ಅದು ಡೈನೋಸಾರ್ ಅಲ್ಲ, ಉಗುರು-ಹಲ್ಲಿಲ್ಲದ ಸಾಧು ಪ್ರಾಣಿ

0
1381

ಏ. ಕೆ. ಕುಕ್ಕಿಲ

ಪ್ರಕರಣ ಒಂದು:

ಉತ್ತರ ಪ್ರದೇಶದ ಸಹರಾಣ್‍ಪುರ ನಿವಾಸಿಯಾಗಿದ್ದ ರೆಹೆನುಮಾ ಎಂಬ 30ರ ಹರೆಯದ ಮುಸ್ಲಿಮ್ ಮಹಿಳೆಯು ಪತಿಯಿಂದ ವಿಚ್ಛೇದನವನ್ನು ಕೋರಿ ಕುಟುಂಬ ನ್ಯಾಯಾಲಯದ ಮೊರೆ ಹೋದರು. ಆಕೆ ಗುರ್‍ಗಾಂವ್‍ನಲ್ಲಿ ವೃತ್ತಿಯಲ್ಲಿದ್ದರು. ಅಲ್ಲಿ ಒಬ್ಬರನ್ನು ಪ್ರೀತಿಸುತ್ತಲೂ ಇದ್ದರು. ವಿಚ್ಛೇದನ ಪಡೆಯದೇ ಆತನನ್ನು ಮದುವೆಯಾಗುವಂತಿಲ್ಲ. ಆ ಕಾರಣದಿಂದಾಗಿ ಮದುವೆಯನ್ನು ಮುಂದೂಡುತ್ತಲೇ ಹೋಗಬೇಕಾಯಿತು. ಎರಡು ವರ್ಷ ಕಾದರೂ ಕುಟುಂಬ ನ್ಯಾಯಾಲಯದಲ್ಲಿ ದೂರು ಇತ್ಯರ್ಥವಾಗುವ ಯಾವ ಸೂಚನೆಯೂ ಕಾಣಿಸಲಿಲ್ಲ. ಆಕೆ ಸಹರಾಣ್‍ಪುರದ ದಾರುಲ್ ಕಝಾದ (ಶರಿಯತ್‍ನ ಆಧಾರದಲ್ಲಿ ವಿವಾದ ಇತ್ಯರ್ಥಪಡಿಸುವ ಸಂಸ್ಥೆ) ಬಾಗಿಲು ತಟ್ಟಿದರು. ತ್ವರಿತಗತಿಯಲ್ಲಿ ಆಕೆ ವಿಚ್ಛೇದನವನ್ನೂ ಪಡೆದುಕೊಂಡರು.
ಪ್ರಕರಣ ಎರಡು:

ಉತ್ತರ ಪ್ರದೇಶದ ಬದುವಾನ್‍ನಲ್ಲಿ ಒಂದು ದಾರುಲ್ ಕಝಾ ಇದೆ. ಅದರ ಮುಖ್ಯಸ್ಥರು 80ರ ಹರೆಯದ ಅಬ್ದುಲ್ ಹಮೀದ್ ಮುಹಮ್ಮದ್ ಸಲೀಮುಲ್ ಕಾದ್ರಿ ಎಂಬವರು. ಮುಸ್ಲಿಮ್ ಮಹಿಳೆ ಮತ್ತು ಪುರುಷರು ಸಾಮಾನ್ಯವಾಗಿ ಇಲ್ಲಿ ದೂರು ಸಲ್ಲಿಸುವುದು ವಾಡಿಕೆ. ಒಮ್ಮೆ ಹಿಂದೂ ವ್ಯಾಪಾರಿಯೋರ್ವರು ಈ ದಾರುಲ್ ಕಝಾಗೆ ದೂರು ಕೊಟ್ಟರು. ಮುಸ್ಲಿಮರೆಂದು ಶಂಕಿಸಲಾದ ವ್ಯಕ್ತಿಗಳು ತನ್ನ ವ್ಯಾಪಾರ ಮಳಿಗೆಯನ್ನು ಸುಟ್ಟು ಹಾಕಿz್ದÁರೆ ಎಂದು ಆರೋಪಿಸಿ ದರು. ಈ ಪ್ರಕರಣವು ಆ ಪ್ರದೇಶದಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿತ್ತು. ಸಂಭಾವ್ಯ ಕೋಮುಗಲಭೆಯ ಆತಂಕವೂ ಎದುರಾಗಿತ್ತು. ಕಾಝಿಯವರು ಮುಸ್ಲಿಮ್ ಸಮು ದಾಯದ ಪರವಾಗಿ ಪರಿಹಾರದ ಕೊಡುಗೆಯನ್ನು ನೀಡಿದರು ಮತ್ತು ಕ್ಷಮಿಸುವಂತೆ ಕೋರಿಕೊಂಡರು. ಆ ಹಿಂದೂ ವ್ಯಾಪಾರಿ ಭಾವುಕರಾದರು. ಮಾತ್ರವಲ್ಲ, ಪರಿಹಾರ ಪಡೆದುಕೊಳ್ಳದೇ ಹಿಂತಿರುಗಿದರು. ಕಾಝಿಯವರ ಆ ತೀರ್ಪು ಆ ಪ್ರದೇಶದ ಉದ್ವಿಘ್ನತೆಯ ಶಮನದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿತು.
