ಜೆಡಿಎಸ್ – ಬಿಎಸ್ಪಿ ಮೈತ್ರಿ : ದೇವೆಗೌಡರ ಮಾಯಾಜಾಲ

0
3940

ಬೆಂಗಳೂರು: ಹೇಗಾದ್ರೂ ಮಾಡಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕೆಂಬ ಜೆಡಿಎಸ್ ಬಯಕೆ ಮತ್ತು ಉತ್ತರಪ್ರದೇಶದಲ್ಲಿಯೇ ಸೋತು ಸುಣ್ಣವಾಗಿರುವ ಬಿಎಸ್ಪಿ ಗೆ ರಾಷ್ಟ್ರೀಯ ಪಕ್ಷವೆಂಬ ಪಟ್ಟ ಉಳಿಸಿಕೊಳ್ಳುವ ಸಂಕಷ್ಟ ಎರಡು ಪಕ್ಷಗಳ ನಡುವೆ ಮೈತ್ರಿಗೆ ಕಾರಣವಾಗಿದೆ.

ಮಾಯಾವತಿ ಪಕ್ಷದ ನೇತೃತ್ವ ವಹಿಸಿದ ನಂತರ ಬಿಎಸ್ ಪಿ ಯಾವುದೇ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವುದು ಇದೇ ಮೊದಲು.
ರಾಜ್ಯದ 224 ಸ್ಥಾನಗಳಲ್ಲಿ 12 ಮೀಸಲು ಕ್ಷೇತ್ರಗಳು ಸೇರಿದಂತೆ ಒಟ್ಟು 20 ಸ್ಥಾನಗಳನ್ನು ಜೆಡಿಎಸ್ ಬಿಎಸ್ ಪಿಗೆ ಬಿಟ್ಟು ಕೊಡಲಿದೆ.

ಜೆಡಿಎಸ್ ಲೆಕ್ಕಾಚಾರ

ರಾಜ್ಯದಲ್ಲಿ ಬಿಎಸ್ ಪಿಗೆ ಹೇಳಿಕೊಳ್ಳುವಂತಹ ನೆಲೆಯಿಲ್ಲ ಆದ್ರೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವುದರ ಮುಖ್ಯ ಉದ್ದೇಶ ಸಿದ್ದರಾಮಯ್ಯನವರ ಅಹಿಂದ ಮತ ಬ್ಯಾಂಕಿಗೆ ಭಾರಿ ಹೊಡೆತ ನೀಡುವುದು.
ಇದಲ್ಲದೆ ಕಳೆದ ಬಾರಿ ಸುಮಾರು 20 ಕ್ಷೇತ್ರಗಳಲ್ಲಿ ಕೇವಲ 500 ರಿಂದ 3000 ಸಾವಿರ ಮತಗಳ ಅಂತರದಲ್ಲಿ ಜೆಡಿಎಸ್ ಸೋತಿದೆ, ಇಂತಹ ಕ್ಷೇತ್ರದಲ್ಲಿ ಬಿಎಸ್ ಪಿ ಮತಗಳು ಸಹಕಾರಿಯಾಗಬಹುದು.
ಅದೇ ರೀತಿ ಹಲವು ಕಡೆ ಜೆಡಿಎಸ್ ತುಂಬಾ ಕಡಿಮೆ ಅಂತರದಿಂದ ಗೆದ್ದಿದೆ, ಈ ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ಬಿಎಸ್ ಪಿ ಪ್ರಮುಖ ಪಾತ್ರವಹಿಸಬಹುದು.
ಒಟ್ಟಾರೆ ಬಿಎಸ್ ಪಿ ಗೆ ಬಿಟ್ಟು ಕೊಟ್ಟಿರುವ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ ದುರ್ಬಲವಾಗಿದೆ ಹೀಗಾಗಿ ಪಕ್ಷ ಕಳೆದುಕೊಳ್ಳುವದು ಏನೂ ಇಲ್ಲ.

