ಆ ನಡುರಾತ್ರಿಯಲ್ಲಿ ಸಿದ್ಧಾರ್ಥನನ್ನು ತ್ಯಜಿಸಿ ಯಶೋಧರೆ ಎದ್ದು ಹೋಗಿರುತ್ತಿದ್ದರೆ…

0
2246

ದೀಪ್ತಿ
ಗಾಯತ್ರಿ
ಕವಿತಾ
ಕಳೆದ ಎಪ್ರಿಲ್ ಒಂದೇ ತಿಂಗಳಲ್ಲಿ ಬಿಡುಗಡೆಯಾದ ಮೂರು ಕಾದಂಬರಿಗಳ ಮುಖ್ಯ ಪಾತ್ರಧಾರಿಗಳು ಇವರು. ಹೆಣ್ಣು ಕೇಂದ್ರಿತ ಈ ಮೂರೂ ಕಾದಂಬರಿಗಳ ವಿಶೇಷತೆ ಏನೆಂದರೆ, ಕೆ.ಆರ್. ಮೀರಾ ಅವರ ‘ಅನ್‍ಸೀನ್ ಐಡಲ್ ಆಫ್ ಲೈಟ್’ ಕಾದಂಬರಿಯ ನಾಯಕಿ ದೀಪ್ತಿ ಮತ್ತು ಸುಮನಾ ರಾಯ್ ಅವರ ‘ಮಿಸ್ಸಿಂಗ್’ ಕಾದಂಬರಿಯ ನಾಯಕಿ ಕವಿತಾ ಕಾದಂಬರಿಯಲ್ಲಿ ನಾಪತ್ತೆಯಾಗುತ್ತಾರೆ. ಇನ್ನು, ಅನುರಾಧ ರಾಯ್ ಅವರ, ‘ಆಲ್ ದಿ ಲೈವ್ಸ್ ವಿ ನೆವರ್ ಲೈವ್ಡ್’ ಕಾದಂಬರಿಯ ನಾಯಕಿ ಗಾಯತ್ರಿ ತನ್ನ ಗಂಡನನ್ನು ತೊರೆದು ಹೊರಟು ಹೋಗುತ್ತಾಳೆ. ಒಂದು ರೀತಿಯಲ್ಲಿ, ಈ ಮೂರೂ ಕಾದಂಬರಿಗಳ ನಡುವೆಯೂ ಕಾಕತಾಳೀಯವಾದ ಒಂದು ಪೋಣಿಕೆ ಇದೆ. ಈ ಮೂರೂ ಕಾದಂಬರಿಗಳನ್ನು ಬರೆದಿರುವುದು ಮಹಿಳೆಯರೇ ಎಂಬುದು ಒಂದು ಮುಖ್ಯ ಅಂಶವಾದರೆ, ಇನ್ನೊಂದು, ಮೂರೂ ಕಾದಂಬರಿಗಳ ಮುಖ್ಯ ಪಾತ್ರವಾಗಿ ಮಹಿಳೆಯರೇ ಇರುವುದು. ಅದರಲ್ಲೂ ಈ ಪಾತ್ರಧಾರಿಗಳ ನಡುವೆ ಮೂರೂ ಕಾದಂಬರಿಗಳಲ್ಲಿ ಸಾಮ್ಯತೆ ಇರುವುದು. ಇದು ಯಾಕಾಯಿತು? ಹೇಗೆ ಸಾಧ್ಯವಾಯಿತು? ಗರ್ಭಿಣಿ ಪತ್ನಿ ದೀಪ್ತಿ ಕಾಣೆಯಾದ ಬಳಿಕ ಆಕೆಯ ಗಂಡ ಕುರುಡನಾಗಿ ಬದುಕು ಸಾಗಿಸುವ ಕತೆ ಮೀರಾ ಅವರ ‘ಅನ್‍ಸೀನ್ ಐಡಲ್ ಆಫ್ ಲೈಟ್’ ಕಾದಂಬರಿಯದ್ದು. ಸುಮನಾ ರಾಯ್ ಅವರ ‘ಮಿಸ್ಸಿಂಗ್’ ಕಾದಂಬರಿಯ ನಾಯಕಿ ಕವಿತಾಳ ಗಂಡನೂ ಕುರುಡನೇ. ಕವಿತಾ ನಾಪತ್ತೆಯಾದ ಬಳಿಕ 7 ದಿನಗಳ ಕಾಲ ಕುರುಡನಾಗಿ ಬದುಕುವ ಗಂಡನ ಕತೆಯನ್ನು ಹೇಳುವ ಕಾದಂಬರಿ ಇದು. ಅನುರಾಧಾ ರಾಯ್ ಅವರ ‘ಆಲ್ ದಿ ಲೈವ್ಸ್ ವಿ ನೆವರ್ ಲೈವ್ಡ್’ ಕಾದಂಬರಿಯ ಗಾಯತ್ರಿ ನಾಪತ್ತೆ ಯಾಗುವುದಿಲ್ಲ ಮತ್ತು ಗಂಡ ಕುರುಡನಾಗುವುದಿಲ್ಲ ಅನ್ನುವುದನ್ನು ಬಿಟ್ಟರೆ ಕಾದಂಬರಿಯ ಒಟ್ಟು ಹೂರಣ ಉಳಿದೆರಡು ಕಾದಂಬರಿಗಳಿಗಿಂತ ಭಾರೀ ಭಿನ್ನವೇನೂ ಅಲ್ಲ. ಗಾಯತ್ರಿ ತನ್ನ ಕಲಾ ಪ್ರತಿಭೆಯನ್ನು ಹೆಚ್ಚು ಚುರುಕುಗೊಳಿಸುವ ಉದ್ದೇಶದಿಂದ ಗಂಡ ಮತ್ತು ಮಗುವನ್ನು ಭಾರತದಲ್ಲೇ ಬಿಟ್ಟು ಬಾಲಿಗೆ ತೆರಳುತ್ತಾಳೆ. ಗಂಡನಾದರೋ ಬೌದ್ಧ ಬಿಕ್ಷುವಾಗುವ ಉದ್ದೇಶದಿಂದ ಹೊರಟುಹೋಗಿ ಕೊನೆಗೆ ಇನ್ನೊಂದು ಮದುವೆಯಾಗಿ ಹಿಂತಿರುಗಿ ಬರುತ್ತಾನೆ.
ನಿಜವಾಗಿ, ‘ಮಿಸ್ಸಿಂಗ್’, ‘ಅನ್‍ಸೀನ್ ಐಡಲ್ ಆಫ್ ಲೈಟ್’ ಮತ್ತು ‘ಆಲ್ ದಿ ಲೈವ್ಸ್ ವಿ ನೆವರ್ ಲೈವ್ಡ್’ ಎಂಬ ಈ ಮೂರು ಕಾದಂಬರಿಗಳಿಂದ ದೀಪ್ತಿ, ಕವಿತಾ ಮತ್ತು ಗಾಯತ್ರಿಯರನ್ನು ಪ್ರತ್ಯೇಕಿಸಿಟ್ಟು ನೋಡುವಾಗ, ಈ ಪಾತ್ರಗಳು ನಮ್ಮೊಳಗಿನ ಪ್ರಶ್ನೆಗಳ ಪ್ರತಿರೂಪಗಳಾಗಿಯೇ ಕಾಣಿಸುತ್ತವೆ. ಇದಕ್ಕೆ ಕಾರಣ ಏನೆಂದರೆ, ಒಂದು- ದೆಹಲಿಯ ನಿರ್ಭಯ ಪ್ರಕರಣ. ಇನ್ನೊಂದು, ಐತಿಹಾಸಿಕ ಪಾತ್ರಗಳನ್ನು ನಾವು ಓದಿಕೊಂಡು ಮತ್ತು ಅನುಭವಿಸಿಕೊಂಡು ಬಂದಿರುವ ರೀತಿ. ಸಿದ್ಧಾರ್ಥನು ಬುದ್ಧನಾಗುವ ಮೊದಲು ಒಂದು ಮಧ್ಯರಾತ್ರಿ ಪತ್ನಿ ಯಶೋಧರೆ ಮತ್ತು ಮಗುವನ್ನು ಬಿಟ್ಟು ಹೊರಟು ಹೋಗುತ್ತಾನೆ. ಆ ಬಳಿಕ ಬುದ್ಧನಾಗುತ್ತಾನೆ ಮತ್ತು ಬೌದ್ಧ ಧರ್ಮದ ಚಿಂತನೆಗಳ ಮೂಲ ಕರ್ತೃವಾಗುತ್ತಾನೆ. ಈ ಬಿಂದುವಿನಲ್ಲಿ ನಿಂತು ಯಶೋಧರೆ ಮತ್ತು ಆ ಮಗುವನ್ನೊಮ್ಮೆ ಕಲ್ಪಿಸಿಕೊಳ್ಳಿ. ಆಕೆಯ ಅಭಿಪ್ರಾಯಗಳು ಏನಿರಬಹುದು? ಮಗುವನ್ನು ಅಪ್ಪಿಕೊಂಡು ಆಕೆ ಏನೇನು ಹೇಳಿರಬಹುದು? ಅಪ್ಪನ ಬಗ್ಗೆ, ಆತ ಮಿಸ್ಸಿಂಗ್ ಆಗಿರುವ ಬಗ್ಗೆ, ಆತನ ಬರುವಿಕೆಯ ಬಗ್ಗೆ ಮತ್ತು ಮಗುವೆಂಬ ನೆಲೆಯಲ್ಲಿ ಆ ಮಗು ಕೇಳುವ ಎಲ್ಲ ಬಗೆಯ ಪ್ರಶ್ನೆಗಳಿಗೆ ಯಶೋಧರೆ ಉತ್ತರ ಕೊಡುವಾಗ ಯಾವೆಲ್ಲ ತಲ್ಲಣಗಳನ್ನು ಅನುಭವಿಸಿರಬಹುದು? ತನ್ನ ಮಗುವಿಗೆ ಅಪ್ಪನ ಮೇಲೆ ದ್ವೇಷ ಹುಟ್ಟದಂತೆ ಆಕೆ ಮಾತಾಡಿರಬಹುದೇ ಅಥವಾ ಅಪ್ಪನ ಗುರುತೇ ಇರಲಾರದಂಥ ಮಗುವನ್ನು ತಯಾರಿಸಲು ಆಕೆ ಮನಸ್ಸು ಮಾಡಿರಬಹುದೇ? ಬುದ್ಧನ ಬಗ್ಗೆ ಓದುವಾಗ ಯಶೋಧರೆ ಮಿಸ್ಸಿಂಗ್ ಆಗುತ್ತಾಳೆ. ಆಕೆಯ ಭಾವನೆ, ತೊಳಲಾಟ, ಕಣ್ಣೀರು, ವಿರಹ ವೇದನೆ ಎಲ್ಲವೂ ಬುದ್ಧನ ವರ್ಚಸ್ಸಿನ ಮುಂದೆ ಗೌಣವಾಗುತ್ತದೆ. ಬುದ್ಧನು ಪತ್ನಿಯನ್ನು ತ್ಯಜಿಸಿ ಹೋದುದನ್ನು ಪತ್ನಿಗೆ ಮಾಡಲಾದ ವಂಚನೆಯ ದೃಷ್ಟಿಯಲ್ಲಿ ಇವತ್ತು ಯಾರೂ ನೋಡುವುದಿಲ್ಲ. ಆಧ್ಯಾತ್ಮಿಕ ಸಾಧನೆಯ ಮಾರ್ಗದಲ್ಲಿ ಮಾಡಲಾದ ತ್ಯಾಗ ಎಂಬ ನವಿರಾದ ಮತ್ತು ಸುಂದರವಾದ ಪೊರೆಯೊಂದು ಆ ತ್ಯಜಿಸುವಿಕೆಯ ಸುತ್ತ ಕವಿದುಕೊಂಡಿದೆ. ನಿಜಕ್ಕೂ, ಆಧ್ಯಾತ್ಮಿಕ ಸಾಧನೆಗೆ ಪತ್ನಿ ಅಡ್ಡಿಯೇ, ಮಗು ತೊಡಕೇ? ಇವರಿಬ್ಬರು ಇದ್ದೂ ಸಿದ್ಧಾರ್ಥನಿಗೆ ಬುದ್ಧನಾಗಲು ಸಾಧ್ಯವಿರಲಿಲ್ಲವೇ? ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿಯೂ ಈ ಪ್ರಶ್ನೆಯನ್ನು ಕೇಳಬಹುದು. ಪತ್ನಿ ಜಶೋದಾ ಬೆನ್‍ರನ್ನು ತ್ಯಜಿಸಿದ್ದು ಮತ್ತು ಇದು ದೇಶಕ್ಕಾಗಿ ಮಾಡಲಾದ ತ್ಯಾಗ ಎಂದು ಅವರ ಬೆಂಬಲಿಗರು ಆ ಘಟನೆಯನ್ನು ಸಮರ್ಥಿಸುತ್ತಿರುವುದು ಎಷ್ಟರ ವರೆಗೆ ಸರಿ? ನಂಬಿದವರನ್ನೇ ಕೈ ಬಿಡಬೇಕಾದ ಸ್ಥಿತಿ ದೇಶಕ್ಕೆ ಬಂದೊದಗಿದೆಯೇ? ಪತ್ನಿಯನ್ನು ತ್ಯಜಿಸದೇ ದೇಶಸೇವೆ ಮಾಡಲಾಗದೇ? ಹಾಗೆ ತ್ಯಜಿಸುವ ಗಂಡುಗಳ ಬಗ್ಗೆ ಪತ್ನಿಯರ ನಿಲುವು ಏನು? ಅವರ ಭಾವನೆಗಳು ಏನಿದ್ದೀತು? ಒಂದು ವೇಳೆ, ದೇಶಕ್ಕಾಗಿ ಪತಿಯನ್ನು ತ್ಯಜಿಸುವ ನಿರ್ಧಾರಕ್ಕೆ ಪತ್ನಿ ಬಂದರೆ ಅದು ಹೇಗೆ ಗುರುತಿಸಿಕೊಂಡೀತು? ಸಿದ್ಧಾರ್ಥನನ್ನು ತೊರೆದು ಯಶೋಧರೆ ಹೊರಟು ಹೋಗಿರುತ್ತಿದ್ದರೆ ಮತ್ತು ಈ ತ್ಯಜಿಸುವಿಕೆಗೆ ಆಧ್ಯಾತ್ಮಿಕ ಹುಡುಕಾಟ ಕಾರಣ ಎಂದು ಆಕೆ ಹೇಳಿರುತ್ತಿದ್ದರೆ ಅದಕ್ಕೆ ಲಭ್ಯವಾಗಬಹುದಾದ ಪ್ರತಿಕ್ರಿಯೆಗಳು ಏನಿದ್ದೀತು? ಬುದ್ಧನಿಗೆ ಸಿಕ್ಕ ಗೌರವಗಳು ಯಶೋಧರೆಗೂ ಸಿಗುತ್ತಿದ್ದುವೇ? ಜಶೋದಾ ಬೆನ್‍ಗೆ ಸಂಬಂಧಿಸಿಯೂ ಈ ಪ್ರಶ್ನೆ ಯನ್ನು ಕೇಳಬಹುದು. ಪತಿ ನರೇಂದ್ರ ಮೋದಿಯನ್ನು ತೊರೆದು ಜಶೋದಾ ಬೆನ್ ದೇಶಸೇವೆಯ ಹೆಸರಲ್ಲಿ ಮನೆ ಬಿಡುತ್ತಿದ್ದರೆ ಇವತ್ತು ಆಕೆಗೆ ಸಿಗುವ ಬಿರುದುಗಳು ಏನಿರುತ್ತಿದ್ದುವು? ಅನುರಾಧಾ ರಾಯ್ ಅವರ ‘ಆಲ್ ದಿ ಲೈವ್ಸ್ ವಿ ನೆವರ್ ಲೈವ್ಡ್’ ಕಾದಂಬರಿಯ ಗಾಯತ್ರಿ ಈ ಎಲ್ಲ ಪ್ರಶ್ನೆಗಳಿಗೆ ಒಂದೊಳ್ಳೆಯ ಉತ್ತರದಂತೆ ಕಾಣುತ್ತಾಳೆ. ತನ್ನ ಕಲಾ ಪ್ರತಿಭೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದಕ್ಕಾಗಿ ಪತಿ ಮತ್ತು ಮಗುವನ್ನು ತ್ಯಜಿಸಿ ಹೋಗುವ ಗಾಯತ್ರಿಯನ್ನು ಆ ಸಮಾಜ ಗೌರವಿಸುವುದಿಲ್ಲ. ಅಷ್ಟು ಮಾತ್ರವಲ್ಲ, ಆಕೆಗೆ ವೇಶ್ಯೆ, ಅಹಂಕಾರಿ, ಅವಿಧೇಯೆ ಇತ್ಯಾದಿ ಗುರುತುಗಳನ್ನು ಆ ಸಮಾಜ ಉಚಿತವಾಗಿ ನೀಡುತ್ತದೆ.
     ಬಹುಶಃ, ಅನುರಾಧ ರಾಯ್, ಸುಮನಾ ರಾಯ್ ಮತ್ತು ಕೆ.ಆರ್. ಮೀರಾ ಅವರ ಕಾದಂಬರಿಗಳಲ್ಲಿ ಹೆಣ್ಣು ಮಿಸ್ಸಿಂಗ್ ಆಗುವ ಪಾತ್ರವಾಗಿ ಗುರುತಿಸಿಕೊಂಡಿರುವುದಕ್ಕೆ ಈ ದೇಶದ ಪೌರಾಣಿಕ ಕತೆಗಳ ಪ್ರಭಾವ ಬಹುಮುಖ್ಯವಾಗಿರಬಹುದು ಎಂದು ಅನಿಸುತ್ತದೆ. ಆಧ್ಯಾತ್ಮಿಕ ಸಾಧನೆಗೆ ಸಾಂಸಾರಿಕ ಬದುಕು ಅಡ್ಡಿ ಎನ್ನುವ ನೀತಿ ವಾಕ್ಯಗಳು ಸಹಜವೆಂಬಂಥ ರೀತಿಯಲ್ಲಿ ಇಲ್ಲಿನ ಪೌರಾಣಿಕ ಕತೆಗಳಲ್ಲಿ ಹಾಸು ಹೊಕ್ಕಾಗಿವೆ. ಗಂಡಿನ ಸಾಧನೆಗೆ ಹೆಣ್ಣು ತೊಡಕು ಎಂಬ ಭಾವನೆ ಈ ಹಿಂದಿನಿಂದಲೇ ಈ ದೇಶದಲ್ಲಿ ಬೆಳೆದು ಬಂದಿದೆ. ಅದನ್ನು ಪ್ರಶ್ನಿಸದೆಯೇ ಒಪ್ಪಿಕೊಂಡ ರೀತಿಯಲ್ಲಿ ಈ ದೇಶದ ಸಾಂಸ್ಕೃತಿಕ ವಾತಾವರಣವಿದೆ. ಈ ದೇಶವು ಐತಿಹಾಸಿಕ ಘಟನೆಗಳ ಮೇಲೆ ನಿಂತಿರುವುದಕ್ಕಿಂತ ಹೆಚ್ಚು ದೃಢವಾಗಿ ಪೌರಾಣಿಕ ಕತೆಗಳ ಮೇಲೆ ನಿಂತಿದೆ. ಅವುಗಳನ್ನು ಹೆಚ್ಚು