ಹಾಡಹಗಲೇ ರಸ್ತೆಯಲ್ಲೇ ಅಪ್ರಾಪ್ತೆಗೆ  ಲೈಂಗಿಕ ಕಿರುಕುಳ: ತಡೆಯುವ ಬದಲು ಚಿತ್ರೀಕರಣದಲ್ಲಿ ನಿರತರಾದ (ಅ)ನಾಗರಿಕರು

0
2552

: ಸಲೀಮ್ ಬೋಳಂಗಡಿ
ಪಾಟ್ನಾ: ಬಿಹಾರದ ಜಹಾನಾಬಾದ್‍ನ ನಡು ರಸ್ತೆಯಲ್ಲಿ ಹಾಡು ಹಗಲೇ ಓರ್ವ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿ ಸತಾಯಿಸಿದ  ಯುವಕರ ಕೃತ್ಯವನ್ನು ನೋಡಿದ ನಾಗರಿಕರು ಇದನ್ನು ತಡೆಯುವ ಪ್ರಯತ್ನ ಮಾಡದೆ ಅದರ ಚಿತ್ರೀಕರಣದಲ್ಲಿ ತೊಡಗಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಪ್ರಚಾರ ಮಾಡಿದ ಕಾರಣ ಈ ವಿವರ ಬಹಿರಂಗವಾಯಿತು. ಜಹಾನಾಬಾದ್ ರಿಜಿಸ್ಟ್ರೇಶನ್ ಇರುವ ಬೈಕನ್ನು ಪೋಲೀಸರು ಹುಡುಕುತ್ತಿದ್ದಾರೆ.
ಹಾಡು ಹಗಲೇ ಯುವತಿಯ ಮೇಲೆ ಆರೇಳು ಯುವಕರು ದಾಳಿ ನಡೆಸಿದರು. ರಸ್ತೆ ಬದಿಯಲ್ಲಿ ಆಕೆಯ ವಸ್ತ್ರಗಳನ್ನು ಹರಿದು ಹಾಕಲು ಶ್ರಮಿಸುತ್ತಿದ್ದ ದುಷ್ಕರ್ಮಿಗಳ ಕುಕೃತ್ಯದಿಂದ ಪಾರಾಗಲು ಯುವತಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ನೆರವಿಗೆ ಯಾರೂ ಧಾವಿಸಲಿಲ್ಲ. ಅದೇ ವಿಡಿಯೋದಲ್ಲಿ ಕಂಡು ಬಂದ ಬೈಕ್ ನಂಬರ್ ಹುಡುಕಿ ದುಷ್ಕರ್ಮಿಗಳ ಪತ್ತೆಗಾಗಿ ಪೋಲೀಸರು ಬಲೆ ಬೀಸಿದ್ದಾರೆ.
ಅಪ್ರಾಪ್ತ ಬಾಲಕಿಯ ವಿರುದ್ಧದ ಈ ದಾಳಿಯ ಎರಡು ವೀಡಿಯೋ ತುಣುಕುಗಳೂ ಲಭ್ಯವಾಗಿದೆ. ಬಹಳ ಆಶ್ಚರ್ಯಕರ ವಿಚಾರವೆಂದರೆ ಈ ಕುರಿತು ಯಾರೂ ದೂರು ದಾಖಲಿಸಲಿಲ್ಲ. ಆದ್ದರಿಂದ ಈ ಘಟನೆಯ ನಿಖರವಾದ ಸ್ಥಳದ ಪರಿಶೀಲನೆಯಲ್ಲಿದ್ದೇವೆ ಎಂದು ಜಹಾನಾಭಾದ್ ಎಸ್.ಪಿ.ಮನೀಶ್ ಹೇಳಿದ್ದಾರೆ. ಇಂತಹ ಮೃಗೀಯ ಕೃತ್ಯ ಕಣ್ಣೆದುರು ನಡೆಯುತ್ತಿದ್ದರೂ ಅದನ್ನು ನೋಡಿ ತಡೆಯುವ ಬದಲು ಅದರ ಚಿತ್ರೀಕರಣದಲ್ಲಿ ತೊಡಗಿದ ಅನಾಗರಿಕ ವರ್ತನೆಯ ಜನರ ಮನಸ್ಸುಗಳನ್ನು ನೋಡಿದಾಗ ಹೇಸಿಗೆ ಎನಿಸುತ್ತದೆ. ಇಷ್ಟು ನೀಚ ಹಂತಕ್ಕೆ ಈ ಜನರು ಇಳಿಯುತ್ತಾರಾ? ಕನಿಷ್ಟ ಪಕ್ಷ ಪೋಲೀಸರಿಗೆ ದೂರು ಸಲ್ಲಿಸುವ ಕೆಲಸವನ್ನಾದರೂ ಮಾಡಬೇಕಿತ್ತು. ಈ ವರ್ತನೆಯನ್ನು ಮೃಗೀಯ ಎಂದು ಕರೆದರೆ ಪ್ರಾಣಿಗಳು ಕೂಡಾ ಮಾನ ನಷ್ಟ ಹೂಡಬಹುದೇನೋ? ಅನ್ಯಾಯವನ್ನು ತಡೆಯುವಂತಹ ಪ್ರವೃತ್ತಿಯಿಂದ ಜನ ದೂರವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಹೆಣ್ಣಿಗೆ ಈ ಸಮಾಜ ಎಂಥಹ ಸ್ಥಾನ ನೀಡುತ್ತಿದೆಯೆಂಬುದು ಅರ್ಥವಾಗುತ್ತಿದೆ.

 ಪಾಟ್ನಾದಲ್ಲಿನ ಈ ವೀಡಿಯೋವನ್ನು ಗಮನಿಸಿದಾಗ ಆ ದುರುಳರಿಗೆ ಕಾನೂನಿನ ಬಗ್ಗೆ ಸ್ವಲ್ಪವೂ ಭಯವಿಲ್ಲ ಎಂಬುದು ಗೋಚರವಾಗುತ್ತಿದೆ. ಮಾತ್ರವಲ್ಲ ಈ ವೀಡಿಯೋ ಚಿತ್ರೀಕರಣ ಮಾಡಿದವರ ವಿರುದ್ಧವೂ ತೀವ್ರ ಕ್ರಮ ಕೈಗೊಳ್ಳಬೇಕಾಗಿದೆ. ಈ ಅನ್ಯಾಯದ ವಿರುದ್ಧ ಪೋಲೀಸರಿಗೆ ದೂರು ದಾಖಲಿಸದೆ ಆಕೆಯ ರಕ್ಷಣೆಗೆ ಧಾವಿಸದೇ ಇದ್ದುದಕ್ಕೆ ಪ್ರಕರಣ ದಾಖಲಿಸಬೇಕು. ಮಾತ್ರವಲ್ಲ ಇಂತಹ ಅಕ್ರಮ ಅನ್ಯಾಯಗಳನ್ನು ಕಂಡು ದೂರು ಸಲ್ಲಿಸುವವರಿಗೆ ಬಹುಮಾನ ನೀಡಿ ಗೌರವಿಸಲು ಪೋಲೀಸ್ ಇಲಾಖೆ ಮುಂದಾಗಬೇಕು. ಕೇಂದ್ರ ಸರಕಾರ ಇತ್ತೀಚೆಗೆ ತಾನೇ ಹನ್ನೆರಡು ವರ್ಷಕ್ಕಿಂತ ಕೆಳಗಿನವರ ಮೇಲೆ ಅತ್ಯಾಚಾರ ನಡೆಸಿದವರಿಗೆ  ಗಲ್ಲು ಶಿಕ್ಷೆ ನೀಡುವುದಾಗಿ ಘೋಷಿಸಿದೆ. ಆದರೆ ಅದು ಶೀಘ್ರವಾಗಿ ಅನುಷ್ಟಾನಕ್ಕೆ ಬರಬೇಕಾಗಿದೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನೇದಿನೇ ವ್ಯಾಪಕವಾಗುತ್ತಿದೆ. ಅತ್ಯಾಚಾರಿಗಳ ದೇಶವಾಗುವುದನ್ನು ತಡೆಯಬೇಕಾದ ಅನಿವಾರ್ಯತೆ ದೇಶಕ್ಕೆ ಎದುರಾಗಿದೆ