ಅಸ್ಸಾಮ್ ಬಿಜೆಪಿಯ ಕೈತಪ್ಪಲಿದೆಯೇ? ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ರು ಬಿಜೆಪಿ ತ್ಯಜಿಸಿ ಪರ್ಯಾಯ ಸರಕಾರ ರಚಿಸಲಿದ್ದಾರೆಯೇ?

0
1322

ನ್ಯೂಸ್ ಡೆಸ್ಕ್

ಅಸ್ಸಾಮ್ ನಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಪೌರತ್ವ ಕಾಯ್ದೆ-2016 ಹೊಸ ರಾಜಕೀಯ ಸ್ಥಿತ್ಯಂತರಗಳಿಗೆ ಕಾರಣವಾಗುವ ಸೂಚನೆಗಳನ್ನು ನೀಡುತ್ತಿದ್ದು, ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಬಿಜೆಪಿಯನ್ನು ತ್ಯಜಿಸಿ ಬರುವುದಾದರೆ ಪರ್ಯಾಯ ಸರಕಾರದ ಮುಖ್ಯಮಂತ್ರಿಯಾಗಿ ಅವರನ್ನು ಬೆಂಬಲಿಸಲು ಸಿದ್ಧ ಎಂದು ಮೌಲಾನಾ ಅಜ್ಮಲ್ ಅವರ ಎಯುಡಿಎಫ್ ಮತ್ತು ಕಾಂಗ್ರೆಸ್ ಪಕ್ಷವು ಭರವಸೆ ನೀಡಿದೆ.
ಅಸ್ಸಾಮ್ ನಲ್ಲಿ ಹೊಸ ಪೌರತ್ವ ಕಾಯ್ದೆಯು ತೀವ್ರ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ. 2016 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ NDA ಒಕ್ಕೂಟಕ್ಕೆ 86 ಸ್ಥಾನಗಳು ಲಭ್ಯವಾಗಿದ್ದುವು. ಅದರಲ್ಲಿ BJP 60 ಸ್ಥಾನಗಳನ್ನು ಪಡೆದಿತ್ತು. ಒಕ್ಕೂಟದ ಇತರೆರಡು ಪಕ್ಷಗಳಾದ ಅಸ್ಸಾಮ್ ಗಣ ಪರಿಷತ್ 14 ಮತ್ತು ಬೊಡೊಲಾಂಡ್ ಪೀಪಲ್ಸ್ ಫ್ರ೦ಟ್ 12 ಸ್ಥಾನಗಳನ್ನು ಪಡೆದಿತ್ತು.
ಕೇಂದ್ರದ ಬಿಜೆಪಿ ನೇತೃತ್ವವು ಪೌರತ್ವ ಕಾಯ್ದೆಯನ್ನು ಯಥಾ ರೂಪದಲ್ಲಿ ಜಾರಿಗೊಳಿಸಲು ಬಯಸುತ್ತಿದೆ. ಈ ಕಾಯ್ದೆಯ ಪ್ರಕಾರ, ಅಫ್ಘಾನಿಸ್ತಾನ್, ಬಾಂಗ್ಲಾ ದೇಶ ಮತ್ತು ಪಾಕಿಸ್ತಾನದಿಂದ ಬಂದ ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವವನ್ನು ನೀಡಲಾಗುವುದು. ಆದರೆ, ಕೇಂದ್ರದ ಈ ನಡವಳಿಕೆಯು 1985 ರ ಅಸ್ಸಾಂ ಒಡಂಬಡಿಕೆಯನ್ನು ಉಲ್ಲಂಘಿಸುತ್ತದೆ. ಅದರ ಪ್ರಕಾರ, 1971 ಮಾರ್ಚ 24 ರ ನಂತರ ಬಂದ ಎಲ್ಲ ವಲಸಿಗರನ್ನು ಅಸ್ಸಾಮ್ ನಿಂದ ಹೊರಹಾಕಬೇಕು ಎಂದಿದೆ. ಸದ್ಯ ಅಸ್ಸಾಮ್ ನ ಮುಖ್ಯಮಂತ್ರಿಯೂ ಸೇರಿ ಬಿಜೆಪಿಯ ಹಲವು ಶಾಸಕರು, NGO ಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಕೇಂದ್ರದ ಈ ಪೌರತ್ವ ನಿಯಮವನ್ನು ಪಕ್ಷಪಾತಿಯೆಂದು ಭಾವಿಸುತ್ತಿದ್ದು, ಎಲ್ಲರಿಗೂ ಒಂದೇ ನಿಯಮ ಜಾರಿಯಾಗಬೇಕು ಮತ್ತು ಅದಕ್ಕಾಗಿ 1971 ಮಾರ್ಚ 24 ರ ನಂತರ ಬಂದ ಎಲ್ಲ ವಲಸಿಗರನ್ನು ಅಸ್ಸಾಮ್ ನಿಂದ ಹೊರಹಾಕಬೇಕು ಎಂದು ಆಗ್ರಹಿಸುತ್ತಿವೆ.
ಸೋನೊವಾಲ್ ರು ಬಿಜೆಪಿಯನ್ನು ತ್ಯಜಿಸಿ ಪರ್ಯಾಯ ಸರಕಾರ ರಚಿಸುವುದಾದರೆ ನಾವು ಅವರನ್ನು ಬೆಂಬಲಿಸಲಿದ್ದೇವೆ ಎಂದು ಎಯುಡಿಎಫ್ ನ ಶಾಸಕ ಹಫೀಜ್ ಬಷೀರ್ ಅಹ್ಮದ್ ಕಾಸ್ಮಿ ಹೇಳಿದ್ದಾರೆ. ಈ ಮೊದಲು ವಿರೋಧ ಪಕ್ಷದ ನಾಯಕ ಕಾಂಗ್ರೆಸ್ ನ ದೇಬಬ್ರತ ಸೈಕಿಯಾ ಕೂಡಾ ಇದೆ ರೀತಿಯ ಹೇಳಿಕೆಯನ್ನು ನೀಡಿದ್ದರು. ಅಲ್ಲದೆ ಅಸ್ಸಾಮ್ ಗಣ ಪರಿಷತ್ ಮತ್ತು ಬೊಡೊಲಾಂಡ್ ಪೀಪಲ್ಸ್ ಫ್ರ೦ಟ್ ಕೂಡಾ ಕೇಂದ್ರದ ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿವೆ.