ನೃತ್ಯಕ್ಕೆಂದು ಕಾಲೆತ್ತಿದ್ದೆ; ಗೆಜ್ಜೆ ಹಾರಿತ್ತು, ಪಂಚೆ ಬಿಚ್ಚಿತ್ತು, ನೃತ್ಯ ಮರೆತಿತ್ತು…

1
1864

ಸಾಲಿಹಾ ಸಾದಿ

ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಮಕ್ಕಳಿಗೆ ಶಾಲೆಗೆ ಹೋಗಲು ಬಹಳ ಉತ್ಸಾಹ. ವಿಧವಿಧದ ಕಾರ್ಯಕ್ರಮಗಳೆಲ್ಲವೂ ನಡೆಯುವುದು ಈ ತಿಂಗಳುಗಳಲ್ಲಿ ಎಂದು ಹೇಳಬಹುದು. ಆಟೋಟ ಸ್ಪರ್ಧೆಗಳು, ಕ್ರೀಡಾಕೂಟಗಳು, ಛದ್ಮವೇಷ ಸ್ಪರ್ಧೆ ಗಳು, ಶಾಲಾ ವಾರ್ಷಿಕೋತ್ಸವಗಳು ಈ ರೀತಿ ಅಧಿಕ ಶಾಲೆಗಳಲ್ಲೂ ಹತ್ತು ಹಲವು ಕಾರ್ಯಕ್ರಮಗಳು ನಡೆಯುವ ಮನೋರಂಜನೆಯ ತಿಂಗಳು.
ಹಾಡು ಭಾಷಣ ಪ್ರಬಂಧ ಸ್ಪರ್ಧೆಗಳು, ಮೂಕ, ಏಕಪಾತ್ರಾಭಿನಯಗಳು, ಚಿತ್ರ ಬರಹವನ್ನು ಅಂದದ ಬರವಣಿಗೆಯನ್ನು ಪ್ರಕಟಗೊಳಿಸುವ ಪ್ರತಿಭಾ ಪ್ರದರ್ಶನದ ತಿಂಗಳು. ಸ್ವಲ್ಪ ದಿನಗಳ ಮಟ್ಟಿಗೆ ಪಾಠ ಮಾಡುವ ಜಂಜಾಟದಿಂದ ಹೊರಗೆ ಬಂದು ಹೋಂವರ್ಕ್ ಗಳಿಲ್ಲದೆ, ಪ್ರಶ್ನೋತ್ತರಗಳಿಲ್ಲದೆ ಪ್ರವಾಸ ಪಿಕ್ನಿಕ್ಕುಗಳಲ್ಲಿ ಮಕ್ಕಳೊಂದಿಗೆ ಇನ್ನಷ್ಟು ಬೆರೆತು ಜೊತೆಗೆ ಕುಣಿಯುವ, ತಿಂಡಿಗಳನ್ನು ಹಂಚಿ ತಿನ್ನುವ, ಮಕ್ಕಳ ಮನಸ್ಸನ್ನು ಇನ್ನಷ್ಟು ಅರಿಯುವ, ಮನಸ್ಸು ಬಿಚ್ಚಿ ನಗುವ ಒಟ್ಟಿನಲ್ಲಿ ನೆನಪಿನಲ್ಲಿ ಉಳಿಯುವ ದಿನಗಳು ಎಂದೇ ಹೇಳಬಹುದು.

