ಸಿಂಧುವಾದ ಮದುವೆಯಲ್ಲಿ ಕೆಲವು ಅಸಿಂಧು ಪ್ರಶ್ನೆಗಳು..

0
1629

ಮೂರು ಕಾರಣಗಳಿಗಾಗಿ ಒಂದು ವಿವಾಹವನ್ನು ನ್ಯಾಯಾಲಯ ರದ್ದುಗೊಳಿಸಬಹುದು.
1. ವಿವಾಹಿತರಲ್ಲಿ ಹೆಣ್ಣು ಅಥವಾ ಗಂಡು ಅಪ್ರಾಪ್ತ ವಯಸ್ಸಿನವರಾಗಿದ್ದರೆ ಆ ಮದುವೆಯನ್ನು ರದ್ದುಗೊಳಿಸುವ ಹಕ್ಕು ನ್ಯಾಯಾಲಯಕ್ಕಿದೆ. ಆ ವಿವಾಹದ ಕ್ರಮಬದ್ಧತೆಯನ್ನು ಪ್ರಶ್ನಿಸಿ ಹೆತ್ತವರು ಅಥವಾ ಪೋಷಕರು ನ್ಯಾಯಾಲಯವನ್ನು ಸಮೀಪಿಸಿದರೆ ಅದನ್ನು ಗಂಭೀರವಾಗಿ ಕೋರ್ಟು ಪರಿಗಣಿಸಬಹುದು.
2. ವಿವಾಹಿತರಾದ ಇಬ್ಬರಲ್ಲಿ ಒಬ್ಬರು ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮತ್ತು ಆ ವಿವಾಹವನ್ನು ಅನೂರ್ಜಿತಗೊಳಿಸ ಬೇಕೆಂದು ಸಂಬಂಧಪಟ್ಟವರು ಕೋರ್ಟ್‍ಗೆ ಮನವಿ ಮಾಡಿದರೆ ಅದನ್ನು ಮಾನ್ಯ ಮಾಡುವ ಅವಕಾಶ ನ್ಯಾಯಾಲಯಕ್ಕಿದೆ.
3. ವಿವಾಹಿತರಲ್ಲಿ ಓರ್ವರು ಆ ಮೊದಲೇ ಮದುವೆ ಯಾಗಿರುವುದು ಮತ್ತು ಕಾನೂನು ಪ್ರಕಾರ ಆ ಮದುವೆ ಯಿಂದ ವಿಚ್ಛೇದನ ಪಡಕೊಳ್ಳದಿರುವುದು ಅಥವಾ ಒಂದ ಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಲು ಕಾನೂನಾತ್ಮಕ ವಾಗಿ ಅವಕಾಶ ಇಲ್ಲದ ¸ ಸಮುದಾಯದವರಾಗಿರುವುದು. ಇಂಥ ಸ್ಥಿತಿಯಲ್ಲಿ ಮದುವೆಯ ರದ್ಧತಿಯನ್ನು ಕೋರಿ ನ್ಯಾಯಾಲಯವನ್ನು ಸಮೀಪಿಸಿದರೆ ಅದು ಮಾನ್ಯವಾಗುವು ದಕ್ಕೆ ಅವಕಾಶ ಇದೆ.

