಕೆಯ ಕಾರ್ಯಕ್ರಮವನ್ನು ರದ್ದುಗೊಳಿಸಿತು. ಅದರ ಬೆನ್ನಿಗೇ ಆಸ್ಟ್ರೇಲಿಯಾದ ಟೆನ್ ಟಿವಿ ನೆಟ್‍ವರ್ಕ್ ಕೂಡ ರೋಸಾನ್ನೆ ಕಾರ್ಯಕ್ರಮಕ್ಕೆ ಬಾಗಿಲು ಮುಚ್ಚಿತು.
ಅತುಲ್ ಕೊಚ್ಚಾರ್
ಅಭಿಷೇಕ್ ಮಿಶ್ರ
ಪೂಜಾ ಸಿಂಗ್
ತನ್ವಿಸೇಥ್ ಮತ್ತು ಮುಹಮ್ಮದ್ ಅನಸ್ ಸಿದ್ದೀಕಿ
ಹೆಸರುಗಳು ಅನೇಕ ಇವೆ. ಸಾಮಾಜಿಕ ಜಾಲತಾಣಗಳ ದೆಸೆಯಿಂದಾಗಿ ಇವತ್ತು ಯಾವುದೋ ಹಳ್ಳಿಯ ಅನಾಮಿಕ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಸೆಲೆಬ್ರಿಟಿಯಾಗಿ ಬಿಡುತ್ತಾನೆ/ಳೆ. ಕಳೆದವಾರ ಸಿನಿಮಾ ನಟ ಕಮಲ್ ಹಾಸನ್ ಅವರು ಕೇರಳದ ಅಲಪ್ಪುಝದಲ್ಲಿ ರುವ ರಾಕೇಶ್ ಉಣ್ಣಿ ಎಂಬವನನ್ನು ಹುಡುಕಿಕೊಂಡು ಹೋದರು. ರಬ್ಬರ್ ಮರದಿಂದ ಹಾಲು ಸಂಗ್ರಹಿಸುವ ಕೂಲಿ ಕಾರ್ಮಿಕ ರಾಕೇಶ್. ಕೆಲಸದ ವಿರಾಮದ ನಡುವೆ ಆತ ಮತ್ತು ಗೆಳೆಯ ರಬ್ಬರ್ ಮರದ ಬುಡದಲ್ಲಿ ಕುಳಿತರು. ಉಣ್ಣಿ ಹಾಡಿದ. ಗೆಳೆಯ ಅದನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿದ. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ. ಆ ಹಾಡು ಕಮಲ್ ಹಾಸನ್ ನಟಿಸಿದ `ವಿಶ್ವರೂಪಂ’ ಸಿನಿಮಾದಲ್ಲಿ ಬಳಕೆಯಾಗಿತ್ತು. `ಉಣ್ಣೈ ಕಾನಧು’ ಎಂಬ ಹೆಸರಲ್ಲಿ ಆ ಹಾಡು ಒಬ್ಬರಿಂದ ಒಬ್ಬರಿಗೆ ದಾಟಿ ಪ್ರಸಿದ್ಧ ಗಾಯಕ ಶಂಕರ್ ಮಹಾದೇವನ್ ಅವರಿಗೆ ತಲುಪಿತು. ಅವರು ಆ ವೀಡಿಯೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡರು. ಹೀಗೆ, ರಬ್ಬರ್ ಮರದ ತೋಟದಲ್ಲಿ ಆಯಾಸ ಕಳೆಯಲು ಹಾಡುತ್ತಿದ್ದ ರಾಕೇಶ್ ಎಂಬ ಕೂಲಿ ಕಾರ್ಮಿಕ ದಿನ ಬೆಳಗಾಗುವುದರಲ್ಲಿ ಸೆಲೆಬ್ರಿಟಿಯಾಗಿ ಬಿಟ್ಟ. ಸಾಮಾಜಿಕ ಜಾಲತಾಣಗಳ ಸಾಮಥ್ರ್ಯ ಇದು. ಅದು ಯಾರನ್ನೂ ಎತ್ತರಕ್ಕೆ ಕೊಂಡೊಯ್ಯ ಬಹುದು. ಯಾರನ್ನೂ ಪಾತಾಳಕ್ಕೂ ತಳ್ಳಬಹುದು.

ಅಮೇರಿಕದಲ್ಲಿ ಪ್ರಸಾರವಾಗುತ್ತಿರುವ ಟಿವಿ ಧಾರಾವಾಹಿಗಳಲ್ಲಿ ಕ್ವಾಂಟಿಕೋ ಎಂಬ ಹೆಸರಿನ ಧಾರಾವಾಹಿ ಕೂಡ ಒಂದು. ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಇದರಲ್ಲಿ ನಟಿಸುತ್ತಿದ್ದಾರೆ. ಭಾರತ-ಪಾಕ್‍ಗಳ ನಡುವೆ ನ್ಯೂಯಾರ್ಕ್‍ನಲ್ಲಿ ಶೃಂಗ ಸಭೆ ನಡೆಯುತ್ತಿದ್ದ ವೇಳೆ ಅಮೇರಿಕದ ಮ್ಯಾನ್‍ಹಾಟ್‍ನಲ್ಲಿ ಪರಮಾಣು ದಾಳಿಗೆ ಸಂಚು ರೂಪಿಸಲಾಗಿತ್ತು ಎಂಬ ಕತೆಯ ಎಳೆಯೊಂದು ಈ ಧಾರಾವಾಹಿಯಲ್ಲಿದೆ. ಇದರಲ್ಲಿ ಪ್ರಿಯಂಕಾ ಚೋಪ್ರಾರು ಅಮೇರಿಕದ ಗುಪ್ತಚರ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್(FBI)ನ ಏಜೆಂಟ್ ಅಲೆಕ್ಸ್ ಪ್ಯಾರಿಶ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪರಮಾಣು ದಾಳಿಯ ಸಂಚು ರೂಪಿಸಿರುವುದು ಪಾಕಿಸ್ತಾನದ ವಿದ್ಯಾರ್ಥಿಗಳು ಎಂದು ಆರಂಭದಲ್ಲಿ ಶಂಕಿಸಲಾಗುತ್ತದೆ. ಆದರೆ ಒಬ್ಬ ಉಗ್ರನ ಬಳಿ ರುದ್ರಾಕ್ಷಿ ಇರುವುದನ್ನು ಪ್ಯಾರಿಶ್ ಪತ್ತೆ ಹಚ್ಚುತ್ತಾಳೆ. ಹೀಗಾಗಿ, ಈ ದಾಳಿಗೆಯ ಸಂಚು ರೂಪಿಸಿರುವುದು ಭಾರತೀಯರು ಮತ್ತು ಪಾಕಿಸ್ತಾನಿನ ಮೇಲೆ ಅನುಮಾನ ಬರುವಂತೆ ಸಂಚು ಹೆಣೆಯಲಾಗಿತ್ತು ಎಂಬುದಾಗಿ ಪ್ಯಾರಿಸ್ ತೀರ್ಮಾನಿಸುತ್ತಾಳೆ…
ಜೂನ್‍ನಲ್ಲಿ ಪ್ರಸಾರವಾದ ಧಾರಾವಾಹಿಯ ಈ ದೃಶ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗುತ್ತದೆ. ಭಾರತವನ್ನು ಸಂಚುಕೋರನ ಸ್ಥಾನದಲ್ಲಿ ಕೂರಿಸಲು ಪ್ರಿಯಾಂಕಗೆ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಯೊಂದಿಗೆ ಆರಂಭವಾದ ಟೀಕೆ-ಟಿಪ್ಪಣಿ, ಪ್ರತಿಕ್ರಿಯೆಗಳು, ಅಂತಿಮವಾಗಿ ಆಕೆಯನ್ನು ದೇಶ ವಿರೋಧಿ, ನಕಲಿ ಸೆಕ್ಯುಲರ್ ಎಂಬಿತ್ಯಾದಿಯಾಗಿ ನಿಂದಿಸುವ ಹಂತಕ್ಕೆ ತಲುಪುತ್ತದೆ. ಈ ಟೀಕೆಯ ಅಬ್ಬರಕ್ಕೆ ಂಃಅ ನೆಟ್‍ವರ್ಕ್ ಮಣಿಯುತ್ತದೆ. ಕ್ಷಮೆ ಯಾಚಿಸುತ್ತದೆ. ಪ್ರಿಯಂಕಾಳೂ ಕ್ಷಮೆ ಯಾಚಿಸುತ್ತಾರೆ. ಇದೇ ವೇಳೆ,
It’s sad to see that you have not respected the sentiments of Hindus who have been terrorized by Islam over 2000 years. Shame on you..