‘ಭಾರತದ ಪ್ರತಿ ಜಿಲ್ಲೆಯಲ್ಲಿ ಒಂದೊಂದು ದಾರುಲ್ ಕಝಾ ವನ್ನು ಸ್ಥಾಪಿಸಲಾಗುತ್ತದೆ’ ಎಂದು ಮೊನ್ನೆ ಜುಲೈ 15ರಂದು ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಘೋಷಿಸಿದ ಬಳಿಕ ಉಂಟಾದ ವಾದ-ವಿವಾದ, ಆರೋಪ, ನಿಂದನೆ, ವದಂತಿಗಳ ಹಿನ್ನೆಲೆಯಲ್ಲಿ ಈ ಮೇಲಿನ ಎರಡು ಘಟನೆಗಳನ್ನು ಇಲ್ಲಿ ಉಲ್ಲೇಖಿಸಿದ್ದೇನೆ. ಈ ಎರಡೂ ಪ್ರಕರಣಗಳು ಅಧಿಕೃತವಾದವು ಮತ್ತು ಸ್ಕ್ರಾಲ್ ಡಾಟ್ ಇನ್ ಎಂಬ ಆನ್‍ಲೈನ್ ಮಾಧ್ಯಮದಲ್ಲಿ ಪ್ರಕಟವಾದವು. ದಾರುಲ್ ಕಝಾ ಸ್ಥಾಪನೆಯ ಕುರಿತು ಪರ್ಸನಲ್ ಲಾ ಬೋರ್ಡ್ ಹೇಳಿಕೆ ನೀಡಿದ್ದೇ ತಡ, ಬಿಜೆಪಿಯು ಅದನ್ನು ಬಲವಾಗಿ ಖಂಡಿಸಿತು. ಭಾರತವನ್ನು ಇಸ್ಲಾಮಿಕ್ ರಿಪಬ್ಲಿಕ್ ಆಗಲು ಬಿಡೆವು ಎಂದು ಆಕ್ರೋಶಿಸಿತು. ಭಾರತೀಯ ನ್ಯಾಯಾಂಗಕ್ಕೆ ಸಡ್ಡು ಹೊಡೆಯುವ ‘ಸಮಾನಾಂತರ ನ್ಯಾಯಾಂಗವಾಗಿ’ ದಾರುಲ್ ಕಝಾವನ್ನು ಅದು ವ್ಯಾಖ್ಯಾನಿಸಿತು. ಭಾರತದ ಸಂವಿಧಾನದಲ್ಲಿ ಇದಕ್ಕೆ ಅವಕಾಶವೇ ಇಲ್ಲ ಎಂದೂ ವಾದಿಸಿತು. ಮುಖ್ಯವಾಹಿನಿಯ ಟಿವಿಗಳಲ್ಲಂತೂ ಅತ್ಯಂತ ಏಕಮುಖ ವಾದ ಮತ್ತು ಏಕಪಕ್ಷೀಯವಾದ ಚರ್ಚೆಗಳು ನಡೆದುವು. ಐಸಿಸ್, ಬೋಕೋ ಹರಾಮ್, ತಾಲಿಬಾನ್ ಇತ್ಯಾದಿ ಇತ್ಯಾದಿಗಳು ನಡೆಸಿವೆಯೆಂದು ಹೇಳಲಾಗುತ್ತಿರುವ ಸರ್ವ ಕ್ರೌರ್ಯಗಳನ್ನೂ ಶರೀಅತ್‍ನ ಮೇಲೆ ಹೊರಿಸಿ ಭಾರತದಲ್ಲೂ ಇದನ್ನು ಜಾರಿ ಮಾಡಲು ಹೊರಟಿದ್ದೀರಾ ಎಂಬಂತಹ ಮೂರ್ಖತನದ ಪ್ರಶ್ನೆ ಗಳನ್ನೂ ಎತ್ತಲಾಯಿತು. ಇದರ ನಡುವೆ ಫೇಸ್‍ಬುಕ್, ಟ್ವಿಟರ್, ವಾಟ್ಸಾಪ್‍ಗಳಂತಹ ಸಾಮಾಜಿಕ ಜಾಲತಾಣಗಳಲ್ಲಂತೂ ಭರಪೂರ ವದಂತಿಗಳು ಹರಡಿದುವು. ಅದರಲ್ಲಿ ಒಂದು ಹೀಗಿದೆ:
