ಹೆಗಡೆ ಉವಾಚ: ಒಳ- ಹೊರಗೆ

0
387

 

ಸಂವಿಧಾನ ಅಂಬೇಡ್ಕರ ಸ್ಮೃತಿಯಾಗಿದ್ದು ಅದನ್ನು ಬದಲಾಯಿಸಬೇಕೆಂದಿದ್ದ ಅನಂತ್ ಕುಮಾರ್ ಹೆಗಡೆ ಕೊನೆಗೂ ಕ್ಷಮೆ ಯಾಚಿಸಿದ್ದಾರೆ. ವಿವಾದವನ್ನು ತಣ್ಣಗಾಗಿಸಲು ಯಾಚಿಸಿರುವ ಈ ಕ್ಷಮೆ ಎಷ್ಟರ ಮಟ್ಟಿಗೆ ಸ್ವೀಕಾರಾರ್ಹ ಎಂಬುವುದು ಚರ್ಚಾ ವಿಷಯ.

ಅದಾಗ್ಯೂ ಹೆಗಡೆ ಯವರ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕು. ಸಂವಿಧಾನದ ಬಗ್ಗೆ ಅವರ ಹೇಳಿಕೆ ಬಾಯಿ ತಪ್ಪಿ ಬಂದಿರುವುದಂತೂ ಅಲ್ಲ. ಅದರ ಹಿಂದೆ ಒಂದು ಥಾಟ್ ಪ್ರೊಸೆಸ್ ಇದೆ. ಆ ವಿಚಾರವನ್ನು ಬಹಿರಂಗಪಡಿಸಲು ವೇದಿಕೆಗಳು ವಿರಳವಾಗಿದ್ದುವು  ಆದ್ರೆ ಈಗ ವಸ್ತುಸ್ಥಿತಿ ಬದಲಾಗಿದೆ. ವೇದಿಕೆಯೊಂದಿಗೆ
ಬಲವೂ ಬಂದಿದೆ. ಸಹಜವಾಗಿ ಮಸ್ತಿಷ್ಕದಲ್ಲಿದ್ದ ಆ ವಿಚಾರಗಳು ನಿರ್ಭಯವಾಗಿ ನಾಲಿಗೆಗೆ ಬಂದಿವೆ.

ಬಿಜೆಪಿಯ ಮುಖಂಡರು ಈ ರೀತಿಯ ಹೇಳಿಕೆಗಳು ಮಾತಿನ ಭರದಲ್ಲಿ ನೀಡುತ್ತಾರೆಂದು ತಿಳಿಯುವುದು ಮೂರ್ಖತನವಾಗಬಹುದು. ಹೇಳಿಕೆ ನೀಡುವ ಮುಖಗಳು ಮಾತ್ರ ಆಗಾಗ ಬದಲಾಗುತ್ತವೆ ಆದರೆ
ಇದೆಲ್ಲಾ ಒಂದು ವ್ಯವಸ್ಥಿತ ತಂತ್ರಗಾರಿಕೆಯ ಭಾಗವಾಗಿರುತ್ತದೆ. ಇವುಗಳಿಗೆ ಜನರ , ವಿರೋಧ ಪಕ್ಷಗಳ ಮತ್ತು ಮಾಧ್ಯಮಗಳ ಪ್ರತಿಕ್ರಿಯೆ
ತಿಳಿಯುವುದು ಸಹ ಉದ್ದೇಶವಾಗಿರುತ್ತದೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ
‘ ಜಾತ್ಯಾತೀತ ‘ ಪದದೊಂದಿಗೆ ಅದಕ್ಕಿರುವ ದ್ವೇಷವನ್ನು ಒಂದಲ್ಲ ಒಂದು ರೀತಿಯಲ್ಲಿ ಹೊರ ಹಾಕ್ತಾನೆ ಇದೆ.
2015 ರ ಗಣರಾಜ್ಯೊತ್ಸವದ ಜಾಹಿರಾತಿನಲ್ಲಿ ಜಾತ್ಯಾತೀತ ಪದವನ್ನು ತಗೆದು ಹಾಕಲಾಗಿತ್ತು.
ಜಾತ್ಯಾತೀತ ಮತ್ತು ಸಮಾಜವಾದ ಪದವನ್ನು ತಗೆದು ಹಾಕಿ ಸಂವಿಧಾನದ ಪೀಠಿಕೆಯನ್ನು ಮರು ಮುದ್ರಿಸಲಾಗಿತ್ತು.