ಶಾಲಾ ವಾರ್ಷಿಕೋತ್ಸವಗಳಲ್ಲಂತೂ ಕೆಜಿ ಮಕ್ಕಳ ನೃತ್ಯ ನೋಡುವುದೇ ಸೊಗಸು. ಅಂದ ಚಂದದ ದಿರಿಸುಗಳನ್ನು ಹಾಕಿ ಅವರು ವೇದಿಕೆಯಲ್ಲಿ ಸುಮ್ಮನೆ ನಿಂತರೂ ನೋಡಲು ಚಂದ. ಮೊನ್ನೆ ಮಗಳ ಶಾಲೆಯ ವಾರ್ಷಿಕೋತ್ಸವದಲ್ಲಿ ದೊಡ್ಡ ಮಕ್ಕಳಿಗಿಂತ ಕೆಜಿ ಮಕ್ಕಳ ನೃತ್ಯ ಮನಸ್ಸಿಗೆ ಮುದ ನೀಡಿತು. ಎದುರು ನಿಂತು ಕುಣಿಯುವ ನಾಲ್ಕೈದು ಮಕ್ಕಳನ್ನು ಬಿಟ್ಟರೆ ಬಾಕಿ ಎಲ್ಲರೂ ವೇದಿಕೆಯ ಮುಂಭಾಗದಲ್ಲಿದ್ದ ಜನಸಂದಣಿಯನ್ನು ನೋಡಿ ನಿಬ್ಬೆರಗಾದಂತೆ ಕಂಡಿತು. ಸುಮ್ಮನೆ ಕೈ ಕಾಲು ಅಲ್ಲಾಡಿಸುತ್ತಾ ಒಂದು ಇನ್ನೊಂದರ ನೃತ್ಯವನ್ನು ನೋಡಿ ಬಾಕಿಯಾಗಿತ್ತು. ಉಳಿದ ಮಕ್ಕಳು ತಮ್ಮ ನೃತ್ಯವನ್ನೇ ಮರೆತು ವೇದಿಕೆಯ ಹಿಂಬದಿಯ ದೊಡ್ಡ ಸ್ಕ್ರೀನಿನಲ್ಲಿ ಬರುವ ತಮ್ಮದೇ ನೃತ್ಯವನ್ನು ಬಹಳ ಉತ್ಸಾಹದಿಂದ ಕೈಕಟ್ಟಿ ನಿಂತು ನೋಡುತ್ತಿತ್ತು.
ಪರದೆಯ ಮರೆಯಲ್ಲಿ ನಿಂತು ಅಧ್ಯಾಪಕಿಯರು ಗುಸುಗುಸು ಎನ್ನುತ್ತಾ ಸಣ್ಣ ಶಬ್ದದಲ್ಲಿ ನೃತ್ಯ ಮಾಡಲು ಪ್ರೇರೇಪಿಸುತ್ತಿದ್ದರು. ಮಕ್ಕಳಿಗೆ ಇದಾವುದರ ಪರಿವೆಯೇ ಇರಲಿಲ್ಲ. ವೇದಿಕೆಯಲ್ಲಿ ಮಕ್ಕಳಿಗಿಂತಲೂ ಪರದೆಯ ಮರೆಯಲ್ಲಿ ಅಧ್ಯಾಪಕಿಯರು ಕುಣಿಯುತ್ತಿದ್ದರು. ಇದು ನಮ್ಮ ಬಾಲ್ಯದಿಂದ ಹಿಡಿದು ಇಂದಿನವರೆಗೂ ಕಂಡುಬರುವ ಸಣ್ಣ ಮಕ್ಕಳ ವಾರ್ಷಿಕೋತ್ಸವದ ಚಿತ್ರಣ.
ನನ್ನ ಬಾಲ್ಯದ ಒಂದು ವಾರ್ಷಿಕೋತ್ಸವದ ದಿನ ಒಂದೇ ಒಂದು ಬಾರಿ ನೃತ್ಯ ಮಾಡಿದ ಅನುಭವ ನನಗೂ ಇದೆ. ಆಗ ನಾವು ಹುಡುಗಿಯರು ಯಾರೂ ಅಷ್ಟಾಗಿ ನೃತ್ಯಕ್ಕೆ ಸೇರುತ್ತಿರಲಿಲ್ಲ. ಟೀಚರ್ ಒತ್ತಾಯದಿಂದ ಹೆಸರು ನೋಂದಾಯಿಸಿದ್ದರಿಂದ ಸೇರದೆ ಬೇರೆ ದಾರಿಯೂ ಇರಲಿಲ್ಲ. ಕೃಷಿಗಳೆಲ್ಲ ಒಣಗಿ ಬಂಜರು ಭೂಮಿಯನ್ನು ತಣಿಸಲು ಮಳೆರಾಯನನ್ನು ಕರೆಯುತ್ತಾ “ಮಳೆರಾಯ.. ಹೊನ್ನ ಸುರಿಸು” ಎಂದು ಹಾಡುವ ರೈತರ ನೃತ್ಯ. ಬಿಳಿಯ ಬನಿಯನ್ ಮತ್ತು ಬಿಳಿ ಪಂಚೆಯನ್ನು ಮಕ್ಕಳೆಲ್ಲರಿಗೂ ಉಡಿಸಿ, ಕಾಲಿಗೆ ದೊಡ್ಡ ಗೆಜ್ಜೆಯನ್ನು ಕಟ್ಟಿ, ದಡೂತಿ ಮೇಕಪ್ ಮ್ಯಾನ್ ಎಲ್ಲರ ಮುಖಕ್ಕೂ ಮೀಸೆಯನ್ನು ಬಿಡಿಸಿ, ಸಣ್ಣ ಮಕ್ಕಳಿಗೆ ಪರಸ್ಪರ ಗುರುತು ಹಿಡಿಯಲು ಕಷ್ಟ ಮಾಡಿಬಿಟ್ಟಿದ್ದ.
ನನಗೆ ಕಾಲಿಗೆ ಕಟ್ಟಿದ ಗೆಜ್ಜೆ ಸರಿಯಾಗಿ ಗಟ್ಟಿಯಾಗಿ ಕಟ್ಟದ ಅನುಭವ. ಗೆಳತಿ ತೃಪ್ತಿಗೆ ಪಂಚೆಯನ್ನು ಸೊಂಟಕ್ಕೆ ಸರಿಯಾಗಿ ಸಿಕ್ಕಿಸದ ಅತೃಪ್ತಿ. ಹೇಗೂ ಬಣ್ಣ ಬಣ್ಣದ ಬೆಳಕಿನ ವೇದಿಕೆಗೆ ಹತ್ತಿಯಾಯಿತು. ನೃತ್ಯ ಕಲಿಸಿದ ಅಧ್ಯಾಪಕಿಯರು ಮೈಕ್ ಹಿಡಿದು ಹಾಡತೊಡಗಿದರು. ವೇದಿಕೆಯಲ್ಲಿ ನಡುನಡುವೆ ಬೆಳಕು ಮತ್ತು ನಡು ನಡುವೆ ಕತ್ತಲು. ಕಾಲೆತ್ತಿ ಕುಣಿಯುವಾಗ ಕಾಲಿಗೆ ಕಟ್ಟಿದ ಗೆಜ್ಜೆಯು ಮೇಲಕ್ಕೆ ಹಾರಿತು, ನೃತ್ಯವು ಮರೆತು ಹೋಯಿತು. ಗೆಜ್ಜೆಯನ್ನು ಹಿಂದಿರುಗಿಸಬೇಕಲ್ಲವೇ ಎಂಬ ಆತಂಕದಲ್ಲಿ ನೃತ್ಯ ಬಿಟ್ಟು ಗೆಜ್ಜೆಯನ್ನು ಹುಡುಕತೊಡಗಿದೆ. ಉಟ್ಟ ಪಂಚೆ ಬಿಚ್ಚಿ ನೆಲದ ಮೇಲೆ ಹರಡಿದಾಗ ಪಂಚೆಯನ್ನು ಮುದ್ದೆ ಮಾಡಿ ಹಿಡಿದು ಗೆಳತಿಯೂ ನೃತ್ಯ ಮಾಡದೆ ಸ್ಥಳದಿಂದ ಕದಲದೆ ಮೂಲೆಯಲ್ಲಿ ನಿಂತು ಬಿಟ್ಟಳು. ಇದನ್ನೆಲ್ಲಾ ನೋಡುತ್ತಾ ಪರದೆಯ ಮರೆಯಲ್ಲಿ ಹಾಡುತ್ತಿದ್ದ ಅಧ್ಯಾಪಕಿಯರ ಮೈಕ್ ನಿಂದ ನಗು ಕೇಳಿಸುತ್ತಿತ್ತು.
