ಉಜಿರೆಯಲ್ಲಿ ಹೊಟೇಲ್ ನೌಕರನಿಗೆ ಹಲ್ಲೆ: ಆರು ಮಂದಿ ಆರೋಪಿಗಳ ಬಂಧನ

0
875

ಸನ್ಮಾರ್ಗ ವಾರ್ತೆ

ಉಜಿರೆ: ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ಹೋಟೆಲ್ ನೌಕರನೋರ್ವನಿಗೆ ನಿನ್ನೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಭಜರಂಗ ದಳದ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಅಜಿತ್ ಕುಮಾರ್, ಅರುಣ್ ಕುಮಾರ್ , ನಿತೀಶ್, ಆಶಿಶ್ ಕುಮಾರ್, ಪರಮೇಶ್ವರ್ ಹಾಗೂ ನವೀನ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಜನವರಿ 23ರಂದು ಉಜಿರೆಯ ಹೋಟೆಲೊಂದರ ನೌಕರ ಮುಹಮ್ಮದ್ ಅಲ್ತಾಫ್ (21) ಎಂಬವರ ಮೇಲೆ ಕ್ಷುಲ್ಲಕ ಕಾರಣ ಮುಂದಿಟ್ಟು ಹಲ್ಲೆ ನಡೆಸಿದ್ದರು. ಹಲ್ಲೆ ತಡೆಯಲು ಬಂದಿದ್ದ ಅಲ್ತಾಫ್ ರವರ ಸಹೋದರ ಮುಹಮ್ಮದ್ ಅಶ್ರಫ್ ಎಂಬವರ ಮೇಲೂ ಈ ಗುಂಪು ಹಲ್ಲೆ ನಡೆಸಿತ್ತು‌.

ಈ ಬಗ್ಗೆ ಅಲ್ತಾಫ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಇಂದು ಪೊಲೀಸರು ಕಾರ್ಯಾಚರಣೆ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಗುಂಪಿನಲ್ಲಿದ್ದ ಇತರ ಕೆಲವರು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ತಪ್ಪಿತಸ್ಥ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಜಿಲ್ಲಾ ಎಸ್ ಡಿಪಿಐ ಮುಖಂಡರು ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದರು.

ಎಸ್ ಡಿಪಿಐ ಜಿಲ್ಲಾ ಮುಖಂಡ ಅಥಾವುಲ್ಲಾ ಜೋಕಟ್ಟೆ ಟ್ವಿಟ್ ಮಾಡಿ, ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಮುಸ್ಲಿಂ ಯುವಕನ ಮೇಲೆ ಭಜರಂಗಿ ಅಟ್ಟಹಾಸ ಮಾರ್ಧನಿಸಿದೆ. ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದ ಪರಿಣಾಮ ಈ ಘಟನೆ ಸಂಭವಿಸಿದೆ. ದುಷ್ಕರ್ಮಿಗಳನ್ನು ತಕ್ಷಣ ಬಂಧನವಾಗದಿದ್ದರೆ ಹೋರಾಟ ತೀವ್ರತೆಗೆ ಪೊಲೀಸರ ನಿಷ್ಕ್ರಿಯತೆಯೇ ಕಾರಣವಾದೀತು ಎಂದು ತಿಳಿಸಿದ್ದರು.

ಈ ಘಟನೆಯ ಸಂಬಂಧ ಕಾರ್ಯಾಚರಣೆ ನಡೆಸಿದ ಬೆಳ್ತಂಗಡಿ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದ ಆರೋಪಗಳನ್ನು ಶೀಘ್ರವೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.