ಎಂಡೋ ಸಂತ್ರಸ್ತರ ಕೂಗು: ಕಿವುಡಾಗಿರುವ ಸರಕಾರ ಮತ್ತು ಪ್ರತಿಷ್ಠಿತ ನ್ಯೂಸ್ ಚಾನೆಲ್

0
1165

ತಮಿಳುನಾಡಿನ ತೂತುಕುಡಿಗೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಪ್ರದೇಶಕ್ಕೂ ನಡುವೆ ಸಾಂಸ್ಕøತಿಕ, ಭಾಷಿಕ ಮತ್ತು ¸ ಸಮಾಜಿಕವಾಗಿ ಯಾವ ಸಂಬಂಧವೂ ಇಲ್ಲ. ಎರಡೂ ಪ್ರದೇಶಗಳ ಜನರ ಭಾಷೆ ಬೇರೆ. ಆಹಾರ ಬೇರೆ. ರೀತಿ-ರಿವಾಜುಗಳು ಬೇರೆ. ಆದರೆ ಬಹುತೇಕ ದೂರುಗಳು ಒಂದೇ. ತೂತುಕುಡಿಯ ಜನರು ಭವಿಷ್ಯದಲ್ಲಿ ಎದುರಾಗಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಭಯಪಟ್ಟಿದ್ದರೆ, ಕೊಕ್ಕಡ ಪ್ರದೇಶದ ಜನರು ಆರೋಗ್ಯವನ್ನು ಕೆಡಿಸಿಕೊಂಡು ಹತಾಶರಾಗಿದ್ದಾರೆ . ತೂತುಕುಡಿಯಲ್ಲಿರುವ ಜಿಂದಾಲ್ ಒಡೆತನದ ತಾಮ್ರದ ಕಾರ್ಖಾನೆಯಿಂದ ಹೊರಬಿಡಲಾಗುವ ರಾಸಾಯನಿಕಗಳು ಅಲ್ಲಿಯ ಜನರ ಆತಂಕಕ್ಕೆ ಕಾರಣವಾಗಿದ್ದರೆ, ಕೊಕ್ಕಡದಲ್ಲಿ ಎಂಡೋಸಲ್ಫಾನ್ ಎಂಬ ರಾಸಾಯನಿಕವು 3762ಕ್ಕಿಂತಲೂ ಅಧಿಕ ಮಂದಿಯ ಆರೋಗ್ಯವನ್ನೇ ಕೆಡಿಸಿಬಿಟ್ಟಿದೆ. ವರ್ಷದ ಹಿಂದೆ ಎಂಡೋಸಲ್ಫಾನ್ ಸಂತ್ರಸ್ತರ ಪ್ರತಿಭಟನೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯಲ್ಲಿ ಭಾಗಿಯಾದ ಸಂತ್ರಸ್ತರನ್ನು ಕಂಡು ನಾಡಿನ ಜನರು ಬಾವುಕರಾಗಿದ್ದರು. ರಾಸಾಯನಿಕವೊಂದು ಜನರನ್ನು ಈ ಮಟ್ಟದಲ್ಲಿ ಜೀವಚ್ಛವವಾಗಿಸಿಬಿಡಬಹುದೇ ಅನ್ನುವ ಆತಂಕಬೆರೆತ ಪ್ರಶ್ನೆಯೊಂದನ್ನು ಆ ಸಂದರ್ಭದಲ್ಲಿ ಎತ್ತಲಾಗಿತ್ತು. ಕೊಕ್ಕಡವೂ ಸೇರಿದಂತೆ ಆಸು-ಪಾಸು ಪ್ರದೇಶಗಳಲ್ಲಿ ವಿಶಾಲವಾಗಿ ಹರಡಿರುವ ಗೇರು ಮರಗಳಿಗೆ ಸರಕಾರಿ ಗೇರು ನಿಗಮವು ಹೆಲಿಕಾಫ್ಟರ್ ಮೂಲಕ ದಶಕಗಳ ಹಿಂದೆ ಸಿಂಪಡಿಸಿದ ಎಂಡೋಸಲ್ಫಾನ್ ಎಂಬ ರಾಸಾಯನಿಕವು ಆ ಬಳಿಕ ಒಂದು ತಲೆಮಾರನ್ನೇ ಅಂಗವೈಕಲ್ಯಕ್ಕೆ ದೂಡಿತು. ಕೈ-ಕಾಲು, ಕಣ್ಣು, ಮೂಗು, ಬಾಯಿ, ತಲೆ ಇತ್ಯಾದಿ ದೇಹದ ಯಾವ ಅಂಗಾಂಗಗಳೂ ಸ್ವಸ್ಥವಾಗಿಲ್ಲದ ಮತ್ತು ತೆವಳಿಕೊಂಡೋ ಅಥವಾ ಶಾಶ್ವತವಾಗಿ ಮಲಗಿಕೊಂಡೋ ಇರುವ ಸ್ಥಿತಿಯ ದೊಡ್ಡ ಮಟ್ಟದ ಸಂತ್ರಸ್ತರ ಗುಂಪನ್ನು ಅದು ಹುಟ್ಟು ಹಾಕಿತು.

