ಲೆನಿನ್ ಪ್ರತಿಮೆ ಧ್ವಂಸ ಯಾಕೆ ‘ತಾಲಿಬಾನೀಕರಣವಾಗಿಲ್ಲ’?

0
1499

@ ಸಲೀಮ್ ಬೋಳಂಗಡಿ

ತ್ರಿಪುರಾದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಮಲ ಪಾಳಯದ ವಿಜಯೋತ್ಸವ ಹದ್ದುಮೀರಿದೆ. ವಿರೋಧಿಗಳಲ್ಲಿ ಒಂದು ಬಗೆಯ ಭೀತಿಯ ವಾತಾವರಣ ಸೃಷ್ಟಿಸು ವತ್ತ ಅದು ದಾಪುಗಾಲು ಹಾಕುತ್ತಿವೆ. ಅಗರ್ತಲಾದ ಸಮೀಪದ ಬೆಲೋನಿಯಾ ನಗರದಲ್ಲಿ ಕೆಲವೇ ತಿಂಗಳುಗಳ ಹಿಂದೆ ಸಿಪಿಎಂ ನಾಯಕ ಅನಾವರಣಗೊಳಿಸಿದ ಲೆನಿನ್ ಪ್ರತಿಮೆಯನ್ನು ಬುಲ್‍ಡೋಝರ್ ಮೂಲಕ ಹೊಡೆದುರುಳಿಸಲಾಯಿತು. ಕಮ್ಯುನಿಸ್ಟ್ ಕ್ರಾಂತಿಕಾರಿ ನಾಯಕ ಲೆನಿನ್ ಪ್ರತಿಮೆಯನ್ನು ‘ಬೋಲೋ ಭಾರತ್ ಮಾತಾಕಿ ಜೈ’ ಎಂಬ ಘೋಷಣೆಯೊಂದಿಗೆ ಧ್ವಂಸ ಗೊಳಿಸಲಾಯಿತು. ಆ ಬಳಿಕ ಸಿಪಿಎಂ ಕಾರ್ಯಕರ್ತರ ಮನೆಗಳ ಮೇಲೆ ಧಾಳಿಯನ್ನು ವ್ಯಾಪಕವಾಗಿ ನಡೆಸ ಲಾಯಿತು. ಈ ಪ್ರತಿಮೆಗಳನ್ನು ಧ್ವಂಸಗೊಳಿಸುವಂತಹ ಪ್ರಕ್ರಿಯೆ ತಮಿಳುನಾಡಿನಲ್ಲಿ ರಾಮಸ್ವಾಮಿ ಪೆರಿಯಾರ್ ಜನಸಂಘದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಬಳಿಕ ಅಂಬೇಡ್ಕರ್ ಪ್ರತಿಮೆಗಳ ಮೇಲೆಯೂ ಮುಂದುವರಿಯಿತು. ಆದರೆ ಈ ದಾಳಿಯನ್ನು ಸಮರ್ಥಿಸುವ ಶೈಲಿ ಯಲ್ಲಿ ಬಿಜೆಪಿಯ ವಕ್ತಾರ ಸುಬ್ರಿತ್ ಚಕ್ರವರ್ತಿ ಆಡಿದ ಮಾತುಗಳು ಇದೆಯಲ್ಲ ಅದು ಆಕ್ಷೇಪಾರ್ಹವಾದುದು. ಜನರು ಸ್ವಾಮೀ ವಿವೇಕಾನಂದ ವಲ್ಲಭ್‍ಬಾೈ ಪಟೇಲ್‍ರಂತಹವರ ಪ್ರತಿಮೆ ಗಳನ್ನು ಬಳಸುತ್ತಿದ್ದಾರೆ ಹೇಳಿದರು. ಅಷ್ಟಕ್ಕೆ ನಿಲ್ಲಲಿಲ್ಲ. ರಾಜ್ಯಪಾಲರು ಕೂಡಾ ಇದಕ್ಕೆ ಪೂರಕವಾದ ಹೇಳಿಕೆ ನೀಡಿ ತನ್ನ ಕೇಸರೀ ಹೃದಯವನ್ನು ಅನಾವರಣಗೊಳಿಸಿದರು.