ವಿಶ್ವಾಸದಿಂದ ನಂಬುತ್ತಲೂ ಬಂದಿದೆ. ಸೀತೆ ಪ್ರಣಾಳ ಶಿಶುವಾಗಿದ್ದಳು ಎಂದು ಹೇಳಲು ಓರ್ವ ಜನ ಪ್ರತಿನಿಧಿಗೆ ಸಾಧ್ಯವಾಗುವುದು ಈ ಕಾರಣದಿಂದಲೇ. ‘ಮಹಾಭಾರತದ ಕಾಲದಲ್ಲೇ ಪತ್ರಿಕೋದ್ಯಮ ಇತ್ತು’ ಎಂದೋ ‘ಪ್ರಾಚೀನ ಕಾಲದಲ್ಲೇ ಗೂಗಲ್ ತಂತ್ರಜ್ಞಾನವಿತ್ತು’ ಎಂದೋ ಒಂದು ರಾಜ್ಯದ ಉಪಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿಯೇ ಈ 21ನೇ ಶತಮಾನದಲ್ಲಿ ಹೇಳುವ ಧೈರ್ಯ ತೋರಿಸಬಲ್ಲರೆಂದರೆ ಮತ್ತು ನಾರದ ಮುನಿಯನ್ನೂ ಸಂಜಯ ಮತ್ತು ಧೃತರಾಷ್ಟ್ರರನ್ನೂ ಅದಕ್ಕೆ ಉದಾಹರಣೆಯಾಗಿ ನೀಡಬಲ್ಲರೆಂದರೆ ಅವರು ಪೌರಾಣಿಕ ಕತೆಗಳ ಮೇಲೆ ಇಟ್ಟಿರುವ ವಿಶ್ವಾಸವಾದರೂ ಎಂಥವು? ಪೌರಾಣಿಕ ಕಥಾ ಪಾತ್ರಗಳನ್ನು ಆಧುನಿಕ ತಂತ್ರಜ್ಞಾನಗಳಿಗೆ ತಳಕು ಹಾಕಿ ಸಮರ್ಥಿಸುವಾಗ ಆಗಬೇಕಾದ ಮುಜುಗರದ ಯಾವ ಲವಲೇಶವೂ ಅವರಲ್ಲಿ ವ್ಯಕ್ತವಾಗುತ್ತಿಲ್ಲವೆಂದರೆ ಅದಕ್ಕೆ ಏನೆನ್ನಬೇಕು? ಆದ್ದರಿಂದಲೇ ದೀಪ್ತಿ, ಗಾಯತ್ರಿ ಮತ್ತು ಕವಿತಾ ಮಿಸ್ಸಿಂಗ್ ಆಗುವುದನ್ನು ಈ ಪೌರಾಣಿಕ ಕಥಾ ಪಾತ್ರಗಳಿಗೆ ನೀಡುವ ಎದಿರೇಟು ಆಗಿರಬಹುದೋ ಅನ್ನುವ ಅನುಮಾನ ಕಾಡುತ್ತದೆ. ಹೆಣ್ಣನ್ನು ತ್ಯಜಿಸಿ ಹೋಗುವ ಪುರುಷನಿಗೆ ಪ್ರತಿಯಾಗಿ ಈ ಮೂವರು ಮಹಿಳೆಯರನ್ನು ಈ ಕಾದಂಬರಿಗಾರ್ತಿಯರು ಹುಟ್ಟುಹಾಕಿರುವರೋ ಎಂದು ಅನುಮಾನಿಸಬೇಕಾಗುತ್ತದೆ. ಇಲ್ಲಿ ಕಾಡುವ ಇನ್ನೊಂದು ಸಂದೇಹ ಏನೆಂದರೆ, ನಿರ್ಭಯ ಪ್ರಕರಣ. ಈ ದೇಶದಲ್ಲಿ ಹೆಣ್ಣು ಬಹು ಮುಖ್ಯ ಚರ್ಚಾವಸ್ತುವಾಗಿ ತೆರೆದುಕೊಂಡದ್ದು 2012ರಲ್ಲಿ. ಇದೊಂದು ಬಹುಮುಖ್ಯವಾದ ಘಟ್ಟ. ಈ ಹಿಂದೆಯೂ ಇಂಥ ಸಂದರ್ಭಗಳು ಸೃಷ್ಟಿಯಾಗಿರಬಹುದು. ಆದರೆ, ಸಾಮಾಜಿಕ ಜಾಲತಾಣಗಳು ಹೆಚ್ಚು ಸಕ್ರಿಯವಾಗಿರುವ ಕಾಲದ ಬಹುಮುಖ್ಯ ಚರ್ಚೆಯಾಗಿ ಎದುರು ಬಂದದ್ದು ನಿರ್ಭಯಾ. ಆಕೆ ನಮ್ಮ ನಡುವಿನಿಂದ ಶಾಶ್ವತವಾಗಿ ಮಿಸ್ಸಿಂಗ್ ಆದಳು. ಈ ಕಾಣೆಯಾಗುವಿಕೆಯು ಈ ದೇಶದಲ್ಲಿ ದೊಡ್ಡದೊಂದು ಸಂಚಲನವನ್ನು ಸೃಷ್ಟಿಸಿತು. ಆ ಹೆಣ್ಮಗಳು ಮಿಸ್ಸ್ ಆಗದಂತೆ ನೋಡಿಕೊಳ್ಳುವುದಕ್ಕೆ ಇಡೀ ದೇಶವೇ ಒಂದಾಯಿತು. ಆದರೆ ಅದು ಸಾಧ್ಯವಾಗಲಿಲ್ಲ. ಆ ಬಳಿಕ ಈ ದೇಶದಲ್ಲಿ ಹೆಣ್ಮಕ್ಕಳ ಬಗ್ಗೆ ಮಾಧ್ಯಮಗಳು ದೊಡ್ಡಮಟ್ಟದಲ್ಲಿ ಆಂದೋಲನವನ್ನೇ ನಡೆಸಿದುವು. ಒಂದು ಕಡೆ ಅತ್ಯಾಚಾರದ ಸುದ್ದಿಗಳಾದರೆ ಇನ್ನೊಂದು ಕಡೆ ಹೆಣ್ಣು ಮತ್ತು ಹೆಣ್ಮಕ್ಕಳು ನಾಪತ್ತೆಯೂ ಆಗುತ್ತಿದ್ದರು. ಹಾಗೆ ನಾಪತ್ತೆಯಾದವರು ಕೆಲವು ದಿನಗಳ ಬಳಿಕ ಪೊದೆಯಲ್ಲೋ ಕಾಡಿನಲ್ಲೋ ನದಿಯಲ್ಲೋ ಜೀವಚ್ಛವವಾಗಿ ಪತ್ತೆಯಾಗುತ್ತಿದ್ದರು. ಇದರ ಹೊರತಾಗಿ ಆಸ್ಪತ್ರೆಯೆಂಬ ನಾಲ್ಕು ಗೋಡೆಯ ಒಳಗೆ ನಾಪತ್ತೆಯಾಗುವ ಹೆಣ್ಣು ಶಿಶುಗಳ ಲೆಕ್ಕವಂತೂ ಯಾರಿಗೂ ಗೊತ್ತಿಲ್ಲ. ‘ಮಿಸ್ಸಿಂಗ್ ಡಾಟರ್ಸ್’ ಎಂಬ ಸಾಕ್ಷ್ಯ ಚಿತ್ರದ ಪ್ರಕಾರ, ಈ ಸಂಖ್ಯೆ 10 ಮಿಲಿಯನ್. ಇದು ಹೆಣ್ಣು ಮತ್ತು ಗಂಡು ಜೊತೆ ಸೇರಿ ಮಾಡುವ ಹತ್ಯೆ. ಅಲ್ಲದೇ, ಈ ಮಿಸ್ಸಿಂಗ್‍ಗೆ ಇನ್ನೊಂದು ಮುಖವೂ ಇದೆ. ಅದೇನೆಂದರೆ, ಹೆಣ್ಣು