ಕಾಂಗ್ರೆಸ್ ನ ಗೆಲ್ಲುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಣೆಯಾಗುತ್ತಿರುವ ಮುಸ್ಲಿಮರು ಮತ್ತು ವಾಸ್ತವ 

0
3184
ಏ. ಕೆ. ಕುಕ್ಕಿಲ
ಬಿಜೆಪಿ ಮತ್ತು ಅದರ ಬೆಂಬಲಿಗ ಪರಿವಾರವು ಭಾರತದ ಚುನಾವಣಾ ರಾಜಕೀಯವನ್ನು ಹಿಂದೂ ಮತ್ತು ಮುಸ್ಲಿಂ ಎಂದು ಎಷ್ಟು ವ್ಯವಸ್ಥಿತವಾಗಿ ವಿಭಜಿಸಿಬಿಟ್ಟಿದೆ ಎಂಬುದಕ್ಕೆ ಮೊನ್ನೆ ಕಾಂಗ್ರೆಸ್ ಬಿಡುಗಡೆಗೊಳಿಸಿರುವ ಅಭ್ಯರ್ಥಿಗಳ ಪಟ್ಟಿಯೇ ಉತ್ತಮ ಉದಾಹರಣೆ. ಕಾಂಗ್ರೆಸ್ ನ ಗೆಲ್ಲುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಸ್ಲಿಮರ ಸಂಖ್ಯೆ ಚುನಾವಣೆಯಿಂದ ಚುನಾವಣೆಗೆ ಕಡಿಮೆಯಾಗುತ್ತಲೇ ಬರುತ್ತಿದೆ. ನಿಜವಾಗಿ, ರಾಜ್ಯದ ಜನಸಂಖ್ಯೆಯಲ್ಲಿ ದಲಿತ ಸಮುದಾಯ ಮೊದಲ ಸ್ಥಾನದಲ್ಲಿದ್ದರೆ, ಮುಸ್ಲಿಮರು  ದ್ವಿತೀಯ ಸ್ಥಾನದಲ್ಲಿದ್ದಾರೆ. ದಲಿತ ಸಮುದಾಯಕ್ಕಾದರೋ (ಪರಿಶಿಷ್ಟ ಜಾತಿ ಮತ್ತು ಪಂಗಡ) 51 ಕ್ಷೇತ್ರಗಳು ಮೀಸಲಾಗಿ ಇವೆ. ಅಂದರೆ, ದಲಿತ ಸಮುದಾಯಕ್ಕೆ ಸೇರಿದ 51 ಜನಪ್ರತಿನಿಧಿಗಳು ವಿಧಾನಸಭೆ ಪ್ರವೇಶಿಸುವುದು ಗ್ಯಾರಂಟಿ. ಆದರೆ, ಮುಸ್ಲಿಂ ಅಭ್ಯರ್ಥಿಗಳ ಪಾಲಿಗೆ ಇಂಥ ಯಾವ ಗ್ಯಾರಂಟಿಯೂ ಇಲ್ಲ. ಕಾಂಗ್ರೆಸ್ ಈ ಬಾರಿ 15ರಷ್ಟು ಮುಸ್ಲಿಂ ಅಭ್ಯರ್ಥಿಗಳಿಗೆ ಅವಕಾಶ ನೀಡಿದೆಯಾದರೂ ಅವರೆಲ್ಲ ಆರಿಸಿ ಬರುತ್ತಾರೋ ಇಲ್ಲವೋ ಅನ್ನುವುದೂ ಗೊತ್ತಿಲ್ಲ. ಒಂದು ಕಡೆ ಬಿಜೆಪಿಯು, ಮುಸ್ಲಿಮರನ್ನು ಅಭ್ಯರ್ಥಿಗಳಾಗಿ ಪರಿಗಣಿಸುವುದೇ ಇಲ್ಲ ಎಂದು ಬಹಿರಂಗವಾಗಿ ಸಾರುತ್ತಲೇ, ಆ ಮೂಲಕ ಇನ್ನೊಂದು ಕಡೆ, ಮುಸ್ಲಿಂ ಅಭ್ಯರ್ಥಿಗಳಿಗೆ ಹಿಂದೂಗಳು ಮತ ಚಲಾಯಿಸಲಾರರು ಎಂಬ ಪರೋಕ್ಷ ಸೂಚನೆಯನ್ನು ಕೊಟ್ಟು ಮತದಾರರನ್ನು ಹಿಂದೂ ಮುಸ್ಲಿಂ ಆಗಿ ವಿಭಜಿಸುವಲ್ಲಿ ಯಶಸ್ಸು ಕಾಣುತ್ತಿದೆ. ಅದರ ಪರಿಣಾಮ ನಿಧಾನಕ್ಕೆ ಕಾಂಗ್ರೆಸ್ ಪಕ್ಷದ ಮೇಲೂ ಆಗತೊಡಗಿದೆ. ಮುಸ್ಲಿಂ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ ಕಾಂಗ್ರೆಸ್ ನ ಹಿಂದೂ ಬೆಂಬಲಿಗರು ಮತ ಹಾಕಲಾರರು ಅನ್ನುವ ಭಯವೊಂದು ಕಾಂಗ್ರೆಸ್ ನಲ್ಲಿ ಬಲಪಡೆಯತೊಡಗಿದೆ. ಆದರಿಂದಲೇ, ಅದರ ಗೆಲ್ಲುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಸ್ಲಿಮರ ಹೆಸರು ನಿಧಾನಕ್ಕೆ ಕಡಿಮೆಯಾಗತೊಡಗಿದೆ. ಇದು ಅತ್ಯಂತ ಗಂಭೀರ ಬೆಳವಣಿಗೆ ಮತ್ತು ಇದು, ಜಾತ್ಯತೀತ ಭಾರತದಲ್ಲಿ ಬಿಜೆಪಿ ಮತ್ತು ಪರಿವಾರದ ಅತಿದೊಡ್ಡ ಗೆಲುವು. ಈಗ ಮುಸ್ಲಿಮರ ಮುಂದಿರುವ ಸಾಧ್ಯತೆ ಏನೆಂದರೆ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಇರುವಂತೆಯೇ ಮುಸ್ಲಿಮರಿಗೂ ಜನಸಂಖ್ಯಾಧಾರಿತವಾಗಿ ಮೀಸಲಾತಿ ಒದಗಿಸುವಂತೆ ಒತ್ತಾಯಿಸುವುದು. ಅದಕ್ಕೆ ಅಗತ್ಯವಾಗಿರುವ ಸಾಂವಿಧಾನಿಕ ತಿದ್ದುಪಡಿಗೆ ವ್ಯವಸ್ಥೆಯ ಮೇಲೆ ಒತ್ತಡ ಹೇರುವುದು. ಕಾಂಗ್ರೆಸ್ ಅನ್ನು ಮುಸ್ಲಿಮರು ಬೆಂಬಲಿಸಬೇಕಾದರೆ, ಈ ಬೇಡಿಕೆಗೆ ಒಪ್ಪಿಕೊಳ್ಳುವಂತೆ ಷರತ್ತು ಮುಂದಿಡುವುದು. ಬಹುಶ, ಬಿಜೆಪಿಯ ವಿಭಜನವಾದಿ ರಾಜಕೀಯದಿಂದಾಗಿ ಉಂಟಾಗಿರುವ ಪರಿಸ್ಥಿಯನ್ನು ನಿಭಾಯಿಸುವುದಕ್ಕೆ ಸಧ್ಯ ಉಳಿದಿರುವ ದಾರಿ ಇದೊಂದೇ ಎಂದು ಅನಿಸುತ್ತಿದೆ. ಇಲ್ಲದಿದ್ದರೆ, ಮುಂದೊಂದು ದಿನ, ಅಸೆಂಬ್ಳಿ  ಮತ್ತು ಪಾರ್ಲಿಮೆಂಟುಗಳಲ್ಲಿ ಮುಸ್ಲಿಂ ಜನಪ್ರತಿನಿಧಿಗಳೇ ಇರಲಾರರು.