ಉತ್ತರ ಕೊಡಿ ಪ್ರಧಾನಿಯವರೇ…

0
1552

ಸಂಪಾದಕೀಯ

ಬಿಜೆಪಿಗೆ ಓಟು ಹಾಕಬೇಡಿ ಎಂದು ಈ ದೇಶದ ಪ್ರಮುಖ 100 ಮಂದಿ ಸಿನಿಮಾ ನಿರ್ದೇಶಕರು ಮತದಾರರೊಂದಿಗೆ ವಿನಂತಿಸಿದ್ದಾರೆ. ನಿಜವಾಗಿ, ಇದೊಂದು ಅಭೂತಪೂರ್ವ ಘಟನೆ. 1977ರ ತುರ್ತು ಪರಿಸ್ಥಿತಿಯ ಸಂದರ್ಭವನ್ನು ಹೊರತುಪಡಿಸಿದರೆ, ಉಳಿದಂತೆ ಈ ದೇಶದ ಚುನಾವಣೆಯ ಇತಿಹಾಸದಲ್ಲಿ ಸಿನಿಮಾ ಕ್ಷೇತ್ರದಿಂದ ಇಂಥದ್ದೊಂದು ಬೇಡಿಕೆ ಈ ವರೆಗೆ ಕೇಳಿಬಂದಿಲ್ಲ. ವಾಜಪೇಯಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲೂ ಇಂಥದ್ದೊಂದು ವಿನಂತಿಯನ್ನು ಯಾವುದೇ ಕ್ಷೇತ್ರದ ಪ್ರಮುಖರು ಸಾರ್ವಜನಿಕವಾಗಿ ಹೇಳಿಕೊಂಡಿದ್ದಿಲ್ಲ. ಸದ್ಯದ ಪರಿಸ್ಥಿತಿ ಎಷ್ಟು ಆತಂಕಕಾರಿ ಅನ್ನುವುದನ್ನು ಈ ಬೆಳವಣಿಗೆ ಸ್ಪಷ್ಟಪಡಿಸುತ್ತದೆ.

ಕಳೆದ 5 ವರ್ಷಗಳಲ್ಲಿ ಎನ್.ಡಿ.ಎ. ಸರಕಾರ ಮಾಡಿದ ಸಾಧನೆಗಳೇನು ಅನ್ನುವ ಬಹುಮುಖ್ಯ ಪ್ರಶ್ನೆಯನ್ನೇ ಅಮುಖ್ಯಗೊಳಿಸುವ ರೀತಿಯಲ್ಲಿ ಪ್ರಧಾನಿ ಮೋದಿ ವರ್ತಿಸುತ್ತಿದ್ದಾರೆ. ತನ್ನ 5 ವರ್ಷಗಳ ಸಾಧನೆಯಾಗಿ ಪ್ರಧಾನಿ ತೋರಿಸುತ್ತಿರುವುದು ಉಪಗ್ರಹ ಉಡಾವಣೆಯನ್ನು. ಪಾಕಿಸ್ತಾನದ ಬಾಲಾಕೋಟ್‍ನ ಮೇಲಿನ ದಾಳಿಯನ್ನು ಮತ್ತು ಎರಡ್ಮೂರು ಸರ್ಜಿಕಲ್ ಸ್ಟ್ರೈಕ್‍ಗಳನ್ನು. ಇವರ ಮಾತು ಇವತ್ತು ಆರಂಭವಾಗುವುದೇ ಪಾಕಿಸ್ತಾನ್ ಎಂಬ ಉಲ್ಲೇಖದ ಮೂಲಕ. ಪಾಕಿಸ್ತಾನ್, ಹಿಂದೂಸ್ತಾನ್, ಸರ್ಜಿಕಲ್ ಸ್ಟ್ರೈಕ್, ರಾಷ್ಟ್ರೀಯ ಭದ್ರತೆ, ದೇಶಪ್ರೇಮ ಇತ್ಯಾದಿ ಇತ್ಯಾದಿ ಮಾತುಗಳೇ ಇವತ್ತು ಪ್ರಧಾನಿಯವರ ಬಂಡವಾಳ. ಇನ್ನು ಸಮಯ ಸಿಕ್ಕಿದರೆ ವಿರೋಧ ಪಕ್ಷಗಳನ್ನು ವ್ಯಂಗ್ಯ ಮಾಡುವುದು, ರಾಹುಲ್ ಗಾಂಧಿಯನ್ನು ಡಿಸ್‍ಲೆಕ್ಸಿಯಾ ರೋಗಪೀಡಿತ ಎಂದು ಅಣಕವಾಡುವುದು, ವಿರೋಧ ಪಕ್ಷಗಳ ಒಕ್ಕೂಟವನ್ನು ಶರಾಬ್ (ಅಮಲು) ಎಂದು ಹೀಗಳೆಯುವುದು ಇತ್ಯಾದಿಗಳನ್ನು ಮಾಡುತ್ತಿದ್ದಾರೆ. ನಿಜಕ್ಕೂ, 130 ಕೋಟಿ ಜನಸಂಖ್ಯೆಯಿರುವ ದೇಶವೊಂದರಲ್ಲಿ ಚರ್ಚೆಗೊಳಗಾಗಬೇಕಾದ ವಿಷಯಗಳೇ ಇವು? 