ಶತಮಾನಗಳ ಇತಿಹಾಸವಿರುವ ಬ್ರಿಟಿಷರ ಕಾಲದ ಸೇತುವೆ ಕಾಯಕಲ್ಪಕ್ಕೆ ಅರಣ್ಯ ಇಲಾಖೆಯ ಅಡ್ಡಿ.

0
913

ವಿಶೇಷ ವರದಿ: ಅಬ್ದುಲ್ ರೆಹೆಮಾನ್ ,ವಿರಾಜಪೇಟೆ
ವಿರಾಜಪೇಟೆ: ನಮ್ಮ ರಾಜ್ಯವನ್ನು ನೆರೆಯ ಕೇರಳ ರಾಜ್ಯದೊಂದಿಗೆ ಬೆಸೆಯುವ 125 ವರ್ಷಗಳ ಇತಿಹಾಸವನ್ನು ಹೊಂದಿರುವ ಕೂಟುಪೊಳೆ ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಾಣಕ್ಕೆ ಕೇರಳ ಲೋಕೋಪಯೋಗಿ ಇಲಾಖೆ ತಿಂಗಳುಗಳ ಹಿಂದೆ ಕೈ ಹಾಕಿತ್ತು. ಹತ್ತಿರದ ಮಟ್ಟನೂರಿನಲ್ಲಿ ಪ್ರಾರಂಭದ ಹಂತದಲ್ಲಿರುವ ಕಣ್ಣನೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಪ್ರಮುಖ ರಸ್ತೆಗಳ ಆಧುನೀಕರಣಕ್ಕಾಗಿ ವಿಶ್ವಬ್ಯಾಂಕ್‍ನ 256ಕೋಟಿ ರೂ.ಗಳ ನೆರವಿನ ಯೋಜನೆಯಲ್ಲಿ ಈ ಸೇತುವೆಯ ಪುನರ್ನಿಮಾಣ ಕಾಮಗಾರಿಯೂ ಸೇರಿತು. ವಿರಾಜಪೇಟೆ ನಗರದಿಂದ 28.ಕಿ.ಮೀ.ದೂರದಲ್ಲಿ ಕಣ್ಣನೂರಿಗೆ ಸಾಗುವ ರಸ್ತೆಯಲ್ಲಿ ಈ ಸೇತುವೆಯು ಇದೆ. ಅತ್ಯಂತ ಹಿರಿದಾದ ಈ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಾಣದ ಬೇಡಿಕೆಗೆ ವರ್ಷಗಳ ಇತಿಹಾಸವಿದೆ.
ಆದರೆ ಸೇತುವೆ ಪುನರ್ನಿಮಾಣ ಕಾಮಗಾರಿಗೆ ಪ್ರಾರಂಭದಿಂದಲೇ ಕರ್ನಾಟಕ ಅರಣ್ಯ ಇಲಾಖೆ ತಡೆಯೊಡ್ಡುತ್ತಾ ಬಂತು. ಸೇತುವೆ ನಿರ್ಮಾಣದ 300ಮೀ.ಜಾಗ ಕೇರಳ ರಾಜ್ಯವು ಅತಿಕ್ರಮಿಸಿದೆ ಎಂದು ಅರಣ್ಯ ಇಲಾಖೆ ಆರೋಪಿಸಿದೆ. ಬಹುತೇಕ ಭೂ ಭಾಗ ರಾಜ್ಯ ಅರಣ್ಯ ಇಲಾಖೆಗೆ ಸೇರಿದುದಾಗಿದ್ದು, ಕೇರಳ ಸರಕಾರ ಯಾವುದೇ ಮುನ್ಸೂಚನೆಯಿಲ್ಲದೆ ಸೇತುವೆ ನಿರ್ಮಾಣಕ್ಕೆ ಕೈ ಹಾಕಿದ್ದು ಅರಣ್ಯ ಇಲಾಖೆಯ ಕೆಂಗಣ್ಣಿಗೆ ಕಾರಣವಾಗಿತ್ತು. ಆದ್ದರಿಂದ ಸೇತುವೆ ಕಾಮಗಾರಿಚುನಾವಣೆ ಕೂಡಲೇ ಸ್ಥಗಿತಗೊಳಿಸಬೇಕೆಂದು ಕಾಮಗಾರಿಯ ಹೊಣೆ ಹೊತ್ತಿರುವ ಕೆ.ಎಸ್.ಟಿ.ಪಿ.ಗೆ ಕಳೆದ ಡಿಸೆಂಬರ್‍ನಲ್ಲಿ ಅರಣ್ಯ ಇಲಾಖೆಯು ಪತ್ರವೊಂದನ್ನು ಬರೆದಿತ್ತು. ಭೂ ಭಾಗವನ್ನು ಸರ್ವೆ ಮಾಡುವುದರ ಮೂಲಕ ಜಾಗದ ಗುರುತು ಮಾಡಬೇಕೆಂದು ಪತ್ರದಲ್ಲಿ ಕೋರಲಾಗಿತ್ತು. ಕಳೆದ ಡಿಸೆಂಬರ್‍ನಲ್ಲಿ ನಡೆದ ಭೂಭಾಗ ಅಳತೆನಂತರ ಹೊಸ ಗಡಿಯನ್ನು ಗುರುತಿಸಲಾಗಿತ್ತು. ಆದರೆ ಆ ಪ್ರದೇಶದಲ್ಲಿ ಕಾಮಗಾರಿಗೆ ಕೆ.ಎಸ್.ಟಿ.ಪಿ.ಒಪ್ಪಿಕೊಳ್ಳಲಿಲ್ಲ. ಈ ಕಾರಣದಿಂದ ಸೇತುವೆ ಕಾಮಗಾರಿಯು ಸ್ಥಗಿತಗೊಂಡ ಸ್ಥಿತಿಯಲ್ಲಿ ಇದೆ. ಕರ್ನಾಟಕ ಅರಣ್ಯ ಇಲಾಖೆಯು ತೀರ್ಮಾನದಲ್ಲಿ ಸಡಿಲಗೊಳಿಸಿದಲ್ಲಿ ಮಾತ್ರ ಕಾಮಗಾರಿಯು ಮುಂದುವರಿಯಲಿದೆ. ಈ ಮಧ್ಯೆ ಕೇರಳದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮುಂಬರುವ ಚುನಾವಣೆ ಅನಂತರ ಕರ್ನಾಟಕದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಸೂಚನೆ ಲಭಿಸಿದೆ.

ಹೊಸ ಸೇತುವೆಯ ಕಾಮಗಾರಿ ಪ್ರಾರಂಭದ ಹಂತದಲ್ಲಿ
ಕೇರಳ-ಕರ್ನಾಟಕ ಗಡಿಯ ಕಿರಿದಾದ ಹಳೆಯ ಸೇತುವೆ