ಮೋದಿಯವರೇ, ನಿಮ್ಮ ಮಂಗಳೂರು ಭಾಷಣದಲ್ಲಿ ಎತ್ತಿನ ಹೊಳೆ ಯೋಜನೆ ತಡೆದವರ ಪ್ರಸ್ತಾಪ ಮಾಡುವಿರಾ? 

0
1715

ಏ. ಕೆ. ಕುಕ್ಕಿಲ

ಮಂಗಳೂರಿನಲ್ಲಿ ಇವತ್ತು ಇಳಿಸಂಜೆ ಭಾಷಣ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿಯವರ ಸುತ್ತ ಪುಟ್ಟದೊಂದು ಕುತೂಹಲ ಕೆರಳಿದೆ. ಈ ಕುತೂಹಲಕ್ಕೆ ಕಾರಣ, ಅವರು ಇವತ್ತು (ಶನಿವಾರ) ತುಮಕೂರಿನಲ್ಲಿ ಮಾಡಿದ ಭಾಷಣ. ಬಯಲು ಸೀಮೆಯ ಎಂಟು ಜಿಲ್ಲೆಗಳಿಗೆ ನೀರು ಒದಗಿಸುವ ನೇತ್ರಾವತಿ ನದಿ ತಿರುವಿನ ಎತ್ತಿನ ಹೊಳೆ ಯೋಜನೆಯನ್ನು ಜಾರಿಗೊಳಿಸಲು ಸಿದ್ದರಾಮಯ್ಯ ಸರಕಾರ ವಿಫಲವಾಗಿದೆ ಎಂದವರು ನಿನ್ನೆ ಆರೋಪಿಸಿದ್ದರು. ಸೇರಿದ ಸಾಕಷ್ಟು ಮಂದಿಗೆ ಈ ಆರೋಪದಿಂದ ನಗು ಬಂದಿತ್ತು. ಯಾಕೆಂದರೆ, ಎತ್ತಿನ ಹೊಳೆ ಯೋಜನೆ ಜಾರಿಯಾಗದಂತೆ ತಡೆಯುವ ಹೋರಾಟಕ್ಕೆ ನೇತೃತ್ವ ನೀಡಿದ್ದೇ ಬಿಜೆಪಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್. ಕರಾವಳಿ ಜಿಲ್ಲೆಯಲ್ಲಿ ರಸ್ತೆ ತಡೆ, ಪ್ರತಿಭಟನೆ ಇತ್ಯಾದಿಗಳ ಮೂಲಕ ಎತ್ತಿನ ಹೊಳೆ ಯೋಜನೆಯ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಅವರು ಸಾಕಷ್ಟು ಶ್ರಮಿಸಿದ್ದರು. ಈ ಯೋಜನೆಯಿಂದ ನೇತ್ರಾವತಿ ಬತ್ತಬಹುದು, ವನ್ಯ ಸಂಪತ್ತು ನಾಶವಾಗಬಹುದು, ಕರಾವಳಿ ಜಿಲ್ಲೆಯಲ್ಲಿ ಬರ ಕಾಣಿಸಿಕೊಳ್ಳಬಹುದು, ಜಲಚರ, ಅರಣ್ಯ ನಾಶವಾಗಬಹುದು… ಎಂದೆಲ್ಲಾ ಜೋರು ಧನಿಯಲ್ಲಿ ಹೇಳಿ ಸರಕಾರದ ವಿರುದ್ಧ ಮಾತಾಡಿದ್ದೆ ಬಿಜೆಪಿ. ಆದ್ದರಿಂದಲೇ, 2014 ರಲ್ಲಿ ಬಯಲು ಸೀಮೆಯ ಜಿಲ್ಲೆಗಳಿಗೆ ನೀರು ಒದಗಿಸುವ ಹದಿಮೂರು ಸಾವಿರ ಕೋಟಿ  ರೂಪಾಯಿಯ ಈ ಬೃಹತ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರು ಆ ಬಳಿಕ ನಿಧಾನಿಯಾದರು. ಇದೀಗ ಮೋದಿಯವರು ತುಮಕೂರಿನಲ್ಲಿ ಸಿದ್ದರಾಮಯ್ಯರನ್ನೇ ಆರೋಪಿ ಸ್ಥಾನದಲ್ಲಿ ಕೂರಿಸಿದ್ದಾರೆ. ಇದೇ ಮಾತನ್ನು ಅವರು ಇವತ್ತಿನ ಮಂಗಳೂರು ಸಭೆಯಲ್ಲಿ ಹೇಳುವರೇ, ಹೇಳಿದರೆ ಕಟೀಲು, ಕಾರ್ಣಿಕ್ ಸಹಿತ ಬಿಜೆಪಿ ನಾಯಕರು, ಕಾರ್ಯಕರ್ತರ ಮುಖಭಾವ ಹೇಗಿರಬಹುದು ಅನ್ನುವ ಮಾತನ್ನು ಜನರಾಡಿಕೊಳ್ಳುತ್ತಿದ್ದಾರೆ.
ವಿಶೇಷ ಏನೆಂದರೆ, ಮೋದಿಯವರ ಚುನಾವಣಾ ಭಾಷಣಗಳೆಲ್ಲ ಜನಪ್ರಿಯತೆಗಿಂತ ಮುಜುಗರವನ್ನೇ ತರುತ್ತಿದೆ. ಮಹದಾಯಿ, ಕಾವೇರಿ ಗಳ  ಬಗ್ಗೆ ಅವರಾಡಿದ ಮಾತುಗಳೂ ತೀವ್ರ ಇರುಸುಮುರಿಸಿಗೆ ಈಡಾಗಿದೆ. ಅವರ ಭಾಷಣದ ಬಳಿಕ ಆ ಭಾಷಣದಲ್ಲಿ ಸತ್ಯ ಎಷ್ಟಿದೆ ಎಂದು ಹುಡುಕುವ ಸ್ಥಿತಿ ಬಂದಿದೆ. ಆದ್ದರಿಂದ,ಮಂಗಳೂರಿನಲ್ಲಿ ತುಮಕೂರು ಭಾಷಣಕ್ಕೆ ವಿರುದ್ಧವಾಗಿ ಅವರು ಮಾತಾಡಿದರೂ ಅಚ್ಚರಿಯಿಲ್ಲ. ದಕ್ಷಿಣ ಕನ್ನಡದ ಬುದ್ಧಿವಂತ ನಾಗರಿಕರೇ, ನೀವು ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸುವ ಮೂಲಕ ಸರಿಯಾದ ತೀರ್ಮಾನವನ್ನೇ ಕೈಗೊಂಡಿದ್ದೀರಿ ಎಂದು ಮಾತು ಆರಂಭಿಸುವ ಸಾಧ್ಯತೆಯೂ ಇಲ್ಲದಿಲ್ಲ.
ನಿಜವಾಗಿ ಅವರ ತುಮಕೂರು ಭಾಷಣ ಕರಾವಳಿ ಕನ್ನಡಿಗರ ವಿರೋಧಿ. ಕರಾವಳಿಗರ ವಿರೋಧವನ್ನು ಅವರು ಕೇವಲವಾಗಿ ಕಂಡಿದ್ದಾರೆ. ಜಿಲ್ಲಾ ಬಿಜೆಪಿ ಈ ಬಗ್ಗೆ ಮೌನವಾಗಿರುವುದು ಅದರ ದ್ವಂದ್ವವನ್ನು ತೋರಿಸುತ್ತದೆ.