ರೈತ ಆತ್ಮಹತ್ಯೆಯಂತೆ ವ್ಯಾಪಾರಿ ಆತ್ಮಹತ್ಯೆಗೆ ಮುನ್ನುಡಿಯೇ ಈ ಅನುಮತಿ?

0
272

ಏಕ ಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ ಸಂಪೂರ್ಣ ವಿದೇಶಿ ಹೂಡಿಕೆಗೆ ಅನುಮತಿಸುವುದಾಗಿ ಕೇಂದ್ರ ಸರಕಾರದ ಸಚಿವ ಸಂಪುಟ ತಳೆದ ನಿರ್ಧಾರವು ಆರ್ಥಿಕ ಕ್ಷೇತ್ರಕ್ಕೆ ಇನ್ನೊಂದು ಆಘಾತವಾಗಿ ಎರಗಲಿದೆ ಎನ್ನಬಹುದು. ನಿಜಾರ್ಥದಲ್ಲಿ ವಿದೇಶಿ ಬಂಡವಾಳವನ್ನು ಆಕರ್ಷಿಸುವ ಸಲುವಾಗಿ ಹೀಗೊಂದು ನಿರ್ಧಾರ ಎನ್‍ಡಿಎ ಸರಕಾರದ ಸಚಿವರೆಲ್ಲ ಸೇರಿ ಮಾಡಿದ್ದಾರೆ. ನಿಜ. ತಯಾರು, ಮಾರಾಟದ ವಸ್ತುಗಳಲ್ಲಿ ಶೇ. 30ರಷ್ಟನ್ನು ಭಾರತದಿಂದಲೇ ಖರೀದಿಸಬೇಕೆನ್ನುವ ಶರ್ತವೂ ಇದೆ. ಆದರೆ, ಒಂದೇ ಬ್ರಾಂಡ್ ಚಿಲ್ಲರೆ ಮಾರಾಟದಲ್ಲಿ ವಿದೇಶಿ ಕಂಪೆನಿಗಳು ಪೂರ್ಣ ಸ್ವಾತಂತ್ರ್ಯದೊಂದಿಗೆ ಬಂದರೆ ಏನಾಗಬಹುದು? ಹೀಗೆ ಎಲ್ಲವೂ ಸಿಕ್ಕಿರುವಾಗ ಮಾರಾಟದ ಮಳಿಗೆ ಪ್ರಾರಂಭಿಸಲು ಬೇರೆಯೇ ಒಂದು ಅನುಮತಿ ಅಗತ್ಯವಿಲ್ಲದಾಗಿದೆ. ಏರ್ ಇಂಡಿಯದ ಶೇ. 49ರಷ್ಟು ಶೇರನ್ನು ವಿದೇಶಿ ಹೂಡಿಕೆದಾರರಿಗೆ ನೀಡಿ ಬಿಡುವುದಕ್ಕೂ ಸರಕಾರ ತೀರ್ಮಾನಿಸಿಬಿಟ್ಟಿದೆ. ಹೆಚ್ಚು ಶೇರುಗಳು ಭಾರತದ ನಿಯಂತ್ರಣದಲ್ಲಿ ಇರುವುದಾದರೂ ಅವುಗಳನ್ನು ಖಾಸಗಿ ಕಂಪೆನಿಗಳಿಗೆ ಕೊಡಲು ತೀರ್ಮಾನಿಸಲಾಗಿದೆ. ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಬೇಡಿಕೆಯನ್ನು ಅಂಗೀಕರಿಸುವ ಮೂಲಕ ವಿದೇಶಿಗಳೊಂದಿಗೆ ಸ್ಪರ್ಧಿಸಲು ಇಲ್ಲಿನ ಅಸಂಘಟಿತ ಅಸಹಾಯಕ ವ್ಯಾಪಾರಿಗಳನ್ನು ಕೇಂದ್ರ ಸಚಿವ ಸಂಪುಟ ಎಸೆದು ಬಿಟ್ಟಿದೆ ಎನ್ನುವ ಆಕ್ಷೇಪ ಮೋದಿ ಸರಕಾರದ ವಿರುದ್ಧ ಈಗ ಕೇಳಿ ಬರುತ್ತಿದೆ. ಬೆಲೆ ಸಮರ ಅಥವಾ ದರ ಯುದ್ಧ ಬರಲಿದೆ. ಬೆಲೆಗಳನ್ನು ಬಹಳ ಕಡಿಮೆ ಮಾಡಿ ಬಳಕೆದಾರರನ್ನು ಆಕರ್ಷಿಸಿ ನಮ್ಮೂರಿನ ವ್ಯಾಪಾರಿಗಳನ್ನು ಸದೆಬಡಿಯುವ ಪ್ಲಾನ್ ಇದು.
ಬಹುರಾಷ್ಟ್ರೀಯ ಕಂಪೆನಿಗಳು ನಷ್ಟ ಸಹಿಸಿ ಒಂದಕ್ಕೊಂದು, ಒಂದಕ್ಕೆರಡು ವಸ್ತುಗಳನ್ನು ಮಾರಬಹುದು. ಜನರು ಆಗ ಆಕರ್ಷಿತರಾಗಿ ಅತ್ತ ಧಾವಿಸ ಬಹುದು. ಅಷ್ಟೇ ಕಡಿಮೆಯಲ್ಲಿ ಅಂದರೆ ನಷ್ಟದಲ್ಲಿ ಮಾರಾಟಮಾಡಲು ನಮ್ಮೂರಿನ ಅಥವಾ ನಮ್ಮ ದೇಶದ ಚಿಲ್ಲರೆ ವ್ಯಾಪಾರಿಗಳಿಂದಾಗದು. ಹಾಗೆ ಮಾಡಿದರೆ ನಷ್ಟವನ್ನು ತಾಳಿಕೊಂಡು ಜೀವದೊಂದಿಗಿರಲು ನಮ್ಮಲ್ಲಿನ ಸಣ್ಣ ಅಸಂಘಟಿತ ವ್ಯಾಪಾರಿಗಳಿಂದ ಆಗು ವುದಿಲ್ಲ. ಹೀಗಾಗಿ ಅವರು ಗಂಟು ಮೂಟೆ ಕಟ್ಟಿ ನಿರುದ್ಯೋಗಿಗಳಂತಾಗಿ ಅಲೆದಾಡುವ ಸ್ಥಿತಿ ಬರಬಹುದು. ಅವರೆಲ್ಲ ನಾಶವಾದ ಮೇಲೆ ಬಹುರಾಷ್ಟ್ರ ಕಂಪೆನಿಗಳು ಹೇಳಿದಂತೆಯೇ ಆಗುತ್ತದೆ. ಅವರೆಷ್ಟೇ ಬೆಲೆ ಇಟ್ಟರೂ ಅವರಿಗೆ ರೆಡ್ ಕಾರ್ಪೆಟ್ ಹಾಸಿಕೊಟ್ಟ ಸರಕಾರ ಪ್ರಶ್ನಿಸುತ್ತದೆಯೇ? ಪ್ರಶ್ನಿಸುತ್ತದೆ ಎಂದು ಇಟ್ಟುಕೊಳ್ಳೋಣ. ಆಗಿರುವ ನಷ್ಟ ಸರಿದೂಗಿಸ ಬೇಡವೇ ಎಂದು ಮರು ಪ್ರಶ್ನೆ ಹಾಕಿದರೆ ಈ ಸರಕಾರದಿಂದ ಏನು ಮಾಡಲು ಸಾಧ್ಯವಿದೆ?
