ಚುನಾವಣಾ ವಿಶ್ಲೇಷಣೆ: ಭಾಗ 3 ಬಿಜೆಪಿಯ ಗೆಲುವನ್ನು ಸುಲಭಗೊಳಿಸುತ್ತಿದೆಯೇ ಸಮುದಾಯ ಪ್ರೇಮ?

1
2495

ಏ. ಕೆ. ಕುಕ್ಕಿಲ

2016 ರಲ್ಲಿ ಅಸ್ಸಾಮ್ ವಿಧಾನ ಸಭೆಗೆ ನಡೆದ ಚುನಾವಣೆಯ ಬಳಿಕ ಸಿಯಾಸತ್ ಎಂಬ ಉರ್ದು ಪತ್ರಿಕೆ ಚುನಾವಣೋತ್ತರ ವಿಶ್ಲೇಷಣೆಯೊಂದನ್ನು ನಡೆಸಿತ್ತು. ದೇಶೀಯವಾಗಿ ಒಂದಷ್ಟು ಗಮನ ಸೆಳೆದ ವಿಶ್ಲೇಷಣೆ ಅದು. ಬಿಜೆಪಿ ಮತ್ತು ಅಸ್ಸಾಮ್ ಗಣಪರಿಷತ್ ಮೈತ್ರಿಕೂಟವು ಗೊಗೋಯಿ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಉರುಳಿಸಿ ಅಧಿಕಾರ ಪಡಕೊಳ್ಳುವಲ್ಲಿ AIUDF ಮತ್ತು MIM ನಂಥ ಮುಸ್ಲಿಂ ಮತಗಳನ್ನೇ ಅವಲಂಬಿಸಿರುವ ಪಕ್ಷಗಳ ಕೊಡುಗೆ ಏನು ಅನ್ನುವುದನ್ನು ಅದರಲ್ಲಿ ಆಧಾರ ಸಹಿತ ವಿವರಿಸಲಾಗಿತ್ತು. ಸೆಕ್ಯುಲರ್ ಮತಗಳ ವಿಭಜನೆಯಲ್ಲಿ ಮೌಲಾನಾ ಬದ್ರುದ್ದೀನ್ ಅಜ್ಮಲ್ ಅವರ AIUDF ಮತ್ತು ಓವೈಸಿ ಕುಟುಂಬದ MIM ನ ಪಾತ್ರ ಬಹಳ ನಿರ್ಣಾಯಕವಾಗಿತ್ತು ಎಂಬುದನ್ನು ಅದರಲ್ಲಿ ಸ್ಪಷ್ಟಪಡಿಸಲಾಗಿತ್ತು. 2011 ರ ಚುನಾವಣೆಯಲ್ಲಿ 76 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಪಕ್ಷಕ್ಕೆ 2016ರಲ್ಲಿ ಬರೇ 26 ಸ್ಥಾನಗಳಲ್ಲಷ್ಟೇ ಗೆಲುವು ಪಡೆಯಲು ಸಾಧ್ಯವಾಯಿತು. AIUDF 13 ಸ್ಥಾನಗಳನ್ನು ಪಡೆಯಿತು. ಇದೇವೇಳೆ, ಬಿಜೆಪಿ ಮತ್ತು ಅಸ್ಸಾಮ್ ಗಣಪರಿಷತ್ ಮೈತ್ರಿಕೂಟವು 86 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಿತು. ಇದು ಬಹಿರಂಗಕ್ಕೆ ಕಾಣುವ ವಿವರ. ಆದರೆ, ಜನರು ಹೆಚ್ಚು ಗಮನ ಕೊಡದ ಮತ್ತು ಚರ್ಚೆಗೊಳಗಾಗದ ಇನ್ನೊಂದು ಬಹುಮುಖ್ಯ ಅಂಶವಿದೆ. ಅದೇನೆಂದರೆ, ಚಲಾಯಿತ ಮತಗಳ ಶೇಕಡಾವಾರು ವಿಭಜನೆ. 