ಕರಾವಳಿ ಕರ್ನಾಟಕದಲ್ಲಿ ಕಾರ್ಮಿಕ ಹೋರಾಟಗಳೇಕೆ ಓಟು ಕೊಡುತ್ತಿಲ್ಲ?

0
1238

ಬೀಡಿ ಕಾರ್ಮಿಕರಿಗೆ ಬೋನಸ್ ಸಿಗುವ ಸಮಯದಲ್ಲಿ ಬೀಡಿ ಬ್ರಾಂಚ್ ನ ಪಕ್ಕ ಕಮ್ಯುನಿಸ್ಟ್ ಪಕ್ಷದ ಕಾರ್ಮಿಕ ಸಂಘಟನೆಯ ಸದಸ್ಯರು 50-100 ರೂಪಾಯಿ ಸಂಗ್ರಹಿಸುವುದನ್ನು ನೋಡಿ ಬೆಳೆದವ ನಾನು .ಈಗಲೂ ಅದು ಮುಂದುವರಿದಿದೆ. ಬೀಡಿ ಕಾರ್ಮಿಕರ ಸಮಸ್ಯೆಯೂ ಸೇರಿದಂತೆ ದುಡಿಯುವ ವರ್ಗದ ಬೇಡಿಕೆಗಳಿಗೆ ದೊಡ್ಡ ಮಟ್ಟದ ಧ್ವನಿಯನ್ನು ನೀಡುವಲ್ಲಿ ಕಮ್ಯುನಿಸ್ಟ್ ಪಕ್ಷಗಳು ಮುಂಚೂಣಿಯಲ್ಲಿವೆ. ಬೀಡಿ ಎಲೆಗೆ ಪ್ರಸಿದ್ಧವಾಗಿರುವ ಮಹಾರಾಷ್ಟ್ರದ ಗಡ್ ಚೆರೋಕಿ ಜಿಲ್ಲೆಯ 48 ಗ್ರಾಮಗಳ ಮಂದಿ ಮಧ್ಯವರ್ತಿಗಳನ್ನು ದೂರ ಇಡುವುದಕ್ಕಾಗಿ ಕಳೆದ ವರ್ಷ ಒಂದು ಸಮಿತಿಯನ್ನು ರಚಿಸಿದರು.

ಬೀಡಿ ಎಲೆಯನ್ನು ಸಂಗ್ರಹಿಸಿ ನೇರವಾಗಿ ಬೀಡಿ ಕಂಪನಿಗಳಿಗೆ ಮಾರಾಟ ಮಾಡುವ ತೀರ್ಮಾನ ಕೈಗೊಂಡರು. ಇದೊಂದು ದೊಡ್ಡ ಸಾಹಸ. ಕೊಟ್ಯಾ೦ತರ ವ್ಯವಹಾರದ ವಿಷಯ ಇದಾದುದರಿಂದ ಪ್ರಬಲ ಮಧ್ಯವರ್ತಿ ಗುಂಪಿನಿಂದ ಅನೇಕಾರು ಸವಾಲುಗಳನ್ನು ಗ್ರಾಮಸ್ಥರು ಎದುರಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕರ ಪರ ನಿಂತವರು ಇದೇ ಕಮ್ಯುನಿಸ್ಟ್ ಪಕ್ಷಗಳ ಕಾರ್ಮಿಕ ಸಂಘಟನೆಗಳ ಸದಸ್ಯರು. ಆದರೂ ಚುನಾವಣೆಯ ಸಮಯದಲ್ಲಿ ಇಂಥ ಹೋರಾಟಗಳು ಕಮ್ಯುನಿಸ್ಟ್ ಪಕ್ಷಗಳಿಗೆ ಯಾಕೆ ಓಟಾಗಿ ಪರಿವರ್ತನೆ ಆಗುವುದಿಲ್ಲ? ವಿಶೇಷವಾಗಿ ಬೀಡಿ ಕಾರ್ಮಿಕರು ಹೆಚ್ಚಿರುವ ಕರಾವಳಿ ಕರ್ನಾಟಕದಲ್ಲಿ ಈ ಪ್ರಶ್ನೆ ಅತ್ಯಂತ ಪ್ರಸ್ತುತ. ಮೂರು ದಶಕಗ ಹಿಂದೆ ಓರ್ವ ಪ್ರತಿನಿಧಿಯನ್ನು ವಿಧಾನ ಸಭೆಗೆ ಕಳುಹಿಸಿದ್ದನ್ನು ಬಿಟ್ಟರೆ ಈ ಜಿಲ್ಲೆ ಎಡ ಪಕ್ಷಗಳನ್ನು ಅಸ್ಪೃಶ್ಯವಾಗಿ ಕಂಡದ್ದೇ ಹೆಚ್ಚು. ಆದರೆ, ಇಂಥ ಹೋರಾಟದಲ್ಲಿ ಯಾವ ಆಸಕ್ತಿಯನ್ನೂ ತೋರದ ಬಿಜೆಪಿಯು ಕರಾವಳಿ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ರಾಜಕೀಯ ಗೆಲುವನ್ನು ಸಾಧಿಸಿದೆ. ಯಾಕೆ ಹೀಗೆ?

ಏ. ಕೆ. ಕುಕ್ಕಿಲ