“2000 ವರ್ಷಗಳಿಂದೀಚೆಗೂ ಇಸ್ಲಾಮ್‍ನಿಂದ ಭಯೋತ್ಪಾದನೆಗೆ ಒಳಗಾಗಿರುವ ಹಿಂದೂಗಳ ಭಾವನೆಗಳನ್ನು ನೀವು ಗೌರವಿಸದೇ ಹೋದುದು ವಿಷಾದಕರ. ನಿಮಗೆ ನಾಚಿಕೆಯಾಗಬೇಕು…”
ಎಂದು ಪ್ರಿಯಾಂಕ ಚೋಪ್ರಾರನ್ನು ಉದ್ದೇಶಿಸಿ ಟ್ವೀಟ್ ಒಂದು ಕಾಣಿಸಿಕೊಳ್ಳುತ್ತದೆ. ಟ್ವೀಟಿಸಿದಾತ ಅತುಲ್ ಕೊಚ್ಚಾರ್ ಎಂಬ ಬಾಣಸಿಗ. ದುಬೈಯ M.J. Marriott Marquis Hotelನಲ್ಲಿ ರಂಗ್ ಮಹಲ್ ರೆಸ್ಟೋರೆಂಟನ್ನು ಅವರು ನಡೆಸುತ್ತಿದ್ದಾರೆ. ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿರುವ ಮೆಕ್ಲಿನ್ ಸ್ಟಾರ್ ಬಹುಮಾನ ಪಡೆದಿರುವ ಸೆಲೆಬ್ರಿಟಿ ಬಾಣಸಿಗ. ಅಮೇರಿಕ ಮತ್ತು ಬ್ರಿಟನ್‍ನಲ್ಲಿಯೂ ರಂಗ್ ಮಹಲ್ ರೆಸ್ಟೋರೆಂಟ್ ಶಾಖೆಗಳನ್ನು ಹೊಂದಿದೆ. ಕೊಚ್ಚಾರ್‍ ರ ಈ ಟ್ವೀಟ್‍ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. FBI ಏಜೆಂಟ್ ಪಾತ್ರವಾಗಿ ಪ್ರಿಯಾಂಕ ನೀಡಿದ ಅಭಿನಯಕ್ಕೂ ಇಸ್ಲಾಮ್‍ಗೂ ನಡುವೆ ತಳಕು ಹಾಕಿದ ಕೊಚ್ಚಾರ್‍ ರ ಮನಸ್ಥಿತಿಯನ್ನು ಧಾರಾಳ ಜನರು ಖಂಡಿಸಿದರು. ರಂಗ್ ಮಹಲ್ ರೆಸ್ಟೋರೆಂಟ್‍ಗೆ ಬಾಯ್ಕಾಟ್ ಘೋಷಿಸಿದರು. ಇನ್ನೊಮ್ಮೆ ನಾವು ಅಲ್ಲಿಗೆ ಗ್ರಾಹಕರಾಗಿ ತೆರಳಲಾರೆವು ಎಂದರು. ಕೊಚ್ಚಾರ್ ಕ್ಷಮೆ ಯಾಚಿಸಿದರು. ಟ್ವೀಟ್ ಮಾಡಿದ ಕೇವಲ 48 ಗಂಟೆಗಳೊಳಗೆ ಕ್ಷಮೆಯಾಚನೆಯ 2 ಟ್ವೀಟ್‍ಗಳನ್ನು ಪ್ರಕಟಿಸಿದರು. ತನ್ನ ಟ್ವೀಟನ್ನು ಅಳಸಿ ಹಾಕಿದರು. ಆದರೂ M.J. Marriott Marquis Hotel ಆ ಟ್ವೀಟನ್ನು ಅತಿ ಗಂಭೀರವಾಗಿ ಪರಿಗಣಿಸಿತು. ಅದರಲ್ಲಿ ಇಸ್ಲಾಮೋಫೋಬಿಯಾ ಮತ್ತು ಪ್ರಚೋದನಾಭಾವವನ್ನು ಕಂಡುಕೊಂಡಿತು. ಮಾತ್ರವಲ್ಲ, ರಂಗ್ ಮಹಲ್‍ನೊಂದಿಗೆ ತನ್ನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡು ತಮಗೂ ಕೊಚ್ಚಾರ್‍ ಗೂ ಯಾವ ಸಂಬಂಧವೂ ಇಲ್ಲ ಎಂದು ಘೋಷಿಸಿತು. ಇದರ ಜೊತೆಗೇ ರಂಗ್ ಮಹಲ್ ರೆಸ್ಟೋರೆಂಟನ್ನು ಸಂಪರ್ಕಿಸುವ ಆ್ಯಪನ್ನು ತನ್ನ ಪಟ್ಟಿಯಿಂದ ಹಲಾಲ್ ಜೆಮ್ಸ್ ಕಿತ್ತು ಹಾಕಿತು. ಹೀಗೆ ಕೇವಲ ಒಂದೇ ಒಂದು ಟ್ವೀಟ್ ಕೊಚ್ಚಾರ್ ಎಂಬ ಅಂತಾರಾಷ್ಟ್ರೀಯ ಮನ್ನಣೆ ಪಡೆದ ಬಾಣಸಿಗನನ್ನು 48 ಗಂಟೆಗಳೊಳಗೆ ವಿಲನ್ ಆಗಿ ಮಾರ್ಪಡಿಸಿ ಬಿಟ್ಟಿತು. ಇದು ಸದ್ಯದ ಜಗತ್ತು. ಎಲ್ಲವನ್ನೂ ಸಾಮಾಜಿಕ ತಾಣಗಳೇ ನಿರ್ಧರಿಸಿ ಬಿಡುವಂಥ ಸ್ಥಿತಿಯೊಂದು ನಿರ್ಮಾಣವಾಗಿ ಬಿಟ್ಟಿದೆ. ಈ ಹಿಂದೆ, ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಜನಸಾಮಾನ್ಯರಿಗೆ ಅವಕಾಶಗಳು ಇರಲಿಲ್ಲ. ಸೆಲೆಬ್ರಿಟಿಗಳು, ರಾಜಕಾರಣಿಗಳು ಮುಂತಾದ ಮೇಲ್‍ಸ್ತರದವರ ಭಾವನೆಗಳನ್ನು ಮಾತ್ರ ಮುದ್ರಣ ಮಾಧ್ಯಮಗಳು ಅಚ್ಚು ಹಾಕುತ್ತಿದ್ದುವು. ಅವು ಜನಸಾಮಾನ್ಯರ ಬರಹಗಳಿಗೆ ಸ್ಪೇಸ್ ಅನ್ನೂ ಕೊಡುತ್ತಿರಲಿಲ್ಲ. ಮೇಲ್‍ಸ್ತರದವರ ಅಭಿಪ್ರಾಯವನ್ನು ಓದಿಕೊಂಡು ಸುಮ್ಮನಿರಬೇಕಾದ ವಾತಾವರಣ ವೊಂದು ಹಿಂದೆ ಅಸ್ತಿತ್ವದಲ್ಲಿತ್ತು. ಇದನ್ನು ಒಡೆದು ಹಾಕಿದ್ದೇ ಸಾಮಾಜಿಕ ಜಾಲತಾಣಗಳು.

ಜನಸಾಮಾನ್ಯರನ್ನು ಮುಖ್ಯವಾಹಿನಿಗೆ ತರುವಲ್ಲಿ ಇದರ ಪಾತ್ರ ಬಹಳ ನಿರ್ಣಾಯಕವಾದುದು. ಈ ದಿಢೀರ್ ಅವಕಾಶವು ಬಳಕೆದಾರರಲ್ಲಿ ರೋಮಾಂಚನವನ್ನು ಉಂಟುಮಾಡಿತು. ಏನು ಬರೆದರೂ ದಕ್ಕುತ್ತದೆ ಎಂಬ ನಿರಾಳ ಭಾವವೊಂದು ಅವರೊಳಗೆ ಸೃಷ್ಟಿಯಾಯಿತು. ದಿಢೀರ್ ಪ್ರಚಾರ ಬೇಕೆಂದರೆ, ಒಂದು ವಿವಾದಾತ್ಮಕ ಟ್ವೀಟ್ ಮಾಡಿದರೆ ಸಾಕಾಗುತ್ತದೆ. ತಕ್ಷಣ ಕಿಡಿ ಹೊತ್ತಿಕೊಳ್ಳುತ್ತದೆ. ಅಭಿಷೇಕ್ ಮಿಶ್ರ ಇಂಥದ್ದೇ ಒಂದು ತಳಿ. ಲಕ್ನೋದಲ್ಲಿ ಐಟಿ ಕಂಪೆನಿಯೊಂದರಲ್ಲಿ ಉದ್ಯೋಗಿ ಯಾಗಿರುವ ಆತ ತಿಂಗಳುಗಳ ಹಿಂದೆ ಸುದ್ದಿಯಲ್ಲಿದ್ದ. ಅದಕ್ಕೆ ಕಾರಣ ಆತ ಟ್ವೀಟರ್‍ನಲ್ಲಿ ಹಾಕಿದ ಸ್ಕ್ರೀನ್ ಶಾಟ್ ಮತ್ತು ಒಂದು ಟ್ವೀಟ್. ಓಲಾ ಕ್ಯಾಬ್ ಅನ್ನು ಬುಕ್ಕಿಂಗ್ ಮಾಡಿದ ಆತ ಬಳಿಕ ರದ್ದು ಮಾಡಿದ. ಕಾರಣ ಏನೆಂದರೆ, ಓಲಾದ ಡ್ರೈವರ್ ಮಸೂದ್ ಆಲಂ ಎನ್ನುವ ಮುಸ್ಲಿಮ್. `ತಾನು ಜಿಹಾದಿಗೆ ಹಣ ನೀಡಲಾರೆ’ ಎಂದು ಆತ ತನ್ನ ರದ್ದತಿಗೆ ಸಮರ್ಥನೆಯನ್ನು ಕೊಟ್ಟಿದ್ದ. ಬುಕ್ಕಿಂಗ್ ರದ್ದು ಮಾಡಿದುದನ್ನು ಸ್ಕ್ರೀನ್ ಶಾಟ್ ತೆಗೆದು ಟ್ವೀಟ್ ಮಾಡಿದ್ದ. ಈ ಬೆಳವಣಿಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಗಾಯಿತು. `ಭಾರತ ಪೆಟ್ರೋಲ್ ಅಮದು ಮಾಡುತ್ತಿರುವುದು ಮುಸ್ಲಿಮ್ ರಾಷ್ಟ್ರಗಳಿಂದ. ಆದ್ದರಿಂದ ನೀನು ಎತ್ತಿನ ಗಾಡಿಯಲ್ಲಿ ಪ್ರಯಾಣಿಸು’ ಎಂದು ಹಲವರು ಅಭಿಷೇಕ್‍ನನ್ನು ತಿವಿದರು. ನಿಜಕ್ಕೂ, ಇಂಥ ಟೀಕೆಯಿಂದ ಆತ ಪಾಠ ಕಲಿತನೋ ಅಥವಾ ಇಂಥದ್ದೊಂದು ಪ್ರಚಾರವನ್ನು ಬಯಸಿಯೇ ಆತ ಹಾಗೆ ಟ್ವೀಟ್ ಮಾಡಿದನೋ ಯಾರಿಗೂ ಗೊತ್ತಿಲ್ಲ. ಲಕ್ನೋದ ಐಟಿ ಕಂಪೆನಿಯ ನಾಲ್ಕು ಗೋಡೆಯೊಳಗೆ ಸವೆದು ಹೋಗುತ್ತಿದ್ದ ಅಭಿಷೇಕ್ ಎಂಬ ಯುವಕ ಒಂದೇ ಒಂದು ಟ್ವೀಟ್ ಮೂಲಕ ರಾಷ್ಟ್ರ ಮಟ್ಟದ ವ್ಯಕ್ತಿಯಾದ. ಯಾವ ಶ್ರಮವನ್ನೂ ಹಾಕದೇ ದಕ್ಕಿದ ಪ್ರಚಾರ ಇದು. ಪೂಜಾ ಸಿಂಗ್ ಮಾಡಿದ್ದೂ ಇದನ್ನೇ. ಮೊಬೈಲ್ ಕಂಪೆನಿ ಏರ್‍ಟೆಲ್‍ನೊಂದಿಗೆ ಹೇಳಿಕೊಳ್ಳುವುದಕ್ಕೆ ಆಕೆ ಯಲ್ಲಿ ದೂರುಗಳಿತ್ತು. ಆ ಬಗ್ಗೆ ಆಕೆ ಟ್ವೀಟ್ ಮಾಡಿದಳು. ಅದಕ್ಕೆ ಉತ್ತರಿಸಲು ಶುಹೈಬ್ ಎಂಬವನನ್ನು ಏರ್ ಟೆಲ್ ನಿಯೋಜಿಸಿತು. ಆಕೆ ಆತನೊಂದಿಗೆ ಮಾತನಾಡಲು