ಅಸನ್ಸೋಲ್: ಇಮಾಮ್ ಇಮ್ದಾದುಲ್ಲಾರಿಗೆ ತಲೆಬಾಗಿದ ಬಿಜೆಪಿ, ಆರೆಸೆಸ್ಸ್

0
3026

ಪಶ್ಚಿಮ ಬಂಗಾಳದಲ್ಲಿ ಕಳೆದ ವಾರ ನಡೆದ ಕೋಮು ಘರ್ಷಣೆಯಲ್ಲಿ ತನ್ನ ಮಗನನ್ನೇ ಕಳೆದುಕೊಂಡರೂ ಶಾಂತಿ ಸ್ಥಾಪನೆಗಾಗಿ ಅಸನ್ಸೋಲ್ ಮಸೀದಿಯ ಇಮಾಮ್ ಆದ ತಂದೆಯ ಮಾತುಗಳು ಭಾರತೀಯ ಜನತಾ ಪಕ್ಷದ ನಾಯಕರನ್ನು ಹಿಂದೆ ಸರಿಯುವಂತೆ ಮಾಡಿಬಿಟ್ಟಿತು. ರಾಜ್ಯ ಭಾಜಪ ಅಧ್ಯಕ್ಷರಾದ ದಿಲೀಪ್ ಘೋಷ್‍ರವರು; “ಇಮಾಮ್ ಮುಹಮ್ಮದ್ ಇಮ್ದಾದುಲ್ಲಾಹ್ ರವರ ನಡೆಯು ಪ್ರಶಂಸಾರ್ಹವಾದುದು” ಎಂದರು.

“ತನ್ನ ಮಗನ ಹತ್ಯೆಯ ನಂತರವೂ ಉದ್ರಿಕ್ತ ಜನರನ್ನು ಹಿಂಸೆಯಿಂದ ತಡೆಯುವಲ್ಲಿ, ಭಾವನಾತ್ಮಕ ಆಕ್ರೋಶಗಳನ್ನು ತಡೆಹಿಡಿಯುವಲ್ಲಿ ಅವರು ಮಾದರಿಯಾದರು” ಎಂದು ಘೋ ಷ್ ದ ಹಿಂದೂ ಪತ್ರಿಕೆಗೆ ತಿಳಿಸಿದ್ದಾರೆ.
ಅಲ್ಲದೇ, ” ಒಂದು ವೇಳೆ ಅವರು ಅಂತಹ ಮಾತುಗಳನ್ನು ಹೇಳಿದ್ದರೆ ಅವು ಪ್ರಶಂಸಾರ್ಹವಾದುವು. ಧಾರ್ಮಿಕ ವಿಭಜನೆಗೆ ಬದಲಾಗಿ ಸೈದ್ಧಾಂತಿಕವಾಗಿ ಕಾರ್ಯ ಪ್ರವೃತ್ತರಾಗುವವರಿಗೆಲ್ಲ ನಾವು ಬೆಂಬಲ ಸೂಚಿಸುತ್ತೇವೆ ಎಂದು ಹೇಳಿದ ಆರ್‍ಎಸ್‍ಎಸ್ ನ ವಕ್ತಾರ ತದನಂತರ ಹಿಂದೂಗಳ ಮೇಲೆಯೂ ಕೂಡ ದಾಳಿಗಳಾಗಿವೆ ಎಂದು ನುಣುಚಿಕೊಂಡರು.

ಪ್ರಸಿದ್ಧ ಬಂಗಾಳೀ ಲೇಖಕರಾದ ಜೋಯ ಮಿತ್ರಾರವರು, ತನ್ನ ಮಗನ ಶವದ ಎದುರು ನಿಂತುಕೊಂಡು  ಒಂದು ವೇಳೆ ಇಮಾಮರು ಇಷ್ಟು ಬೇಗ ಪ್ರತಿಕ್ರಿಯೆ ನೀಡದೇ ಇದ್ದಲ್ಲಿ ಪರಿಸ್ಥಿತಿಯು ಇನ್ನಷ್ಟು ಬಿಗಡಾಯಿಸುತ್ತಿತ್ತು” ಎನ್ನುತ್ತಾರೆ.