ಆದರೆ ಕೇರಳದ ಹಾದಿಯ, ಈ ಮೇಲಿನ ಮೂರೂ ಕಾರಣಗಳಲ್ಲೂ ಸುಲಭವಾಗಿ ತೇರ್ಗಡೆ ಹೊಂದುತ್ತಾರೆ. ಆಕೆ ಅಪ್ರಾಪ್ತೆಯಲ್ಲ. 2016 ಡಿಸೆಂಬರ್‍ನಲ್ಲಿ ಕೇರಳ ಹೈಕೋರ್ಟ್‍ನ ನ್ಯಾಯಾಧೀಶರಾದ ಕೆ. ಸುರೇಂದ್ರ ಮೋಹನ್ ಮತ್ತು ಕೆ. ಅಬ್ರಹಾಂ ಅವರು ಹಾದಿಯ-ಶಫಿನ್ ಜಹಾನ್ ವಿವಾಹವನ್ನು ರದ್ದುಗೊಳಿಸುವಾಗ ಹಾದಿಯಾರಿಗೆ 23 ವರ್ಷ ಮತ್ತು ಶಫಿನ್‍ಗೆ 27 ವರ್ಷ. ಆದ್ದರಿಂದ, ಅವರ ವಿವಾಹ ರದ್ದುಗೊಳಿಸುವಂತಿಲ್ಲ. ಹಾದಿಯಾರ ತಂದೆ ಅಶೋಕನ್ ಮಾಡಿಕೊಂಡ ಮನವಿಯನ್ನು ಪುರಸ್ಕರಿಸ ಬೇಕಾದ ಅಗತ್ಯವೂ ಇರಲಿಲ್ಲ. ಅಲ್ಲದೇ, ವಿವಾಹ ರದ್ಧತಿ ಕೋರಿ ಆರಂಭದಲ್ಲಿ ಅಶೋಕನ್ ಅರ್ಜಿ ಸಲ್ಲಿಸಿಯೇ ಇರಲಿಲ್ಲ. ಮಗಳನ್ನು ಪತ್ತೆ ಹಚ್ಚಿ ಕೊಡಬೇಕೆಂದು ಕೋರಿ ಹೇಬಿಯ ಸ್ ಕಾರ್ಪಸ್ ಅರ್ಜಿಯನ್ನಷ್ಟೇ ಸಲ್ಲಿಸಿದ್ದರು.

ಎರಡನೇ ಮತ್ತು ಮೂರನೇ ಕಾರಣಗಳೂ ಹಾದಿಯಾಳ ಮದುವೆಯನ್ನು ರದ್ದುಗೊಳಿಸುವುದಕ್ಕೆ ಯಾವ ನೆಲೆಯಲ್ಲೂ ಆಧಾರವಾಗುವುದಿಲ್ಲ. ಹಾದಿಯ ಇತರೆಲ್ಲರಂತೆ ಸಹಜವಾಗಿರುವ ಯುವತಿ. ಮಾನಸಿಕವಾಗಿ ಸಮರ್ಥೆ. ವಿದ್ಯಾರ್ಥಿನಿ. ನ್ಯಾಯಾಲಯ ಕೇಳಿದ ಪ್ರತಿ ಪ್ರಶ್ನೆಗಳಿಗೂ ಅತ್ಯಂತ ಸಮಯೋಚಿತ ಉತ್ತರಗಳನ್ನೇ ನೀಡಿದ್ದರು. ವಿವಾಹವನ್ನು ರದ್ದುಗೊಳಿಸುವುದಕ್ಕೆ ಪೂರಕವಾಗುವ ಯಾವ ಮಾನಸಿಕ ದೌರ್ಬಲ್ಯವನ್ನು ವ ಆಕೆ ಪ್ರದರ್ಶಿಸಿಲ್ಲ ಅಥವಾ ಆಕೆಯ ತಂದೆ ಅಶೋಕನ್ ಆ ಕುರಿತಾದ ವೈದ್ಯಕೀಯ ದಾಖಲೆ ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಇನ್ನು, ಮೂರನೇ ಕಾರಣ ವಂತೂ ಇವರಿಬ್ಬರಿಗೆ ಹೊಂದಿಕೆಯಾಗುವುದೇ ಇಲ್ಲ. ಯಾಕೆಂದರೆ, ಶಫಿನ್‍ಗೆ ಈ ಮೊದಲು ವಿವಾಹವಾಗಿಲ್ಲ ಅಥವಾ ಆ ಬಗ್ಗೆ ಯಾವ ದೂರನ್ನೂ ಯಾರೂ ಕೋರ್ಟಿಗೆ ಸಲ್ಲಿಸಿಲ್ಲ. ಹಾದಿಯಾಳಿಗೆ ಆ ಬಗ್ಗೆ ದೂರುಗಳಿಲ್ಲ. ಅಶೋಕನ್‍ಗೂ ಇಲ್ಲ. ಆದ್ದರಿಂದ ಈ ಮೂರೂ ಕಾರಣಗಳಲ್ಲಿ ಹಾದಿಯಾ-ಶಫಿನ್ ವಿವಾಹವನ್ನು ರದ್ದುಗೊಳಿಸುವುದಕ್ಕೆ ಏನೇನೂ ಇಲ್ಲ. ಆದ್ದರಿಂದಲೇ, 2016 ಡಿಸೆಂಬರ್‍ನಲ್ಲಿ ಈ ಮದುವೆಯನ್ನು ರದ್ದುಗೊಳಿಸಲು ಕೇರಳ ಹೈಕೋರ್ಟ್ ಕೊಟ್ಟ ಕಾರಣಗಳು ಬೇರೆಯದೇ ಆಗಿದ್ದುವು.
1. ಮತಾಂತರ ಕುರಿತಾದ ಸಂದೇಹ
2. ಶಫಿನ್ ಜಹಾನ್ ಹಿನ್ನೆಲೆಯ ಬಗ್ಗೆ ಪ್ರಶ್ನೆಗಳು
3. ತಂದೆ ಅಥವಾ ಪೋಷಕರ ಅನುಪಸ್ಥಿತಿಯಲ್ಲಿ ವಿವಾಹ ನಡೆದಿರುವುದು.
4. ಹಾದಿಯಾರ ಉತ್ತಮ ಭವಿಷ್ಯದ ದೃಷ್ಟಿಯಿಂದ ನಿರ್ಧಾರ ತಳೆಯುವುದು.
ನಿಜವಾಗಿ ಈ ನಾಲ್ಕೂ ಕಾರಣಗಳು ಒಂದು ವಿವಾಹವನ್ನು ರದ್ದುಪಡಿಸುವುದಕ್ಕೆ ಕಾರಣವೇ ಆಗುವುದಿಲ್ಲ. ಮದುವೆಯಾಗಿರುವ ಇಬ್ಬರೂ ಪ್ರೌಢರಾಗಿದ್ದರೆ, ಮಾನಸಿಕ ಸಮಸ್ಯೆ ಇಲ್ಲದಿದ್ದರೆ ಮತ್ತು ಆ ಮೊದಲೇ ಮದುವೆಯಾಗಿದ್ದು ಅದನ್ನು ಅಡಗಿಸಿಟ್ಟಿದ್ದರಷ್ಟೇ ವಿವಾಹ ರದ್ಧತಿಗೆ ಕೋರ್ಟು ಆದೇಶ ನೀಡಬಹುದು. ಶಫಿನ್ ಜಹಾನ್‍ನ ಹಿನ್ನೆಲೆ ಏನು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಗಳಿವೆಯೇ, ಭಯೋತ್ಪಾದಕ ಚಟುವಟಿಕೆಯಲ್ಲಿ ಅವರು ತೊಡಗಿಸಿ ಕೊಂಡಿದ್ದಾರೆಯೇ, ಹಾದಿಯಾಳನ್ನು ವಿದೇಶಕ್ಕೆ ಸಾಗಿಸುವ ಉದ್ದೇಶವನ್ನು ಅವರು ಹೊಂದಿದ್ದಾರೆಯೇ ಇತ್ಯಾದಿಗಳಿಗೂ ಮದುವೆಗೂ ಸಂಬಂಧ ಕಲ್ಪಿಸುವುದಕ್ಕೆ ಸಾಧ್ಯವೇ ಇಲ್ಲ. ವಿವಾಹವು ಊರ್ಜಿತ-ಅನೂರ್ಜಿತಗೊಳ್ಳುವುದು ವಿವಾಹಕ್ಕೆ ಸಂ ಬಂಧಿಸಿದ ಕಾನೂನು ಕಟ್ಟಲೆಗಳ ಆಧಾರದಲ್ಲಿ ಮಾತ್ರ. ಹಾದಿಯಾಳಂತೂ ತಾನು ಮತಾಂತರವಾಗಿರುವ ಬಗ್ಗೆ ಪೆÇಲೀಸರ ಮುಂದೆ ವಿವರವಾಗಿ ಹೇಳಿಕೊಂಡಿದ್ದರು. ಅಲ್ಲದೇ, ಹೈಕೋರ್ಟ್‍ಗೆ ಹಾಜರುಪಡಿಸುವ ವೇಳೆ, ಮಾಧ್ಯಮದವರನ್ನು ಕೂಗಿ ಕರೆದು, ‘ನಾನು ಮುಸ್ಲಿಮ್. ನನ್ನನ್ನು ಯಾರೂ ಬಲವಂತದಿಂದ ಮತಾಂತರಿಸಿಲ್ಲ. ನನ್ನ ಪತಿ ಶಫಿನ್ ಜಹಾನ್..’ ಎಂದು ಕೂಗಿ ಹೇಳಿದ್ದರು.