‘ಹಮೇ ಶರಿಯಾ ಅದಾಲತ್ ನಹೀಂ ದಿಯಾ ಜಾ ಸಕ್ತಾ ತೊ ಮುಸಲ್ಮಾನೋಂಕೆಲಿಯೆ ಅಲಗ್ ದೇಶ್ ದಿಯಾ ಜಾಯೆ’
ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‍ನ ಸದಸ್ಯರಾದ ಮೌಲಾನಾ ಖಲೀಲುರ್ರಹ್ಮಾನ್ ಸಜ್ಜಾದ್ ನೂಮಾನಿ, ಖಾಲಿದ್ ಸೈಫುಲ್ಲಾ ರಹ್ಮಾನಿ ಮತ್ತು ಮೌಲಾನಾ ಉವೈಸ್ ಮಹ್‍ಫೂಝ ರಹ್ಮಾನಿ… ಈ ಮೂವರೂ ಜೊತೆಗಿರುವ ಮತ್ತು ಅದರಲ್ಲಿ ಓರ್ವರು ಮೈಕ್ ಹಿಡಿದಿರುವ ಫೋಟೋ. ಅದರ ಕೆಳಗಡೆ ‘ಪರ್ಸನಲ್ ಲಾ ಬೋರ್ಡ್ ಮತ್ತೊಮ್ಮೆ ದೇಶ ವಿಭಜನೆಗೆ ಕರೆ ಕೊಟ್ಟಿದೆ’ ಎಂಬ ಈ ಮೇಲಿನ ಹಿಂದಿ ಶೀರ್ಷಿಕೆಯ ಒಕ್ಕಣೆ. ಬಲಪಂಥೀಯ ಫೇಸ್‍ಬುಕ್ ಬಳಕೆದಾರನೋರ್ವನ ಪುಟದಲ್ಲಿ ಕಾಣಿಸಿಕೊಂಡ ಈ ಪೋಸ್ಟನ್ನು ಒಂದೇ ದಿನದಲ್ಲಿ 7 ಸಾವಿರ ಮಂದಿ ಹಂಚಿಕೊಂಡ(ಶೇರ್)ರು. 800ಕ್ಕಿಂತಲೂ ಅಧಿಕ ಪ್ರತಿಕ್ರಿಯೆಗಳು ಲಭಿಸಿದುವು. ಅಂತರ್ಜಾಲದಲ್ಲಿ ಸಂಚಲನವನ್ನು ಸೃಷ್ಟಿಸಿದ ಈ ಪೋಸ್ಟ್ ನ ಬಗ್ಗೆ ಇಂಡಿಯಾ ಟುಡೇ ಗ್ರೂಪ್‍ನ ವೈರಲ್ ಟೆಸ್ಟ್ ತಂಡವು ಸತ್ಯಶೋಧನೆಗೆ ಇಳಿಯಿತು. ನಿಜವಾಗಿ ಅಂಥದ್ದೊಂದು ಹೇಳಿಕೆಯನ್ನು ಪರ್ಸನಲ್ ಲಾ ಬೋರ್ಡ್‍ನ ಯಾವ ಸದಸ್ಯರೂ ಕೊಟ್ಟಿರಲೇ ಇಲ್ಲ. ಆ ಫೋಟೋಗೂ ಆ ಹೇಳಿಕೆಗೂ ಸಂಬಂಧವೇ ಇರಲಿಲ್ಲ. ಯಾವುದೋ ಸಂದರ್ಭದ ಫೋಟೋಗೆ ತಮ್ಮದೇ ಬರಹವನ್ನು ಜೋಡಿಸಿ ಪರ್ಸನಲ್ ಲಾ ಬೋರ್ಡ್‍ನ ತೇಜೋವಧೆಗೆ ಪ್ರಯತ್ನಿಸಲಾಗಿತ್ತು. ಅಷ್ಟಕ್ಕೂ,
ದಾರುಲ್ ಕಝಾ ಅಥವಾ ಶರಿಯಾ ಕೋರ್ಟ್‍ಗಳ ಕುರಿ ತಂತೆ ಈ ದೇಶದಲ್ಲಿ ಕೆಲವು ಸುಳ್ಳುಗಳು ಚಾಲ್ತಿಯಲ್ಲಿವೆ. ಈ ಸುಳ್ಳುಗಳಲ್ಲಿ ಕೆಲವನ್ನು ಉದ್ದೇಶಪೂರ್ವಕವಾಗಿಯೇ ಚಾಲ್ತಿಗೆ ತರಲಾಗಿದ್ದರೆ ಇನ್ನೂ ಹಲವು ಸುಳ್ಳುಗಳು ದೈನಂದಿನ ಬೆಳವಣಿಗೆಗಳ ಕಾರಣದಿಂದಾಗಿ ಜನ್ಮ ತಳೆದವುಗಳಾಗಿವೆ. ಮತ್ತೊಂದಿಷ್ಟು ಸುಳ್ಳುಗಳಿಗೆ ಮುಸ್ಲಿಮರೇ ಕಾರಣಕರ್ತರಾಗಿದ್ದಾರೆ. ಚಪಾತಿ ಕರಟಿದ್ದಕ್ಕೆ ತಲಾಕ್, ವಾಟ್ಸಾಪ್‍ನಲ್ಲಿ ತಲಾಕ್, ಅಂಚೆ ಪತ್ರದ ಮೂಲಕ ತಲಾಕ್, ಅತ್ಯಾಚಾರಗೈದ ಮಾವನನ್ನೇ ಮದುವೆಯಾಗುವಂತೆ ಸೊಸೆಗೆ ನಿರ್ದೇಶನ, ಕೈ ಕಡಿಯುವುದು, ಕಲ್ಲೆಸೆದು ಕೊಲ್ಲುವುದು, ಹೆಣ್ಮಕ್ಕಳನ್ನು ಗುಲಾಮರಂತೆ ಬಳಸಿಕೊಳ್ಳುವುದು ಇತ್ಯಾದಿ ಇತ್ಯಾದಿ ತರಹೇವಾರಿ ಸುದ್ದಿಗಳು ಮಾಧ್ಯಮಗಳಲ್ಲಿ ಆಗಾಗ ಪ್ರಕಟವಾಗುವುದು ಮತ್ತು ಹೀಗಾಗುವುದಕ್ಕೆ ಶರೀಅತ್ತೇ ಕಾರಣ ಎಂಬ ಭಾವದಲ್ಲಿ ಮಾಧ್ಯಮಗಳು ಸುದ್ದಿಗಳನ್ನು ಹೆಣೆಯುವುದು ಭಾರತೀಯ ಸಮಾಜದ ಮೇಲೆ ಇವತ್ತು ಬಹುದೊಡ್ಡ ಅಡ್ಡ ಪರಿಣಾಮವನ್ನು ಬೀರಿದೆ. ಇಂಥ ಸುದ್ದಿಗಳನ್ನು ಜನರು ಬರೇ ಸುದ್ದಿಗಳಾಗಿಯಷ್ಟೇ ಪರಿಗಣಿಸುವುದಿಲ್ಲ. ಅದು ಸಮುದಾಯವನ್ನು ಅಳೆಯುವ ಮಾಪನವೂ ಆಗುತ್ತದೆ. ಇಂಥ ಸುದ್ದಿಗಳನ್ನು ಎದುರಿಟ್ಟುಕೊಂಡು ಜನರು ಮುಸ್ಲಿಮರನ್ನು ಮತ್ತು ಶರೀಅತನ್ನು ಅಂದಾಜಿಸತೊಡಗುತ್ತಾರೆ. ಅತ್ಯಂತ ಕಠೋರವಾದ, ಸಾಮಾನ್ಯ ಬುದ್ಧಿಮತ್ತೆಗೆ ನಿಲುಕದ ಮತ್ತು ಪುರಾತನವಾದ ಕಾನೂನೊಂದು ಮುಸ್ಲಿಮರ ನಡುವೆ ಚಾಲ್ತಿಯಲ್ಲಿದೆ ಮತ್ತು ಅದನ್ನು ಶರೀಅತ್ ಅನ್ನುತ್ತಾರೆ ಎಂಬ ನಂಬಿಕೆಯೊಂದನ್ನು ಸಾಮಾನ್ಯ ಜನರಲ್ಲಿ ಬಿತ್ತಲು ಇಂಥ ಸುದ್ದಿ ಗಳು ಯಶಸ್ವಿಯಾಗುತ್ತವೆ. ನಿಜವಾಗಿ, ದಾರುಲ್ ಕಝಾಗಳೆಂಬುದು ಕ್ರೂರವೂ ಅಲ್ಲ, ಭಾರತೀಯ ನ್ಯಾಯಾಲಯಗಳಿಗೆ ಸಮಾನಾಂತರ ವಾದ ನ್ಯಾಯಾಲಯವೂ ಇಲ್ಲ. ಹಲ್ಲು-ಉಗುರುಗಳಿಲ್ಲದ ಪರಮ ಸಾಧು ಪ್ರಾಣಿಗಿಂತ ಹೆಚ್ಚಿನ ಯಾವ ಸಾಮರ್ಥ್ಯವೂ ಇದಕ್ಕಿಲ್ಲ. ಅಲ್ಲದೇ ಚಪಾತಿ ಕರಟಿದ್ದಕ್ಕಾಗಿ ವಿಚ್ಛೇದನ, ಮಾವನನ್ನೇ ಮದುವೆಯಾಗುವಂತೆ ಸೊಸೆಗೆ ಹೇಳಲಾದ ಪ್ರಕರಣ, ಅಂಚೆಯಲ್ಲಿ ತಲಾಕ್ ಇತ್ಯಾದಿಗಳೆಲ್ಲ ದಾರುಲ್ ಕಝಾದ ನಿರ್ಣಯಗಳೂ ಅಲ್ಲ. ಅವುಗಳಿಗೂ ಶರೀಅತ್‍ಗೂ ಸಂಬಂಧವೂ ಇಲ್ಲ. ದುರಂತ ಏನೆಂದರೆ, ಮಾಧ್ಯಮ ರಂಗದಲ್ಲಿರುವ 98%ಕ್ಕಿಂತಲೂ ಅಧಿಕ ಮಂದಿಗೆ ಶರೀಅತ್ ಎಂಬ ನಾಲ್ಕಕ್ಷರದ ಪರಿ ಚಯವಿದೆಯೇ ಹೊರತು ಅದರ ಕಾರ್ಯ ವಿಧಾನದ ಬಗ್ಗೆ ಏನೇನೂ ಗೊತ್ತಿಲ್ಲ. ಗೊತ್ತಿರುವುದೆಲ್ಲವೂ ವದಂತಿಗಳು, ಭ್ರಮೆಗಳು ಮತ್ತು ಅಲ್ಲಿ-ಇಲ್ಲಿಂದ ಓದಿಕೊಂಡ ಸುದ್ದಿಗಳ ಮೇಲೆ ಕಟ್ಟಿಕೊಂಡ ಅಭಿಪ್ರಾಯಗಳು ಮಾತ್ರ. ಇವರೇ ಮಾಧ್ಯಮವನ್ನು ಆಳುತ್ತಾರೆ. ಸುದ್ದಿಗಳನ್ನು ತಯಾರಿಸು ತ್ತಾರೆ. ಅಂಕಣಗಳನ್ನು ಬರೆಯುತ್ತಾರೆ. ಚರ್ಚೆಗಳನ್ನು ನಡೆಸಿ ಕೊಡು ತ್ತಾರೆ. ಅಂದಹಾಗೆ,
ವಿವಾಹ, ವಿಚ್ಛೇದನ, ವಾರೀಸು ಸೊತ್ತು, ದತ್ತು ಸ್ವೀಕಾರ ಇತ್ಯಾದಿಗಳನ್ನು ಧಾರ್ಮಿಕ ವಿಧಿಯಂತೆ ಪರಿಹರಿಸಿಕೊಳ್ಳುವ ಅವಕಾಶ ಈ ದೇಶದಲ್ಲಿ ಮುಸ್ಲಿಮರಿಗೆ ಮಾತ್ರ ಇರುವುದಲ್ಲ. 1957ರಲ್ಲಿ ರಚನೆಯಾದ The Muslim Personal Law (Shariat) Application Act ಮುಸ್ಲಿಮರಿಗೆ ಈ ಅವಕಾಶವನ್ನು ನೀಡಿದ್ದರೆ 1936ರಲ್ಲಿThe Parsi Marriage and divorce Act ನ ಮೂಲಕ ಪಾರ್ಸಿ ಸಮುದಾಯಕ್ಕೂ ಈ ಅವಕಾಶ ಲಭ್ಯ ವಾಗಿತ್ತು. 1955ರಲ್ಲಿ The Hindu Marriage Act ನ ಮೂಲಕ ಹಿಂದೂ ಸಮುದಾಯಕ್ಕೂ ಈ ಅವಕಾಶವನ್ನು ನೀಡಲಾಯಿತು. 