ಇಲ್ಲಿ ನಾವು ಪ್ರತಿಮೆಗಳನ್ನು ಸ್ಥಾಪಿಸುವುದನ್ನು ಸಮರ್ಥಿಸುವುದಿಲ್ಲ. ಕಾನೂನನ್ನು ಕೈಗೆತ್ತಿಕೊಂಡು ಪ್ರಜಾಪ್ರಭುತ್ವವನ್ನು ದಮನಿಸುವಂತಹ ಹೇಯ ಕೃತ್ಯವನ್ನು ಖಂಡಿಸುತ್ತೇವೆ. ತಾಲಿಬಾನಿಗಳು ಅಧಿಕಾರ ಪಡೆದಾಗ ಬೌದ್ಧರ ಮೂರ್ತಿ ಧ್ವಂಸ ಮಾಡಿದ್ದನ್ನು ಕಠೋರ ಭಾಷೆಯಿಂದ ಖಂಡಿಸಿ ತಾಲಿಬಾನೀಕರಣವೆಂದು ನಾಮಕರಣ ಮಾಡಿದರು. ಹಾಗಾದರೆ ಇದನ್ನು ಏನೆಂದು ಕರೆಯೋಣ? ಅದಿರಲಿ, ಈ ದುಷ್ಕøತ್ಯದ ವಿರುದ್ಧ ಪ್ರಧಾನಿಗಳು ಖಂಡಿಸಿಯೇ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಗೃಹ ಸಚಿವಾಲಯವು ರಾಜ್ಯ ಸರಕಾರಕ್ಕೆ ಸೂಚಿಸಿದ ನಂತರವೂ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಮೇಲೆ ದಾಳಿ ಮಾಡಿದ್ದಾರೆ. ಹಿಂಸೆ, ದೌರ್ಜನ್ಯಗಳು, ರಾಜಕೀಯದ ಅವಿಭಾಜ್ಯ ಅಂಗವಾಗಿರು ವಂತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಈಶಾನ್ಯ ರಾಜ್ಯಗಳಲ್ಲಿ ಇಂತಹದ್ದೊಂದು ಬೆಳವಣಿಗೆಗಳು ನಿಜಕ್ಕೂ ಆತಂಕಕಾರಿ.

ಈ ದೇಶಕ್ಕೆ ಯಾವುದರ ಅಗತ್ಯವಿದೆಯೋ ಅದರ ಬಗ್ಗೆ ಮಾತನಾಡ ಬೇಕಿದೆ. ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವನ್ನು ಜೀವನದಲ್ಲಿ ಅಳವಡಿಸಿ ದೇಶದಲ್ಲಿ ಶಾಂತಿ ಸಹಬಾಳ್ವೆ ನೆಲೆಸುವ ಪ್ರಯತ್ನವಾಗ ಬೇಕು. ಕೋಟ್ಯಾಂತರ ರೂಪಾಯಿ ವ್ಯಯಿಸಿ ಅವರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ ಅವರ ತತ್ವಸಿದ್ಧಾಂತಗಳಿಗೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಳ್ಳುವುದು ಗೌರವದ ಸಂಕೇತವಾಗದು. ಈ ದೇಶದ ಪ್ರತಿಷ್ಠಿತ ಹುದ್ದೆಗಳಲ್ಲಿ ವಿರಾಜಿಸುವವರು ಜನರನ್ನು ತಿದ್ದಿತೀಡಿ ಸರಿಪಡಿಸಬೇಕಾದವರು ಕೂಡಾ ಹಿಂಸೆಯ ಮಾತುಗಳನ್ನಾಡುವುದು ಅವರಿಗೆ ಶೋಭೆ ತರುವಂತಹದ್ದಲ್ಲ.