26 ಸ್ಥಾನಗಳನ್ನು ಪಡೆದ ಕಾಂಗ್ರೆಸ್ ಗೆ ಒಟ್ಟು ಚಲಾಯಿತ ಮತಗಳಲ್ಲಿ 31% ಮತಗಳು ಲಭಿಸಿದ್ದುವು. ಅಜ್ಮಲ್ ರ AIUDF ಗೆ 13%. ಬಿಜೆಪಿಯಂತೂ ಕಾಂಗ್ರೆಸ್ ಗಿಂತಲೂ ಕಡಿಮೆ ಮತಗಳನ್ನು ಪಡೆದಿತ್ತು. ಅದರ ಗಳಿಕೆ 30.1%. ಅಸ್ಸಾಮ್ ಗಣಪರಿಷತ್ 8.1% ಮತಗಳನ್ನು ಪಡೆದುಕೊಂಡಿತ್ತು. 30% ಮುಸ್ಲಿಮರಿರುವ ಅಸ್ಸಾಮ್ ನಲ್ಲಿ ಬಿಜೆಪಿ ಅಧಿಕಾರಕ್ಕೇರಿರುವುದು ಸೆಕ್ಯುಲರ್ ಮತಗಳ ವಿಭಜನೆಯಿಂದಾಗಿಯೇ ಹೊರತು ಮತ ಚಲಾವಣೆಯ ಆಧಾರದಲ್ಲಿ ಅಲ್ಲ. 13 ಸ್ಥಾನಗಳನ್ನು ಪಡೆದ AIUDF ಪಕ್ಷವು 74 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಕಾಂಗ್ರೆಸ್ಸಿನ ಹೆಚ್ಚಿನ ಅಭ್ಯರ್ಥಿಗಳು ತೀರಾ ನಗಣ್ಯ ಮತಗಳ ಅಂತರದಲ್ಲಿ ಸೋಲನುಭವಿಸಿದರು ಅನ್ನುವುದನ್ನು ಪರಿಗಣಿಸುವಾಗ, ಸೆಕ್ಯುಲರ್ ಮತಗಳ ವಿಭಜನೆ ಅಂತಿಮವಾಗಿ ಯಾರನ್ನು ಗೆಲ್ಲಿಸುತ್ತದೆ ಅನ್ನುವುದನ್ನು ಸ್ಪಷ್ಟಪಡಿಸುತ್ತದೆ.

ಬಿಜೆಪಿಯು ಹಿಂದುತ್ವ ಮತಗಳನ್ನೇ ಅರಸಿಕೊಂಡು ಹೋಗುವ ಪಕ್ಷ. ಅದು ಮುಸ್ಲಿಮರನ್ನು ಅಭ್ಯರ್ಥಿಗಳಾಗಿ ಆರಿಸಿಕೊಳ್ಳುವುದೇ ಇಲ್ಲ. ಮುಸ್ಲಿಂ ಮತಗಳ ಅಗತ್ಯವಿಲ್ಲ ಎಂದು ಅದು ಆಗಾಗ ಯಾಕೆ ಹೇಳಿಕೊಳ್ಳುತ್ತದೆಂದರೆ, ಅಂತಹ ಮಾತುಗಳು ಹಿಂದೂ ಮತಗಳನ್ನು ತನ್ನ ಪರ ಒಟ್ಟುಗೂಡಿಸಬಲ್ಲುದು ಎಂಬ ನಂಬಿಕೆಯಿಂದ. ಅಸ್ಸಾಮ್ ನಲ್ಲೂ ಈ ತಂತ್ರ ವರ್ಕ್ ಔಟ್ ಆಯಿತು. ಬಾಂಗ್ಲಾ ದೇಶದಿಂದ ವಲಸೆ ಬಂದ ಮುಸ್ಲಿಮರನ್ನು ನೆಪಮಾಡಿಕೊಂಡು ಎಲ್ಲ ಮುಸ್ಲಿಮರನ್ನೂ ಅವಹೇಳನಗೊಳಿಸುವುದು ಮತ್ತು ಆಕ್ರಮಿಗಳು ಎಂದು ಬಿಂಬಿಸುವುದನ್ನು ಅದು ಚುನಾವಣೆಯ ಉದ್ದಕ್ಕೂ ಮಾಡಿತು. ಇನ್ನೊಂದುಕಡೆ, ಮುಸ್ಲಿಂ ಮತಗಳನ್ನೇ ಅವಲಂಬಿಸಿರುವ AIUDF ಪಕ್ಷವು ಮುಸ್ಲಿಮರನ್ನು ಸೆಳೆಯಲು ತನ್ನ ಶ್ರಮವನ್ನೆಲ್ಲ ವ್ಯಯಿಸಿತು. ಮತ್ತೊಂದೆಡೆ, ಮುಸ್ಲಿಮರೂ ಸೇರಿದಂತೆ ಸೆಕ್ಯುಲರ್ ಮತಗಳನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಹೋರಾಟ ನಡೆಸಿತು. ನಿಜವಾಗಿ, ಬಿಜೆಪಿಯ ಬಯಕೆ ಏನಾಗಿತ್ತೆಂದರೆ, AIUDF ಅತ್ಯಂತ ತಾರಕ ಧ್ವನಿಯಲ್ಲಿ ಪ್ರಚಾರ ನಡೆಸಬೇಕು ಮತ್ತು ಮುಸ್ಲಿಂ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅದು ಪಡೆದುಕೊಳ್ಳಬೇಕು ಎಂಬುದಾಗಿತ್ತು. AIUDF ನ ಪ್ರಚಾರ ಜೋರಾದಂತೆ ಬಿಜೆಪಿ ಪಾಳಯದಲ್ಲಿ ಸಂಭ್ರಮ ಹೆಚ್ಚುತ್ತಿತ್ತು ಎಂಬ ವಿಶ್ಲೇಷಕರೊಬ್ಬರ ಮಾತು ಇಲ್ಲಿ ಮುಖ್ಯವಾಗುವುದು ಇದೇ ಕಾರಣದಿಂದ. ತನ್ನ ಮತ ಬಾಂಕನ್ನು ವಿಸ್ತರಿಸಲು ಬಿಜೆಪಿಗೆ AIUDF ನ ಭರ್ಜರಿ ಪ್ರಚಾರವೇ ಧಾರಾಳ ಸಾಕಾಗಿತ್ತು. ಮುಸ್ಲಿಮರು ಅಸ್ಸಾಮನ್ನು ಇನ್ನೊಂದು ಬಾಂಗ್ಲಾವಾಗಿ ಪರಿವರ್ತಿಸುತ್ತಾರೆ ಎಂಬ ಸುಳ್ಳನ್ನು ಅದು ಸುಲಭವಾಗಿ ತೇಲಿಸಿಬಿಟ್ಟಿತು. ಮುಸ್ಲಿಮರು ಹೆಚ್ಚೆಚ್ಚು AIUDF ನತ್ತ ವಾಳಲಿ ಅನ್ನುವುದು ಬಿಜೆಪಿಯ ಬಯಕೆ. ಅದಕ್ಕಾಗಿ ಮುಸ್ಲಿಮರಲ್ಲಿ ಅಭದ್ರತೆಯನ್ನು ಬಿತ್ತುವ ಹೇಳಿಕೆಗಳನ್ನು ಅದು ಆಗಾಗ ಹೊರಡಿಸಿತು. ಅದನ್ನು ಖಂಡ ತುಂಡವಾಗಿ ಮತ್ತು ಪ್ರಖರ ಭಾಷೆಯಲ್ಲಿ AIUDF ವಿರೋಧಿಸಿತು. ಒಂದುರೀತಿಯಲ್ಲಿ, ಇದು ಬಿಜೆಪಿ ಹೆಣೆದ ಜಾಣ ತಂತ್ರ. ಇಂಥದ್ದೊಂದು ಪ್ರತಿಕ್ರಿಯೆಯನ್ನು ಅದು ನಿರೀಕ್ಷಿಸಿಯೇ ಹೇಳಿಕೆಗಳನ್ನು ಹೊರಡಿಸುತ್ತಿತ್ತು. ಇತ್ತ, ಕಾಂಗ್ರೆಸ್ ಗಂತೂ AIUDF ನ ಜೊತೆ ಮೈತ್ರಿ ಮಾಡಿಕೊಳ್ಳುವ ಸನ್ನಿವೇಶವೇ ಇರಲಿಲ್ಲ. ಮೈತ್ರಿ ಮಾಡಿಕೊಂಡ ತಕ್ಷಣ ಬಿಜೆಪಿಯ ಹಾದಿ ಇನ್ನಷ್ಟು ಸುಲಭವಾಗುತ್ತದೆ. ಮುಸ್ಲಿಂ ಕೋಮುವಾದಿ ಪಕ್ಷದೊಂದಿಗೆ ಕಾಂಗ್ರೆಸ್ ಸೇರಿಕೊಂಡಿದೆ ಎಂದು ಹೇಳಿ ಇಡೀ ಅಸ್ಸಾಮನ್ನೇ ಹಿಂದೂ ಮುಸ್ಲಿಂ ಆಗಿ ವಿಭಜಿಸುವುದಕ್ಕೆ ಅವಕಾಶ ಸಿಗುತ್ತದೆ. ಅಲ್ಲದೆ, ಕಾಂಗ್ರೆಸ್ ಮತ್ತು AIUDF ನ ಮೈತ್ರಿಯನ್ನು ಬಿಜೆಪಿ ಮನಸಾರೆ ಬಯಸಿತ್ತು ಎಂಬ ವಿಶ್ಲೇಷಣೆಯೂ ಇದೆ. ಹೀಗೆ, ಮುಸ್ಲಿಮರ ಮತಗಳೂ ಸೇರಿದಂತೆ ಜಾತ್ಯಾತೀತ ಮತಗಳು ಕಾಂಗ್ರೆಸ್ ಮತ್ತು AIUDF ನ ನಡುವೆ ಹಂಚಿಕೆಯಾದುವು. ಉಳಿದ ಒಂದಷ್ಟು ಮತಗಳು ಇನ್ನಿತರರ ಪಾಲಾದುವು. ಆ ಮೂಲಕ ಬಿಜೆಪಿಯ ತಂತ್ರ ಸಂಪೂರ್ಣವಾಗಿ ಮೇಲುಗೈಯನ್ನು ಪಡೆಯಿತು.

ಅಂದಹಾಗೆ, 2017 ರಲ್ಲಿ ಉತ್ತರ ಪ್ರದೇಶ ವಿಧಾನ ಸಭೆಗೆ ನಡೆದ ಚುನಾವಣೆಯನ್ನು ಅವಲೋಕಿಸಿದರೂ, ಮುಸ್ಲಿಂ ಮತಗಳ ವಿಭಜನೆಯನ್ನು ಬಿಜೆಪಿ ಹೇಗೆ ಗುರಿಯಾಗಿಸಿಕೊಳ್ಳುತ್ತದೆ ಎಂಬುದು ಮನದಟ್ಟಾಗುತ್ತದೆ. ಉತ್ತರ ಪ್ರದೇಶದ 22 ಕೋಟಿ ಜನಸಂಖ್ಯೆಯಲ್ಲಿ 19% ಮುಸ್ಲಿಮರಿದ್ದಾರೆ. 143 ಕ್ಷೇತ್ರಗಳಲ್ಲಿ ಫಲಿತಾಂಶವನ್ನು ನಿರ್ಧರಿಸಬಲ್ಲಷ್ಟು ಅವರು ಪ್ರಬಲರಾಗಿದ್ದಾರೆ. ಈ 143 ರಲ್ಲಿ 70 ಕ್ಷೇತ್ರಗಳಲ್ಲಿ ಮುಸ್ಲಿಮರು 20-25% ಇದ್ದಾರೆ. ಉಳಿದ 73 ಕ್ಷೇತ್ರಗಳಲ್ಲಿ ಅವರ ಅನುಪಾತ 30% ಇದೆ. ದುರಂತ ಏನೆಂದರೆ, ಈ ಲೆಕ್ಕಾಚಾರಗಳಾವುವೂ ಬಿಜೆಪಿಯ ಗೆಲುವನ್ನು ತಪ್ಪಿಸಲು ಯಶಸ್ವಿಯಾಗುತ್ತಿಲ್ಲ ಅನ್ನುವುದು. ಇದಕ್ಕಿರುವ ಕಾರಣ ಮತ್ತದೇ ಮತ ವಿಭಜನೆ. SP, BSP, BJP ಮತ್ತು ಕಾಂಗ್ರೆಸ್ ಎಂಬ ನಾಲ್ಕು ಪ್ರಮುಖ ರಾಜಕೀಯ ಪಕ್ಷಗಳ ಹೊರತಾಗಿ MIM, ಪೀಸ್ ಪಾರ್ಟಿ, ಉಲೇಮಾ ಕೌನ್ಸಿಲ್ ಮುಂತಾದ ಮುಸ್ಲಿಂ ಮತಾವಲಂಬಿ ಪಕ್ಷಗಳೂ ಚುನಾವಣೆಯ ಸಮಯದಲ್ಲಿ ಚುರುಕಾಗುತ್ತವೆ. ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಕಡೆ ಇವು ತಮ್ಮ ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿ ಭರ್ಜರಿ ಪ್ರಚಾರ ನಡೆಸುತ್ತವೆ. 2017 ರಲ್ಲಿ ಕೇವಲ ಪೀಸ್ ಪಾರ್ಟಿಯೊಂದೇ 150 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿತ್ತು ಅನ್ನುವುದೇ ಇದಕ್ಕೆ ಉತ್ತಮ ನಿದರ್ಶನ. ಅಲ್ಲದೆ, SP, BSP ಮತ್ತು ಕಾಂಗ್ರೆಸ್ ಪಕ್ಷಗಳೂ ಮುಸ್ಲಿಂ ಜನಸಂಖ್ಯೆ ಪರಿಗಣನಾರ್ಹ ಸ್ಥಿತಿಯಲ್ಲಿರುವ ಕಡೆಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನೇ ನಿಲ್ಲಿಸಬೇಕಾದ ಒತ್ತಡದಲ್ಲಿರುತ್ತದೆ. ಇಲ್ಲದಿದ್ದರೆ, ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿಯನ್ನು ಈ ಸಣ್ಣ ಪಕ್ಷಗಳಿಂದ ಅವು ಎದುರಿಸಬೇಕಾಗುತ್ತದೆ. ಆದರೆ, ಅಂತಿಮವಾಗಿ ಅದರಿಂದ ಲಾಭ ಪಡಕೊಳ್ಳುವುದು ಬಿಜೆಪಿಯೇ.
ಇದಕ್ಕೆ ಇನ್ನೊಂದಿಷ್ಟು ಉದಾಹರಣೆಗಳು ಹೀಗಿವೆ.
1. ಉತ್ತರ ಪ್ರದೇಶದ ಸಹರಾನ್ ಪುರದ ನಕುದ್ ಕ್ಷೇತ್ರದಲ್ಲಿ SP ಯಿಂದ ಇಮ್ರಾನ್ ಮಸೂದ್ ಸ್ಪರ್ಧಿಸಿದರೆ, BSP ಯಿಂದ ಫಿರೋಜ್ ಅಫ್ತಾಬ್ ಸ್ಪರ್ಧಿಸಿದರು. ಅಂತಿಮವಾಗಿ ಬಿಜೆಪಿಯ ಧರಮ್ ಸಿಂಗ್ ಸೈನಿಯವರು SP ಇಮ್ರಾನ್ ಮಸೂದ್ ರನ್ನು ನಾಲ್ಕು ಸಾವಿರ ಮತಗಳಿಂದ ಸೋಲಿಸಿದರು.
2. ಠಾಣಾ ಭವನ್ ಕ್ಷೇತ್ರ: ಅಬ್ದುಲ್ ವಾರಿಸ್ ರನ್ನು BSP ಕಣಕ್ಕಿಳಿಸಿದರೆ, RLD ಯು ಅಶ್ರಫ್ ಅಲಿ ಖಾನ್ ರನ್ನು ಕಣಕ್ಕಿಳಿಸಿತು. ಇಬ್ಬರೂ ಸೇರಿಕೊಂಡು ಒಂದು ಲಕ್ಷ ಮೂರು ಸಾವಿರ ಮತಗಳನ್ನು ಹಂಚಿಕೊಂಡರು. ಕೊನೆಗೆ, ಮುಜಾಫ್ಫರ್ ನಗರ್ ಗಲಭೆಯ ಆರೋಪಿ ಬಿಜೆಪಿಯ ಸುರೇಶ ರಾಣಾ ವಿಜಯಿಯಾದರು.