5 ವರ್ಷಗಳ ಹಿಂದೆ ಇದೇ ಮೋದಿಯವರು ತನ್ನ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದರು. ಅದರ ಮೂಲಕ ಹಲವು ಭರವಸೆಗಳನ್ನು ನೀಡಿದ್ದರು. ವಿದೇಶಿ ನೇರ ಹೂಡಿಕೆಯನ್ನು (ಎಫ್‍ಡಿಎ) ಅವತ್ತು ಇದೇ ಮೋದಿಯವರು ವಿರೋಧಿಸಿದ್ದರು. ಜಿಎಸ್‍ಟಿ ಮತ್ತು ಆಧಾರ್ ಚೀಟಿಯನ್ನು ದೇಶವಿರೋಧಿ ಎಂಬಂತೆ ಬಿಂಬಿಸಿದ್ದರು. ಗ್ಯಾಸ್ ಸಿಲಿಂಡರ್ ನ ಸಬ್ಸಿಡಿ ಮೊತ್ತವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವುದನ್ನೂ ಸಂಚು ಎಂದು ಕರೆದಿದ್ದರು. ಇವುಗಳನ್ನು ಮನ್‍ಮೋಹನ್ ಸಿಂಗ್ ಸರಕಾರದ ಮಹಾ ಜನವಿರೋಧಿ ನೀತಿಗಳೆಂದು ಪಟ್ಟಿ ಮಾಡಿದ್ದ ಇದೇ ಬಿಜೆಪಿ ಇವತ್ತು ಏನು ಹೇಳುತ್ತಿದೆ? ವಿರೋಧ ಪಕ್ಷದಲ್ಲಿದ್ದಾಗ ಖಂಡತುಂಡವಾಗಿ ವಿರೋಧಿಸಿದ್ದ ಅವೇ ಕಾರ್ಯಕ್ರಮಗಳನ್ನು ಅಧಿಕಾರಕ್ಕೆ ಬಂದಾಗ ನೀವೇಕೆ ಜಾರಿ ಮಾಡಿದಿರಿ ಎಂಬ ಭಾರತೀಯರ ಪ್ರಶ್ನೆಗೆ ಉತ್ತರ ಕೊಡಬೇಕಾದವರು ಯಾರು, ಪ್ರಧಾನಿಯಲ್ಲವೇ? ಮತ್ತೇಕೆ ಅವರು ಈ ಬಗ್ಗೆ ಮಾತನ್ನೇ ಆಡುತ್ತಿಲ್ಲ?

ನೋಟ್‍ಬ್ಯಾನ್ ಎಂಬುದು ಬಿಜೆಪಿಯ ಪ್ರಣಾಳಿಕೆಯಲ್ಲೇ ಇರಲಿಲ್ಲ. ಆದರೆ ಅಧಿಕಾರಕ್ಕೆ ಬಂದರೆ ಪ್ರತಿಯೋರ್ವ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಣವನ್ನು ಜಮಾ ಮಾಡುತ್ತೇನೆಂದು ಸ್ವತಃ ಮೋದಿಯವರೇ ಹೇಳಿದ್ದರು. ಆದರೆ ಪ್ರಣಾಳಿಕೆಯಲ್ಲಿ ಹೇಳದ ನೋಟ್‍ಬ್ಯಾನ್ ಅನ್ನು ಭಾರತೀಯರು ನಿದ್ದೆಗೆ ಸಜ್ಜಾಗುವ ವೇಳೆಯಲ್ಲಿ ಘೋಷಿಸಿದರು. ಮಾತ್ರವಲ್ಲ, 50 ದಿನಗಳಲ್ಲಿ ಉದ್ದೇಶಿತ ಫಲಿತಾಂಶ ಸಿಗದಿದ್ದರೆ ನನ್ನನ್ನು ನೇಣಿಗೆ ಹಾಕಿ ಎಂದು ಭಾವುಕರಾಗಿ ನುಡಿದರು. ದುರಂತ ಏನೆಂದರೆ, ಈ 50 ದಿನಗಳ ಒಳಗೆ 100 ಕ್ಕಿಂತಲೂ ಅಧಿಕ ಬಡ ಭಾರತೀಯ ನೇಣಿಗೋ ಆತ್ಮಹತ್ಯೆಗೋ ಶರಣಾದರು. ನೋಟನ್ನು ಬದಲಿಸಿಕೊಳ್ಳುವುದಕ್ಕಾಗಿ ಬ್ಯಾಂಕ್‍ನ ಎದುರು ಬಿಸಿಲಲ್ಲಿ ಕಾದು ಕಾದು ಸುಸ್ತಾದರು. ಈ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ತೀವ್ರ ಅಡ್ಡಪರಿಣಾಮವನ್ನು ಬೀರಿದ ಕ್ರಮ ಇದು. ಈ ದೇಶದ ಆರ್ಥಿಕ ತಜ್ಞರು ಆ ನೋಟ್ ಬ್ಯಾನನ್ನು ತುಘಲಕ್ ನೀತಿ ಎಂದು ಖಂಡಿಸಿದರು. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ನಾಶವಾದುವು. ಉದ್ಯೋಗ ಸೃಷ್ಟಿ ನಾಸ್ತಿಯಾಯಿತು. ಇರುವ ಉದ್ಯೋಗಗಳೂ ನಾಶದ ಭೀತಿಗೆ ಒಳಗಾದುವು. ವ್ಯಾಪಾರ-ವಹಿವಾಟುಗಳು ತೀರಾ ತೀರಾ ತಳಮಟ್ಟಕ್ಕೆ ಕುಸಿದುವು. ಜನರು ಕಂಗಾಲಾದರು. ವಿಷಾದ ಏನೆಂದರೆ, 50 ದಿನಗಳ ವಾಯಿದೆಯನ್ನು ನೀಡಿದ್ದ ಪ್ರಧಾನಿಯವರು ಬಳಿಕ ಆ ವಾಯಿದೆಯನ್ನೇ ಮರೆತರು. ನೋಟ್‍ಬ್ಯಾನ್‍ನಿಂದ ಗಳಿಸಿದ್ದೇನು ಅನ್ನುವ ಬಹುಮುಖ್ಯ ಪ್ರಶ್ನೆಯನ್ನು ಕಾಶ್ಮೀರದ ಕಲ್ಲು, ನಕ್ಸಲ್ ಭಯೋತ್ಪಾದನೆ ಇತ್ಯಾದಿಗಳ ಮೂಲಕ ತೇಲಿಸಿ ಬಿಡತೊಡಗಿದರು. ನೋಟ್‍ಬ್ಯಾನ್ ಮಾಡುವಾಗ ಅವರು ಈ ಕಾರಣಗಳನ್ನು ನೀಡಿಯೇ ಇರಲಿಲ್ಲ. ಈ ಕಾರಣಗಳೂ ಸುಳ್ಳಾದಾಗ ಪ್ರಶ್ನಿಸುವುದನ್ನೇ ದೇಶದ್ರೋಹ ಅಂದರು. ಆದ್ದರಿಂದಲೇ, ಅವರ ಪ್ರಾಮಾಣಿಕತೆಯ ಬಗ್ಗೆ ಸಂದೇಹ ಮೂಡುವುದು. ನಿಜವಾಗಿ, ಸಾಮಾನ್ಯ ನಾಗರಿಕರಿಗೆ ಒಳಿತು ಮಾಡುವ ಉದ್ದೇಶದಿಂದ ಅವರು ನೋಟ್‍ಬ್ಯಾನ್ ಮಾಡಿರಲಿಲ್ಲ. ಬದಲು ಅಂಬಾನಿ, ಅದಾನಿ, ಮಲ್ಯ, ಮೋದಿ ಮತ್ತು ಬಿಜೆಪಿಗೆ ಹಣ (ಪಾರ್ಟಿ ಫಂಡ್) ಒದಗಿಸುವ ಆಪ್ತರಿಗೆ ನೆರವಾಗುವ ಉದ್ದೇಶವೇ ನೋಟ್‍ಬ್ಯಾನ್‍ನ ಮುಖ್ಯ ಗುರಿಯಾಗಿತ್ತು. ಇದೇವೇಳೆ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಭಾರತೀಯ ಖಾತೆಗೆ ಜಮಾ ಮಾಡುವ ಹೊಣೆಗಾರಿಕೆಯಿಂದ ಅವರು ನುಣುಚಿಕೊಂಡರು. ಬಹುಶಃ, ಇದಕ್ಕೂ ಈ ಉದ್ಯಮಿಗಳೇ ಕಾರಣ ಎಂದೇ ಹೇಳಬೇಕಾಗುತ್ತದೆ. ವಿದೇಶಿ ಬ್ಯಾಂಕ್‍ಗಳಲ್ಲಿ ಕಪ್ಪು ಹಣವಿರುವುದು ಬಡ ಭಾರತೀಯರದ್ದಲ್ಲ. ಬಿಜೆಪಿಗೆ ಹಣ ಒದಗಿಸುವ ಉದ್ಯಮಿಗಳದ್ದು. ಒಂದುವೇಳೆ, ಅದನ್ನು ಭಾರತಕ್ಕೆ ಮರಳಿಸುವುದೆಂದರೆ, ಈ ಉದ್ಯಮಿಗಳನ್ನು ಎದುರು ಹಾಕಿಕೊಳ್ಳುವುದು ಎಂದೇ ಅರ್ಥ. ಹೀಗೆ ಎದುರು ಹಾಕಿಕೊಂಡರೆ ಮುಂದೆ ಪಾರ್ಟಿ ಫಂಡ್ ಅಲಭ್ಯವಾಗುತ್ತದೆ. ಫಂಡ್ ಅಲಭ್ಯವಾದರೆ ಚುನಾವಣೆಯನ್ನು ಎದುರಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಜನರಿಗೆ ವಚನಭಂಗ ಆದರೂ ತೊಂದರೆಯಿಲ್ಲ, ಶ್ರೀಮಂತರಿಗೆ ತೊಂದರೆಯಾಗಬಾರದು ಎಂಬ ನಿಲುವಿಗೆ ಅವರು ಅಂಟಿಕೊಂಡರು.

ಸದ್ಯ, ಈ ದೇಶದಲ್ಲಿ ಕಳೆದ 40 ವರ್ಷಗಳಲ್ಲೇ ಅತ್ಯಂತ ಗರಿಷ್ಠತಮ ನಿರುದ್ಯೋಗ ಸಮಸ್ಯೆಯಿದೆ. ಹಾಗೆಯೇ ಕೇಂದ್ರ ಸರಕಾರದ ಆಡಳಿತಾಂಗದಲ್ಲಿ 77 ಲಕ್ಷ ಹುದ್ದೆಗಳು ಖಾಲಿ ಇವೆ. ಪ್ರತಿ ಅರ್ಧ ಗಂಟೆಗೊಮ್ಮೆ ರೈತ ಆತ್ಮಹತ್ಯೆ ಮಾಡಿಕೊಳ್ಳುವಾಗ, ಇನ್ನೊಂದೆಡೆ ರೈತರಿಗೆ ವಿಮೆ ನೀಡುವ ಕಂಪೆನಿ 10 ಸಾವಿರ ಕೋಟಿ ಲಾಭವನ್ನು ತೋರಿಸಿದೆ. ಈ ಹಿಂದೆ 250 ರೂಪಾಯಿಗೆ ಅಗತ್ಯದ ಎಲ್ಲ ಟಿವಿ ಚಾನೆಲ್‍ಗಳನ್ನು ವೀಕ್ಷಿಸುತ್ತಿದ್ದ ಸಾಮಾನ್ಯ ಭಾರತೀಯನೊಬ್ಬ ಇವತ್ತು ಅವೇ ಚಾನೆಲ್‍ಗಳನ್ನು ಪಡೆಯಬೇಕಾದರೆ ಕೇಬಲ್ ನಿರ್ವಾಹಕರಿಗೆ ದುಪ್ಪಟ್ಟು ಹಣ ಪಾವತಿಸಬೇಕಾಗಿದೆ. ಬೋಫೋರ್ಸ್‍ಗಿಂತ ಬಹುದೊಡ್ಡ ಹಗರಣವಾಗಿ ರಫೇಲ್ ಇವತ್ತು ದೇಶದ ಮುಂದಿದೆ. 