ನೋಡಿ, ಆರ್ಟ್ ಆಫ್ ಲಿವಿಂಗ್‍ನ ರವಿಶಂಕರ್‍ರವರು ಬಾಬರೀ ಮಸೀದಿ ವಿವಾದದ ತೀರ್ಪು ಮುಸ್ಲಿಮರ ಪರವಾಗಿ ಸುಪ್ರೀಮ್ ಕೋರ್ಟು ಒಂದು ವೇಳೆ ತೀರ್ಪಿತ್ತರೆ ಇಲ್ಲಿ ರಕ್ತದ ಹೊಳೆ ಹರಿಯುವುದು ಎಂಬ ಬೆದರಿಕೆಯ ಮಾತುಗಳೊಂದಿಗೆ ರಂಗಕ್ಕಿಳಿದಿದ್ದಾರೆ ಈ ಹಿಂದೆ ಇದೇ ರವಿಶಂಕರ್ ಗುರೂಜಿಯವರು ಅಯೋಧ್ಯಾ ವಿವಾದದ ಸಂಧಾನಕಾರನಾಗುವ ಬಯಕೆಯನ್ನು ಹೊರಗೆಡಹಿದ್ದರು. ಆದರೆ ಅವರ ಆ ಬ ಯಕೆಯ ಉದ್ದೇಶವೇನಾಗಿತ್ತೆಂಬುದನ್ನು ಈ ಹೇಳಿಕೆಯು ಬಹಿರಂಗಪಡಿಸಿದೆ. ಈ ವಿವಾದವು ನ್ಯಾಯಾಲಯದಲ್ಲಿ ಎಪ್ಪತ್ತು ವರ್ಷಗಳಿಂದ ವಾದ ವಿವಾದ ನಡೆಯುತ್ತಿದೆ. 2010ರಲ್ಲಿ ಅಲಹಾಬಾದ್ ಹೈಕೋರ್ಟು ವಿವಾದ ಭೂಮಿಯನ್ನು ಮೂರು ಭಾಗಗಳಾಗಿ ವಿಂಗಡಿಸಿ ಮೂರು ವಿಭಾಗಗಳಿಗೆ ಹಂಚಿತು. ಈ ತೀರ್ಮಾನದ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಎರಡು ವಿಭಾಗಗಳ ಹಕ್ಕುಗಳನ್ನು ಪ್ರತಿಪಾದಿಸು ಸಾಕ್ಷಗಳ ಹೊರತು ಮೂರನೇಯದಕ್ಕೆ ಅವಕಾಶವಿಲ್ಲವೆಂದು ಸುಪ್ರೀಮ್ ಕೋರ್ಟು ಹೇಳಿತ್ತು. ಹೀಗಿರುವಾಗ, ನ್ಯಾಯಾಲಯದ ತೀರ್ಪು ಕಾಯದೆ ಅನ್ಯ ವಿಧಿಯಿಲ್ಲ.

ಎಪ್ಪತ್ತು ವರ್ಷ ಕಾದು ಕುಳಿತವರಿಗೆ ಕೆಲವು ವಾರಗಳು ಕಾಯಲಾಗದೇ? ಈ ನಡುವೆ ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಸುಪ್ರೀಮ್ ಕೋರ್ಟು ಎಂತಹ ತೀರ್ಮಾನ ನೀಡಿದರೂ ನಾವು ಅದನ್ನು ಪಾಲಿಸುವುದು ಎಂಬ ನಿಲುವು ತಾಳಿದ್ದು ಸ್ಮರಣಾರ್ಹ. ನ್ಯಾಯಾಲಯದ ತೀರ್ಮಾನದನುಸಾರ ಅದು ಬಾಬರೀ ಮಸೀದಿ ಅಲ್ಲವೆಂದಾದಲ್ಲಿ ಮುಸ್ಲಿಮ್ ಸಂಘಟನೆಗಳು