ಎಂಡೋ ವಿರೋಧಿ ಹೋರಾಟ ಸಮಿತಿಯನ್ನು ಕಟ್ಟಿಕೊಂಡು ಸಂತ್ರಸ್ತರ ಕಲ್ಯಾಣಕ್ಕಾಗಿ ಹೋರಾಡುತ್ತಿರುವ ಶ್ರೀಧರ್ ಗೌಡ ಎಂಬವರೂ ಸ್ವತಃ ಎಂಡೋಸಲ್ಫಾನ್‍ನ ಸಂತ್ರಸ್ತರಾಗಿದ್ದಾರೆ. ವಿಶೇಷ ಏನೆಂದರೆ, ಪ್ರತಿಭಟನೆಯ ಕಾರಣಕ್ಕಾಗಿ ತೂತುಕುಡಿಯು ಸುದ್ದಿಯಲಿ ್ಲರುವ ಈ ಸಂದರ್ಭದಲ್ಲಿಯೇ ಎಂಡೋಸಲ್ಫಾನ್ ಸಂತ್ರಸ್ತರೂ ಕಾಕತಾಳೀಯವೆಂಬಂತೆ ಸುದ್ದಿಯಲ್ಲಿದ್ದಾರೆ. ಎಂಡೋ ಸಂತ್ರಸ್ತರಿಗೆ ಸಂಬಂಧಿಸಿ ಸುಮಾರು 8 ತಿಂಗಳ ಹಿಂದೆ ರಾಜ್ಯ ಸರಕಾರದ ನೇತೃತ್ವದಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿತ್ತು. ಸರಕಾರವನ್ನು ಹೊರತುಪಡಿಸಿ ಒಪ್ಪಂದದಲ್ಲಿ ಪಾಲ್ಗೊಂಡ ಇನ್ನೆರಡು ಸಂಸ್ಥೆಗಳೆಂದರೆ, ಸಾನಿಧ್ಯ ಎಂಬ ಸೇವಾ ಸಂಸ್ಥೆ ಮತ್ತು ಇನ್ನೊಂದು ಕನ್ನಡದ ನ್ಯೂಸ್ ಚಾನೆಲ್. ಒಪ್ಪಂದದ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆ ಯ ಉಜಿರೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಪಾಲನಾ ಕೇಂದ್ರವೊಂದನ್ನು ಸರಕಾರ ನಿರ್ಮಿಸಿ ಕೊಡಬೇಕು. ಸಾನಿಧ್ಯ ಸೇವಾ ಸಂಸ್ಥೆಯು ಈ ಪಾಲನಾ ಕೇಂದ್ರಕ್ಕೆ ಸಿಬ್ಬಂದಿಗಳ ವ್ಯವಸ್ಥೆ ಮಾಡುವುದು, ಫಿಸಿಯೋ ಥೆರಪಿ ಮತ್ತು ಸಂತ್ರಸ್ತರಿಗೆ ಸೂಕ್ತ ತರಬೇತಿಯ ವ್ಯವಸ್ಥೆ ಮಾಡುವ ಹೊಣೆಯನ್ನು ವಹಿಸಿಕೊಂಡಿತ್ತು. ಟಿ.ವಿ. ಚಾನೆಲ್ ಈ ಸಂತ್ರಸ್ತರ ಪಾಲನೆಗಾಗಿ 1 ಕೋಟಿ ರೂಪಾಯಿಯನ್ನು ನೀಡುವ ವಾಗ್ದಾನವನ್ನು ನೀಡಿತ್ತು.