1956ರಲ್ಲಿ ರಚಿಸಲಾದHindu Succession Act ನ ಮೂಲಕ ಹಿಂದೂ, ಸಿಕ್ಖ್, ಬೌದ್ಧ ಮತ್ತು ಜೈನ ಸಮುದಾಯಗಳೂ ತಮ್ಮೊಳಗಿನ ಆಸ್ತಿ ಮತ್ತು ವಾರೀಸು ಸೊತ್ತುಗಳ ವಿತರಣೆಯನ್ನು ಧಾರ್ಮಿಕ ವಿಧಿಯನ್ವಯ ಮಾಡಿಕೊಳ್ಳಲು ಅನುಮತಿ ನೀಡ ಲಾಯಿತು. ಮಾತ್ರವಲ್ಲ, ಸಂವಿಧಾನವು ತನ್ನ ಮೂಲಭೂತ ಹಕ್ಕುಗಳಡಿಯಲ್ಲಿ ಈ ಅವಕಾಶವನ್ನು ಇವತ್ತಿಗೂ ಭದ್ರವಾಗಿ ಕಾಪಾಡಿಕೊಂಡೂ ಬಂದಿದೆ. ಆದ್ದರಿಂದಲೇ,

ನ್ಯಾಯವಾದಿ ವಿಶ್ವಲೋಚನ್ ಮದನ್ ಅವರ ಅರ್ಜಿಯನ್ನು ಸುಪ್ರೀಮ್ ಕೋರ್ಟ್ ತಳ್ಳಿ ಹಾಕಿರುವುದು. ಶರಿಯಾ ಕೋರ್ಟ್‍ಗಳ ಸಂವಿಧಾನ ಬದ್ಧತೆಯನ್ನು ಅವರು ಪ್ರಶ್ನಿಸಿದ್ದರು ಮತ್ತು ಅವು ಸಮಾನಾಂತರ ನ್ಯಾಯಾಲಯಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂದೂ ಆರೋಪಿಸಿದ್ದರು. ‘ಮುಸ್ಲಿಮರ ಮೂಲಭೂತ ಹಕ್ಕುಗಳ ಮೇಲೆ ಮುಸ್ಲಿಮ್ ಸಂಘಟನೆಗಳು ಆಯ್ಕೆ ಮಾಡಿದ ಕಾಝಿ, ಮುಫ್ತಿಗಳು ಫತ್ವಾಗಳ ಮೂಲಕ ನಿಯಂತ್ರಣ ಹೇರಬಾರದು’ ಎಂದು ವಾದಿಸಿದ್ದರು. ಆದರೆ ಈ ವಾದವನ್ನು ಸುಪ್ರೀಮ್ ಕೋರ್ಟ್ ತಳ್ಳಿ ಹಾಕಿತ್ತು. ನ್ಯಾಯಮೂರ್ತಿ ಸಿ.ಕೆ. ಪ್ರಸಾದ್‍ರನ್ನೊಳ ಗೊಂಡ ಇಬ್ಬರು ನ್ಯಾಯಾಧೀಶರ ನ್ಯಾಯಪೀಠವು ಬಹುಶಃ 2014ರಲ್ಲಿ ನೀಡಿದ ತೀರ್ಪಿನಲ್ಲಿ ದಾರುಲ್ ಕಝಾಗಳನ್ನು ನ್ಯಾಯ ಬಾಹಿರವೆಂದು ಕರೆಯಲು ಮತ್ತು ಅದು ಕೊಡುವ ತೀರ್ಪು(ಫತ್ವಾ) ಗಳ ಮೇಲೆ ನಿಷೇಧ ಹೇರಲು ನಿರಾಕರಿಸಿತ್ತು. ಅದರ ಜೊತೆಗೇ
‘ದಾರುಲ್ ಕಝಾಗಳಿಗೆ ನ್ಯಾಯಾಂಗೀಯ ಅಧಿಕಾರ ಇಲ್ಲ. ಅದರ ಫತ್ವಾಗಳನ್ನು ಒಪ್ಪುವುದು ಬಿಡುವುದು ಜನರಿಗೆ ಬಿಟ್ಟದ್ದು ಮತ್ತು ಅದನ್ನು ಯಾರ ಮೇಲೂ ಹೇರಲಾಗದು’ ಎಂದೂ ಅಭಿಪ್ರಾಯಪಟ್ಟಿತು. 2018 ಫೆಬ್ರವರಿ 25ರಂದು ಸುಪ್ರೀಮ್ ಕೋರ್ಟ್ ಮತ್ತೊಮ್ಮೆ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ನಿಜವಾಗಿ,