ಮತ್ತು ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಆಗಲಿ ನಾವು ಕೋರ್ಟ್ ತೀರ್ಪು ಪಾಲಿಸುತ್ತೇವೆ. ಮಾತ್ರವಲ್ಲ, ಯಾರ ಮಧ್ಯಸ್ಥಿಕೆಯೂ ಇಲ್ಲದೆ ಅಲ್ಲಿ ಹಿಂದೂ ಸಂಘಟನೆಗಳಿಗೆ ರಾಮಮಂದಿರ ನಿರ್ಮಾಣ ಮಾಡಬಹುದು ಎಂದಿದೆ. ಅಷ್ಟೇ ಅಲ್ಲ, ಅದರ ವಿರುದ್ಧ ಕಪ್ಪು ಬಾವುಟ ಕೂಡಾ ಪ್ರದರ್ಶಿಸುವ ಯೋಚನೆಯಲ್ಲಿ ಮುಸ್ಲಿಮರಿಲ್ಲ. ಹೀಗಿರುವಾಗ ರಕ್ತದ ಹೊಳೆ ಹರಿಸುವ ಮಾತುಗಳನ್ನು ರವಿಶಂಕರ್ ಗುರೂಜಿ ಏಕೆ ಆಡಿದರು ಎಂಬುದು ಸಂದೇಹ ಮೂಡಿಸುತ್ತದೆ. ನ್ಯಾಯಾಲಯದಲ್ಲಿ ಬರುವ ತೀರ್ಪಿನ ಬಗ್ಗೆ ಆತಂಕಿತರಾಗಿ ಸುಪ್ರೀಮ್ ಕೋರ್ಟಿಗೆ ಬೆದರಿಕೆ ಹಾಕಿ ಒತ್ತಡ ಹೇರುವಂತಹ ಪ್ರಯತ್ನ ಮಾಡಿದ್ದಾರೆಯೇ ಎಂಬುದೂ ಅರ್ಥ ವಾಗದ ವಿಚಾರವೇನಲ್ಲ. ಒಂದು ವೇಳೆ ಇದಕ್ಕೆ ತದ್ವಿರುದ್ಧವಾಗಿ ಮುಸ್ಲಿಮರಿಗೆ ಬಾಬರಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡದಿದ್ದರೆ ರಕ್ತದ ಹೊಳೆ ಹರಿದೀತು ಎಂಬರ್ಥದ ಮಾತುಗಳನ್ನು ಮುಸ್ಲಿಮ್ ವಿದ್ವಾಂಸರೇನಾದರೂ ಬಹಿರಂಗ ಹೇಳಿಕೆ ಕೊಟ್ಟಿದ್ದರೆ ಆ ವಿದ್ವಾಂಸರ ಗತಿ ಏನಾಗುತ್ತಿತ್ತು? ಯಾವ ಜೈಲಿನಲ್ಲಿ ಕೊಳೆಯಬೇಕಾಗಿತ್ತೋ. ಅದೆಷ್ಟು ಡಿಬೆಟ್‍ಗಳು ದೃಶ್ಯ ಮಾಧ್ಯಮಗಳಲ್ಲಿ ಸರಣಿಯಾಗಿ ಪ್ರಸಾರವಾಗುತ್ತಿತ್ತೋ. ಇನ್ನು ಪ್ರತಿಮೆ ವಿಚಾರವನ್ನೇ ತೆಗೆದುಕೊಳ್ಳಿ. ವಿಗ್ರಹಾರಾಧನೆಯನ್ನು ಇಸ್ಲಾಮ್ ಎಂದೂ ಅಂಗೀಕರಿಸದು. ಹೀಗಿರುವಾಗ ಮುಸ್ಲಿಮ್ ವಿದ್ಯಾರ್ಥಿಗಳೇನಾದರೂ ಈ ರೀತಿ ಪ್ರತಿಮೆಗಳನ್ನು ಕೆಡವಿದ್ದಿದ್ದರೆ ಅಂತಹವರ ಪರಿಸ್ಥಿತಿ ಏನಾಗುತ್ತಿತ್ತು ಎಂಬುದು ಕೂಡಾ ಆಲೋಚಿಸತಕ್ಕ ವಿಚಾರವೇ. ಕಾನೂನು ಕಟ್ಟಳೆಗಳು ಒಂದು ಕೋಮಿನ ವಿರುದ್ಧ ಮಾತ್ರ ಬಳಕೆಯಾಗುತ್ತಿದೆ ಎಂಬುದಕ್ಕೆ ಇಲ್ಲಿ ಧಾರಾಳ ಉದಾಹರಣೆಗಳನ್ನು ನೀಡಬಹುದು. ಅಪರಾಧಿಗಳಿಗೆ ಶಿಕ್ಷೆ ನೀಡಿ ಅಪರಾಧೀಕರಣ ತಡೆಯುವ ಬದಲು ಷಂಡರಂತೆ ಅವರನ್ನು ಹುರಿದುಂಬಿಸುವ ಕೃತ್ಯ ನಡೆಯುತ್ತಿದೆ. ಆದರೆ ಈ ದೇಶದ ಬಹುವಂಶ ಜನರು ಶಾಂತಿಯನ್ನು ಬಯಸುವವರೆಂಬ ಕಟು ವಾಸ್ತವವನ್ನು ಮರೆಯಲಾಗದು. ಸಿರಿಯಾದಂತೆ ಭಾರತವನ್ನು ಹಿಂಸಾ ವಲಯವನ್ನಾಗಿ ಮಾಡುವ ಶ್ರಮಗಳು ನಡೆಯುತ್ತಿಲ್ಲವೆಂದು, ಈ ದೇಶದ ಪ್ರಜಾಪ್ರಭುತ್ವ ನಿಜವಾದ ಹಂತಕರು ಯಾರೆಂಬುದು ಅರ್ಥೈಸಲು ತ್ರಾಸ ಪಡಬೇಕಾದ ಅಗತ್ಯವಿಲ್ಲ. ಅದಕ್ಕೆ ಪೂರಕ ವಾದ ಘಟನೆಗಳು ಈ ದೇಶದಲ್ಲಿ ಒಂದೊಂದಾಗಿ ಮರುಕಳಿಸುತ್ತಿರುವುದು ಮಾತ್ರ ಆತಂಕಕಾರಿ ವಿಚಾರವಾಗಿದೆ. ಸುಪ್ರೀಮ್ ಕೋರ್ಟು ನೀಡುವ ತೀರ್ಪಿಗೆ ಅಗೌರವ ತೋರುವ ಹೇಳಿಕೆಯನ್ನು ಖಂಡಿಸುವಂತಹ ಪ್ರಕ್ರಿಯೆಯು ಕ್ಷೀಣವಾಗುತ್ತಿರುವುದು ಕೂಡಾ ಚಿಂತಿಸಬೇಕಾದ ವಿಚಾರವಾಗಿದೆ. ಯಾವುದೋ ಒಂದು ಸಿದ್ಧಾಂತವನ್ನು ಬಲವಂತವಾಗಿ ಹೇರುವಂತಹದ್ದನ್ನು ಆಧ್ಯಾತ್ಮಿಕ ಗುರುಗಳು ಎಂದೆನಿಸಿಕೊಂಡವರು ಪ್ರೋತ್ಸಾ ಹಿಸಿದ್ದರೆ ಅವರಿಗಿರುವ ವರ್ಚಸ್ಸಿಗೆ ಅದು ಕುಂದುಂಟು ಮಾಡುತ್ತಿದೆಯೆಂಬ ವಾಸ್ತವ ಅರಿಯಬೇಕು.

ನ್ಯಾಯಾಲಯದ ತೀರ್ಪನ್ನು ಗೌರವಿಸುವ ಮೂಲಕ ದೇಶದ ಪ್ರಜಾಪ್ರಭುತ್ವದ ರಕ್ಷಣೆಗೆ ಕಟಿಬದ್ಧರಾಗುವಂತಹ ಹೇಳಿಕೆಗಳು ಅವರಿಂದ ಬರಬೇಕು ಎಂದು ಪ್ರಜ್ಞವಂತರಾದ ಭಾರತೀಯ ಜನತೆ ಬಯಸುತ್ತದೆ.