ಮೌಲಾನಾ ಇಮ್ದಾದುಲ್ಲಾ ಮತ್ತು ಸನ್ಮಾನ್ಯ ಚೌಬೆ

0
719

ಮೌಲಾನಾ ಇಮ್ದಾದುಲ್ಲಾ ಮತ್ತು ಅಶ್ವನಿ ಚೌಬೆ- ಈ ಇಬ್ಬರ ನಡುವೆ ಒಂದು ವಿಷಯವನ್ನು ಹೊರತುಪಡಿಸಿದರೆ, ಉಳಿದಂತೆ ಯಾವ ಹೋಲಿಕೆಯೂ ಇಲ್ಲ. ಮೌಲಾನಾ ಇಮ್ದಾದುಲ್ಲಾರಿಗೆ ಮದುವೆಯಾಗಿದೆ ಮತ್ತು ಮಕ್ಕಳಿದ್ದಾರೆ. ಅಶ್ವನಿ ಚೌಬೆಗೆ ಮದುವೆಯಾಗಿದೆ ಮತ್ತು ಮಕ್ಕಳಿದ್ದಾರೆ. ಇಲ್ಲಿಗೆ ಈ ಹೋಲಿಕೆ ಮುಗಿಯುತ್ತದೆ. ಇಮ್ದಾದುಲ್ಲಾರು ಪಶ್ಚಿಮ ಬಂಗಾಳದ ಅಸನ್‍ಸೋಲ್ ಎಂಬಲ್ಲಿಯ ನೂರಾನಿ ಮಸೀದಿಯ ಧರ್ಮಗುರು. ವಾರಗಳ ಹಿಂದೆ ಈ ಪ್ರದೇಶದಲ್ಲಿ ನಡೆದ ರಾಮನವಮಿ ಮೆರವಣಿಗೆಯ ವೇಳೆ ಘರ್ಷಣೆ ಸ್ಫೋಟಗೊಂಡಿತು. ಈ ಘರ್ಷಣೆಯ ಬಗ್ಗೆ ಎಪ್ರಿಲ್ 2ರಂದು ಪ್ರಕಟವಾದ ದ ಹಿಂದೂ ಪತ್ರಿಕೆಯಲ್ಲಿ ವಿಸ್ತೃತವಾದ ವರದಿಯಿದೆ. `ಟೋಪಿವಾಲೆ ಬಿ ಸರ್ ಜುಕಾಕೆ ಜೈ ಶ್ರೀರಾಮ್ ಬೋಲೇಗಾ’ ಎಂಬ ಹಾಡನ್ನು ಈ ಮೆರವಣಿಗೆಯಲ್ಲಿ ಮತ್ತೆ ಮತ್ತೆ ನುಡಿಸಲಾಗಿರುವುದನ್ನು ವರದಿಯು ಬೊಟ್ಟು ಮಾಡಿದೆ. ಗಲಭೆ ಸ್ಫೋಟಗೊಂಡಾಗ ಇಮ್ದಾದುಲ್ಲಾರ 16ರ ಹರೆಯದ ಮಗ ಸಿಬ್ಗತುಲ್ಲಾ ತನ್ನ ಅಣ್ಣನೊಂದಿಗೆ ಮಸೀದಿಗೆ ತೆರಳಿದ್ದ. ಆತನನ್ನು ಗುಂಪು ಥಳಿಸಿ ಕೊಂದಿತ್ತು. ಮರುದಿನ ಶವ ಪತ್ತೆಯಾಯಿತು. ಮೃತದೇಹದ ಅಂತ್ಯ ಸಂಸ್ಕಾರದ ವೇಳೆ ನೂರಾನಿ ಮಸೀದಿಯಲ್ಲಿ ಹತ್ತು ಸಾವಿರಕ್ಕಿಂತಲೂ ಅಧಿಕ ಮಂದಿ ಸೇರಿದ್ದರು. ಒಂದು ಕಡೆ, ಜನರು ಭಾವುಕರಾಗಿದ್ದರೆ ಇನ್ನೊಂದು ಕಡೆ, ಈ ಭಾವುಕತೆಯೇ ಜನರನ್ನು ಉದ್ರಿಕ್ತತೆಯೆಡೆಗೆ ತಳ್ಳುವ ಸಂಭವವೂ ಅಧಿಕವಾಗಿತ್ತು. ಅಷ್ಟೊಂದು ದೊಡ್ಡ ಗುಂಪು ಉದ್ರಿಕ್ತವಾಗಿ ವರ್ತಿಸಿದರೆ ಆಗಬಹುದಾದ ಅನಾಹುತವನ್ನು ನಿರೀಕ್ಷಿಸುವುದಕ್ಕೂ ಸಾಧ್ಯವಿರಲಿಲ್ಲ. ಈ ಸಂದರ್ಭದಲ್ಲಿ ತನ್ನ ಮಗನ ಮೃತದೇಹವನ್ನು ಜೊತೆಯಿಟ್ಟುಕೊಂಡೇ ಧರ್ಮಗುರು ಇಮ್ದಾದುಲ್ಲಾ ಮೈಕ್ ಎತ್ತಿಕೊಂಡರು. `ನನ್ನನ್ನು ಪ್ರೀತಿಸುತ್ತೀರೆಂದಾದರೆ, ನೀವು ಶಾಂತಿಯುತವಾಗಿ ವರ್ತಿಸಬೇಕು. ನನ್ನ ಮಗನ ಹತ್ಯೆಯ ಹೆಸರಲ್ಲಿ ಇನ್ನಷ್ಟು ಜೀವಗಳು