ತಮಿಳುನಾಡಿನ ¸ ಸೇಲಂನಲ್ಲಿರುವ ಶಿವರಾಜ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನಲ್ಲಿ ಕಲಿಯುತ್ತಿದ್ದಾಗಿನ ವಿವರಗಳನ್ನು ಆಕೆ ಕೋರ್ಟ್ ಮುಂದೆ ಮಂಡಿಸಿದ್ದರು. ಕಾಲೇಜಿನ ಹತ್ತಿರವೇ ಇರುವ ಬಾಡಿಗೆ ಮನೆಯೊಂದರಲ್ಲಿ ಇತರ ನಾಲ್ವರು ವಿದ್ಯಾರ್ಥಿನಿಯರೊಂದಿಗೆಬದುಕುತ್ತಿದ್ದಗ ಫಸೀನ ಮತ್ತು ಜಸೀನ ಎಂಬಿಬ್ಬರ ಬದುಕು ತನ್ನನ್ನು ಆಕರ್ಷಿಸಿದ್ದು ಮತ್ತು ಅವರ ನಮಾಝïನಿಂದ ಪ್ರಭಾವಿತವಾದದ್ದು, ಬಳಿಕ ಇಸ್ಲಾಮ್‍ಗೆ ಸಂಬಂಧಿಸಿದ ವಿವಿಧ ಪುಸ್ತಕ ಮತ್ತು ವೀಡಿಯೋಗಳನ್ನು ವೀಕ್ಷಿಸತೊಡಗಿದ್ದು ಇತ್ಯಾದಿಗಳೆಲ್ಲವನ್ನೂ ಆಕೆ ಕೋರ್ಟ್ ಮುಂದೆ ಯಾವ ಅಳೂಕೂ ಇಲ್ಲದೇ ವಿವರಿಸಿದ್ದರು. ಜೊತೆಗೇ, 2015ರಲ್ಲಿ ತನ್ನ ದೊಡ್ಡಪ್ಪ ಮೃತಪಟ್ಟಾಗ ಮನೆಯಲ್ಲಿ ನಡೆದ ಪ್ರಸಂಗವನ್ನೂ ಕೋರ್ಟ್‍ನ ಮುಂದೆ ಬಿಚ್ಚಿಟ್ಟಿದ್ದರು. ದೊಡ್ಡಪ್ಪರ ಸದ್ಗತಿಗಾಗಿ ಮನೆಯಲ್ಲಿ ಹಮ್ಮಿಕೊಂಡ 40 ದಿನಗಳ ಪೂಜಾ ಕಾರ್ಯದಲ್ಲಿ ಭಾಗವಹಿಸಲು ತಾನು ನಿರಾಕರಿಸಿದ್ದು ಮತ್ತು ಆ ವೇಳೆ ತಂದೆ ಅಶೋಕನ್‍ರಿಗೆ ತಾನು ಮುಸ್ಲಿಮ್ ಆಗಿರುವುದನ್ನು ತಿಳಿಸಿರುವುದನ್ನೂ ಆಕೆ ವಿವರಿಸಿದ್ದರು. ಬಹುಶಃ, ಬಲವಂತದ ಮತಾಂತರವಾಗಿದ್ದರೆ ಹಾದಿಯಾ ಇಷ್ಟೊಂದು ತೀವ್ರವಾಗಿ ಆಚಾರ-ವಿಚಾರಗಳನ್ನು – ಅದೂ ಮನೆಯಲ್ಲಿ – ಪಾಲಿಸುವುದಕ್ಕೆ ಮುಂದಾಗುತ್ತಲೇ ಇರಲಿಲ್ಲ. ಆಕೆಯ ಮನಪರಿವರ್ತನೆ ಗೆಳತಿಯರ ನಡುವಿನ ಸಂಬಂಧದಿಂದ ಆಗಿತ್ತೇ ಹೊರತು ಆ ಸಮಯದಲ್ಲಿ ಅವರ ಬದುಕಿನಲ್ಲಿ ಶಫಿನ್ ಜಹಾನ್‍ರ ಪ್ರವೇಶ ಆಗಿರಲೂ ಇಲ್ಲ. ತನ್ನ ಮತಾಂತರದ ಕುರಿತಂತೆ ಆಕೆ ಕೋರ್ಟ್‍ಗೆ ಅಫಿದಾವಿತನ್ನೂ ಸಲ್ಲಿಸಿದ್ದರು. ಆದ್ದರಿಂದ ಬಲವಂತದ ಮತಾಂತರ ಎಂಬ ಸಂದೇಹ ಪಡುವುದಕ್ಕೆ ಕಾರಣಗಳೇ ಇದ್ದಿರಲಿಲ್ಲ. ಇನ್ನು, ಬಲವಂತದಿಂದ ಮತಾಂತವಾಗಿದ್ದರೂ ಮದುವೆಯನ್ನು ರದ್ದು ಪಡಿಸುವುದಕ್ಕೆ ಅದು ಕಾರಣ ಆಗುವುದಕ್ಕೂ ಸಾಧ್ಯವಿರಲಿಲ್ಲ. ಪ್ರೌಢ ಹೆಣ್ಣು-ಗಂಡುಗಳಿಬ್ಬರು ಹೆತ್ತವರ ಉಪಸ್ಥಿತಿ ಇದ್ದರೂ ಇಲ್ಲದಿದ್ದರೂ ವಿವಾಹ ಮಾಡಿಕೊಳ್ಳಬಹುದು. ಅದು ವೈಯಕ್ತಿಕ ಸ್ವಾತಂತ್ರ್ಯದ ಪರಿಧಿಯೊಳಗೆ ಬರುವುದರಿಂದ ಅದು ಪ್ರಶ್ನಾರ್ಹ ವಾಗುವುದಿಲ್ಲ. ಆದರೂ ಕೇರಳ ಹೈಕೋರ್ಟ್ ಈ ಮದುವೆಯನ್ನು ರದ್ದುಪಡಿಸುತ್ತಾ ಹೀಗೆ ಸಮಜಾಯಿಷಿಕೆ ನೀಡಿತು-ಹಾದಿಯಾ ಪ್ರಬುದ್ಧಳಾಗಿರಬಹುದು. ಆದರೆ 20ರ ಹರೆಯ ವೆಂಬುದು ಚಂಚಲವಾದುದು. ಹೆತ್ತವರಿಗೆ ಆಕೆಯ ಸುರಕ್ಷಿತತೆಯ ಬಗ್ಗೆ ಸಂಶಯವಿದೆ. ಭಾರತೀಯ ಸಂಸ್ಕøತಿಯ ಪ್ರಕಾರ ಮಗಳನ್ನು ಮದುವೆ ಮಾಡಿಕೊಡುವ ಹಕ್ಕು ಹೆತ್ತವರಿಗಿದೆ…’

ನಿಜವಾಗಿ, ನ್ಯಾಯಾಂಗವೆಂಬುದು ಕಾನೂನು ಆಧಾರಿತ ವಾಗಿ ತೀರ್ಪು ನೀಡುವ ಸಂಸ್ಥೆಯೇ ಹೊರತು ಭಾವನೆಯ ಆಧಾರದಲ್ಲಲ್ಲ. ತೀರ್ಪಿನ ಜೊತೆ ಭಾವನೆ ಬೆರೆತು ಹೋದರೆ ಅದು ಮಾಡಬಾರದ ಹಾನಿಯನ್ನು ಮಾಡಿ ಬಿಡಬಲ್ಲುದು. ಈ ತೀರ್ಪಿನ ಕುರಿತಂತೆ ಲಭ್ಯವಾದ ಪ್ರತಿಕ್ರಿಯೆಗಳಲ್ಲಿ ಈ ಭಾವನಾತ್ಮಕ ಅಂಶವೂ ಮುಖ್ಯವಾಗಿತ್ತು. ಆದ್ದರಿಂದಲೇ ಈ ತೀರ್ಪಿನ ವಿರುದ್ಧ ಶಫಿನ್ ಜಹಾನ್ 2017ರಲ್ಲಿ ¸ ಸುಪ್ರೀಮ್ ಕೋರ್ಟ್‍ನ ಬಾಗಿಲು ತಟ್ಟಿದರು. ವಿಶೇಷ ಏನೆಂದರೆ, ಸುಪ್ರೀಮ್ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಮತ್ತು ನ್ಯಾಯಮೂರ್ತಿ ಚಂದ್ರಚೂಡ್ ಅವರು ಮದುವೆ ರದ್ಧತಿಯ ಮೇಲೆ ತೀರ್ಪು ನೀಡುವ ಬದಲು ಕೇರಳದ ಮತಾಂತರ ಪ್ರಕರಣಗಳ ಕುರಿತು ತನಿಖಿಸುವಂತೆ ರಾಷ್ಟ್ರೀಯ ತನಿಖಾ ದಳ(ಓIಂ)ಕ್ಕೆ ಆದೇಶಿಸಿದರು. ಅಂದಹಾಗೆ, ಕೋರ್ಟಿನ ಮುಂದೆ ಇದ್ದುದು ಪ್ರೌಢ ವ್ಯಕ್ತಿಗಳ ನಡುವಿನ ಮದುವೆಯನ್ನು ಅನೂರ್ಜಿತ ಗೊಳಿಸಿದ್ದು ಸರಿಯೇ ಎಂಬ ಪ್ರಶ್ನೆಯಾಗಿತ್ತು. ಅವರಿಬ್ಬರ ಹಿನ್ನೆಲೆ-ಮುನ್ನೆಲೆ ಏನಿದ್ದರೂ ಅದನ್ನು ಇದಕ್ಕೆ ತಳುಕು ಹಾಕಬೇಕಾಗಿರಲಿಲ್ಲ. ಅದು ಬೇರೆಯದೇ ಆದ ತನಿಖೆಗೆ ಅರ್ಹವಾದದ್ದು. ಅದನ್ನು ಮದುವೆಯ ಸಿಂಧುತ್ವಕ್ಕೆ ಜೋಡಿಸುವುದು ಅಪಾಯಕಾರಿ ಮಾದರಿಯೊಂದಕ್ಕೆ ಆರಂಭ ಕೊಟ್ಟಂತೆ. ಆದ್ದರಿಂದ ಈ ಆದೇಶವು ಅಚ್ಚರಿಯ ಬೆಳವಣಿಗೆಯೂ ಆಗಿತ್ತು. ಆದರೆ ಬಳಿಕ ¸ ಸುಪ್ರೀಮ್ ಕೋರ್ಟ್ ಇಡೀ ಪ್ರಕರಣದ ಬಗ್ಗೆ ವಿಶೇಷ ಆಸಕ್ತಿ ವಹಿಸಿತು. ಹಾದಿಯಾಳನ್ನು ಕೋರ್ಟಿಗೆ ಹಾಜರುಪಡಿಸುವಂತೆ ಆದೇಶಿಸಿತು. ಹಾದಿಯಾಳ ಮಾತನ್ನು ಆಲಿಸಿದ ಮುಖ್ಯ ನ್ಯಾಯಾಧೀಶರಿಗೆ ಪ್ರಕರಣದ ಆಳ-ಅಗಲ ಮನವರಿಕೆಯಾಯಿತು. ತಂದೆಯ ಸುಪರ್ದಿಯಿಂದ ಹಾದಿಯಾಳನ್ನು ಹೊರತಂದು ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಿಗೆ ಆಕೆಯ ಹೊಣೆಯನ್ನು ವಹಿಸಿತು. ಇದೀಗ ಆ ಮದುವೆಯನ್ನು ಸಿಂಧುಗೊಳಿಸಿ ಪ್ರಕರಣಕ್ಕೆ ಒಂದು ಹಂತದ ತೆರೆಯನ್ನೆಳೆದಿದೆ.