ದೈಹಿಕವಾಗಿ ಜೀವಂತವಿದ್ದರೂ ಒಂದು ಸಂಪನ್ಮೂಲವಾಗಿ ಸತ್ತು ಹೋಗಿರುವುದು. ಈ ಸ್ಥಿತಿಯಲ್ಲಿರುವ ಮಹಿಳೆಯರೂ ಈ ದೇಶದಲ್ಲಿ ಅಸಂಖ್ಯ ಇದ್ದಾರೆ. ಅವರ ಸ್ಥಿತಿ ಹೇಗೆಂದರೆ, ಗಂಡು ಹೇಳಿದಷ್ಟೇ ಮಾಡಬೇಕು. ಇರು ಅಂದರೆ ಇರಬೇಕು. ಹೋಗು ಅಂದರೆ ಹೋಗಬೇಕು. ಮಲಗು ಅಂದರೆ ಮಲಗಬೇಕು. ಈ ಗೊಂಬೆಯ ಪಾತ್ರಕ್ಕಿಂತ ಹೊರತಾದ ಯಾವ ಮಹತ್ವವನ್ನೂ ಹೊಂದಿಲ್ಲದ ಮಹಿಳೆಯರು ಒಂದು ರೀತಿಯಲ್ಲಿ ಮಿಸ್ಸಿಂಗ್‍ಗಳೇ. ಅವರ ಭಾವನೆ, ಯೋಚನೆ, ಯೋಜನೆ, ಚಿಂತನೆ ಗಳಿಗೆ ಯಾವ ಮಹತ್ವವೂ ಲಭ್ಯವಿಲ್ಲವೆಂದ ಮೇಲೆ ಅವರು ಜೀವಂತ ಇರುವುದಕ್ಕೆ ಕುರುಹಾದರೂ ಏನಿದೆ? ಈ ಹಿನ್ನೆಲೆಯಲ್ಲಿ ಯೋಚಿಸುವಾಗ ನಾಪತ್ತೆ ಎಂಬುದು ದೈಹಿಕ ಮಿಸ್ಸಿಂಗ್‍ಗೆ ಮಾತ್ರ ಸಂಬಂಧಿಸಿ ಹೇಳಬೇಕಾದ ಪದವಾಗಿ ಕಾಣುವುದಿಲ್ಲ. ನಾಪತ್ತೆ ಎಂಬ ಪದವು ಧ್ವನ್ಯಾರ್ಥಕ್ಕಿಂತ ಆಚೆಗಿನ ವಿಷಯಗಳನ್ನು ಧ್ವನಿಸುತ್ತದೆ. ದೈಹಿಕವಾಗಿ ನಾಪತ್ತೆಯಾಗುವುದು ಅದರ ಕೇಂದ್ರಬಿಂದುವೇ ಹೊರತು ಅದುವೇ ಎಲ್ಲವೂ ಅಲ್ಲ. ಅಂದಹಾಗೆ, ಅನುರಾಧ ರಾಯ್, ಸುಮನಾ ರಾಯ್ ಮತ್ತು ಮೀರಾ ಅವರು ತಮ್ಮ ಕಾದಂಬರಿಗಳಲ್ಲಿ ಮಹಿಳೆಯರನ್ನು ನಾಪತ್ತೆ ಮಾಡಿರುವುದಕ್ಕೆ ಭಾರತೀಯ ಪೌರಾಣಿಕ ಕತೆಗಳ ಪ್ರಭಾವ ಇದೆಯೋ ಇಲ್ಲವೋ, ಆದರೆ ಭಾರತೀಯ ಸಾಮಾಜಿಕ ಪರಿಸ್ಥಿತಿಯ ಪ್ರಭಾವವಂತೂ ಇದ್ದೇ ಇದೆ. ಅಂದಹಾಗೆ,
ನರೇಂದ್ರ ಮೋದಿಯವರು ಸದ್ಯ ಪಡೆದುಕೊಂಡಿರುವ ವರ್ಚಸ್ಸೆ ಅದಕ್ಕೊಂದು ಉತ್ತಮ ಉದಾಹರಣೆ.