ಬಲಿಯಾಗುವುದನ್ನು ನಾನು ಬಯಸುವುದಿಲ್ಲ. ಒಂದು ವೇಳೆ ನೀವು ಹಿಂಸಾಚಾರಕ್ಕಿಳಿದರೆ, ನಾನು ಈ ಮಸೀದಿಯನ್ನೂ ಈ ಊರನ್ನೂ ಬಿಟ್ಟು ತೆರಳುವೆ’ ಎಂದು ಘೋಷಿಸಿದರು. ಈ ಘೋಷಣೆ ಅಲ್ಲಿನ ವಾತಾವರಣವನ್ನೇ ಬದಲಿಸಿತು ಎಂದು ಪೊಲೀಸರೇ ಹೇಳಿದ್ದಾರೆ. ಎಲ್ಲಿಯವರೆಗೆಂದರೆ, ಅವರ ಈ ಘೋಷಣೆಯನ್ನು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಶ್ಲಾಘಿಸಿ ಹೇಳಿಕೆ ಕೊಡಬೇಕಾದ ಒತ್ತಡಕ್ಕೆ ಸಿಲುಕಿದರು. ಆರೆಸ್ಸೆಸ್ ಕೂಡ ಶ್ಲಾಘಿಸಿತು. ಅಸನ್‍ಸೋಲ್‍ನಲ್ಲಿ ವಾಸಿಸುತ್ತಿರುವ ಬಂಗಾಳದ ಖ್ಯಾತ ಸಾಹಿತಿ ಜೋಯಾ ಮಿತ್ರ ಧರ್ಮಗುರು ಇಮ್ದಾದುಲ್ಲಾರನ್ನು ಮನಸಾರೆ ಹೊಗಳಿದರು.
ರಾಮನವಮಿಯ ನಿಮಿತ್ತ ಬಿಹಾರದಲ್ಲೂ ಮೆರವಣಿಗೆಗಳು ನಡೆದುವು. ಇಂಥದ್ದೊಂದು ಮೆರವಣಿಗೆಯ ನೇತೃತ್ವವನ್ನು ಕೇಂದ್ರ ಸಚಿವ ಅಶ್ವನಿ ಚೌಬೆಯ ಪುತ್ರ 36ರ ಹರೆಯದ ಅರಿಜಿತ್ ಶಾಶ್ವತ್ ವಹಿಸಿಕೊಂಡಿದ್ದ. ಯುವಕರೇ ಹೆಚ್ಚಾಗಿದ್ದ ಆ ಮೆರವಣಿಗೆಯು ನಾಥ್‍ನಗರದಲ್ಲಿ ಘರ್ಷಣೆಗೆ ಕಾರಣವಾಯಿತು. ಜಿಲ್ಲಾಡಳಿತದಿಂದ ಪರವಾನಿಗೆಯನ್ನು ಪಡೆಯದೇ ನಾಥ್‍ನಗರಕ್ಕೆ ಮೆರವಣಿಗೆಯನ್ನು ಕೊಂಡೊಯ್ಯಲಾಗಿತ್ತು. ಅಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಲಾಯಿತು. ಅನೇಕ ಮನೆ, ಅಂಗಡಿಗಳು ಘರ್ಷಣೆಯಲ್ಲಿ ಧ್ವಂಸವಾದುವು. ಅರಿಜಿತ್ ಶಾಶ್ವತ್‍ನ ನಿರೀಕ್ಷಣಾ ಜಾಮೀನನ್ನು ತಳ್ಳಿಹಾಕಿದ ನ್ಯಾಯಾಲಯ ಆತನಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತು. ವಿಷಯ ಇದಲ್ಲ. ಈ ಬೆಳವಣಿಗೆಗೆ ಅರಿಜಿತ್ ಶಾಶ್ವತ್‍ನ ತಂದೆ ನೀಡಿರುವ ಪ್ರತಿಕ್ರಿಯೆ ಗಮನಾರ್ಹವಾಗಿತ್ತು. ಅವರ ಪ್ರತಿಕ್ರಿಯೆ ನಾಥ್‍ನಗರದ ಘೋಷಣೆಗಳಿಗಿಂತಲೂ ಪ್ರಚೋದನಾತ್ಮಕವಾಗಿತ್ತು. ಅವರು ಮಗನನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡರು. ಮಗನ ಮೇಲೆ ದಾಖಲಿಸಲಾದ ಎಫ್‍ಐಆರನ್ನು ಕಸದ ಬುಟ್ಟಿಗೆ ಸೇರಬೇಕಾದ ಕಾಗದದ ತುಂಡು ಎಂದು ಅಣಕಿಸಿದರು.

