ಸಿದ್ದರಾಮಯ್ಯರಿಂದ ನಾಡಧ್ವಜ ಬಿಡುಗಡೆ: ಬಿಜೆಪಿಗೆ ಸಂಕಟ?

0
388

ಬೆಂಗಳೂರು : ಕನ್ನಡಿಗರ ಆಶಯ, ಅಭಿಪ್ರಾಯಕ್ಕೆ ಧ್ವನಿಯಾಗುವ ಮೂಲಕ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಬೇಕು ಎಂಬ ಸರ್ಕಾರದ ಐತಿಹಾಸಿಕ ನಿರ್ಣಯಕ್ಕೆ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಹಿರಿಯ ಸಾಹಿತಿಗಳ ಒಕ್ಕೊರಲ ಬೆಂಬಲ ದೊರೆತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸರ್ಕಾರದ ರಚನೆ ಮಾಡಿದ್ದ ಸಮಿತಿ ಸಿದ್ಧಪಡಿಸಿರುವ ನಾಡಧ್ವಜದ ವಿನ್ಯಾಸದ ಬಗ್ಗೆ ಚರ್ಚಿಸಲು ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮುಖ್ಯಮಂತ್ರಿಯವರು ರಾಜ್ಯದ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಹಿರಿಯ ಸಾಹಿತಿಗಳ ಸಭೆ ಕರೆದಿದ್ದರು.

ನಾಡಧ್ವಜ ಮತ್ತು ಅದರ ವಿನ್ಯಾಸ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಧ್ವಜ ಮತ್ತು ವಿನ್ಯಾಸಕ್ಕೆ ಸಭೆಯಲ್ಲಿ ಮುಖಂಡರು ಹಾಗೂ ಸಾಹಿತಿಗಳು ತಮ್ಮ ಸಹಮತ ಸೂಚಿಸಿ ಸರ್ಕಾರದ ನಿರ್ಧಾರವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ನಾಡಧ್ವಜವನ್ನು ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯಕ್ಕೆ ಒಂದು ನಾಡಧ್ವಜ ಬೇಕು ಎಂಬ ಚರ್ಚೆ ಮೊದಲಿನಿಂದಲೂ ನಡೆಯುತ್ತಿತ್ತು. ಇದು ಕನ್ನಡಿಗರ ಅಪೇಕ್ಷೆಯೂ ಆಗಿತ್ತು. ಅದಕ್ಕೆ ನಮ್ಮ ಸರ್ಕಾರ ಧ್ವನಿಯಾಗುವುದರ ಜೊತೆಗೆ ರಾಜ್ಯಕ್ಕೆ ನಮ್ಮದೇ ಆದ ನಾಡಧ್ವಜ ಬೇಕು ಎಂಬ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದೆ ಎಂದು ಹೇಳಿದರು.

ಹಿರಿಯ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರೂ ಆಗಿರುವ ಪಾಟೀಲ ಪುಟ್ಟಪ್ಪ ಅವರೂ ನಾಡಧ್ವಜ ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರನ್ನು ಒಳಗೊಂಡ ಒಂದು ಸಮಿತಿ ರಚಿಸಲಾಗಿತ್ತು.

ಕಾನೂನು ಪರಿಸ್ಥಿತಿ, ಸಂವಿಧಾನದಲ್ಲಿ ಇರುವ ಅವಕಾಶ, ನಮ್ಮ ಕನ್ನಡ ಬಾವುಟದ ಬಗ್ಗೆ ಇರುವ ಇತಿಹಾಸ ಈ ಎಲ್ಲದರ ಬಗ್ಗೆ ಸಮಿತಿ ಅಧ್ಯಯನ ಮಾಡಿ ನಾಡಧ್ವಜ ಮತ್ತು ಅದರ ವಿನ್ಯಾಸ ಕುರಿತು ಸರ್ಕಾರಕ್ಕೆ ವರದಿ ಕೊಟ್ಟಿದೆ. ಆ ವರದಿಯನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿದಾಗ ಪ್ರತ್ಯೇಕ ಧ್ವಜ ನಮಗೆ ಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಈ ಕುರಿತು ಕನ್ನಡಪರ ಸಂಘಟನೆಗಳ ಮುಖಂಡರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯನ್ನು ಸಂಪುಟ ತಮಗೆ ವಹಿಸಿತ್ತು ಎಂದು ಮುಖ್ಯಮಂತ್ರಿಯವರು ಹೇಳಿದರು.