ಇದೇ ಉದ್ದೇಶ, ವಿಚಾರಧಾರೆಗಳನ್ನು ಹೊಂದಿರುವ  ಇನ್ನೂ ಬಹಳ ಮಂದಿ ಇದ್ದಾರೆ. ಅದನ್ನು ಬಹಿರಂಗಪಡಿಸುವ ಬೌದ್ಧಿಕ ಸಾಮರ್ಥ್ಯವಾಗಲಿ,  ಧೈರ್ಯವಾಗಲಿ, ರಾಜಕೀಯ ಪ್ರಾಮಾಣಿಕತೆಯಾಗಲಿ ಅವರಲ್ಲಿಲ್ಲ.
ಈಗಲೇ ಹೇಳಿ ಬಿಟ್ಟರೆ ಎಲ್ಲಿ ಅಧಿಕಾರ ಹೋಗಿ ಬಿಡುತ್ತದೋ ಎಂಬ ಅಂಜಿಕೆ ಒಂದು ಕಡೆಯಾದರೆ, ಅಧಿಕಾರ ದಾಹ ಇನ್ನೊಂದೆಡೆ.
ಮಾಮೂಲಿನಂತೆ,  ಸಂವಿಧಾನಕ್ಕೆ ಈ ರೀತಿಯ ಅವಮಾನವಾದ್ರೂ ಇವರ ನಾಯಕರಿಂದ ಖಂಡನೆ ಬಿಡಿ ಉಫ್ ಎಂಬ ಪದವು ಬರಲಿಲ್ಲ, ‘ದೇಶಪ್ರೇಮ’ ಜಾಗೃತಗೊಳ್ಳಲಿಲ್ಲ,  ಮನ್’ನಲ್ಲಿ  ಬಾತ್ ಗಳು ಹುಟ್ಟಲಿಲ್ಲ… ಅಯ್ಯೋ ಬಾಬಾಸಾಹೇಬ್…

ಆದ್ರೆ ಅಂತಹರ ನಡುವೆ ತನ್ನ ಮನಸ್ಸಿನಲ್ಲಿರುವುದನ್ನು ಬಚ್ಚಿಡದೇ ಅದನ್ನ ಹೊರಗೆಡಹಿರುವ ಹೆಗಡೆಯ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕೆನಿಸುತ್ತದೆ
ಆದ್ರೆ ಇನ್ನೊಂದು ಮಗ್ಗುಲಿನಿಂದ ನೋಡಿದರೆ ಆ ಪ್ರಾಮಾಣಿಕತೆಯ ಹಿಂದಿನ ಸೋಗಲಾಡಿತನವು ಕಾಣಸಿಗುತ್ತದೆ. ಸಂವಿಧಾನ ಕೊಟ್ಟಿರುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಕೊನೆಗೆ ಸಂವಿಧಾನನ್ನು ಬದಲಾಯಿಸಬೇಕು ಎನ್ನುವ  ಧೋರಣೆ ‘ಕೃತಘ್ನ’ ಮಾನಸಿಕತೆಕಿಂತ ಕಡಿಮೆಯಿಲ್ಲ.

( ನಮ್ ಕಡೆ ಮದುವೆ ಸಮಾರಂಭದಲ್ಲಿ ತಿಂದು ತೇಗಿ ಹೊರಬಂದು, ಊಟ ಸ್ವಲ್ಪನೂ ರುಚಿಯಿರಲಿಲ್ಲ, ಎಂದು ಹೇಳುವವರು ನೆನಪಾಗ್ತಾರೆ)