ಬಿಳಿ ಟೊಪ್ಪಿಗಳನ್ನು ಧರಿಸಿದ ಪುರುಷರ ಬೃಹತ್ ಗುಂಪು  ಕೆಂಪು ಬಟ್ಟೆಯಿಂದ ಹೊದ್ದಿಸಲಾದ ಮೃತ ಬಾಲಕನ ಶವವನ್ನು ಹೊತ್ತುಕೊಂಡು ಶವಯಾತ್ರೆಯಲ್ಲಿ ಸಾಗುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಇಮಾಮರ ಹದಿನಾರರ ಹರೆಯದ ಮಗ ಸಿಬ್ಗತುಲ್ಲಾಹ್; ಈಗಷ್ಟೇ ಶಾಲೆಯ ಪರೀಕ್ಷೆ ಮುಗಿಸಿಕೊಂಡಿದ್ದವ ಕಫನ ಬಟ್ಟೆ ಹೊದ್ದು ಮಲಗಿದ್ದಾನೆ. ಕಳೆದ ವಾರ, ನೂರಾನೀ ಮಸೀದಿಯಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿರುವ ಓಕೆ ರೋಡ್ ಮಸೀದಿಗೆ ತನ್ನ ಸಹೋದರನೊಂದಿಗೆ ತೆರಳುತ್ತಿದ್ದ ವೇಳೆ ಸಿಬ್ಗತುಲ್ಲಾ ಜನರಿಂದ ದಾಳಿಗೊಳಗಾಗಿ ಮೃತಪಟ್ಟನು.

ಅಸನ್ಸೋಲ್ ನೂರಾನಿ ಮಸೀದಿ

ರಾಮ ನವಮಿಯ ದಿನ ಪ್ರಸಾರ ಮಾಡಲಾದ ಹಾಡುಗಳಿಂದ ಜನರ ನಡುವೆ ಭಯದ ವಾತಾವರಣವು ಮನೆ ಮಾಡಿತ್ತು. ನೋಡು ನೋಡುತ್ತಿದ್ದಂತೆಯೇ ಗುಂಪುಗಳ ನಡುವೆ ಗಲಭೆಯು ಭುಗಿಲೆದ್ದಿತು. ಹಿಂದೂಗಳು ರಾಮ ನವಮಿಯ ದಿನ ಪ್ರಸಾರ ಮಾಡಿದ ಆ ಹಾಡಿನಲ್ಲಿ “ಟೋಪಿವಾಲೆ ಭಿ ಸರ್ ಝುಕಾಕೆ ಜೈ ಶ್ರೀ ರಾಮ್ ಬೋಲೆಂಗೆ…( ಟೋಪಿ ಧರಿಸಿದವರೂ ಕೂಡ ತಲೆ ಬಾಗಿಸಿ ಜೈ ಸ್ರೀರಾಮ್ ಹೇಳುವರು)  ಎಂಬರ್ಥವನ್ನು ಹೊಂದಿದ ಹಾಡನ್ನೇ ಇತರ ಸಮುದಾಯದವರೊಂದಿಗೆ ಮುಸ್ಲಿಮರೂ ನೆಲೆಸಿರುವ ಪ್ರದೇಶಗಳಲ್ಲಿ ಮತ್ತೆ ಮತ್ತೆ  ಪ್ರಸಾರ ಮಾಡಿದ್ದರು.

“ಸಿಬ್ಗತುಲ್ಲಾಹ್ ಹಾಗೂ ಆತನ ಹಿರಿಯ ಸಹೋದರ ಮಸೀದಿಯ ಬಳಿ ತೆರಳಿದಾಗ ಅಲ್ಲಿ ಜನರ ಗುಂಪು ನೆರೆದಿತ್ತು ನೋಡು ನೋಡುತ್ತಿದ್ದಂತೆ ಗಲಭೆಯು ಭುಗಿಲೆದ್ದಿತು. ಅತ್ತಲಿಂದ ಬಂದ ಜನರು ದಾಳಿ ಮಾಡಲಾರಂಭಿಸಿದರು. ಆತ ದಾಳಿಕೋರರ ಕೈಗೆ ಸಿಕ್ಕಿ ಬಿದ್ದ. ಆತನ ಶವವು ಬುಧುವಾರ ರಾತ್ರಿ ಪತ್ತೆಯಾಯ್ತು ಎಂದು ನೂರಾನೀ ಮಸೀದಿಯ ಇಮಾಮ್ ಆದ ಇಮ್ದಾದುಲ್ಲಾಹ್ ರವರು ತಿಳಿಸಿದ್ದಾರೆ.

ಈ ಘಟನಾವಳಿಯ ನಂತರ ಮರುದಿನ ಮಧ್ಯಾಹ್ನ ಜನಾಝಾ ನಮಾಜ್ ನಲ್ಲಿ ಪಾಲ್ಗೊಂಡಿದ್ದ ಹತ್ತು ಸಾವಿರಕ್ಕಿಂತಲೂ ಅಧಿಕವಾಗಿದ್ದ ಜನರ ಗುಂಪು ತನ್ನ ಸಹನೆಯನ್ನು ಕಳೆದುಕೊಂಡಿತ್ತು ಎಂದು ಪೊಲೀಸರು ಹೇಳುತ್ತಾರೆ. ಆದರೆ ಪರಿಸ್ಥಿತಿಯು ಕೈ ಜಾರಿ ಹೋಗುತ್ತಿರುವುದನ್ನು ಗಮನಿಸಿದ ಮೃತ ಬಾಲಕನ ತಂದೆ ಇಮಾಮ್ ಇಮ್ದಾದುಲ್ಲಾಹ್ ರವರು ಪ್ರವಚನ ನೀಡುವ ಸಂದರ್ಭದಲ್ಲಿಯೂ ಬಳಸದೇ ಇದ್ದ ಮೈಕ್ರೋ ಫೋನ್ ನೀಡುವಂತೆ ಕೇಳಿಕೊಂಡರು. “ನೀವು ನನ್ನನ್ನು ಪ್ರೀತಿಸುತ್ತಿರೆಂದಾದಲ್ಲಿ ಯಾವುದೇ ರೀತಿಯ ಹಿಂಸೆಯಲ್ಲಿ ಭಾಗಿಯಾಗಬೇಡಿರಿ. ಶಾಂತಿಯು ಶಾಶ್ವತವಾಗಿರಲಿ. ಇನ್ನಷ್ಟು ಜೀವಗಳು ಬಲಿಯಾಗುವುದು ನನಗಿಷ್ಟವಿಲ್ಲ. ನೀವು ಯಾವುದಾದರೂ ಹಿಂಸಾಕೃತ್ಯದಲ್ಲಿ ಭಾಗಿಯಾದರೆ ನಾನು ಈ ಮಸೀದಿ ಹಾಗು ಊರನ್ನು ತೊರೆದು ಹೋಗುತ್ತೇನೆ” ಎಂದು ಬಿಟ್ಟರು.

ಎರಡು ದಿನಗಳ ಬಳಿಕ ದ ಹಿಂದೂ ಪತ್ರಿಕೆಯ ಬಳಗವು ಅವರನ್ನು ಭೇಟಿಯಾಗಲು ನೂರಾನಿ ಮಸೀದಿಗೆ ತೆರಳಿತು. ಇಮ್ದಾದುಲ್ಲಾಹ್ ರವರು ಮಸೀದಿಯ ಎರಡನೆಯ ಮಹಡಿಯಲ್ಲಿರುವ ಕೋಣೆಯಲ್ಲಿ ಸ್ಥಳೀಯರೊಂದಿಗೆ ಮಾತುಕತೆ ನಡೆಸುತ್ತಿದ್ದರು. ತನಗೆ ಜನರ ಕೋಪೋದ್ರಿಕ್ತ ಮನಸ್ಸನ್ನು ಯಾಕೆ ಶಾಂತಗೊಳಿಸಬೇಕೆನಿಸಿತು ಎಂಬುದರ ಕುರಿತು ಅವರು ವಿವರಿಸಿದರು.

“ ನನ್ನ ಕಿರಿಯ ಮಗನನ್ನು ಕಳೆದುಕೊಂಡು ನನ್ನ ಭಾವನೆಗಳು ಯಾವ ರೀತಿ ಅಳುತ್ತಿವೆ ಎಂಬುದನ್ನು ನನಗೆ ಹೇಳಿಕೊಳ್ಳಲು ಆಗುತ್ತಿಲ್ಲ. ಇತರರ ಪ್ರೀತಿ ಪಾತ್ರರನ್ನು ಇಲ್ಲವಾಗಿಸುವ ಈ ಹಿಂಸೆಯು ನನಗೆ ಬೇಕಾಗಿಲ್ಲ. ಹಿಂಸೆಯು ಅಪಾಯಕಾರಿ ಎಂಬುದನ್ನು ನಾನು ಅರಿತಿದ್ದೇನೆ. ಆದುರಿಂದಲೇ ನಾನು ಮಾತನಾಡಿದ್ದೇನೆ” ಎಂದರು.

ಇಮಾಮರ ಮಾತುಗಳೇ ಆಕ್ರೋಶಿತ ಜನರನ್ನು ನಿಲ್ಲಿಸುವಲ್ಲಿ ಪರಿಣಾಮಕಾರಿ ಆಯ್ತು ಮತ್ತು ಸಂಭವಿಸಬಹುದಾದ ಸಾವು-ನೋವುಗಳನ್ನು ತಡೆಯಿತು ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ. ಇಮಾಮರು ತಮ್ಮ ಕೆಲಸವನ್ನು ಸುಲಭಗೊಳಿಸಿದರು ಎಂದು ಪೊಲೀಸರು ಹೇಳುತ್ತಾರಲ್ಲದೇ ಇಲ್ಲವಾದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರುವುದು ಸುಲಭದ ಮಾತಾಗಿರಲಿಲ್ಲ ಎನ್ನುತ್ತಾರೆ.     
ಕೃಪೆ: ದಿ ಹಿಂದು
ವರಿದಿ:
ಸೌಮ್ಯ ದಾಸ್
ಸುವೋಜಿತ್ ಬಗ್ಛಿ
https://www.google.co.in/amp/www.thehindu.com/news/national/asansol-imams-call-for-peace-comes-in-for-praise/article23408750.ece/amp/