ಮೂಗಿಗೆ ತುಪ್ಪ ಸವರಿ ಜನತಾದಳವನ್ನು ಕಾಡುತ್ತಿರುವ ಬಿಜೆಪಿ

0
1268

: ಸಲೀಮ್ ಬೋಳಂಗಡಿ
ಕರ್ನಾಟಕದಲ್ಲಿ ಅಧಿಕಾರಗಳಿಸಲು ಏನೆಲ್ಲಾ ಸಾದ್ಯವೋ ಅವೆಲ್ಲವನ್ನೂ ಬಿಜೆಪಿ ಮಾಡುತ್ತಿದೆ. ಈಗಾಗಲೇ ಜೆಡಿಎಸ್ ಗೂ ಸ್ವಲ್ಪ ಏಟು ಕೊಡುವ ನಿಟ್ಟಿನಲ್ಲಿ ಮೋದಿ ಮುಂದಾಗಿದ್ದಾರೆ, ಅದರಂತೆ ದೇವೇಗೌಡರನ್ನು ಹೊಗಳಿ ಮೂಗಿಗೆ ತುಪ್ಪ ಸವರುವಲ್ಲಿ ನಿರತರಾಗಿದ್ದಾರೆ,. ಈ ಹೊಗಳಿಕೆ ಜೆಡಿಎಸ್ ಗೆ ಮಾರಕವಾದರೂ ಅಚ್ಚರಿಯಿಲ್ಲ, 2014ರಲ್ಲಿ ಇದೇ ದೇವೇಗೌಡರನ್ನು ವೃದ್ದಾಶೃಮಕ್ಕೆ ಸೇರಿಸಲು ಮೋದಿ ಸಲಹೆ ನೀಡಿದ್ದು ಮಾದ್ಯಮಗಳಲ್ಲಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಈಗ ಬೇರೆಯದೇ ರಾಗ ಎಳೆದು ಸ್ನೇಹ ಹಸ್ತ ಚಾಚುವ ಪ್ರಕ್ರಿಯೆಯಲ್ಲಿ ಮೋದಿ ಬಳಗ ತೊಡಗಿದೆ, ದೇವೇಗೌಡರ ಮೇಲೆ ಅದೇನೋ ತೀವ್ರ ಭಕ್ತಿ ರಾರಾಜಿಸತೊಡಗಿದೆ. ಇತ್ತ ಕಾಂಗ್ರೇಸಿಗರು ಮೊದಲೇ ಜೆಡಿಎಸ್ ಅಂದರೆ ಜನತಾದಳ ಸಂಘ ಪರಿವಾರ ಅಂತ ಹೇಳಿದ್ದಕ್ಕೆ ಪೂರಕವಾಗಿಯೇ ಎಲ್ಲವೂ ನಡೆಯತೊಡಗಿದೆ.ಒಂದೊಮ್ಮೆ ವಿಶ್ವಾಸಘಾತುಕಪಕ್ಷವೆಂದು ಕರೆದು ಜೆಡಿಎಸ್ ನ ಪತನಕ್ಕೆ ಕಾರಣವಾಗಿದ್ದ ಬಿಜೆಪಿ ಈಗ ಜೆಡಿಎಸ್ ಮುಂದೆ ಹಲ್ಲು ಕಿರಿಯತೊಡಗಿದೆ. ಮೋದಿಗೆ ಸೋಲಿನ ವಾಸನೆ ಬಡಿಯತೊಡಗಿದೆ ಎಂದು ಇದನ್ನು ವಿಶ್ಲೇಷಿಸಲೇ ಬೇಕು. ಮುತ್ಸದ್ದಿ ರಾಜಕಾರಣಿ ದೇವೇಗೌಡರಿಗೆ ಮಾತ್ರ ಈ ಒಳ ಮರ್ಮ ಅರ್ಥವಾಗದಿರುವುದು ದುರಂತವೇ ಸರಿ. ಯಾಕೆಂದರೆ ರಾಜಕೀಯದಲ್ಲಿ ಶತ್ರು ಮತ್ತು ಮಿತ್ರತ್ವ ಶಾಶ್ವತವಲ್ಲ. ಕಾಂಗ್ರೆಸಿಗರು ನನ್ನನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಮೋದಿಗೆ ಇವೆಲ್ಲವೂ ಅರ್ಥವಾಗಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ವರಸೆ ಬದಲಿಸುವ ಸೂಚನೆಯನ್ನು ದೇವೇಗೌಡರು ನೀಡತೊಡಗಿದ್ದಾರೆ, ಒಕ್ಕಲಿಗರ ಮತದ ಮೇಲೆ ಕಣ್ಣಿಟ್ಟು ದೇವೇಗೌಡರ ಬೆನ್ನು ಮೋದಿಯವರು ಸವರತೊಡಗಿದ್ದಾರೆ. ಈಗಾಗಲೇ ಕಿಂಗ್ ಮೇಕರ್ ಕನಸು ಕಾಣುತ್ತಿರುವ ಜೆಡಿಎಸ್ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಯುವ ಸಿದ್ದತೆಯಲ್ಲಿದೆ. ಆದರೆ ಇದು ತನ್ನ ಮತಬ್ಯಾಂಕ್ ಗೆ ಕನ್ನವಾಗಲಿದೆಯೆಂಬ ವಾಸ್ತವ ಅರಿಯದೆ ಮೂರ್ಖತನ ಪ್ರದಶಿಸುತ್ತಿದೆ. ನಿಜವಾಗಿ ಇದು ಜೆಡಿಎಸ್ ನ ಸಿದ್ದಾಂತಕ್ಕೆ ಕೊಡಲಿಯೇಟು ಹಾಕಿ ಆ ಪಕ್ಷದ ಪತನಕ್ಕೆ ಬಿಜೆಪಿ ಯತ್ನಿಸುತ್ತಿದೆ. ಈ ಹಿಂದೆ ಅದರಲ್ಲಿ ಯಶಸ್ಸು ಕಂಡ ಬಿಜೆಪಿ ಈ ಬಾರಿಯೂ ಅದೇ ಪ್ರಯತ್ನದಲ್ಲಿತೊಡಗಿದೆ. ಈಗಾಗಲೇ ಒಮ್ಮೆ ಬಿಜೆಪಿಯಿಂದ ಕೈ ಸುಟ್ಟುಕೊಂಡ ಅನುಭವವಿರುವ ಜನತಾದಳ(ಎಸ್) ಮತ್ತೆ ಅದೇ ಬಾಣಲೆಗೆ ಬಿದ್ದು ಬೆಂಕಿಗೆ ಬೀಳುವ ಸನ್ನಾಹದಲ್ಲಿದೆ.