ಅದಿರಲಿ. ಈ ಸಂವಿಧಾನವನ್ನು ಏಣಿಯ ತರಹ ಬಳಸಿ ಒಂದು ಮಟ್ಟಕ್ಕೇರಿ ನಂತರ ಅದನ್ನು ಕಾಲಿನಿಂದ ತುಳಿದು ದೂರ ತಳ್ಳುವವರನ್ನು ಏನೆನ್ನಬೇಕು? ತಮ್ಮ ವಿಚಾರಧಾರೆಯ ಬಗ್ಗೆ ಬದ್ದತೆಯಿದ್ದರೆ ಆ ವಿಚಾರಧಾರೆ ಯನ್ನು ಪ್ರತಿಪಾದಿಸಿ, ಆ ಮೂಲಕ ಹೋರಾಟ ನಡೆಸಿ, ತಮಗೆ ಬೇಕಾದ ಸಂವಿಧಾನವನ್ನು ರೂಪಿಸುವುದು ಪ್ರಾಮಾಣಿಕತೆ, ತಮ್ಮ ವಿಚಾರಕ್ಕಿರುವ ನಿಷ್ಠೆಯಾಗಿದೆ. ಕನಿಷ್ಠ ಪಕ್ಷ ಸಮಾಜ ಕಂಟಕವಾಗಿರುವ ನಕ್ಸಲರಲ್ಲಿರುವಷ್ಟು ‘ನೈತಿಕತೆ’ ಇಂಥವರಲ್ಲಿಲ್ಲವೇ?
ಇಂಥವರಿಗೆ ಪ್ರಜಾತಂತ್ರದಲ್ಲಿ ನಂಬಿಕೆಯಿದೆಯೇ ಇಲ್ಲವೋ ಗೊತ್ತಿಲ್ಲ, ಆದ್ರೆ ಈ ವ್ಯವಸ್ಥೆಯೊಳಗೆ ನುಸುಳಿಕೊಂಡು ಅದನ್ನೇ ಬುಡಮೇಲುಗೊಳಿಸುವ ನುಸುಳುಕೋರ ಧೋರಣೆ ಇದಲ್ಲವೇ ಎಂಬ ಪ್ರಶ್ನೆಯೂ ಏಳುತ್ತದೆ. ಈ ಗೋಸುಂಬೆವಾದ ನಕ್ಸಲ್ ವಾದಕ್ಕಿಂತ ಹೆಚ್ಚು ಅಪಾಯಕಾರಿಯಲ್ಲವೇ?

ಆ ನಡುವೆ ಕೆಲ ಬಾಲಗೊಂಚಿ ಮಾಧ್ಯಮಗಳ ನಿಲುವು ಅಂತೂ ವರ್ಷಾಂತ್ಯದಾಲ್ಲಿ ಪುಕ್ಸಟೆ ಮನರಂಜನೆ ಒದಗಿಸುವಂತಿತ್ತು. ರಾಜಕೀಯದ ಬೇಬಿ ಸಿಟ್ಟಿಂಗ್ ನಲ್ಲಿರುವ ಕೂಸುಗಳಿಗೂ ಹೆಗಡೆ ಮತ್ತವರ ಪರಿವಾರದ ನೈಜ ಉದ್ದೇಶ ಏನೆಂದು ಗೊತ್ತು ಆದ್ರೆ ಈ ತುತ್ತೂರಿಗಳು ಹೆಗಡೆ ಬಯಸುವ ‘ಬದಲಾವಣೆ’ಯನ್ನು ‘ತಿದ್ದುಪಡಿ’ಯ ಲೇಪ ಹಚ್ಚಿ ಚರ್ಚಿಸಿದ್ದು ಅವುಗಳ‌ ಮೂರ್ಖತನವೋ, ಅಥವಾ ‘ಪ್ರಾಮಾಣಿಕ ಕುತಂತ್ರ’ವೋ ಗೊತ್ತಿಲ್ಲ…. ಆದ್ರೆ ನಗಿಸಿದ್ದಂತೂ ಸತ್ಯ…
ಅದರಲ್ಲೂ ಸಂವಿಧಾನವನ್ನು ಅಂಬೇಡ್ಕರ್ ಸ್ಮೃತಿಯೆಂದು ಕರೆದಿದ್ದನ್ನು ಖಂಡಿಸುವ ಗೋಜಿಗೆ ಹೆಚ್ಚಿನ ಮಾಧ್ಯಮಗಳು ಹೋಗದಿರುವುದು ಬಿಜೆಪಿಯ ವಿಶ್ವಾಸವನ್ನು ಖಂಡಿತವಾಗಿ ಹೆಚ್ಚಿಸಿರುತ್ತೆ.
🖋 ಜಾತ್ಯಾತೀತ ಉಡುಪಿ