ನಿರಾಕರಿಸಿ ಟ್ವೀಟ್ ಮಾಡಿದಳು. ಮುಸ್ಲಿಮನೊಂದಿಗೆ ಮಾತಾಡಲಾರೆ ಎಂದಳು. ಬಳಿಕ ಗಗನ್ ಜೋತ್ ಎಂಬವನನ್ನು ಬದಲಿಯಾಗಿ ನೀಡಲಾಯಿತು. ಟ್ವೀಟರ್ ಮೂಲಕ ನಡೆದ ಈ ಇಡೀ ಪ್ರಸಂಗವು ವೈಯಕ್ತಿಕ ಸ್ವಾತಂತ್ರ್ಯ, ಧಾರ್ಮಿಕ ಅಸಹನೆ, ಏರ್ ಟೆಲ್ ಕಂಪೆನಿಯ ಸರಿ-ತಪ್ಪುಗಳು ಇತ್ಯಾದಿಗಳ ಸುತ್ತ ಚರ್ಚೆಗೆ ವೇದಿಕೆಯೊಂದನ್ನು ಒದಗಿಸಿತು. ತನ್ವಿ ಸೇಥ್‍ಳ ಪಾಸ್ ಪೋರ್ಟ್ ಪ್ರಕರಣವೂ ಇದ ಕ್ಕಿಂತ ಹೊರತಲ್ಲ. ಮುಹಮ್ಮದ್ ಅನಸ್ ಸಿದ್ದೀಕಿ ಎಂಬ ಮುಸ್ಲಿಮ್ ಆಕೆಯ ಪತಿ. ಹಿಂದೂ ಧರ್ಮಕ್ಕೆ ಮತಾಂತರವಾಗಿ ಹೆಸರು, ವಿಳಾಸ ಬದಲಿಸಿಕೊಳ್ಳದಿದ್ದರೆ ಪಾಸ್‍ ಪೋರ್ಟ್ ನೀಡುವುದಿಲ್ಲ ಎಂದು ಸಿದ್ದೀಕಿಗೆ ಉತ್ತರ ಪ್ರದೇಶದ ಪಾಸ್‍ ಪೋರ್ಟ್ ಕಂಪೆನಿಯೊಂದರ ಮುಖ್ಯ ನಿರ್ವಹಣಾಧಿಕಾರಿ ವಿಕಾಸ್ ಮಿಶ್ರಾ ಧಮಕಿ ಹಾಕುತ್ತಾನೆ. ತಕ್ಷಣ ಆ ದಂಪತಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‍ರಿಗೆ ಟ್ವೀಟ್ ಮಾಡುತ್ತಾರೆ. ಮಿಶ್ರಾಗೆ ವರ್ಗಾವಣೆಯಾಗುತ್ತದೆ. ದಂಪತಿಗೆ ಪಾಸ್‍ ಪೋರ್ಟ್ ಲಭ್ಯವಾಗುತ್ತದೆ. ವಿಷಯ ಇದರಾಚೆಗಿನದು. ಸಾಮಾಜಿಕ ಜಾಲತಾಣಗಳು ಇರದೇ ಇದ್ದ 2 ದಶಕಗಳ ಹಿಂದೆ ಇಂಥ ಘಟನೆಗಳು ನಡೆದಿರಲಾರದೇ? ರಾಕೇಶ್ ಉಣ್ಣಿಯಂಥ ಶ್ರಮಿಕ ಹುಡುಗ ಯಾವುದೋ ಗೇರು ಮರದ ಅಡಿಯಲ್ಲಿ ಕೂತು ಹಾಡಿರಲಾರನೇ? ಮುಸ್ಲಿಮ್ ಡ್ರೈವರನ್ನು ದ್ವೇಷಿಸಿದ ಅಭಿಷೇಕ್‍ನಂಥವ, ಪೂಜಾಳಂಥವರು ಆಗ ಇದ್ದಿರಲಾರರೇ? ಆಗಿನ ಸನ್ನಿವೇಶ ಹೇಗಿರಬಹುದು?
ವ್ಯಕ್ತಿಯನ್ನು ದಿನ ಬೆಳಗಾಗುವುದರೊಳಗೆ ಯಾವ ಸ್ಥಿತಿಗೂ ತಳ್ಳಬಲ್ಲ ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರ ಅಗತ್ಯ. ತಪ್ಪಿದರೆ ಜನರು ಥಳಿಸಿಕೊಲ್ಲಲೂ ಬಹುದು.