ಕೊಲ್ಲುವವರ ಮೂಲ ನೆಲೆ ಯಾಕೆ ಆ ಮಾತೃ ಸಂಘಟನೆಯ ಬುಡಕ್ಕೇ ಹೋಗಿ ನಿಲ್ಲುತ್ತದೆ?

ಶಕೀಲ್ ಅರಾ

ಭಯೋತ್ಪಾದನಾ ಚಟುವಟಿಕೆಗಳಲ್ಲಿ ಸಿಕ್ಕಿಬಿದ್ದ ಹಿಂದೂಗಳೆಲ್ಲರೂ ಆರೆಸ್ಸೆನೊಂದಿಗೆ ಸಂಬಂಧವಿದ್ದವರು ಎಂದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮಾತು ಆರೆಸ್ಸೆಸ್ಸಿಗರಿಗೆ ಅರಗುವ ವಿಷಯವಲ್ಲ. ಆದರೆ ವಾಸ್ತವನ್ನು ಕೆದಕಿದಾಗ ಹೊಂಡದಿಂದ ಹಿಡಿಯುವ ಮೀನುಗಳೆಲ್ಲ ಇಂತಹ ಕೆಸರನ್ನು ಅಂಟಿಸಿಕೊಂಡಿರುತ್ತವೆ ಎನ್ನುವುದನ್ನು ವಿರೋಧಿಸಲು ಸಾಧ್ಯವಿಲ್ಲ. ಸಂಘಪರಿವಾರಕ್ಕೆ ಸಂಬಂಧಿಸಿದವರಿಂದಾದ ಕೊಲೆ ಎರಡು ವರ್ಷಗಳ ಹಿಂದೆ ನೊಯಿಡದಲ್ಲಿ ಅಖ್ಲಾಕ್‍ನ ಹತ್ಯೆಯೊಂದಿಗೆ ಆರಂಭವಾಗಿದ್ದೇನೂ ಅಲ್ಲ. ಅದು ಗೌರಿಲಂಕೇಶ್ ಹತ್ಯೆಗೆ ಕೊನೆಯಾಗಿದೆ ಎಂದೂ ಹೇಳುವಂತಿಲ್ಲ. ಮಾಲೆಗಾಂವ್ ಸ್ಫೋಟದಲ್ಲಿ ಸಿಕ್ಕಿಬಿದ್ದಿದ್ದ ಸಾಧ್ವಿ ಯಾರು?, ಉಗ್ರವಾಗಿ ಮುಸ್ಲಿಮರ ವಿರುದ್ಧ ಎರಗುವ ಪ್ರಾಚಿ ಯಾರು? ಗೌರಿಹತ್ಯೆಯನ್ನು ನಾಯಿ ಸತ್ತಿರುವುದಕ್ಕೆ ಹೋಲಿಸುವ ಮುತಾಲಿಕ್ ಯಾರು? ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಗುಜರಾತ್‍ನಲ್ಲಿ ಮುಸ್ಲಿಮರ ಸಾಮೂಹಿಕ ಕಗ್ಗೊಲೆಯನ್ನು ಕಾರಿನಡಿಗೆ ಅಪ್ಪಚ್ಚಿಯಾಗುವ ನಾಯಿಮರಿಗಳ ಸ್ಥಿತಿಗೆ ತಂದು ನಿಲ್ಲಿಸಿದ ಈಗಿನ ಪ್ರಧಾನಿ ಮೋದಿ ಯಾರು? ಗೋಸಾಗಾಟ ಆರೋಪದಲ್ಲಿ ದನದ ವ್ಯಾಪಾರಿ ಹುಸೇನಬ್ಬರನ್ನು ಕೊಂದು ಹಾಕಿದವರು ಯಾರು ಎನ್ನುವ ಪ್ರಶ್ನೆಯ ಸರಮಾಲೆಗಳನ್ನು ಕೇಳುತ್ತಾ ಕೆದಕುತ್ತಾ ಹೋದಂತೆಲ್ಲ ದಿಗ್ವಿಜಯ್ ಸಿಂಗ್ ಮಾತು ಸ್ಪಷ್ಟ ವಾಗುತ್ತಾ ಹೋಗುತ್ತದೆ.
