ಅಲೀಮುದ್ದೀನ್ ಅನ್ಸಾರಿಯನ್ನು ಥಳಿಸಿ ಕೊಂದವರ ಪರ ಬಿಜೆಪಿಯಿಂದ ಜಾರ್ಖಂಡ್ ನಲ್ಲಿ ತಿರಂಗಾ ಯಾತ್ರೆ: ಆಸಿಫಾಳ ಬಳಿಕ ಬಿಜೆಪಿಗೆ ಮತ್ತೊಂದು ಮುಖಭಂಗ 

0
1311

ನ್ಯೂಸ್ ಡೆಸ್ಕ್

ರಾಮಘರ್: ಗೋಮಾಂಸ ಸಾಗಿಸುತ್ತಿರುವನೆಂದು ಹೇಳಿ 2017, ಜೂನ್ 29ರಂದು ಜಾರ್ಖಂಡ್ ನ ರಾಮಘರ್ ಎಂಬಲ್ಲಿ ಅಲೀಮುದ್ದೀನ್ ಅನ್ಸಾರಿಯನ್ನು ಥಳಿಸಿ ಕೊಂದುದಕ್ಕಾಗಿ ಜೀವಾವಧಿ ಶಿಕ್ಷೆಗೀಡಾದವರನ್ನು ಅಮಾಯಕರೆಂದು ಕರೆದು ನೂರಾರು ಬಿಜೆಪಿ ಬೆಂಬಲಿಗರು ಏಪ್ರಿಲ್ 10ರಂದು ತಿರಂಗಾ ಯಾತ್ರೆ ನಡೆಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ. ಅಲೀಮುದ್ದೀನ್ ಅನ್ಸಾರಿಯನ್ನು ನಡುಬೀದಿಯಲ್ಲಿಟ್ಟು ಯುವಕರ ಗುಂಪು  ಥಳಿಸುವ ವೀಡಿಯೋ ಕಳೆದ ವರ್ಷ ದೇಶಾದ್ಯ೦ತ ವೈರಲ್ ಆಗಿತ್ತು. ಈ ಕುರಿತಂತೆ ಅಲೀಮುದ್ದೀನ್ ಅನ್ಸಾರಿಯ ಪತ್ನಿ ಮರಿಯಮ್ ಖಾತೂನ್ ರು ಕೇಸು ದಾಖಲಿಸಿದ್ದರು. ಅದರಂತೆ ಕಳೆದ ಮಾರ್ಚ್ ನಲ್ಲಿ ತ್ವರಿತಗತಿ ನ್ಯಾಯಾಲಯವು ಬಿಜೆಪಿ ಜಿಲ್ಲಾ ಮಾಧ್ಯಮ ಮುಖ್ಯಸ್ಥ ನಿತ್ಯಾನಂದ್ ಮಹತೋ ಸೇರಿದಂತೆ 11 ಮಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಆದರೆ, ಬಿಜೆಪಿಯ ಮಾಜಿ ಶಾಸಕ ಶಂಕರ್ ಚೌಧರಿಯ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ತನಿಖೆಯನ್ನು ಸಿಬಿಐ ಅಥವಾ ಎನ್ ಐ ಎ ಗೆ ವಹಿಸಿಕೊಡಬೇಕೆಂದು ಆಗ್ರಹಿಸಲಾಯಿತು. ಅನ್ಸಾರಿಯನ್ನು ಯಾರೂ ಥಳಿಸಿಯೇ ಇಲ್ಲ, ಆತ ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದಾನೆ. ಬಿಜೆಪಿ ಮತ್ತು ಗೋರಕ್ಷಕರ ಮೇಲೆ ಪೊಲೀಸರು ತಪ್ಪಾಗಿ ಕೇಸು ದಾಖಲಿಸಿದ್ದಾರೆ ಎಂದು ಚೌಧರಿ ಹೇಳಿದರು. ಮೆರವಣಿಗೆಯ ಆರಂಭದಲ್ಲಿ ಚೌಧರಿಯವರು ದುರ್ಗಾ ದೇವಿ ಮಂದಿರದಲ್ಲಿ ತಲೆ ಬೋಳಿಸಿದರು ಮತ್ತು ಸರಕಾರವು ಈ ಕುರಿತಾದ ತನಿಖೆಯನ್ನು ಸಿಬಿಐ ಅಥವಾ ಎನ್ ಐ ಎ ಗೆ ಒಪ್ಪಿಸುವವರೆಗೆ ತನ್ನ ಕೂದಲು ಮತ್ತು ಗಡ್ಡವನ್ನು ಕತ್ತರಿಸಲಾರೆನೆಂದು ಶಪಥಗೈದರು.ಮೆರವಣಿಗೆಯ ಕೊನೆಯಲ್ಲಿ 15 ದಿನಗಳ ಧರಣಿಯನ್ನು ಅವರು ಇಲ್ಲಿನ ಸುಭಾಷ್ ಚೌಕದಲ್ಲಿ ಆರಂಭಿಸಿದರು. ಮೆರವಣಿಗೆಯ ಉದ್ದಕ್ಕೂ ರಾಷ್ಟ್ರ ಧ್ವಜ ಮತ್ತು ಕೇಸರಿ ಧ್ವಜಗಳು ರಾರಾಜಿಸಿದುವು.
ಇದಕ್ಕಿಂತ ಮೊದಲು , ಕೇಂದ್ರ ಸಚಿವ ಜಯಂತ್ ಸಿನ್ಹ ಅವರು ಕೂಡ ಈ ಬೇಡಿಕೆಗೆ ಧನಿಗೂಡಿಸಿದ್ದರು ಮತ್ತು ರಾಜ್ಯ ಪೊಲೀಸರ ತನಿಖೆಯ ಬಗ್ಗೆ ಅತೃಪ್ತಿ ಸೂಚಿಸಿ ತನಿಖೆಯನ್ನು ಸಿಬಿಐಗೆ ಒಪ್ಪಿಸುವುದಕ್ಕೆ ತನ್ನ ಬೆಂಬಲ ಸಾರಿದ್ದರು.