ಯಡಿಯೂರಪ್ಪರ ‘ವಂಶರಾಜಕಾರಣ’ ಹಾಗೂ ಸರಿಸಾಟಿಯಿಲ್ಲದ ತಂತ್ರಗಾರಿಕೆ!

0
283

 

ರಾಜ್ಯವು ಚುನಾವಣೆಯ ಹೊಸ್ತಿಲಿನಲ್ಲಿ ನಿಂತಿದೆ. ರಾಜಕೀಯ ಪಕ್ಷಗಳ ಹಾಗೂ ರಾಜಕಾರಣಿಗಳ ಪ್ರಚಾರ ದಿನದಿಂದ ದಿನಕ್ಕೆ ಕಾವು ಪಡೆದು ಕೊಳ್ಳುತ್ತಿದೆ.

ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವುದನ್ನು
ರಾಜಕೀಯ ನಾಯಕರು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ಈ ಚುನಾವಣೆಯಲ್ಲಿ ಸಿದ್ದರಾಮಯ್ಯ, ಅವರು ಸ್ಪರ್ಧಿಸಲಿರುವ ಕ್ಷೇತ್ರ ಹಾಗೂ ಪುತ್ರ ಡಾ. ಯತೀಂದ್ರ ಅವರು ಸಾಕಷ್ಟು ಚರ್ಚೆಯಲ್ಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತು ಪುತ್ರ ಡಾ ಯತೀಂದ್ರ

ಈ ನಡುವೆ ಯಡಿಯೂರಪ್ಪರ ರಾಜಕೀಯ ಚಾಣಾಕ್ಷತೆಯನ್ನು ಮೆಚ್ಚಲೇಬೇಕು. ಸ್ವಜನ ಹಾಗೂ ಜಾತೀವಾದಿ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ಯಡಿಯೂರಪ್ಪ ತಮ್ಮ ಕುಟುಂಬ ರಾಜಕಾರಣವನ್ನು ಮುಂದುವರೆಸಲು ಈ ಬಾರಿ ಸಿದ್ದರಾಮಯ್ಯನವರನ್ನು ದಾಳವಾಗಿ ಬಳಸಿರುವುದು ಅವರ ರಾಜಕೀಯ (ಕು)ತಂತ್ರಗಾರಿಕೆಯನ್ನು ತೋರಿಸುತ್ತದೆ.

ಹೇಗೋ ತಮ್ಮ ಹಿರಿಯ ಪುತ್ರ ರಾಘವೇಂದ್ರರನ್ನು ತನ್ನ ಅಧಿಕಾರ ಬಲದಿಂದ ರಾಜಕೀಯಕ್ಕೆ ಎಂಟ್ರಿ ಮಾಡಿಸುವಲ್ಲಿ ಅವರು ಸಫಲರಾಗಿದ್ದರು. ಆದರೆ ಯಡಿಯೂರಪ್ಪ ಈಗ ಹೈಕಮಾಂಡ್ ಮುಂದೆ ಹಲ್ಲು-ಉಗುರು ಕೀಳಲ್ಪಟ್ಟ ಹುಲಿಯಷ್ಟೇ.
ಈ ನಡುವೆ ಇನ್ನೊಬ್ಬ ಪುತ್ರನನ್ನು ರಾಜಕೀಯಕ್ಕೆ ಕರೆತರುವುದು ಬಹಳ ಕಷ್ಟದ ವಿಷಯವಾಗಿತ್ತು.
ವಾಸ್ತವದಲ್ಲಿ ಯಡಿಯೂರಪ್ಪಗೆ ಇನ್ನೋರ್ವ ಪುತ್ರನಿದ್ದಾನೆಂದೇ ರಾಜ್ಯದ ಹೆಚ್ಚಿನ ಮಂದಿಗೆ ತಿಳಿದಿರಲಿಲ್ಲ.

ಆದರೆ ಯಡಿಯೂರಪ್ಪನವರು ನೆಚ್ಚಿಕೊಂಡ ರಾಜಕೀಯ ತಂತ್ರಗಾರಿಕೆಯನ್ನು ಭೇಷ್ ಎನ್ನಲೇಬೇಕು!  ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ವರುಣಾದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದಾಕ್ಷಣ ತಮ್ಮ ಪುತ್ರನನ್ನು ಕಣಕ್ಕಿಳಿಸುವ ಬಗ್ಗೆ ಕಸರತ್ತು ನಡೆಸಿದ್ದಾರೆ. ಪುತ ವಿಜಯೇಂದ್ರ ಕೂಡಾ ವರುಣಾದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಜನಸಾಮಾನ್ಯರಿಗೂ ಇದು ಒಂದು ರಾಜಕೀಯ ಮೋಜಿನ ವಿಷಯ. ಮಾಜಿ ಹಾಗೂ ಹಾಲಿ ಸಿಎಂ ಪುತ್ರರ ಅಖಾಡದಲ್ಲಿ ನೋಡುವ ಭರದಲ್ಲಿ ಬೇರಾವುದನ್ನು ಯೋಚಿಸಲ್ಲ… ಅಲ್ಲಿ ಈವರೆಗೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ, ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ನೀಡಿದೆಯೋ ಇಲ್ಲವೋ ಯಾರು ಕೇಳಲ್ಲ. ಒಂದು ವೇಳೆ ಕೇಳಿದರೂ ಪಕ್ಷದ ಸಿದ್ದಾಂತದ ಹೆಸರಿನಲ್ಲಿ ಅವರನ್ನು ಸುಮ್ಮನಿರುವಂತೆ ಮಾಡಲಾಗುತ್ತದೆ.

ಅದಿರಲಿ, ನೆಹರೂ ಕುಟುಂಬದ ವಂಶಪಾರಂಪರ್ಯ ರಾಜಕಾರಣವನ್ನು ಟೀಕಿಸುತ್ತಾ ಬಂದಿರುವ ಬಿಜೆಪಿ, ಯಡಿಯೂರಪ್ಪನಂಥವರು ತಮ್ಮ ಮಕ್ಕಳಿಗೆ ರಾಜಕೀಯ ಕರಿಯರ್ ಕಟ್ಟಿಕೊಡುವುದು ಕೂಡ ಈ ಸಂದರ್ಭದಲ್ಲಿ ಚರ್ಚೆಯಾಗುವುದಿಲ್ಲ. ಏಕೆಂದರೆ ಇದು ಮಾಜಿ ವರ್ಸಸ್ ಹಾಲಿ ಸಿಎಂ ಮಕ್ಕಳ ಬಿಗ್ ಫೈಟ್!

ಅಂತೂ ಇಂತೂ, ಹಾವು ಸಾಯಬಾರದು, ಕೋಲು ‌ಮುರಿಯಬಾರದು ಎಂಬ ತಂತ್ರದಲ್ಲಿ ಯಡಿಯೂರಪ್ಪ ಭಾಗಶಃ ಯಶಸ್ವಿಯಾಗಿದ್ದಾರೆ. ಅತ್ತ ವಂಶಪಾರಂಪರ್ಯ ರಾಜಕೀಯದ ಆರೋಪವೂ ಇಲ್ಲ, ಇತ್ತ ಪುತ್ರನಿಗೆ ವೇದಿಕೆಯೂ ರೆಡಿ!

ಮಗನಿಗೆ ಟಿಕೆಟ್ ಫೈನಲ್ ಆಗಿ ಗೆದ್ದು ಬಿಟ್ಟರೆ ಒಳ್ಳೆಯದು. ಇಲ್ದಿದ್ರೆ ಹೇಗೋ ಪಾಪ್ಯುಲರ್ ಅಗಿಬಿಟ್ಟಿರ್ತಾರೆ. ಮುಂದೆ ಸಂಸದ ಸ್ಥಾನಕ್ಕೋ, ಎಂಎಲ್ಸಿಯೋ, ಅಥವಾ ಕನಿಷ್ಟ ನಿಗಮ‌ಮಂಡಳಿಗಳಿಗೋ ನೇಮಿಸಿಕೊಂಡ್ರೆ ಅಯ್ತಲ್ಲ ಎಂಬ ಲೆಕ್ಕಾಚಾರ ಅವರದ್ದಿರಬಹುದು.

ಆದ್ರೆ ಯಡಿಯೂರಪ್ಪನವರ ಈ ನಡೆ ಆರೆಸ್ಸೆಸ್ ಗಮನಿಸಿಲ್ಲ ಎಂದಲ್ಲ. ಈ ಬಗ್ಗೆ  ಮೌನವಾಗಿರುವುದರ ಹಿಂದೆ ಅದರದ್ದು ಕೆಲ ಲೆಕ್ಕಾಚಾರಗಳಿರುವುದು ಸಹಜ.

ಇ. ಹಸನ್