ಬಿಎಸ್ ಪಿ ಲೆಕ್ಕಾಚಾರ

4-5 ಕ್ಷೇತ್ರಗಳಲ್ಲಿ ಕೆಲವು ಸಾವಿರ ಮತಗಳು ಪಡೆಯಬಹುದು ಆದ್ರೆ ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಒಂದೇ ಒಂದು ಸ್ಥಾನ ಗೆಲ್ಲುವ ಸ್ಥಿತಿಯಲ್ಲಿ ಬಿಎಸ್ ಪಿ ಇಲ್ಲ, ಹೀಗಾಗಿ ಜೆಡಿಎಸ್ ಜೊತೆಗಿನ ಮೈತ್ರಿಯಿಂದ 1-2 ಕ್ಷೇತ್ರಗಳಲ್ಲಿ ಜಯ ಸಾಧಿಸಿಬಹುದೆಂಬ ಯೋಚನೆ.
ಈಗಾಗಲೇ ಜಿಗ್ನೇಶ್ ರಾಜ್ಯದಲ್ಲಿ ಬಿಜೆಪಿ ಸೋಲಿಸಲು ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ.
ಜಿಗ್ನೇಶ್ ನಂತಹ ಯುವಕ ತನಗೆ ಪರ್ಯಾಯ ನಾಯಕನಾಗಿ ಬೆಳೆಯುವುದು ಸಹ ಮಾಯಾವತಿಗೆ ಇಷ್ಟವಿಲ್ಲ. ಜೆಡಿಎಸ್ ನೊಂದಿಗಿನ ಮೈತ್ರಿಯೊಂದಿಗೆ ಅವನ ಓಟಕ್ಕೆ ತಡೆಯೊಡ್ಡುವ ಪ್ರಯತ್ನ ಸಹ ಆಗಿದೆ.

ಇತರ ಪಕ್ಷಗಳ ಮೇಲೆ ಮೈತ್ರಿಯ ಪರಿಣಾಮ

2008 ರಲ್ಲಿ ರಾಜ್ಯದಲ್ಲಿ ಬಿಎಸ್ ಪಿ ಸುಮಾರು 20 ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಿತ್ತು , ಇತ್ತೀಚಿಗೆ ನಡೆದ ಗುಜರಾತ್ ಚುನಾವಣೆಯಲ್ಲಿ ಸಹ 8 ಕ್ಷೇತ್ರಗಳಲ್ಲಿ ಬಿಎಸ್ ಪಿ ಕಾಂಗ್ರೆಸ್ ಗೆ ಹೊಡೆತ ನೀಡಿತ್ತು. ಹೀಗಾಗಿ ಈ ಮೈತ್ರಿಯೂ ಕಾಂಗ್ರೆಸ್ ಪಾಲಿಗೆ ತೊಂದರೆಯುಂಟು ಮಾಡಬಹುದು ಆದ್ರೆ ಒಂದು ವೇಳೆ ಸದಾಶಿವ ಆಯೋಗದ ಅನುಷ್ಠಾನದ ವಿಷಯದಲ್ಲಿ ಕಾಂಗ್ರೆಸ್ ನೊಂದಿಗೆ ಮುನಿಸಿಕೊಂಡಿರುವ ಕೆಲವು ದಲಿತ ಮತಗಳು ಸಹಜವಾಗಿ ಬಿಜೆಪಿಗೆ ಹೋಗುವ ಬದಲು ಜೆಡಿಎಸ್ ಗೆ ಹೋದರೆ ಕಾಂಗ್ರೆಸ್ ಗೆ ಉಪಯೋಗವಾಗಬಹುದು.