ನಿಜವಾಗಿ, ಕೋರ್ಟಿನ ಹೊರಗಡೆಯ ಗದ್ದಲಗಳು ಕೋರ್ಟ್‍ನ ಒಳಗಡೆಯ ವಾತಾವರಣದ ಮೇಲೆ ಎಷ್ಟು ಪ್ರಭಾವವನ್ನು ಬೀರುತ್ತದೆ ಎಂಬುದಕ್ಕೆ ಹಾದಿಯಾ-ಶಫಿನ್ ವಿವಾಹ ಪ್ರಕರಣ ಒಂದು ಅತ್ಯುತ್ತಮ ಉದಾಹರಣೆ. ಲವ್ ಜಿಹಾದ್, ಭಯೋತ್ಪಾದನೆ, ಮತಾಂತರ, ಸಿರಿಯಕ್ಕೆ ಹೆಣ್ಣು ಮಕ್ಕಳ ಸಾಗಾಟ.. ಇತ್ಯಾದಿ ಚರ್ಚೆಗಳು ಕೇರಳ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಬಹು ಜೋರಾಗಿ ನಡೆಯುತ್ತಿದ್ದ ಸಮಯದಲ್ಲೇ ಹಾದಿಯಾ ಪ್ರಕರಣ ಕೋರ್ಟ್ ಮೆಟ್ಟಲನ್ನೇರಿತ್ತು. ಲವ್‍ಜಿಹಾದ್ ಬಗ್ಗೆ ಒಂದು ಬಗೆಯ ಕಲ್ಪಿತ ಮತ್ತು ಪ್ರಚೋದನಕಾರಿ ಸುಳ್ಳುಗಳು ಎಗ್ಗಿಲ್ಲದೆ ಹರಿದಾಡುತ್ತಿದ್ದ ಸಮಯವದು. ಬಹುಶಃ, ಈ ವಾತಾವರಣದ ಪ್ರಭಾವ ನ್ಯಾಯಾಧೀಶರ ಮೇಲೂ ಆಗಿರಬಹುದೇ ಎಂಬ ಅನುಮಾನ ಹಾದಿಯ ಪ್ರಕರಣದಿಂದ ಹಲವು ಬಾರಿ ಕಾಡಿದೆ. ಮಾಧ್ಯಮ ಚರ್ಚೆಯ ಪ್ರಭಾವವು ನ್ಯಾಯಾಲಯಗಳ ಮೇಲೂ ಬೀರುತ್ತದೆಯೇ? ಅಲ್ಲಿನ ವಿಚಾರಣೆ-ತೀರ್ಪುಗಳಲ್ಲಿ ಮಾಧ್ಯಮ ಚರ್ಚೆಯು ಪಾತ್ರ ವಹಿಸುತ್ತವೆಯೇ? ನ್ಯಾಯಾಧೀಶರೂ ಮನುಷ್ಯರೇ ತಾನೇ. ಪತ್ನಿ-ಮಕ್ಕಳಿರುವ ಮತ್ತು ಮಾಧ್ಯಮ ಸುದ್ದಿ ಯನ್ನೂ, ವರದಿ-ಚರ್ಚೆಯನ್ನೂ ವೀಕ್ಷಿಸಿಯೇ ಇರುವ ಅವರ ತೀರ್ಪುಗಳುನ್ನು ಕೆಲವೊಮ್ಮೆ ಅವು ನಿಯಂತ್ರಿಸಬಹುದೇ?
ಹಾದಿಯಾ-ಶಫಿನ್ ಪ್ರಕರಣದ ಮೂಲಕ ಮುಂಚೂಣಿಗೆ ಬಂದಿರುವ ಈ ಪ್ರಶ್ನೆ ಅಸಂಗತವಲ್ಲ.