ಮುರ್ಸಿಯ ಪರ ರಂಗಕ್ಕಿಳಿದ ಬ್ರಿಟೀಷ್ ಸಂಸದರು

0
568

ಲಂಡನ್; ಸೆರೆಮನೆಯಲ್ಲಿರುವ ಈಜಿಪ್ಟ್ ನ ಮಾಜಿ ಅಧ್ಯಕ್ಷ ಮುಹಮ್ಮದ್ ಮುರ್ಸಿಯವರನ್ನು ಬೆಂಬಲಿಸಿ ಕೆಲ ಬ್ರಿಟೀಷ್ ಸಂಸದರು ರಂಗಕ್ಕಿಳಿದಿದ್ದಾರೆ. ಮುರ್ಸಿಯನ್ನು ಓರ್ವ ಸಾಮಾನ್ಯ ಕೈದಿಯ ತರಹ ನೋಡಿಕೊಳ್ಳಬಾರದೆಂದು ಅವರೇನಾದರೂ ಜೈಲಿನಲ್ಲಿ ನಿಧನರಾದರೆ ಅದರ ಪ್ರತ್ಯಾಘಾತವು ತೀವ್ರವಾಗಿರುವುದೆಂದೂ ಬ್ರಿಟಿಷ್ ಸಂಸದ ಕ್ರಿಸ್ಪನ್ ಬ್ಲಂಡ್ ಮುನ್ನೆಚ್ಚರಿಕೆ ನೀಡಿದ್ದಾರೆಂದು ಅನದೋಲ್ ನ್ಯೂಸ್ ವರದಿ ಮಾಡಿದೆ.


ವೆಸ್ಟ್ ಮಿನಿಸ್ಟರ್ಸ್ ವಿದೇಶಾಂಗ ಸಮಿತಿಯ ಮುಖ್ಯಸ್ಥರಾಗಿರುವ ಕ್ರಿಸ್ಟನ್ ಬ್ಲಂಡ್ ಮುರ್ಸಿಯವರ ಬೇಟಿಗೆ ಅವಕಾಶ ನೀಡಬೇಕೆಂದು ಸರಕಾರಕ್ಕೆ ಪತ್ರ ಬರೆದಿದ್ದರು. ಆದರೆ ಎರಡು ವಾರ ಕಳೆದರೂ ಆ ಪತ್ರಕ್ಕೆ ಉತ್ತರ ನೀಡಿರಲಿಲ್ಲ. ಇನ್ನು ಹತ್ತು ದಿನಗಳೊಳಗಾಗಿ ಲಂಡನ್‍ನಲ್ಲಿರುವ ರಾಯಭಾರಿಯ ಮೂಲಕ ಉತ್ತರಿಸಬೇಕೆಂದು ಸಂಸದರು ಒತ್ತಾಯಿಸಿದ್ದಾರೆ.
ಮುರ್ಸಿಯವರ ಆರೋಗ್ಯವು ಹದೆಗೆಡುತ್ತಿದೆ. ತಕ್ಕ ತುರ್ತು ಚಿಕಿತ್ಸೆ ನೀಡುವ ವ್ಯವಸ್ಥೆ ಜೈಲಿನಲ್ಲಿ ಲಭ್ಯವಿಲ್ಲ ಎಂದು ಅವರ ಕುಟುಂಬಸ್ತರು ಹೇಳುತ್ತಿದ್ದಾರೆ. ಅವರಿಗೆ ಸೂಕ್ತ ತುರ್ತು ಚಿಕಿತ್ಸೆ ನೀಡಬೇಕೆಂದು ಮುರ್ಸಿಯ ಪುತ್ರ ಅಬ್ದುಲ್ಲಾ ಒತ್ತಾಯಿಸಿದ್ದರು. ವಿಚಾರಣೆಯ ವೇಳೆ ಈ ವಿಚಾರ ಪ್ರಸ್ತಾಪಿಸಿದಾಗಲೂ ಅದಕ್ಕೆ ಅನುಮತಿ ದೊರೆತಿಲ್ಲ. ಅವರಿಗಿರುವ ರಕ್ತದೊತ್ತಡ ಮಧುಮೇಹಕ್ಕೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಇದರಿಂದಾಗಿ ಅವರ ಎಡಕಣ್ಣಿನ ದೃಷ್ಟಿಯ ಶಕ್ತಿ ಕುಂದುತ್ತಾ ಬಂದಿದೆಯಾದ್ದರಿಂದ ತುರ್ತು ಶಸ್ತ್ರಕ್ರಿಯೆಗೆ ಒಳಪಡಿಸಬೇಕೆಂದೂ ಅಬ್ದುಲ್ಲಾ ಹೇಳಿದ್ದರು.

ಮುರ್ಸಿಯವರನ್ನು ಜೈಲಿನ ಉನ್ನತಾಧಿಕಾರಿಗಳ ರಿವ್ಯೂ ಪಾನೆಲ್ ಮುಂದೆ ಹಾಜರುಪಡಿಸಬೇಕೆಂದು ಭ್ರಿಟೀಷ್ ಸಂಸದರು ಹೇಳಿದರು. 2013ರಿಂದ ಜೈಲಿನಲ್ಲಿರುವ ಮುರ್ಸಿಯವರನ್ನು ಭೇಟಿ ಮಾಡಲು ಅವರನ್ನು ಇಷ್ಟು ವರ್ಷಗಳ ಕಾಲ ಜೈಲಿನಲ್ಲಿಡುವ ಕಾರಣ ಮತ್ತು ಅವರು ಮಾಡಿದ ಅಪರಾಧ ಏನೆಂದು ತನಿಖೆ ನಡೆಸುವುದು ಇವರ ಪ್ರಮುಖ ಉದ್ದೇಶವೆಂದೂ ಹೇಳಲಾಗಿದೆ. ಇಂತಹ ಬಂಧನವನ್ನು ಈಜಿಪ್ಟ್ ಅಥವಾ ಅಂತರ್ರಾಷ್ಟ್ರೀಯ ಕಾನೂನುಗಳು ಅಂಗೀಕರಿಸುವುದಿಲ್ಲವೆಂದೂ ಅವರು ಹೇಳಿದರು