ಎಷ್ಟು ಗಂಟೆಗಳವರೆಗೆ ಚಲಾವಣೆಯಾದ ಮತಗಳ ಮೇಲೆ ಮತದಾನೋತ್ತರ ಸಮೀಕ್ಷೆಯು ಅವಲಂಬಿತವಾಗಿತ್ತು?  ಕುತೂಹಲಕಾರೀ ಜಿಜ್ಞಾಸೆ 

0
1618

ಏ. ಕೆ. ಕುಕ್ಕಿಲ

ಮತದಾನೋತ್ತರ ಸಮೀಕ್ಷೆ ಎಂಬುದು ಮತಗಳೆಲ್ಲ ಚಲಾವಣೆಯಾದ ಬಳಿಕ ಘೋಷಿಸಲಾಗುವ ಫಲಿತಾಂಶ ಎಂದೇ ಸಾಮಾನ್ಯ ನಂಬಿಕೆ. ಚಲಾವಣೆಯಾದ ಎಲ್ಲ  ಮತಗಳ  ಆಧಾರದಲ್ಲಿ ಲೆಕ್ಕಾಚಾರ, ಅಧ್ಯಯನ, ವಿಶ್ಲೇಷಣೆಗಳನ್ನು ನಡೆಸಿ ಮತದಾನೋತ್ತರ ಸಮೀಕ್ಷಾ ಫಲಿತಾಂಶವನ್ನು ನಿರ್ಣಯಿಸಲಾಗುತ್ತದೆ ಎಂದು ಜನರ೦ದುಕೊಂಡಿದ್ದಾರೆ. ಆದರೆ, ರಾಜ್ಯ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿ ಹೊರಬಿದ್ದ ಮತದಾನೋತ್ತರ ಸಮೀಕ್ಷೆಗಳು ಈ ಭಾವನೆಯನ್ನು ಸುಳ್ಳು ಮಾಡಿವೆ. ಸರಿಯಾಗಿ ಸಂಜೆ ಆರು ಗಂಟೆಯ ಹೊತ್ತಿಗೇ ಬಹುತೇಕ ಎಲ್ಲ ಸಂಸ್ಥೆಗಳೂ ಮತದಾನೋತ್ತರ ಸಮೀಕ್ಷೆಯನ್ನು ಪ್ರಕಟಿಸಿವೆ. ಹೀಗೆ, ಫಲಿತಾಂಶ ಪ್ರಕಟಿಸುವಾಗ ಕೆಲವು ಮತಗಟ್ಟೆಗಳಲ್ಲಿ ಇನ್ನೂ ಮತದಾನವೇ ಮುಗಿದಿರಲಿಲ್ಲ. ಏಳು ಗಂಟೆಯವರೆಗೆ ಮತದಾನ ನಡೆದ ಮತಗಟ್ಟೆಗಳು ಒಂದಕ್ಕಿಂತ ಅಧಿಕ ಇದ್ದುವು. ಮತದಾನ ಮುಗಿಯುವುದೇ ಆರು ಗಂಟೆಗೆ. ಹೀಗಿರುವಾಗ, ಯಾವುದೇ ಒಂದು ಸಂಸ್ಥೆ ಆರು ಗಂಟೆಗೇ ಮತದಾನೋತ್ತರ ಸಮೀಕ್ಷಾ ಫಲಿತಾಂಶ ಪ್ರಕಟಿಸುವುದೆಂದರೆ ಏನರ್ಥ? ಮತದಾನೋತ್ತರ ಸಮೀಕ್ಷೆ ಎಂಬ ಪದಗುಚ್ಛದಲ್ಲಿಯೇ ಮತಚಲಾವಣೆಯಾದ ಬಳಿಕದ ಸಮೀಕ್ಷೆ ಎಂಬ ಅರ್ಥ ಇದೆ. ಚಲಾವಣೆಯಾದ ಮತಗಳ  ಆಧಾರದ ಮೇಲೆ ಕೂಡಿಕೆ- ಕಳೆಯುವಿಕೆ ನಡೆಸಿ, ವಿಶ್ಲೇಷಣೆಗೆ ಒಳಪಡಿಸಿ ಫಲಿತಾಂಶವನ್ನು ನಿರ್ಣಯಿಸುದಕ್ಕೆ ಎಷ್ಟೇ ಪರಿಣತ ತಂಡವೇ ಇದ್ದರೂ ಒಂದೆರಡು ಗಂಟೆಯ ಅವಧಿಯಾದರೂ ಬೇಕೇ ಬೇಕು. ರಾಜ್ಯಾದ್ಯಾ೦ತ  ಹರಡಿರುವ ನೂರಾರು ಮತಗಟ್ಟೆಗಳಲ್ಲಿ ಚಲಾವಣೆಯಾದ ಮತಗಳು ಮತ್ತು ಮತದಾರರ ಒಲವನ್ನು ಅಧ್ಯಯನಕ್ಕೆ ಒಳಪಡಿಸಿ ಖಣಿ ಹೇಳುವುದಕ್ಕೆ ಸಮಯದ ಅಗತ್ಯವಂತೂ ಖಂಡಿತ ಇದೆ. ಹೀಗಿರುವಾಗ ಮತದಾನದ ಅವಧಿ ಮುಗಿದ ತಕ್ಷಣ ಮತದಾನೋತ್ತರ ಸಮೀಕ್ಷಾ ಫಲಿತಾಂಶ ಪ್ರಕಟಿಸುವುದು ಹೇಗೆ? ಆ ಸಮೀಕ್ಷೆ ನಿಜಕ್ಕೂ ಆರು ಗಂಟೆಯವರೆಗಿನ ಮತ ಚಲಾವಣೆಯನ್ನು ಆಧರಿಸಿ ನಡೆದಿರುವುದೇ ಅಥವಾ ಮಧ್ಯಾಹ್ನದ ತನಕದ ಮತಚಲಾವಣೆಯನ್ನು ಆಧರಿಸಿ ನಡೆದಿರುವುದೇ? ಯಾವ ಆಂಗ್ ಲ್ ನಿಂದ ನೋಡಿದರೂ ಈ ಮತದಾನೋತ್ತರ ಸಮೀಕ್ಷೆಯು ಮಧ್ಯಾಹ್ನದ ಒಂದು ಅಥವಾ ಎರಡು ಗಂಟೆಯ ಒಳಗೆ ಚಲಾವಣೆಯಾದ ಮತವನ್ನು ಆಧರಿಸಿಯೇ ನಡೆಸಲಾಗಿದೆ ಎಂದೇ ಅನಿಸುತ್ತದೆ. ಬಹುಶಃ, ಸಮೀಕ್ಷೆ ನಡೆಸುವ ಸಂಸ್ಥೆಗಳ ನಡುವಿನ ಪೈಪೋಟಿಯೇ ಈ ತುರ್ತಿಗೆ ಕಾರಣವಾಗಿರಬಹುದು. ಸಮೀಕ್ಷಾ ಫಲಿತಾಂಶವನ್ನು ಪ್ರಕಟಿಸುವಲ್ಲಿ ತಾನೇ ಮೊದಲಿಗನಾಗಬೇಕು ಎಂಬ ಧಾವಂತ ಹೀಗಾಗಲು ಕಾರಣವಾಗಿರಬೇಕು. ಆದ್ದರಿಂದಲೇ, ರಾಜ್ಯ ವಿಧಾನಸಭೆಗೆ ನಡೆಸಲಾದ ಚುನಾವಣೆಯ ಮತದಾನೋತ್ತರ ಸಮೀಕ್ಷೆಯ ಮೇಲೆ ಭರವಸೆ ಇಡುವುದಕ್ಕಿಂತ ಮಂಗಳವಾರದ ಮೇಲೆಯೇ ಹೆಚ್ಚಿನವರು ಭರವಸೆ ಇಟ್ಟಿರುವುದು. ಸಮೀಕ್ಷೆ ಬಹಿರಂಗವಾದ ಬಳಿಕವೂ ಬಿಜೆಪಿಯಲ್ಲಿ ಜೀವಕಳೆ ಕಾಣಿಸದೆ ಇರುವುದಕ್ಕೂ ಇದುವೇ ಕಾರಣವಾಗಿರಬಹುದು.