ತ್ರಿವಳಿ ತಲಾಕ್ ಸುಗ್ರಿವಾಜ್ಞೆ: ರಾಜಸ್ತಾನ ಮತ್ತು ಉತ್ತರಪ್ರದೇಶದಲ್ಲಿ 2 ದೂರು ದಾಖಲು!

0
1286

ತ್ರಿವಳಿ ತಲಾಕ್ ಸುಗ್ರಿವಾಜ್ಞೆಯಾದ ಬೆನ್ನಿನಲ್ಲಿಯೇ ಉತ್ತರ ಪ್ರದೇಶ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಎರಡು ದೂರುಗಳು ದಾಖಲಾಗಿವೆ.

2018ರ ಮುಸ್ಲಿಮ್ ಮಹಿಳಾ ಸಂರಕ್ಷಣಾ (ವಿವಾಹ) ಕಾಯ್ದೆ ಅನ್ವಯ ತ್ರಿವಳಿ ತಲಾಕ್ ನೀಡಿದ ಪತಿಯನ್ನು ಕ್ರಿಮಿನಲ್ ಮೊಕದ್ದಮೆಯೊಂದಿಗೆ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.

ಈ ಕುರಿತು ಗುಲ್ಫಾಮ್ ಎಂಬುವವರ ವಿರುದ್ಧ ಬಿಜನೊರ್‍ನಲ್ಲಿ ದೂರು ದಾಖಲಾಗಿದೆ. ಹೆತ್ತವರ ಒತ್ತಾಯಕ್ಕೆ ಮಣಿದು 2 ತಿಂಗಳ ಹಿಂದೆ ವಿವಾಹವಾಗಿದ್ದ ಆತನಿಗೆ ತನ್ನ ಹಳೆಯ ಗೆಳತಿಯು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿರುವುದರಿಂದ ತನ್ನ ಪತ್ನಿಗೆ ತಲಾಕ್ ನೀಡಲು ಮುಂದಾಗಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಲ್ಫಾಮ್, ಆತನ ಗೆಳತಿ ಹಾಗೂ ಕುಟುಂಬ ಸದಸ್ಯರೊಂದಿಗೆ ಪೊಲೀಸರು ಸಮಾಲೋಚನೆ ನಡೆಸಿದ್ದು ಆತ ತನ್ನ ಪತ್ನಿಗೆ ವಿಚ್ಛೇದನ ನೀಡಿ ತನ್ನ ಗೆಳತಿಯೊಂದಿಗೆ ವಿವಾಹವಾಗಲು ನಿರ್ಧರಿಸಿರುವುದನ್ನು ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದಲ್ಲದೇ ರಾಜಸ್ತಾನದ ಬರ್ಮಾರ್‍ನಲ್ಲಿ ತನ್ನ ಪತ್ನಿಗೆ ಫೋನಿನಲ್ಲಿ ತಲಾಕ್ ಹೇಳಿ ತದನಂತರ ಪತ್ರದ ಮೂಲಕ ತಲಾಕ್ ನೀಡಿದ ಸಲೀಮ್ ಖಾನ್ ಎಂಬುವವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
“ಮುಸ್ಲಿಮ್ ಮಹಿಳಾ (ವಿವಾಹ) ಸಂರಕ್ಷಣಾ ಕಾಯ್ದೆಯ ವಿಧಿ 3/4ರ ಅನ್ವಯ ಸಲೀಮ್ ಖಾನ್ ಹಾಗೂ ಆತನ ಮೂವರು ಕುಟುಂಬ ಸದಸ್ಯರ ವಿರುದ್ಧ ನಾವು ದೂರು ದಾಖಲಿಸಿಕೊಂಡಿದ್ದೇವೆ” ಎಂದು ಬರ್ಮಾರ್ ಬಲೋತ್ರಾ ಪೊಲೀಸ್ ಠಾಣೆಯ ಸಬ್ ಇನ್ಸೆಪೆಕ್ಟರ್ ಸಂಜನಾ ಕುಮಾರಿ ತಿಳಿಸಿದ್ದಾರೆ.

ಸಲ್ಮಾ ಬಾನು ತನ್ನ ಪತಿ ತ್ರಿವಳಿ ತಲಾಕ್ ನೀಡಿರುವ ಕುರಿತು ಹಾಗೂ ಪತ್ರದ ಮೂಲಕ ಅದನ್ನು ದೃಢಪಡಿಸಿರುವ ಕುರಿತು ದೂರ ನೀಡಿದ್ದಳು.

ಇದಲ್ಲದೇ ಹತ್ತು ವರ್ಷಗಳ ಹಿಂದೆ ವಿವಾಹವಾದ ಈಕೆಗೆ 15 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಪತಿ ಹಾಗೂ ಆತನ ಹೆತ್ತವರು ಕಿರುಕುಳ ನೀಡಿರುವುದನ್ನು ತಿಳಿಸಿದ್ದಾಳೆ. ಕೆಲವು ತಿಂಗಳುಗಳ ಹಿಂದೆ ಪತಿ ತನ್ನನ್ನು ತೊರೆದಿದ್ದು ತಾನು ಹೆತ್ತವರ ಮನೆಯಲ್ಲಿ ನೆಲೆಸಿರುವುದಾಗಿ ಸಲ್ಮಾ ಬಾನು ಹೇಳಿದ್ದಾರೆ.

ಆದರೆ ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ ಸಲೀಮ್ ಖಾನ್; ತನ್ನ ಪತ್ನಿ ಎರಡು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿರುವುದನ್ನು ಕಂಡು ತಲಾಕ್ ನೀಡುವುದಾಗಿ ಹೇಳಿಕೊಂಡಿದ್ದಾರೆ. “ನಾಲ್ಕು ತಿಂಗಳುಗಳ ಹಿಂದೆ ನಾನು ಮೊದಲ ತಲಾಕ್ ನೀಡಿದ್ದೆ. ತದನಂತರ ಎರಡು ತಿಂಗಳುಗಳ ನಂತರ ನಾನು ಎರಡನೆಯ ತಲಾಕ್ ನೀಡಿದ್ದೆ ಹಾಗೂ ಕಳೆದ ಸೆಪ್ಟೆಂಬರ್ 15 ರಂದು ನಾನು ಮೂರನೆಯ ತಲಾಕ್ ನೀಡಿದೆ.

ನಾನು ಪೊಲೀಸ್ ಠಾಣೆಗೆ ತೆರಳಿದಾಗ ಅಲ್ಲಿ ನನಗೆ ತಲಾಕ್ ನೀಡಿರುವುದನ್ನು ಲಿಖಿತ ರೂಪದಲ್ಲಿ ನೀಡಲು ತಿಳಿಸಲಾಯ್ತು. ಪೊಲೀಸರ ಸಮ್ಮುಖದಲ್ಲಿಯೇ ನಾನು ತಲಾಕ್ ಪತ್ರ ಬರೆದಿದ್ದೇನೆ” ಎಂದು ಸಲೀಮ್ ಖಾನ್ ಹೇಳುತ್ತಾರೆ.