ಇದೆಲ್ಲದರ ಮಧ್ಯೆ ಉತ್ತರ ಪ್ರದೇಶದಲ್ಲೇ ಸೋತಿರುವ ಬಿಎಸ್ ಪಿ ರಾಜ್ಯದಲ್ಲಿ ಯಾವುದೇ ಪ್ರಭಾವ ಬೀರುವುದು ಕಷ್ಟ ಹೀಗಾಗಿ ಈ ಮೈತ್ರಿ ರಾಜ್ಯ ಚುನಾವಣೆಯಲ್ಲಿ ಯಾವ ಪರಿಣಾಮ ಸಹ ಬೀರುವುದಿಲ್ಲವೆಂಬ ವಾದವೂ ಇದೆ.

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮೇ ಮೊದಲ ವಾರದಲ್ಲಿ ದೊರೆಯಲಿದೆ.

ಫಲಿತಾಂಶ ಏನೇ ಇರಲಿ ತಮ್ಮದು ಜಾತ್ಯತೀತ ಮತ್ತು ದಲಿತರ ಪಕ್ಷವೆಂದು ಹೇಳಿಕೊಳ್ಳುವ ಜೆಡಿಎಸ್ ಮತ್ತು ಬಿಎಸ್ ಪಿ ಪಕ್ಷಗಳು ಅಧಿಕಾರಕ್ಕಾಗಿ ಕೋಮುವಾದಿ ಮತ್ತು ದಲಿತ ವಿರೋಧಿ ಬಿಜೆಪಿ ಸೇರಿದಂತೆ ಯಾವ ಪಕ್ಷದೊಂದಿಗೆ ಸಹ ಮೈತ್ರಿ ಮಾಡೊಕೊಳ್ಳಲು ಹಿಂಜರಿಯುವುದಿಲ್ಲ. 2002 ರ ಗುಜರಾತ್ ಹತ್ಯಾಕಾಂಡದ ಕೆಲವೇ ತಿಂಗಳ ನಂತರ ನಡೆದ ಚುನಾವಣೆಯಲ್ಲಿಯೇ ಮಾಯಾವತಿಯವರು ಮೋದಿಗೆ ಕ್ಲೀನ್ ಚಿಟ್ ನೀಡಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದರು. ಇನ್ನೂ ಜೆಡಿಎಸ್ ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ಮತ್ತೆ ಕೈ ಜೋಡಿಸುವುದಿಲ್ಲವೆಂದು ಹೇಳಲು ಸಾಧ್ಯವಿಲ್ಲ.

ಜೆಡಿಎಸ್ ಏನೆಲ್ಲಾ ಮಾಡಿದರೂ ಚುನಾವಣೆಯಲ್ಲಿ ಬಹುಮತ ಸಿಗುವುದಿಲ್ಲವೆಂದು ದೇವೆಗೌಡರಿಗೆ ಚೆನ್ನಾಗಿ ಗೊತ್ತಿದೆ. ಯಾವುದೇ ಪಕ್ಷಕ್ಕೆ ಬಹುಮತ ಸಿಗದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದಲ್ಲಿ ಮಾತ್ರ ತಮ್ಮ ಪಕ್ಷ ಕಿಂಗ್ ಮೇಕರ್ ಆಗಬಹುದು.
ಕಾಂಗ್ರೆಸ್ ಗೆ ಬಹುಮತ ಸಿಗುವುದು ಅವರ ಕಿಂಗ್ ಮೇಕರ್ ಕನಸಿಗೆ ನೀರೆರಚಬಹುದು. ಆದುದರಿಂದ ಬಹುಮತದತ್ತ ದಾಪುಗಾಲುಯಿಡುತ್ತಿರುವ ಕಾಂಗ್ರೆಸ್ ಗೆ ಕಡಿವಾಣ ಹಾಕುವುದು ಗೌಡರಿಗೆ ಅನಿವಾರ್ಯವಾಗಿದೆ.

ಒಟ್ಟಲ್ಲಿ ಇದು ಎರಡು ಅವಕಾಶವಾದಿ ಪಕ್ಷಗಳ ನಡುವಿನ ಮೈತ್ರಿಯೆಂದು ಹೇಳಬಹುದು.