ಆರೋಗ್ಯ ಸೇತು ನಿರ್ಮಿಸಿದ್ದು ಯಾರು?| ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಕೇಂದ್ರ ಸರಕಾರ; ಸ್ಪಷ್ಟೀಕರಣ ಕೋರಿ ಕೇಂದ್ರ ಮಾಹಿತಿ ಆಯೋಗ

0
976

ಸನ್ಮಾರ್ಗ ವಾರ್ತೆ

ನವದೆಹಲಿ,ಅ.28: ದೇಶದಲ್ಲಿ ಕೋವಿಡ್-19 ನಿಯಂತ್ರಣಾ ಚಟುವಟಿಕೆಗಳಲ್ಲಿ ಅಧಿಕೃತ ಆ್ಯಪ್ ಎಂಬ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಆರೋಗ್ಯ ಸೇತು’ ಆ್ಯಪ್ ನಿರ್ಮಿಸಿದ್ದು ಯಾರು ಎಂಬ ಪ್ರಶ್ನೆಗೆ ಕೇಂದ್ರೀಯ ಸಾರ್ವಜನಿಕ ಮಾಹಿತಿ ಇಲಾಖೆಯ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು ಸಮರ್ಪಕವಾದ ಉತ್ತರ ನೀಡದೇ ತಪ್ಪಿಸಿಕೊಳ್ಳುತ್ತಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ ಮತ್ತು ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಜಂಟಿಯಾಗಿ ಆರೋಗ್ಯ ಸೇತು ಆ್ಯಪ್ ನಿರ್ಮಿಸಿದೆ ಎಂದು ಆ್ಯಪ್‌ನಲ್ಲೇ ನಮೂದಿಸಿದ್ದರೂ ಅಪ್ಲಿಕೇಷನ್ ನಿರ್ಮಿಸಿರುವ ಬಗ್ಗೆ ಸ್ಪಷ್ಟೀಕರಣ ನೀಡಲು ಸಾಧ್ಯವಾಗಲಿಲ್ಲ.

ಸಾಮಾಜಿಕ ಕಾರ್ಯಕರ್ತ ಸೌರಭ್ ದಾಸ್ ಸಲ್ಲಿಸಿದ್ದ ಐಟಿಆರ್ ಅರ್ಜಿಗೆ NIC ಯು ಆ್ಯಪ್ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂಬ ಉತ್ತರವನ್ನು ನೀಡಿದೆ. ಆ್ಯಪ್ ನಿರ್ಮಿಸಿದ್ದು ಯಾರು ಎಂಬ ಪ್ರಶ್ನೆಗೆ ಸಮರ್ಪಕ ಉತ್ತರವಿಲ್ಲದೆ ತಪ್ಪಿಸಿಕೊಳ್ಳುವುದು ಕಾನೂನು ವಿರುದ್ಧವೆಂದೂ, ಸಂಬಂಧಪಟ್ಟ ಇಲಾಖೆಗಳು ನವಂಬರ್ 24 ರ ಮೊದಲು ಸಂಪೂರ್ಣ ಮಾಹಿತಿಯನ್ನು ಹಾಜರುಪಡಿಸಬೇಕೆಂದು ಕೇಂದ್ರ ಮಾಹಿತಿ ಆಯೋಗವು ಆದೇಶಿಸಿದೆ.

ಲಕ್ಷಾಂತರ ಮಂದಿ ಕೊರೋನಾ ಕಾಲದಲ್ಲಿ ಆರೋಗ್ಯ ಸೇತು’ ಆ್ಯಪ್ ಬಳಸಿದ್ದರು. ಲಾಕ್‌ಡೌನ್ ಸಮಯದಲ್ಲಿ ಕೆಲಸಕ್ಕಾಗಿ ಹೊರಗಿಳಿಯಲು ಕೇಂದ್ರ ಸರಕಾರ ಈ ಆ್ಯಪ್ ಕಡ್ಡಾಯವಾಗಿಸಿತ್ತು. ಅದೇ ಸಮಯದಲ್ಲಿ ಅಪ್ಲಿಕೇಷನ್ ನಲ್ಲಿ ಸುರಕ್ಷತೆಯ ಬಗ್ಗೆ ತಕರಾರೆದ್ದಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ವಿಚಾರದಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಅಗತ್ಯಕ್ಕಿಂತಲೂ ಹೆಚ್ಚು ಮಾಹಿತಿಗಳನ್ನು ಆ್ಯಪ್ ಕೇಳುತ್ತಿದೆಯೆಂದೂ, ಇತರ ರಾಷ್ಟ್ರಗಳ ಕಾಂಟಾಕ್ಟ್ ಟ್ರೇಸಿಂಗ್ ಆ್ಯಪ್‌ಗಳ ಗುಣಮಟ್ಟ ಇದಕ್ಕಿಲ್ಲವೆಂದೂ ಮಾತ್ರವಲ್ಲ ಜಿಪಿಎಸ್ ಕೆಂದ್ರೀಕರಿಸಿರುವ ಲೊಕೇಷನ್ ಡೇಟಾ ಉಪಯೋಗ ಅಷ್ಟೊಂದು ಸುರಕ್ಷಿತವಲ್ಲವೆಂದೂ ಆರೋಪಗಳು ಕೇಳಿ ಬಂದಿತ್ತು.