ಗುಜರಾತ್‍ನಲ್ಲಿ ಗರ್ಭಿಣಿಯ ಹೊಟ್ಟೆ ಸೀಳಿ ನವಜಾತ ಶಿಶುವನ್ನು ಚಿಂದಿ ಮಾಡಿದ ರಕ್ಕಸರ ಕ್ರೌರ್ಯವನ್ನು ತಕ್ಷಣದ ಆಕ್ರೋಶಕ್ಕೆ ಸಿಕ್ಕಿ ಹೀಗೆ ಮಾಡಲಾಗಿದೆ ಎಂದು ಅಂದಿನ ಮುಖ್ಯ ಮಂತ್ರಿ ಮೋದಿ ಪರೋಕ್ಷವಾಗಿ ಹೇಳಿಕೊಂಡಿದ್ದರು. ಹಾಗಂತ, ಮೇಲೆ ವಿವರಿಸಿದ ಕೆಲವು ಘಟನೆಗಳೆಲ್ಲ ತಕ್ಷಣದ ಆಕ್ರೋಶದ್ದೇ ಎಂದಾದರೆ ಇಲ್ಲೆಲ್ಲ ಆರೋಪಿ, ಅಪರಾಧಿ ಸ್ಥಾನಗಳಲ್ಲಿರುವವರು ಯಾಕೆ ಒಂದೇ ಸಂಘಟನೆಗೆ ಸೇರಿದವರಾಗಿರುತ್ತಾರೆ? ಹಿಂದೂಗಳು, ಹಿಂದು ಸಂಸ್ಕøತಿ ಇತ್ಯಾದಿ ಮಾತುಗಳನ್ನಾಡುತ್ತಾ ಇರುವ ಒಂದೇ ಮಾತೃ ಸಂಘಟನೆಯ ಜೊತೆ ಇವರೆಲ್ಲ ಯಾಕೆ ಗುರುತಿಸಿ ಕೊಳ್ಳುತ್ತಿದ್ದಾರೆ. ಮುಸ್ಲಿಮರಿಂದ ದೇಶಕ್ಕೆ, ಸಂಸ್ಕøತಿಗೆ ಹಾನಿಯಾಗಿದೆ ಎನ್ನುವುದು ಉಳಿದ ಹಿಂದೂಗಳಿಗೆ ಅನ್ನಿಸುವುದಿಲ್ವಾ ಎಂಬ ಪ್ರಶ್ನೆಯನ್ನು ದಿಗ್ವಿಜಯ್ ಸಿಂಗ್‍ರಂತಹವರು ಕೇಳುತ್ತಾ ಬಂದಿದ್ದಾರೆ.
ಮುಸ್ಲಿಮರಲ್ಲಿ ಅಕ್ರಮಿಗಳಿಲ್ಲ ಎನ್ನುವ ವಾದ ಇಲ್ಲಿನದಲ್ಲ. ಆದರೆ ಎಲ್ಲ ಮುಸ್ಲಿಮರೂ ಭಯೋತ್ಪಾದಕರಲ್ಲ. ಭಯೋತ್ಪಾದಕರೆಲ್ಲರೂ ಮುಸ್ಲಿಮರು ಎನ್ನುವ ಅಡ್ವಾಣಿಜಿಯಂತಹವರು ಹಿಂದೂಗಳಲ್ಲಿ ಕೂಡಾ ಇಂತಹವರಿದ್ದಾರೆ ಎಂದು ಅನಿವಾರ್ಯವಾಗಿ ಇತ್ತೀಚೆಗಿನ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಒಪ್ಪಬೇಕಾಗುತ್ತದೆ. ಒಪ್ಪದಿದ್ದರೆ ಕಾಲವೇ ಒಪ್ಪಿಸುವ ಕೆಲಸವನ್ನು ಮಾಡುತ್ತದೆ ಎಂಬುದು ಬೇರೆ ಮಾತು. ಹೌದಲ್ಲ, ಅಖ್ಲಾಕ್‍ರನ್ನು ಸಂಘ ಪರಿವಾರದವರು ಗೋಮಾಂಸ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿ ಕೊಂದು ಹಾಕಿದಾಗ ಇಡೀ ವಿಶ್ವವೇ ದಂಗಾಗಿ ನೋವಿನಿಂದ ಚೀರಿತ್ತು. ಗುಜರಾತಿನಲ್ಲಿದ್ದಾಗ ನಾಯಿ ಮರಿ ವಿಶ್ಲೇಷಣೆ ನೀಡಿದ ಇಂದಿನ ಪ್ರಧಾನಿ ಮೌನವಾಗಿ ಇದ್ದು ಬಿಟ್ಟರು. ನಮ್ಮ ದೇಶದ ಒಬ್ಬ ನಾಗರಿಕ ಹೀನಾಯವಾಗಿ ಕೊಲೆಯಾದರೂ ಒಂದು ಮಾತೂ ಅವರ ಬಾಯಿಯಿಂದ ಹೊರಡಲಿಲ್ಲ. ಮೋದಿ ಪ್ರಧಾನಿಯಾಗಿದ್ದಾರೆ, ಅವರಿಗೆ ಹೆಚ್ಚಿನ ಗೌರವ ಸಲ್ಲಬೇಕೆನ್ನುವುದನ್ನು ಒಪ್ಪೋಣ. ಆದರೆ ಮೋದಿ ಅಖ್ಲಾಕ್‍ರಂತೆಯೇ ಒಬ್ಬ ಮನುಷ್ಯ ಅಲ್ಲವೇ? ಮಣ್ಣಾಗಿ ಹೋಗುವ ಮನುಷ್ಯ.