ಹೀಗೆ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಕೂಡ ನಿರುದ್ಯೋಗಿಗಳಾಗುವರು. ಇನ್ನೊಂದೆಡೆ ವಿದೇಶಿ ಕಂಪೆನಿಗಳು ಡಿಜಿಟಲ್ ವ್ಯವಹಾರದ ಮೂಲಕ ಉದ್ಯೋಗ ಅವಕಾಶವನ್ನು ಕಡಿಮೆ ಮಾಡಲು ನೋಡುತ್ತಲೂ ಇದೆ. ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಕೆಲಸ ಮಾಡು ತ್ತಿರುವವರ ಹೊಟ್ಟೆಯ ಗತಿ, ಜೀವನ ಸ್ಥಿತಿ ಏನಾಗಬಹುದು? ಇಂತಹ ಆಘಾತಗಳನ್ನು ನಮ್ಮ ಜನಜೀವನಕ್ಕೆ ತಾಳಿಕೊಳ್ಳಲು ಸಾಧ್ಯವಿದೆಯೇ?
ರೈತ ಆತ್ಮಹತ್ಯೆಯಂತೆ, ವ್ಯಾಪಾರಿ ಆತ್ಮಹತ್ಯೆ ಮಾಡುವ ಕತೆ ಆರಂಭವಾಗಿಬಿಟ್ಟರೆ?
ಭಾರತದಲ್ಲಿ ನೋಟು ನಿಷೇಧದಿಂದ ಕೆಲಸವಿಲ್ಲದೆ ಜನರು ಈಗಲೇ ಅಲೆದಾಡುತ್ತಿದ್ದಾರೆ. ಇನ್ನು ಚಿಲ್ಲರೆ ವ್ಯವಹಾರ ವ್ಯಾಪಾರ ಕೂಡ ಅವರ ಕೈಯಿಂದ ಕಿತ್ತುಕೊಂಡರೆ ಹೇಗಿರ ಬಹುದು? ಸರಕಾರ ಇದನ್ನೂ ಐತಿಹಾಸಕ ತೀರ್ಮಾನವೆಂದು ಬೊಗಳೆ ಬಿಡಬಹುದು. ಇಂತಹ ಐತಿಹಾಸಿಕ ಗಳಿಂದ ದೇಶದಲ್ಲಿ ಬಹಳಷ್ಟು ಜನರು ಇತಿಹಾಸಕ್ಕೆ ಸೇರಬಹುದು ಎನ್ನುವ ಕಿಂಚಿತ್ತೂ ಜ್ಞಾನವಾದರೂ ಕೇಂದ್ರ ಸಚಿವ ಸಂಪುಟಕ್ಕೆ ಇರುವುದು ಬೇಡವೇ? ನಮ್ಮೂರಿನ ನಮ್ಮದೇ ಜನರು ಮತ್ತಷ್ಟು ಕಷ್ಟಕ್ಕೆ ದೂಡುವ ತೀರ್ಮಾನಗಳಿಂದ ಸರಕಾರ ದೂರ ಸರಿಯ ಬೇಕಿದೆ. ವಿದೇಶಿ ಹೂಡಿಕೆ ಆಕರ್ಷಿಸಲು ನಮ್ಮಿಂದಾದರೆ ನಾವು ಚೀನವನ್ನು ಹಿಂದಿಕ್ಕುತ್ತೇವೆಂದು ಸರಕಾರ ಹೇಳುತ್ತಿದೆ. ಚೀನವನ್ನು ಹಿಂದಿಕ್ಕುವು ದಲ್ಲ. ಇಲ್ಲಿನ ದೇಶೀ ಜನರು ಬದುಕು ವುದು ಮೊದಲು