3. ಸ್ವಾರ್ ಕ್ಷೇತ್ರ: ಅಜಂ ಖಾನ್ ರ ಮಗ ಅಬ್ದುಲ್ಲಾ ಅಜಂ SP ಯಿಂದ ಮತ್ತು BSP ಯಿಂದ ಹಾಲಿ ಶಾಸಕ ನವಾಬ್ ಕಾಸಿಂ ಅಲಿ ಸ್ಪರ್ಧಿಸಿದರು. ಬಿಜೆಪಿಯ ಲಕ್ಷ್ಮಿ ಸೈನಿ ಗೆಲುವು ಪಡೆದರು.
4. ಮೀರತ್ ದಕ್ಷಿಣ ಕ್ಷೇತ್ರ: BSP ಯಿಂದ ಯಾಕೂಬ್ ಖುರೇಷಿ. SP ಯಿಂದ ಅಜಾದ್ ಸೈಫಿ. ಬಿಜೆಪಿಯ ಸೋಮೆಂದ್ರ ತೋಮರ್ ಗೆ ಗೆಲುವು.
5. ಅಲೀಘರ್ ಸಿಟಿ ಕ್ಷೇತ್ರ: BSP ಯಿಂದ ಆರಿಫ್ ಅಬ್ಬಾಸಿ. SP ಯಿಂದ ಜಾಫರ್ ಆಲಂ. ಬಿಜೆಪಿಯ ಸಂಜೀವ್ ರಾಜ ಗೆಲುವು.
6. ಆಗ್ರಾ ದಕ್ಷಿಣ ಕ್ಷೇತ್ರ: BSP ಯಿಂದ ಜುಲ್ಫಿಕಾರ್ ಆಲಿ ಭುಟ್ಟೋ. ಕಾಂಗ್ರೆಸ್ ನಿಂದ ನಜೀರ್ ಅಹ್ಮದ್. MIM ನಿಂದ ಇದ್ರಿಸ್. ಬಿಜೆಪಿಯ ಯೋಗೇಂದ್ರ ಉಪಾಧ್ಯಯ ಗೆಲುವು.
7. ಫಿರೋಜಾಬಾದ್ ಕ್ಷೇತ್ರ: BSP ಯಿಂದ ಖಾಲಿದ್ ನಜೀರ್. SP ಯಿಂದ ಅಜೀಮ್ ಭಾಯ್. MIM ನಿಂದ ಎಹ್ತಿಶಾಮ್. ಬಿಜೆಪಿಯ ಮನೀಶ್ ಅಸಿಜ ಗೆಲುವು.
8. ಗಾಜಿಯಾಬಾದ್ ಕ್ಷೇತ್ರ: BSP ಯಿಂದ ಜಾಕಿರ್ ಅಲಿ. SP ಯಿಂದ ರಾಶಿದ್ ಮಲಿಕ್. ಬಿಜೆಪಿಯ ನಂದ ಕಿಶೋರ್ ಗುಜ್ಜಾರ್ ಗೆಲುವು.
ಅಲ್ಲದೆ, ಸಹರಾನ್ ಪುರ ನಗರ, ಕೈರಾನ, ಬಿಜನೋರ್, ನೂರ್ ಪುರ, ಸಿಕಂದರಾಬಾದ್, ಭಾದ್ವಾನ್, ಕಾನ್ಪುರ ಸೆಂಟ್ರಲ್, ದಿಯೋಬಂದ್, ಲಕ್ನೋ ಪಶ್ಚಿಮ ಮುಂತಾದ ಕಡೆಯೂ ಇದೆ ರೀತಿ ಮತಗಳು ವಿಭಜನೆಗೊಂಡು ಅದರ ಲಾಭವನ್ನು ಬಿಜೆಪಿ ಎತ್ತಿಕೊಂಡಿದೆ. ನಿಜವಾಗಿ, ಅಸ್ಸಾಮ್ ಮತ್ತು ಉತ್ತರ ಪ್ರದೇಶದ ವಿಧಾನ ಸಭೆಗಳಿಗೆ ನಡೆದ ಚುನಾವಣೆಯ ಫಲಿತಾಂಶದಿಂದ ಕಲಿಯಲು ಕರ್ನಾಟಕದ ಮತದಾರರಿಗೆ ಸಾಕಷ್ಟು ಪಾಠಗಳಿವೆ.
(ಉಳಿದಿರುವುದು ಭಾಗ 4 ರಲ್ಲಿ)

1 COMMENT

Comments are closed.