ಶರೀಅತ್ ಎಂಬುದು ಕುರ್‍ಆನ್ ಮತ್ತು ಪ್ರವಾದಿಯವರ ನಡೆ-ನುಡಿಯನ್ನು ಆಧರಿಸಿಕೊಂಡು ರಚಿಸಲಾದ ನಿಯಮ ಸಂಹಿತೆಗಳು. ಅದು ಸ್ಥಾವರವಲ್ಲ, ಜಂಗಮ. ಜಗತ್ತಿನಲ್ಲಿ ಹೊಸ ಹೊಸ ಆವಿಷ್ಕಾರಗಳು ಹೇಗೆ ಸತ್ಯವೋ ಮತ್ತು ನಿರೀಕ್ಷಿತವೋ ಈ ನಿಯಮಗಳ ಮೇಲೆ ಹೊಸ ಹೊಸ ವ್ಯಾಖ್ಯಾನಗಳೂ ವಿವರಣೆಗಳೂ ಅಷ್ಟೇ ಸತ್ಯ ಮತ್ತು ನಿರೀಕ್ಷಿತ. ಅದು ಪುರಾತವೂ ಅಲ್ಲ, ಕಾಲಾತೀತವೂ ಅಲ್ಲ. ಕಾಲದ ಪ್ರತಿ ಪ್ರಶ್ನೆಗಳನ್ನೂ ಪರಿಹರಿಸಿಕೊಳ್ಳುವುದಕ್ಕೆ ಆ ನಿಯಮ ಸಂಹಿತೆಯನ್ನು ಆಧಾರವಾಗಿ ಬಳಸಿಕೊಳ್ಳಲಾಗುತ್ತದೆ. ಅದರ ಆಧಾರದಲ್ಲಿ ಸಮಸ್ಯೆಯ ವಿವಿಧ ಮಗ್ಗುಲುಗಳನ್ನೂ ಮತ್ತು ಅದು ತೆರೆದಿಡಬಹುದಾದ ವಿವಿಧ ಸಾಧ್ಯತೆಗಳನ್ನೂ ಅಂದಾಜಿಸಲಾಗುತ್ತದೆ. ಶರೀಅತ್ ಎಂಬುದು ಒಂದು ಸಮಸ್ಯೆಯ ಪರಿಹಾರಕ್ಕೆ ಆಧಾರವಾಗಿ ಬಳಕೆ ಮಾಡಲಾಗುವ ನಿಯಮ ಸಂಹಿತೆಯೇ ಹೊರತು ಬೇರೇನಲ್ಲ. ಅದನ್ನು ಸ್ಥಾವರವೆಂಬಂತೆ ಬಿಂಬಿಸಬೇಕಾದ ಅಗತ್ಯವೂ ಇಲ್ಲ. ದಾರುಲ್ ಕಝಾಗಳು ಈ ಸಂಹಿತೆಯನ್ನು ಆಧಾರವಾಗಿಸಿಕೊಂಡು ವಿವಾದ ವನ್ನು ಬಗೆಹರಿಸಲು ಶ್ರಮಿಸುತ್ತವೆ. ಭಾರತದಲ್ಲಿರುವ ದಾರುಲ್ ಕಝಾಗಳು ಎಷ್ಟು ದುರ್ಬಲವೆಂದರೆ, ಅದಕ್ಕೆ ತನ್ನ ಅಭಿಪ್ರಾಯವನ್ನು ಜಾರಿ ಮಾಡುವ ಯಾವ ಅಧಿಕಾರವೂ ಇಲ್ಲ. ಸಾಮಾನ್ಯವಾಗಿ, ಓರ್ವ ಹೆಣ್ಣು ಅಥವಾ ಗಂಡು ದೂರಿನೊಂದಿಗೆ ದಾರುಲ್ ಕಝಾವನ್ನು ಸಂಪರ್ಕಿಸುತ್ತಾರೆ. ಅದಕ್ಕಾಗಿ ಅವರು ಲಿಖಿತ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ವಾದಿ ಮತ್ತು ಪ್ರತಿವಾದಿಗಳು ವಿಚಾರಣೆಗೆ ಒಪ್ಪಿಕೊಂಡರೆ ನೋಟೀಸು ಜಾರಿಯಾಗುತ್ತದೆ. ಶರೀಅತ್ ನಿಯಮ ಸಂಹಿತೆಯ ಆಧಾರದಲ್ಲಿ ಖಾಝಿ ಅಥವಾ ಮುಖ್ಯಸ್ಥರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅದನ್ನು ಒಪ್ಪುವ ಮತ್ತು ಬಿಡುವ ಸ್ವಾತಂತ್ರ್ಯ ಎರಡೂ ಪP್ಷÀಗಳಿಗೂ ಸಮಾನವಾಗಿ ಇರುತ್ತವೆ. ಯಾರಿಗೆ ಒಪ್ಪಿತವಲ್ಲವೋ ಅವರು ನ್ಯಾಯಾಲಯದ ಮೊರೆ ಹೋಗಬಹುದು. ಅವರನ್ನು ಹಾಗೆ ಮಾಡದಂತೆ ನಿರ್ಬಂಧಿಸುವ ಮತ್ತು ಖಾಝಿಯ ಅಭಿಪ್ರಾಯವನ್ನೇ ಹೇರುವ ಯಾವ ಅಧಿಕಾರವೂ ಯಾವ ದಾರುಲ್ ಕಝಾಗಳಿಗೂ ಇಲ್ಲ. ಇದು ನ್ಯಾಯಾಲಯವೂ ಅಲ್ಲ, ಖಾಝಿಗಳು ನ್ಯಾಯಾ ಧೀಶರೂ ಅಲ್ಲ. ದಾರುಲ್ ಕಝಾಗಳ ಈ ಅಸಹಾಯಕ ಸ್ಥಿತಿಯು ಸುಪ್ರೀಮ್ ಕೋರ್ಟ್‍ಗೆ ಚೆನ್ನಾಗಿ ಮನವರಿಕೆ ಆಗಿರುವು ದರಿಂದಲೇ ಈ ದೇಶದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ 50ಕ್ಕಿಂತಲೂ ಅಧಿಕ ದಾರುಲ್ ಕಝಾಗಳನ್ನು ನ್ಯಾಯಬಾಹಿರವೆಂದು ಕರೆಯಲು ನಿರಾಕರಿಸಿರುವುದು. ಕೇವಲ ಉತ್ತರ ಪ್ರದೇಶವೊಂದರಲ್ಲೇ 40ರಷ್ಟು ದಾರುಲ್ ಕಝಾಗಳಿವೆ. ದಾರುಲ್ ಕಝಾಗಳನ್ನು ಸಮಾನಾಂತರ ನ್ಯಾಯಾಲಯ ಎಂದು ಕರೆದ ಮತ್ತು ಭಾರತದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಘೋಷಿಸಿದ ಬಿಜೆಪಿಗೆ ಇದು ಗೊತ್ತಿಲ್ಲ ಎಂದಲ್ಲ. ಅದೊಂದು ರಾಜಕೀಯ ಹೇಳಿಕೆ. ಗೋರಕ್ಷಣೆಯ ಮಾತಾಡುತ್ತಲೇ ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವ ಅಪಾಯಕಾರಿ ದ್ವಂದ್ವ ನೀತಿಯ ಮುಂದುವರಿಕೆ ಇದು. ಆದರೂ,
ಮುಸ್ಲಿಮ್ ಲಾ ಬೋರ್ಡ್ ತುಸು ಬುದ್ಧಿವಂತಿಕೆಯನ್ನು ಪ್ರದರ್ಶಿಸಬಹುದಿತ್ತು. ದಾರುಲ್ ಕಝಾ ಎಂಬ ಪದ ಪ್ರಯೋಗದ ಬದಲು ಕೌನ್ಸಿಲಿಂಗ್ ಸೆಂಟರ್ ಎಂದು ಹೇಳಬಹುದಿತ್ತು.