ಇಬ್ಬರು ಮಕ್ಕಳ ಬಗ್ಗೆ ಅವರ ತಂದೆಯಂದಿರ ನಿಲುವುಗಳಿವು. ತಪ್ಪನ್ನೇ ಮಾಡದ ಹರೆಯದ ಮಗನೊಬ್ಬ ಉಸಿರು ಮರೆತು ಮಲಗಿರುವುದನ್ನು ಸಹಿಸಿಕೊಳ್ಳುವುದಕ್ಕೆ ಯಾವ ತಂದೆಗೂ ಸಾಧ್ಯವಿಲ್ಲ. ಆ ಕ್ಪಣದಲ್ಲೂ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವುದಕ್ಕೆ ಅಪಾರ ಎದೆಗಾರಿಕೆ ಬೇಕು. ನಾಲ್ಕೈದು ತಿಂಗಳ ಹಿಂದೆ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಬಶೀರ್ ಎಂಬವರ ಹತ್ಯೆ ನಡೆಯಿತು. ಇದಕ್ಕಿಂತ ಒಂದು ದಿನ ಮೊದಲು ಇದೇ ಪರಿಸರದಲ್ಲಿ ನಡೆದ ದೀಪಕ್ ರಾವ್ ಎಂಬ ಯುವಕನ ಹತ್ಯೆಗೆ ಪ್ರತೀಕಾರವಾಗಿ ಈ ಹತ್ಯೆಯನ್ನು ನಡೆಸಲಾಗಿತ್ತು. ಆ ಸಮಯದಲ್ಲೂ ಸಾವಿರಾರು ಮಂದಿ ಆಸ್ಪತ್ರೆಯ ಮುಂದೆ ಜಮಾಯಿಸಿದ್ದರು. ಆಗ ಬಶೀರ್ ಕುಟುಂಬದ ಸದಸ್ಯರು ಶಾಂತಿ ಕಾಪಾಡುವಂತೆ ಮತ್ತು ಹಿಂಸಾಚಾರಕ್ಕಿಳಿಯದಂತೆ ನೆರೆದವರಲ್ಲಿ ಮನವಿ ಮಾಡಿಕೊಂಡಿದ್ದರು. ಆ ಮನವಿ ಅಲ್ಲಿನ ವಾತಾವರಣವನ್ನೇ ಬದಲಿಸಿತ್ತು. ಯುವಕರ ಆಕ್ರೋಶ, ಆವೇಶಗಳನ್ನು ಅದು ನಿಯಂತ್ರಿಸಿತು. ಮಾತ್ರವಲ್ಲ, ಈ ಬೆಳವಣಿಗೆ ಸರ್ವತ್ರ ಶ್ಲಾಘನೆಗೂ ಒಳಗಾಯಿತು.