ಈ ಹಿನ್ನೆಲೆಯಲ್ಲಿ ಇಂದು ಸಭೆ ಕರೆದು ಚರ್ಚಿಸಲಾಗಿದ್ದು, ಸಮಿತಿ ಸಿದ್ಧಪಡಿಸಿರುವ ನಾಡಧ್ವಜ ಮತ್ತು ಅದರ ವಿನ್ಯಾಸಕ್ಕೆ ಸಹಮತ ವ್ಯಕ್ತವಾಗಿದೆ ಎಂದು ತಿಳಿಸಿದರು.

ಕನ್ನಡ ಬಾವುಟದಲ್ಲಿನ ಹಳದಿ ಮತ್ತು ಕೆಂಪು ಬಣ್ಣ ಜೊತೆಗೆ ಶಾಂತಿಯ ಸಂಕೇತವಾದ ಬಿಳಿಯ ಬಣ್ಣವನ್ನು ಸೇರಿಸಿಕೊಂಡು ನಾಡಧ್ವಜದ ವಿನ್ಯಾಸ ರಚಿಸಲಾಗಿದೆ. ಬಿಳಿಯ ಬಣ್ಣದ ಮಧ್ಯಭಾಗದಲ್ಲಿ ಸರ್ಕಾರದ ಲಾಂಛನ ಇರಲಿದೆ ಎಂದು ಮುಖ್ಯಮಂತ್ರಿಯವರು ವಿವರಿಸಿದರು.

ಇದು ಐಸಿಹಾಸಿಕ ನಿರ್ಣಯ. ಈ ನಿರ್ಧಾರ ಮಾಡುವಾಗ ಯಾವುದೇ ಒಡಕಿನ ಧ್ವನಿ ಇರಬಾರದು. ಒಮ್ಮತದಿಂದ ನಿರ್ಧಾರವಾಗಬೇಕು ಎಂಬ ಕಾರಣಕ್ಕೆ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಹಿರಿಯ ಸಾಹಿತಿಗಳ ಸಭೆ ಕರೆಯಲಾಗಿತ್ತು ಎಂದು ವಿವರಿಸಿದರು.

ಆದರೆ, ನಾಡಧ್ವಜವನ್ನು ನಾವೇ ಘೋಷಣೆ ಮಾಡುವಂತಿಲ್ಲ. ಅದಕ್ಕೆ ಕೇಂದ್ರದ ಒಪ್ಪಿಗೆ ಬೇಕು. ಹೀಗಾಗಿ ಕೇಂದ್ರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸಲಾಗುವುದು. ನಾಡಧ್ವಜಕ್ಕೆ ಒಪ್ಪಿಗೆ ಸೂಚಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದರು.

ಇಡೀ ದೇಶದಲ್ಲಿ ಮೊದಲ ಬಾರಿಗೆ ಕನ್ನಡ ನಾಡಿನ ಅಸ್ಮಿತೆಗಾಗಿ ರಾಜ್ಯಕ್ಕೆ ತನ್ನದೇ ಆದ ನಾಡಧ್ವಜ ಇರಲಿದೆ. ಯಾವುದೇ ರಾಜ್ಯ ಪ್ರತ್ಯೇಕ ಧ್ವಜ ಹೊಂದಲು ಸಂವಿಧಾನದಲಿ ವಿರೋಧ ಇಲ್ಲ. ಜೊತೆಗೆ ರಾಷ್ಟ್ರಧ್ವಜಕ್ಕಿಂತ ಕೆಳಗೆ ನಾಡಧ್ವಜ ಹಾರಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.