ಮುಖ್ಯವಾಗಬೇಕು. ಚೀನದೊಂದಿಗೆ ಜಿದ್ದಿಗೆ ಬಿದ್ದು ನಮ್ಮ ಪುಟ್ಟ ವ್ಯಾಪಾರಿಗಳನ್ನು ಬಹು ರಾಷ್ಟ್ರೀಯ ಕಂಪೆನಿಯ ಬಾಯಿಗೆಸೆದು ಆಹುತಿ ಪಡೆಯುವುದು ಬೇಡ ಎನ್ನುವ ಜ್ಞಾನೋದಯ ಮೋದಿ ಸರಕಾರಕ್ಕೆ ಆಗಲಿ. ಸಚಿವ ಸಂಪುಟಕ್ಕೆ ವಿವೇಕ ಉದಿಸಲಿ ಎಂದು ಆಶಿಸಬೇಕಾಗಿದೆ. 2016ರಿಂದ ವಿದೇಶಿ ಹೂಡಿಕೆ ಕಡಿಮೆ ಯಾಗುತ್ತಿದೆ. ಈ ಕಡಿಮೆ ಸರಿ ದೂಗಿಸಲು ವಿದೇಶಿಗಳನ್ನು ಆಕರ್ಷಿಸು ವುದೊಂದೇ ದಾರಿ ಸರಕಾರದ ಬಳಿ ಇದೆ. ಹಾಗಂತ ದೇಶದ ಪುಟ್ಟ ವ್ಯಾಪಾರಿಗಳನ್ನು ಕಷ್ಟಕ್ಕೆ ದೂಡಿ ವಿದೇಶಿ ಹಣವನ್ನು ಆಕರ್ಷಿಸುವ ಸರಕಾರಿ ಯತ್ನಕ್ಕೆ ಮೂರ್ಖತನವೆಂದಲ್ಲದೆ ಸೂಚಿಸಲು ಬೇರೆ ಹೆಸರಿಲ್ಲ.
ವಿದೇಶಿ ಕಂಪೆನಿಗಳು ಮುಂದಿರಿಸಿದ ನಿಬಂಧನೆಗಳನ್ನು ಒಪ್ಪುವ ಕೆಲಸವನ್ನು ಸರಕಾರ ಮಾಡಿದೆ. ಇದು ಸಾಲದು, ಇನ್ನೂ ವಿನಾಯಿತಿಗಳಿರಬೇಕೆಂದು ಹಟ ತೊಟ್ಟು ಆ್ಯಪಲ್‍ನಂತಹ ಕಂಪೆನಿಗಳು ಬಲೆ ಬೀಸುತ್ತಿವೆ. ಭಾರತದ ಆರ್ಥ ವ್ಯವಸ್ಥೆ ಕುಸಿತಕ್ಕೆ ವಿದೇಶಿ ಹೂಡಿಕೆ ಕಡಿಮೆಯಾಗಿರುವುದು ಕಾರಣವೇ? ಅಲ್ಲ. ಇಲ್ಲಿನ ಜನರ ಆದಾಯ ಮೂಲಕ್ಕೆ ನೋಟು ನಿಷೇಧದಂತಹ ಯೋಜನೆಯಿಂದ ಕತ್ತರಿಹಾಕಿದ್ದು ಕಾರಣವಾಗಿದೆ. ದೇಶದ ವ್ಯಾಪಾರಿಗಳಿಗೆ ಹೆಚ್ಚು ಬೆಂಬಲವನ್ನು ನೀಡುವುದು ಬೇಕಾಗಿದೆ. ಇಲ್ಲಿ ಉದ್ಯೋಗ ಸೃಷ್ಟಿಯಾಗಿ ಜನರ ಕೈಯಲ್ಲಿ ಕಾಸು ಓಡಾಡಬೇಕು. ಬದಲಾಗಿ ವಿದೇಶಿ ಕಂಪೆನಿಗಳ ಹೂಡಿಕೆಯನ್ನು ಮೃಷ್ಟಾನ್ನ ದಂತೆ ಕಾಯುತ್ತಿರುವ ಕೇಂದ್ರ ಸರಕಾರದ ಬುದ್ಧಿಗೆ ಏನನ್ನಬೇಕೋ ಗೊತ್ತಾಗುವುದಿಲ್ಲ.