ಆದರೆ ಸಂಘಪರಿವಾರದ ಶಿಷ್ಟಾಚಾರದಲ್ಲಿ ಅವರ ಪರಿಕಲ್ಪನೆಯಲ್ಲಿಲ್ಲದವರೆಲ್ಲ ಮನುಷ್ಯರಲ್ಲ. ಆಸಿಫಾ ಎನ್ನುವ ಎಂಟು ವರ್ಷದ ಮಗುವನ್ನು ಅತ್ಯಾಚಾರ ಮಾಡಿದವರ ಸಂಬಂಧ ಎಲ್ಲಿಗೆ ಹೋಗಿ ಸೇರಿತ್ತು? ಪುಟ್ಟ ಬಾಲೆಯನ್ನು ಕೂಡಾ ಅತ್ಯಾಚಾರ ಮಾಡಬಹುದು ಎಂದು ಕಲಿಸುವ ಒಂದು ಸಂಸ್ಕೃತಿ ಎಷ್ಟು ವಿಷಕಾರಿಯಾಗಿದೆ? ಮೋದಿ ಸರಕಾರದ ಆಳ್ವಿಕೆಯಲ್ಲಿ ಇಂತಹ ಎಷ್ಟು ನಿಕೃಷ್ಟ ದಾಳಿಗಳಾದವು? ದಾಳಿಗಳಾಗುತ್ತಲೇ ಇವೆ. ಇದನ್ನು ತಡೆಯದ ಮೋದಿ, ವಿಶ್ವಪರ್ಯಟನಕ್ಕೆ ಹೊರಟು ಹೆಮ್ಮೆಯಿಂದ ಬೀಗುತ್ತಾರೆ. ಅಲ್ಲೇ ಹೋದಲ್ಲೇ ವಿದೇಶಿಯರು ಕೂಡಾ ಈ ಕ್ರೌರ್ಯಗಳಿಗೆ ಆಕ್ರೋಶ ವ್ಯಕ್ತಪಡಿಸುತ್ತಲೂ ಇದ್ದಾರೆ. ಈ ಸತ್ಯವನ್ನು ಹೆಚ್ಚಿನ ಮಾಧ್ಯಮಗಳು ಅಡಗಿಸಿಡಬಹುದು. ದಿಗ್ವಿಜಯ್ ಸಿಂಗ್‍ರಂತವರಿಂದ ಅಡಗಿಸಲು ಹೇಗೆ ಸಾಧ್ಯವಾದೀತು?
ದಿಗ್ವಿಜಯ್ ಸಿಂಗ್ ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದು ಆಡಳಿತದ ಅನುಭವ ಇರುವವರು. ಭಯೋತ್ಪಾದನೆಯ ಆರೋಪದಲ್ಲಿ ಬಂಧಿಸಲ್ಪಟ್ಟಿರುವವರೆಲ್ಲ ಆರೆಸ್ಸೆಸ್‍ನೊಂದಿಗೆ ಸಂಬಂಧ ಹೊಂದಿದ್ದಾರೆಂದು ಅವರು ಹೇಳಿರುವಾಗ ಅದನ್ನು ಈ ದೇಶದ ಪ್ರಜ್ಞಾವಂತ ಜನರು ತೀರ ಕ್ಷುಲ್ಲಕ ಎಂದು ನಿರಾಕರಿಸಿ ಬಿಡಬಹುದೆನ್ನುವಂತಿಲ್ಲ. ಮಹಾತ್ಮ ಗಾಂಧಿಯನ್ನು ಕೊಂದ ನಾಥುರಾಂ ಗೋಡ್ಸೆ ಆರೆಸ್ಸೆಸ್ಸಿಗ ಎಂದು ದಿಗ್ವಿಜಯ್ ಹೇಳುತ್ತಾರೆ. ಆದರೆ ಇತ್ತೀಚೆಗೆ ದೇಶದಲ್ಲಿ ನಡೆದ ಘಟನೆಗಳನ್ನು ಉದಾಹರಿಸುವ ಗೋಜಿಗೆ ಅವರು ಕೂಡಾ ಹೋಗಿಲ್ಲ. ಬಹುಶಃ ಉದಾಹರಿಸಿದರೆ ಬಂದೂಕಿನ ಟ್ರಿಗರ್ ಎಳೆಯುವವರು ಅವರನ್ನು ಕಾಯುತ್ತಾ ನಿಲ್ಲಬಹುದು. ಗೌರಿಗಾದ ಗತಿ, ಧಾಬೋಲ್ಕರ್, ಕಲ್ಬುರ್ಗಿಗಳ ಗತಿ ಕಾದು ನಿಂತಿರಬಹುದು ಎಂಬುದು ಒಂದು ಕಾರಣವಾಗಿದ್ದಿರಲೂಬಹುದು. ಜಾತ್ಯತೀತ ಭಾರತದಲ್ಲಿ ನಾಝಿಝಂ ಮತ್ತು ಝಿಯೋನಿಸಂ ಅನ್ನು ತಂದು ನಿಲ್ಲಿಸುವ ಹುನ್ನಾರದೊಂದಿಗೆ ಮುಸ್ಲಿಮರ ಹಾಲೋ ಕಾಸ್ಟಗೆ ಹೊಂಚು ಹಾಕಿದ್ದು ಯಾರು ಎಂಬ ಸತ್ಯ ಈಗಾಗಲೇ ಗೋಚರವಾಗಿದೆ. ಮುಸ್ಲಿಮರ ಅಥವಾ ಜಾತ್ಯತೀತ ಭಾರತ ಪರ ಮಾತಾಡುವವರನ್ನು ಹೆಕ್ಕಿ ಹೆಕ್ಕಿ ಗುಂಡಿಟ್ಟು ಸಾಯಿಸಿ ಸಿಕ್ಕಿಬೀಳುವವರು ಸಂಘಪರಿವಾರದ ಜೊತೆಗೇ ಗುರುತಿಸುತ್ತಾರೆ. ಇನ್ನು ಮುಸ್ಲಿಮರನ್ನು ಬೇಕಾಬಿಟ್ಟಿ ಕೊಂದಾಗ ಆಡ ಳಿತದಲ್ಲಿ ಕೂತವರು ಕೂಡಾ ಗಹಗಹಿಸಿ ನಗುತ್ತಾರೆ. ಅಥವಾ ಮೀಸೆಯಡಿ ನಗುತ್ತಾರೆ. ಆಸಿಫ ಅತ್ಯಾಚಾರವನ್ನು ದೇಶದಲ್ಲಾದ ಚಿಕ್ಕ ಘಟನೆಗೆ ಹೋಲಿಸಿದ ವಿತ್ತ ಸಚಿವ ಜೇಟ್ಲಿ ಎಂತಹವರು? ದಿಗ್ವಿಜಯ್ ಸಿಂಗ್ ದ್ವೇಷವೇ ಆರೆಸ್ಸೆಸ್ಸಿನ ಆಶಯ ಎಂದು ಹೇಳುತ್ತಾರೆ. ಆಸಿಫಾ ಅತ್ಯಾಚಾರ ಕುರಿತ ಜೇಟ್ಲಿ ವಿಶ್ಲೇಷಣೆ ಇದನ್ನೇ ಸೂಚಿಸುತ್ತದೆ. ಯಾಕೆ ದ್ವೇಷ ಬಿಟ್ಟು ಪ್ರೀತಿಯನ್ನು ಕಟ್ಟುವ ಕೆಲಸ ಇವರು ಮಾಡುವುದಿಲ್ಲ. ಸಂವಿಧಾನ ಬದಲಿಸುವ ಕೆಟ್ಟ ಛಲ, ಕೋಮು ವರ್ಗೀಕರಣ ದುಸ್ಸಾಹಸ ಬಿಟ್ಟು ಪ್ರಗತಿಯ ಕುರಿತು ವಿವಿಧತೆಯ ದೇಶದಲ್ಲಿ ಸಹಬಾಳ್ವೆ ¸ ಸೌಹಾರ್ದವನ್ನು ಉಪದೇಶಿಸಲಿ. ಇಲ್ಲದಿದ್ದರೆ ಅಕ್ರಮಿಗಳಿಗೆ ಕಾಲವೇ ಉತ್ತರ ಕೊಡುತ್ತದೆ. ಹೌದು ಯಾವ ಅಕ್ರಮಿಗಳನ್ನು ಕಾಲ ಸುಮ್ಮನೆ ಬಿಟ್ಟಿಲ್ಲ. ಕಾಲ ಕೂಡಿ ಬರಬೇಕು ಅಷ್ಟೇ.