ಯಡಿಯೂರಪ್ಪರನ್ನು ಈಶ್ವರಪ್ಪರಂತಾಗಿಸಲು ಬಿಜೆಪಿಯೊಳಗೆ ಷಡ್ಯಂತ್ರ?

0
610

ಯಡಿಯೂರಪ್ಪನವರ ವರ್ಚಸ್ಸನ್ನು ತಗ್ಗಿಸಿ ಅವರನ್ನು ಜೋಕರ್ ನಂತೆ ಬಿಂಬಿಸುವ ಮತ್ತು ಅವರನ್ನು ಈಶ್ವರಪ್ಪನವರ ಮಟ್ಟಕ್ಕೆ ಇಳಿಸುವ ಶ್ರಮ ಬಿಜೆಪಿಯೊಳಗೆ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ಬಿಗ್ ಬ್ರೇಕಿಂಗ್ ನ್ಯೂಸ್ ಕೊಡುತ್ತೇನೆಂದು ಹೇಳಿ ಏನನ್ನೂ ಕೊಡದೆ ಜೋಕರ್ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಒಂದು ವಾರದ ಹಿಂದಷ್ಟೇ ಹಾಸ್ಯಕ್ಕೆ ಗುರಿಯಾಗಿದ್ದ ಅವರು ನಿನ್ನೆ, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆಯೆಂದು ಪತ್ರಿಕಾಗೋಷ್ಠಿ ಕರೆದು ದಾಖಲೆ ಬಿಡುಗಡೆಗೊಳಿಸಿದರು. ಅಲ್ಲದೇ, ಈ ಬೆಳವಣಿಗೆಯ ಮೂರೇ ಗಂಟೆಯೊಳಗೆ ಅವರು ಮತ್ತೊಮ್ಮೆ ಜೋಕರ್ ಆಗಿ ತಮಾಷೆಗೆ ಈಡಾದರು. ಯಡಿಯೂರಪ್ಪ ಬಿಡುಗಡೆ ಗೊಳಿಸಿದ ದಾಖಲೆಯಲ್ಲಿರುವ ನ್ಯಾಷನಲ್ ಕನ್ಸ್ಟ್ರಕ್ಷನ್ ಕಂಪನಿಯ ಕಾಮಗಾರಿ ಗುತ್ತಿಗೆಯನ್ನು ಮೂರು ದಿನಗಳ ಹಿಂದೆಯೇ ರದ್ದುಗೊಳಿಸಿರುವುದನ್ನು ನೀರಾವರಿ ಸಚಿನ ಎಂ ಬಿ ಪಾಟೀಲ್ ದಾಖಲೆ ಸಹಿತ ಮಾಧ್ಯಮಗಳ ಮುಂದಿಟ್ಟರು.

ಕಂಪನಿ ಸಲ್ಲಿಸಿದ ದಾಖಲೆಗಳು ನಕಲಿಯೆಂದು ಪತ್ತೆಯಾದುದರಿಂದ ಮುಂದಿನ ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಮೂರು ದಿನಗಳ ಹಿಂದೆಯೇ ನಿಷೇಧ ವಿಧಿಸಿರುವುದಾಗಿಯೂ ಅವರು ಹೇಳಿಕೊಂಡರು.ಅಂದಹಾಗೆ, ಯಡಿಯೂರಪ್ಪರ ಕೈಗೆ ಈ ಅವಧಿ ಮೀರಿದ ದಾಖಲೆಯನ್ನು ಕೊಟ್ಟು ಮಾಧ್ಯಮದ ಮುಂದೆ ಹೋಗುವಂತೆ ಹೇಳಿದವರು ಯಾರು? ಗುತ್ತಿಗೆ ರದ್ದಾಗಿರುವ ವಿಷಯವನ್ನು ಅವರು ಯಡಿಯೂರಪ್ಪರಿಂದ ಏಕೆ ಮುಚ್ಚಿಟ್ಟರು? ರಾಜ್ಯ ವಿಧಾನ ಸಭಾ ಚುನಾವಣೆಯು ಕೊನೆಗೊಳ್ಳುವಾಗ ಯಡಿಯೂರಪ್ಪರ ವರ್ಚಸ್ಸನ್ನು ಸಂಪೂರ್ಣವಾಗಿ ಕಳೆದುಬಿಡುವ ತಂತ್ರದ ಭಾಗವೇ ಇದು?

ಏ. ಕೆ. ಕುಕ್ಕಿಲ