ಮೌಲಾನಾ ಇಮ್ದಾದುಲ್ಲಾ ಮತ್ತು ಹತ್ಯೆಗೀಡಾದ ಬಶೀರ್ ಕುಟುಂಬದ ನಡುವೆ ಸಾವಿರಾರು ಮೈಲುಗಳ ಅಂತರವಿದೆ. ಇವರಿಬ್ಬರೂ ಈ ಮೊದಲು ಭೇಟಿಯಾಗಿಲ್ಲ. ಅಲ್ಲದೇ, ಬಶೀರ್ ಅವರ ಹತ್ಯೆ ನಡೆದಿರುವ ಬಗ್ಗೆ ಇಮ್ದಾದುಲ್ಲಾರಿಗೆ ಗೊತ್ತಿರುವ ಸಾಧ್ಯತೆಯೂ ಇಲ್ಲ. ಇದರ ಹೊರತಾಗಿಯೂ ಈ ಎರಡೂ ಕುಟುಂಬಗಳ ವರ್ತನೆಯಲ್ಲಿ ಸಾಮ್ಯತೆ ಇದೆ. ಜೀವಪರ ಸಂದೇಶಗಳಿವೆ. ನಿಜವಾಗಿ, ಓರ್ವರ ಹತ್ಯೆಗೆ ಇನ್ನಾರನ್ನೋ ಬಲಿ ಪಡೆಯಲು ಪ್ರಚೋದಿಸುವುದು ಅಧರ್ಮ ಮಾತ್ರವಲ್ಲ ಅಪಾಯಕಾರಿಯೂ ಹೌದು. ಮೌಲಾನ ಇಮ್ದಾದುಲ್ಲಾರ ಮಗನ ಹತ್ಯೆಗೈದವರಿಗೆ ಶಿಕ್ಷೆ ನೀಡಬೇಕಾದುದು ವ್ಯವಸ್ಥೆಯ ಹೊಣೆಗಾರಿಕೆ. ಜನರು ಆ ಹೊಣೆಗಾರಿಕೆಯನ್ನು ನಿರ್ವಹಿಸಲು ಹೊರಟರೆ ವ್ಯವಸ್ಥೆಯನ್ನು ಅಪ್ರಸ್ತುತಗೊಳಿಸಿದಂತೆ ಮತ್ತು ಅನ್ಯಾಯಕ್ಕೆ ದಾರಿ ತೆರೆದಂತೆ. ಜನರು ಪೊಲೀಸರೂ ಅಲ್ಲ, ನ್ಯಾಯಾಂಗವೂ ಅಲ್ಲ. ದುರಂತ ಏನೆಂದರೆ, ಇವತ್ತು ಜನರನ್ನು ದೊಂಬಿಗೆ ಪ್ರಚೋದಿಸಲಾಗುತ್ತಿದೆ. ಅಶ್ವನಿ ಚೌಬೆಯಂಥವರು, ಬಾಬುಲ್ ಸುಪ್ರಿಯೋ, ಶೋಭಾ ಕರಂದ್ಲಾಜೆಯಂಥ ಅನೇಕರು ತೀರಾ ಪ್ರಚೋದನಾತ್ಮಕವಾಗಿ ಮಾತಾಡುತ್ತಿದ್ದಾರೆ. ಸಾರ್ವಜನಿಕರು ಉದ್ರಿಕ್ತಗೊಳ್ಳಬಹುದಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಬೆಂಬಲಿಗರಾಗಿ ಗುರುತಿಸಿಕೊಂಡಿರುವವರು ಕಾನೂನನ್ನೇ ಕೈಗೆತ್ತಿಕೊಳ್ಳುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಥಳಿತ, ಹತ್ಯೆ, ಹಲ್ಲೆ.. ಇತ್ಯಾದಿಗಳನ್ನು ಪ್ರತೀಕಾರದ ಹೆಸರಲ್ಲೋ ಪಾಠ ಕಲಿಸುವ ಹೆಸರಲ್ಲೋ ನಡೆಸುತ್ತಿದ್ದಾರೆ. ಇನ್ನೊಂದು ಧರ್ಮದವರನ್ನು ಇರಿಯುವ, ತಿವಿಯುವ ಮತ್ತು ವ್ಯಂಗ್ಯಕ್ಕೆ ಒಳಪಡಿಸುವ ಮಾತುಗಳನ್ನು ಧಾರಾಳವಾಗಿ ಆಡುತ್ತಿದ್ದಾರೆ. ಪ್ರಚೋದಿಸುವುದು ಮತ್ತು ಆ ಬಳಿಕ ಪ್ರತೀಕಾರದ ಹೆಸರಲ್ಲಿ ಇನ್ನಷ್ಟು ಅನಾಹುತಗಳನ್ನು ಹುಟ್ಟು ಹಾಕುವುದು ಇವರ ಉದ್ದೇಶವೋ ಗೊತ್ತಿಲ್ಲ. ಏನೇ ಇದ್ದರೂ, ಈ ಬಗೆಯ ವರ್ತನೆಗಳಿಂದ ಸಾರ್ವಜನಿಕರು ಪ್ರಚೋದಿತರಾಗಬಾರದು. ಶಾಂತಿಯುತ ಬದುಕು ಎಲ್ಲರ ಬಯಕೆ. ಪ್ರಚೋದನಾತ್ಮಕ ಹೇಳಿಕೆ ಮತ್ತು ವರ್ತನೆಗಳಿಗೆ ಅದೇ ಮಾದರಿಯ ಪ್ರತಿ ಹೇಳಿಕೆ ಮತ್ತು ವರ್ತನೆ ಉತ್ತರ ಅಲ್ಲ. ಮೌಲಾನಾ ಇಮ್ದಾದುಲ್ಲಾ ಮತ್ತು ಬಶೀರ್ ಕುಟುಂಬಗಳ ವರ್ತನೆ ಮುಖ್ಯವಾಗುವುದು ಇಲ್ಲೇ. ಸಮಾಜ ಆತ್ಮಾವಲೋಕನಕ್ಕೆ ತೆರೆದುಕೊಳ್ಳಬೇಕಾದ ಸಂದರ್ಭ ಇದು.