ಮುರಿದ ಪ್ರತಿಮೆಗಳ ಮಾತುಕತೆ

0
280

ದಿನದ ಮಿಂಚು

ಕಸದ ತೊಟ್ಟಿಯಲ್ಲಿದ್ದ ಆ ಎರಡು ಪ್ರತಿಮೆಗಳು ಪರಸ್ಪರ ಮಾತಾಡಿಕೊಂಡವು. “ನನ್ನ ಈ ಸ್ಥಿತಿಗೆ ನಿನ್ನ ಬೆಂಬಲಿಗರೇ ಕಾರಣ..” ಎಂದು ಒಂದು ಪ್ರತಿಮೆ ಹೇಳುವಾಗ, “ನಿನ್ನ ಬೆಂಬಲಿಗರೇ ನನ್ನ ಈ ಸ್ಥಿತಿಗೆ ಕಾರಣ.. ” ಎಂದು ಇನ್ನೊಂದು ಹೇಳಿತು. ಕಸದ ತೊಟ್ಟಿಗೆ ಕುತೂಹಲ. ಈ ಮಾತುಕತೆಯ ಕೊನೆ ಹೇಗಾಗಬಹುದು? ಆರೋಪ- ಪ್ರತ್ಯಾರೋಪಗಳಲ್ಲಿ ಏನೆಲ್ಲ ಇರಬಹುದು? ಸಿದ್ಧಾಂತಗಳ ಮಂಡನೆಯಾದೀತೇ? ಪರಸ್ಪರ ಬೆಂಬಲಿಗರ ಸಮರ್ಥನೆ ನಡೆಯಬಹುದೇ…

ತೊಟ್ಟಿ ಕಾದದ್ದೇ ಬಂತು. ಅವು ಮಾತೇ ಆಡಲಿಲ್ಲ. ಗಾಢ ಮೌನ. ತೊಟ್ಟಿಗೆ ಕಳವಳ, ನಿರಾಶೆ. ಅದು ಈ ಪ್ರತಿಮೆಗಳ ಪರಿಶೀಲನೆಯಲ್ಲಿ ತೊಡಗಿತು. ಕೈ, ಕಾಲು, ಮುಖ ಸಹಿತ ದೇಹದ ಹೆಚ್ಚಿನೆಲ್ಲ ಭಾಗಗಳು ಸಂಪೂರ್ಣ ಜಜ್ಜಿ ಹೋಗಿತ್ತು. ಎಂಥ ಮನುಷ್ಯರಪ್ಪಾ.. ಎಂದು ತೊಟ್ಟಿ ಅಂದುಕೊಳ್ಳುತ್ತಿರುವಾಗಲೇ ಅವೆರಡೂ ಜೀವ ಬಂದಂತೆ ಚಲಿಸಿದವು. ಹತ್ತಿರ ನಿಂತವು. ಪರಸ್ಪರ ಆಲಿಂಗಿಸಿಕೊಳ್ಳುತ್ತಾ ಹೇಳಿದುವು,

ಅವರು ನಮ್ಮ ಬೆಂಬಲಿಗರೇ ಅಲ್ಲ…

ಏ. ಕೆ. ಕುಕ್ಕಿಲ