1990ರ ಬಳಿಕ ಅತ್ಯಂತ ಹೆಚ್ಚಿನ ಅಶಾಂತ ಸ್ಥಿತಿಗೆ ಕಾಶ್ಮೀರ ತುತ್ತಾಗಿದೆ. ಅತ್ಯಂತ ಬಿಗಿ ಭದ್ರತೆಯ ಪುಲ್ವಾಮದಲ್ಲೇ ನಮ್ಮ 40 ಯೋಧರ ಪ್ರಾಣಾಹುತಿ ನಡೆದಿದೆ. ಗುಂಪುಹತ್ಯೆ, ಥಳಿತ, ಅತ್ಯಾಚಾರ, ಆಹಾರ ವಸ್ತುಗಳ ಬೆಲೆ ಏರಿಕೆ, ತೈಲ ಬೆಲೆಯಲ್ಲಿ ಹೆಚ್ಚಳ ಇತ್ಯಾದಿಗಳಿಗೆ ತಡೆ ಹಾಕಲು ಪ್ರಧಾನಿಯವರಿಗೆ ಸಾಧ್ಯವಾಗಿಲ್ಲ. ನಿಜವಾಗಿ, ಮೋದಿಯವರು ಚುನಾವಣಾ ಸಭೆಗಳನ್ನು ಉದ್ದೇಶಿಸಿ ಈ ವಿಷಯಗಳ ಬಗ್ಗೆ ತನ್ನ ಸ್ಪಷ್ಟೀಕರಣಗಳನ್ನು ನೀಡಬೇಕಾಗಿತ್ತು. ತಾನೆಷ್ಟು ಉದ್ಯೋಗವನ್ನು ಸೃಷ್ಟಿಸಿದೆ, ಉಜ್ವಲ ಯೋಜನೆ ಎಷ್ಟು ಯಶಸ್ವಿ, ತಾನೇ ವಿರೋಧಿಸಿದ್ದ ಆಧಾರ್, ಎಫ್‍ಡಿಎ, ಸಬ್ಸಿಡಿ ಹಣ ನೇರ ವರ್ಗಾವಣೆ ಇತ್ಯಾದಿಗಳಲ್ಲಿ ನಿಲುವು ಬದಲಿಸಿದ್ದು ಯಾತಕ್ಕಾಗಿ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕಿತ್ತು. ತನ್ನ ಜನಪರ ಕಾರ್ಯಕ್ರಮಗಳನ್ನು ಜನರ ಮುಂದಿಡುವುದು ಮತ್ತು ಆ ಮೂಲಕ ಮತ್ತೊಂದು ಅವಧಿಗೆ ಚುನಾಯಿಸುವಂತೆ ಕೇಳಿಕೊಳ್ಳುವುದು- ಇದು ಮೋದಿ ಎಂದಲ್ಲ ಯಾವುದೇ ಆಡಳಿತ ಪಕ್ಷದ ಸಹಜ ಆಯ್ಕೆಯಾಗಬೇಕು. ಮೋದಿಯವರು ಹೀಗೆ ಮಾಡುತ್ತಿಲ್ಲ ಎಂದಾದರೆ ಅವರಲ್ಲಿ ಹೇಳಿಕೊಳ್ಳುವುದಕ್ಕೆ ಸಾಧನೆಗಳಿಲ್ಲ ಎಂದೇ ಅರ್ಥ. ಕಳೆದ 5 ವರ್ಷಗಳಲ್ಲಿ ಅವರ ಪ್ರಮುಖ ಸಾಧನೆ ಎಂದರೆ ಮಾತು ಮಾತ್ರ. ಒಳ್ಳೆಯ ಭಾಷಣಕಾರರಾಗಿ ಅವರು ಕಳೆದ 5 ವರ್ಷಗಳಲ್ಲಿ ದೇಶದ ಗಮನ ಸೆಳೆದರು. ಧಾರಾಳ ವಿದೇಶ ಸುತ್ತಿದರು. ವಿರೋಧ ಪಕ್ಷಗಳನ್ನು ತಮಾಷೆ ಮಾಡಿದರು. ಮಾತ್ರವಲ್ಲ, ನೆರೆಯ ಬಹುತೇಕ ಎಲ್ಲ ರಾಷ್ಟ್ರಗಳೊಂದಿಗೆ ದ್ವೇಷ ಕಟ್ಟಿಕೊಂಡರು. ಎಲ್ಲಿಯವರೆಗೆಂದರೆ, ಮಸೂದ್ ಅಝರನ ವಿಷಯದಲ್ಲಿ ಚೀನಾದ ಬೆಂಬಲ ಗಳಿಸುವುದಕ್ಕೂ ಅವರು ವಿಫಲರಾದರು. ನಿಜವಾಗಿ,

ದೇಶದ ಪ್ರಮುಖ 100 ಮಂದಿ ಚಿತ್ರ ನಿದೇರ್ಶಕರ ವಿನಂತಿಗೆ ಬಲ ಬರುವುದು ಈ ಎಲ್ಲ ಕಾರಣಗಳಿಂದಲೇ. ಅವರು ನಿಜವನ್ನೇ ಹೇಳಿದ್ದಾರೆ. ನರೇಂದ್ರ ಮೋದಿ ವಿಫಲ ಪ್ರಧಾನಿ.