ಎಂಡೋಪೀಡಿತರಿಗಾಗಿ 2012ರಲ್ಲಿ ಕೈಗೊಂಡ ಅಭಿಯಾನದಲ್ಲಿ ಈ ಮೊತ್ತವನ್ನು ¸ ಸಂಗ್ರಹಿಸಲಾಗಿತ್ತು. ವಿಷಾದ ಏನೆಂದರೆ, ಒಪ್ಪಂದದ ಆಚೆಗೆ ಯಾವ ಬೆಳವಣಿಗೆಗಳೂ ಆಗಿಲ್ಲ. 40 ಸಂತ್ರಸ್ತರ ಪಾಲಿಗೆ ಅಭಯ ಕೇಂದ್ರವಾಗ¨ ಬೇಕಿದ್ದ ಪಾಲನಾ ಕೇಂದ್ರಕ್ಕೆ ಕಟ್ಟಡವೇ ಇನ್ನೂ ಸಿದ್ಧಗೊಂಡಿಲ್ಲ. ಜಿಲ್ಲಾ ಆರೋಗ್ಯ ಅಧಿಕಾರಿಯವರು ಕಟ್ಟಡ ಸಿದ್ಧಗೊಂಡಿದೆ ಮತ್ತು ಚಾನೆಲ್ ಸಹಕರಿಸುತ್ತಿಲ್ಲ ಎನ್ನುವಾಗ ಎಂಡೋ ವಿರೋಧಿ ಹೋರಾಟ ಸಮಿತಿಯ ಶ್ರೀಧರ್ ಗೌಡರು ಸರಕಾರ ಮತ್ತು ಚಾನೆಲ್ ಎರಡನ್ನೂ ವಿಳಂಬಕ್ಕೆ ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ. ಇದು ಎಂಡೋ ಸಂತ್ರಸ್ತರ ಸದ್ಯದ ಸ್ಥಿತಿಗತಿ. ಸುಮಾರು ಎರಡು ದಶಕಗಳ ಹಿಂದೆ ಗೇರು ಕೃಷಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಸರಕಾರ ಸಿಂಪಡಿಸಿದ ರಾಸಾಯನಿಕವೊಂದು ಎರಡು ದಶಕಗಳ ಬಳಿಕವೂ ಜನರನ್ನು ಬಿಡದೇ ಕಾಡುತ್ತಿರುವ ಈ ಬಿಂದುವಿನಲ್ಲಿ ನಿಂತು, ಒಮ್ಮೆ ತೂತುಕುಡಿಯನ್ನೂ ಇನ್ನೊಮ್ಮೆ ನಮ್ಮ ವ್ಯವಸ್ಥೆಯನ್ನೂ ಎದುರಿಟ್ಟು ನೋಡಿ. ಎಂಡೋಸಲ್ಫಾನನ್ನು ಸಿಂಪಡಿಸಲು ಅನುಮತಿ ನೀಡಿದ ಸರಕಾರ ಈಗಿಲ್ಲ. ಆಗಿನ ಮುಖ್ಯಮಂತ್ರಿಯಿಂದ ಹಿಡಿದು ಸಚಿವ ಸಂಪುಟದವರೆಗೆ ಯಾರೂ ಇವತ್ತು ಅದೇ ಹುದ್ದೆಯಲ್ಲಿಲ್ಲ. ಗೇರು ನಿಗಮದ ಅಧಿಕಾರಿ ಬದಲಾಗಿದ್ದಾರೆ. ಎಂಡೋಸಲ್ಫಾನ್ ಸಿಂಪಡಿಸಲು ಬಳಸಲಾದ ಹೆಲಿಕಾಫ್ಟರ್ ಸೇವೆಯಿಂದ ನಿವೃತ್ತವಾಗಿದೆ. ಒಂದು ರೀತಿಯಲ್ಲಿ, ಎಂಡೋ ಸಂತ್ರಸ್ತರ ಸ್ಥಿತಿಗೆ ನೇರ ಕಾರಣರಾದವರೆಲ್ಲ ತೆರೆಮರೆಗೆ ಸರಿದು ಅದಕ್ಕೆ ನೇರ ಹೊಣೆಗಾರರಲ್ಲದವರು ಇವತ್ತು ಅಧಿಕಾರ ಕೇಂದ್ರದಲ್ಲಿದ್ದಾರೆ. ಆದ್ದರಿಂದ, ಎಂಡೋ ಸಿಂಪಡಿಸಲು ಅನುಮತಿ ನೀಡಿದ ಅಧಿಕಾರಿಗಳಲ್ಲಿರಬ ಹುದಾದ ಅಪರಾಧಿ ಭಾವವು ಇವರಲ್ಲಿರುವುದಕ್ಕೆ ಸಾಧ್ಯವಿಲ್ಲ. ಈಗಿನ ಅಧಿಕಾರಿಗಳು ಮತ್ತು ಆಡಳಿತಗಾರರಿಗೆ ಇದೊಂದು ಕಾನೂನುನಾತ್ಮಕ ಸಂಗತಿಯೇ ಹೊರತು ಭಾವನಾತ್ಮಕವಾದುದಲ್ಲ. ನ್ಯಾಯವನ್ನು ಆಗ್ರಹಿಸಿ ಧರಣಿ ಕೂರುವ ಸಂತ್ರಸ್ತರನ್ನು ಆ ಕ್ಷಣಕ್ಕೆ ಅಲ್ಲಿಂದ ತೆರವುಗೊಳಿಸುವುದಷ್ಟೇ ಇವರ ಮುಖ್ಯ ಗುರಿ. ಸಂತ್ರಸ್ತರಿಗೆ ಕಟ್ಟಡ ನಿರ್ಮಿಸಿಕೊಡುವ ವಾಗ್ದಾನವನ್ನು 8 ತಿಂಗಳ ಬಳಿಕವೂ ಸರಕಾರ ಪೂರೈಸದಿರುವುದು, ವಾಗ್ದಾನಿತ ಮೊತ್ತವನ್ನು ಟಿವಿ ಚಾನೆಲ್ ನೀಡದೇ ಇರುವುದು ಮತ್ತು ಅಧಿಕಾರಿಗಳು ಇತರರತ್ತ ಬೆರಳು ತೋರಿಸಿ ಜಾರಿಕೊಳ್ಳುತ್ತಿರುವುದೆಲ್ಲ ಇದನ್ನೇ ಸೂಚಿಸುತ್ತದೆ.


ನಿಜವಾಗಿ, ಎಂಡೋಸಲ್ಫಾನ್ ಸಂತ್ರಸ್ತರು ನಮ್ಮೊಳಗನ್ನು ತಟ್ಟಬೇಕಾದುದು ಅವರ ಅಸಹಾಯಕ ಸ್ಥಿತಿಯ ಕಾರಣಕ್ಕಾಗಿ ಮಾತ್ರ ಅಲ್ಲ. ಆ ¸ ಸಂತ್ರಸ್ತರು ನಮ್ಮ ಪಾಲಿಗೆ ಬರೇ ಭಾವುಕ ರೂಪಗಳಾಗಬೇಕಾದವರೂ ಅಲ್ಲ. ಅವರು ಒಂದು ಎಚ್ಚರಿಕೆ. ನಮ್ಮ ಸರಕಾರಗಳ ಮೇಲೆ ನಾವು ಎಲ್ಲಿಯವರೆಗೆ ಮತ್ತು ಎಷ್ಟರವರೆಗೆ ವಿಶ್ವಾಸವನ್ನು ಇಡಬಹುದು ಎಂಬುದನ್ನು ಸಾರುವ ಸೂಚನಾ ಫಲಕ. ನಮ್ಮ ಪ್ರತಿನಿಧಿಗಳು ಷರತ್ತು ರಹಿತ ವಿಶ್ವಾಸಕ್ಕೆ ಯೋಗ್ಯರಲ್ಲ ಎಂಬುದನ್ನು ಗಟ್ಟಿಯಾಗಿ ಹೇಳುವ ತೋರುಗಲ್ಲೂ ಹೌದು. ಈ ಹಿನ್ನೆಲೆಯಲ್ಲಿಯೇ ನಾವು ತೂತುಕುಡಿ ಪ್ರತಿಭಟನೆಯನ್ನು ವಿಶ್ಲೇಷಿಸಬೇಕಾಗಿದೆ. ಜನರಿಂದ ಆಯ್ಕೆಯಾದವರು ಜನರ ಹಿತಕ್ಕೆ ವಿರುದ್ಧವಾಗಿ ಯಾವ ನಿರ್ಧಾರವನ್ನೂ ಕೈಗೊಳ್ಳಲಾರರು ಎಂದು ಮುಗ್ಧವಾಗಿ ನಂಬುವು ಕಾಲ ಇದಲ್ಲ. ಒಂದು ವೇಳೆ, ಇದು ನಿಜವೇ ಆಗಿದ್ದಿದ್ದರೆ ಎಂಡೋಸಲ್ಫಾನ್ ಸಿಂಪಡಿಸುವುದಕ್ಕಿಂತ ಮೊದಲೇ ಅದರ ಸಾಧಕ-ಬಾಧಕಗಳ ಕುರಿತು ನಮ್ಮ ಜನಪ್ರತಿನಿಧಿಗಳು ಅವಲೋಕನ ನಡೆಸುತ್ತಿದ್ದರು. ಗೇರು ಕೃಷಿಯ ಅಭಿವೃದ್ಧಿಗಿಂತ ಜನಹಿತ ಮುಖ್ಯವೆಂದು ಅವರು ತೀರ್ಮಾನಿಸುತ್ತಿದ್ದರು. ಆದರೆ ಇಂಥದ್ದೊಂದು ಅವಲೋಕನ ನಡೆಯುವುದು ಬಿಡಿ, ಎಂಡೋಸಲ್ಫಾನನ್ನು ಜನ ವಿರೋಧಿ ಎಂದು ಒಪ್ಪಿಕೊಳ್ಳುವುದಕ್ಕೂ ಆರಂಭದಲ್ಲಿ ಅವರು ತಯಾರಾಗಲೇ ಇಲ್ಲ. ಸಾಮಾನ್ಯವಾಗಿ, ಜನಪ್ರತಿನಿಧಿಗಳು ಕೊಕ್ಕಡದಂಥ ಅರಣ್ಯ ಪ್ರದೇಶಗಳಲ್ಲಿ ಮನೆ ಮಾಡಿ ವಾಸಿಸುವುದಿಲ್ಲ. ಅಲ್ಲದೇ ನೀತಿ- ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಭೆ ಸೇರುವುದೂ ನಗರಗಳಲ್ಲಿರುವ ಕಛೇರಿಗಳಲ್ಲಿ. ಅಲ್ಲಿ ಕೂತು ಅವರು ಹಳ್ಳಿಗಾಡಿನ ಮೇಲೆ ಕಾರ್ಖಾನೆಗಳನ್ನು ಹೇರುತ್ತಾರೆ. ತೂತುಕುಡಿಯಲ್ಲಿ ಆಗಿರುವುದೂ ಇದುವೇ. ಆದ್ದರಿಂದ, ನಗರ ಕೇಂದ್ರಿತ ಮತ್ತು ಕಾಪೆರ್Çರೇಟ್ ಪ್ರಭಾವಿತ ಚಿಂತನೆಗಳನ್ನೇ ಸಾರ್ವಕಾಲಿಕ ಸತ್ಯವೆಂಬಂತೆ ನಂಬುವುದರಿಂದ ನಮ್ಮ ಜನಪ್ರತಿನಿಧಿಗಳು ಅರ್ಥಾತ್ ಸರಕಾರ ಹೊರಬರಬೇಕು. ಯಾವುದೇ ಅಭಿವೃದ್ಧಿ ಯೋಜನೆಗಳ ಮೊದಲು ಜನಹಿತದ ಪರಾಮಾರ್ಶೆ ನಡೆಸಬೇಕು. ತೂತುಕುಡಿಯು ಇಂಥದ್ದೊಂದು ಸಂದೇಶವನ್ನು ಮತ್ತೊಮ್ಮೆ ನಮ್ಮನ್ನಾಳುವವರಿಗೆ ಬ ಲವಾಗಿಯೇ ಮುಟ್ಟಿಸಿದೆ. ಒಂದು ವೇಳೆ, ಇಂಥ ಪರಾಮಾರ್ಶೆ ನಡೆಯದೇ ಹೋದರೆ ಏನಾಗಬಹುದೆಂಬುದಕ್ಕೆ ಎಂಡೋಸಲ್ಫಾನ್ ಸಂತ್ರಸ್ತರು ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಉಜಿರೆಯಲ್ಲಿ ಇನ್ನೂ ಪ್ರಾರಂಭವಾಗದ ಎಂಡೋ ಪಾಲನಾ ಕೇಂದ್ರವು ಈ ಹಿನ್ನೆಲೆಯಲ್ಲಿ ಒಂದು ನಿಮಿತ್ತ ಮಾತ್ರ.