ಆ ಹುಡುಗ ಏನೋ ಹೇಳಿದ: ಆತನ ಕಣ್ಣು ಮಂಜಾಯಿತು..

0
1431

ಏ. ಕೆ. ಕುಕ್ಕಿಲ

ಬೈಕ್ ಗೆ ಅಡ್ಡವಾಗಿ ಕೈ ತೋರಿಸಿದ ಆ ಹುಡುಗನನ್ನು ಆತ ಹತ್ತಿಸಿಕೊಂಡ. ಹುಡುಗನ ಬೆನ್ನಿನಲ್ಲೊಂದು ಬ್ಯಾಗು. ಯುನಿಫಾರ್ಮ್ ನಂಥ ಡ್ರೆಸ್ಸು. ಹುಡುಗ ಒಂಬತ್ತೋ ಹತ್ತೋ ಕ್ಲಾಸಿನವನಿರಬೇಕೆಂದು ಅಂದಾಜಿಸಿದ ಆತ ಮಾತಿಗೆಳೆದ. ಹೆಸರೇನೆಂದು ಕೇಳಿದ. ಉತ್ತರ ಇಲ್ಲ. ತುಸು ಗಡುಸಾಗಿಯೇ ಪ್ರಶ್ನೆಯನ್ನು ಪುನರಾವರ್ತಿಸಿದ. ಆಗಲೂ ಉತ್ತರ ಇಲ್ಲ. ಶಾಲೆಗೆ ಹೋಗುವ ಗಡಿಬಿಡಿಯ ಮಧ್ಯೆ ತನ್ನ ಮಾತು ಕೇಳಿರಲಾರದೆಂದು ಅಂದುಕೊಂಡು ಹೆಸರೇನೆಂದು ಮತ್ತೊಮ್ಮೆ ಪ್ರಶ್ನಿಸಿದ. ಊಂ ಹ್ಹೂಂ. ಉತ್ತರ ಇಲ್ಲ. ಈಗ ಆತನಲ್ಲಿ ಅನುಮಾನ ಪ್ರಾರಂಭವಾಯಿತು. ಹುಡುಗನದ್ದು ಕ್ರಿಮಿನಲ್ ಮೈಂಡ್ ಆಗಿರಬಹುದೇ? ತನ್ನ ಕಿಸೆಯಿಂದ ಪರ್ಸ್ ಎಗರಿಸಲು ಪ್ರಯತ್ನ ಪಡುತ್ತಿರಬಹುದೇ? ಹಿಂದಿನಿಂದ ತನ್ನ ಕೊರಳನ್ನು ಹಗ್ಗದಿಂದ ಬಿಗಿದರೆ…? ವಿದ್ಯಾರ್ಥಿಯೆಂದು ನಂಬಿಸುವುದಕ್ಕೆ ಬ್ಯಾಗು, ಯುನಿಫಾರ್ಮು ಧರಿಸಿರಬಹುದೇ? ಈಗಿನ ಕಾಲದಲ್ಲಿ ಯಾರನ್ನೂ ನಂಬಬಾರದು…
ಆತ ದಿಢೀರನೇ ಬೈಕ್ ನಿಲ್ಲಿಸಿದ. ಬೈಕ್ ನಿಂದ ಇಳಿದು ಆತನ ಎದುರಿಗೆ ಬಂದ ಹುಡುಗ ಕೈ ಸನ್ನೆ, ಕಣ್ಸನ್ನೆಯಿಂದ ಏನನ್ನೋ ಹೇಳಿದ ಮತ್ತು ಹೇಳುತ್ತಲಿದ್ದ..

ಆತ ತಲೆ ತಗ್ಗಿಸಿದ. ಕಣ್ಣು ತುಂಬಿಕೊಳ್ಳುತ್ತಿತ್ತು.