ನಮ್ಮ ಬಾಲ್ಯದಂತೆ ಇಂದಿಗೂ ಕೂಡ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ನೃತ್ಯ ಮಾಡಲು ಸಣ್ಣ ಮಕ್ಕಳು ವೇದಿಕೆ ಹತ್ತುವುದನ್ನು ಅತಿ ಭಯಂಕರ ತಪ್ಪಾಗಿ ಕಾಣುವಾಗ ಬೇಸರವಾಗುತ್ತದೆ. ಹಾಡನ್ನು ಕೇಳುವಾಗ ತೊಟ್ಟಿಲಲ್ಲಿ ಮಲಗಿದ ಮಗು ಕೂಡ ನಗುತ್ತಾ ಕೈ ಕಾಲು ಅಲ್ಲಾಡಿಸುತ್ತಾ ಅದರ ಸಂತೋಷವನ್ನು ವ್ಯಕ್ತ ಪಡಿಸುತ್ತದೆ. ಹಾಡು ಕೇಳುವಾಗ ಸಣ್ಣ ಮಕ್ಕಳು ಕುಣಿಯುವುದು ಸ್ವಾಭಾವಿಕ. ಅದರಲ್ಲಂತೂ ವಾರ್ಷಿಕೋತ್ಸವದಂದು ಪುಟ್ಟ ಪುಟ್ಟ ಸಹಪಾಠಿಗಳ ಜೊತೆ ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿ ಗಂಡು ಹೆಣ್ಣಿನ ಬೇಧವನ್ನು ಮರೆತು ಒಬ್ಬರಿಗೊಬ್ಬರು ಕೈ ಹಿಡಿದು ಕುಣಿಯುವ, ಜಗಮಗಿಸುವ ಬೆಳಕಿನಲ್ಲಿ ನಕ್ಷತ್ರಗಳಂತೆ ಕಾಣುವ ಪುಟ್ಟ ಮಕ್ಕಳು ಅನುಭವಿಸುವ ಅತ್ಯಂತ ಸಂತೋಷದ ದಿನ.
ನಮ್ಮ ಮನೆಯ ಹೆಣ್ಣು ಮಕ್ಕಳು ದೊಡ್ಡವರಾಗುತ್ತ ಹೋದಂತೆ ಅವರು ಬೆಳೆದು ಬಂದ ಮನೆಯ ವಾತಾವರಣವು, ಅವರಿಗೆ ನೀಡಿದ ಶಿಕ್ಷಣವು, ಯಾವುದು ಸರಿ ಯಾವುದು ತಪ್ಪು ಎಂದು ಅರ್ಥೈಸಿಕೊಳ್ಳುವ ಸಣ್ಣ ಬುದ್ಧಿವಂತಿಕೆಯು ಅವರು ಬೆಳೆಯುತ್ತ ಹೋದಂತೆ ಅವರಲ್ಲಿ ಮೈಗೂಡುತ್ತದೆ. ಲಜ್ಜೆಯೂ ಕಾಲಕ್ರಮೇಣ ಅವರಿಗೆ ಎಲ್ಲವೂ ಕಲಿಸುತ್ತಾ ಹೋಗುತ್ತದೆ. ಇನ್ನು ಎಲ್ಲರೆದುರು ನೃತ್ಯ ಮಾಡುವಂತಿಲ್ಲ ಎಂದು ನಾವು ಹೇಳಿಕೊಡಬೇಕಾದ ಅವಶ್ಯಕತೆಯೇ ಇರುವುದಿಲ್ಲ. ಅನ್ಯರ ಎದುರು ಕುಣಿಯಲು ಅವರೇ ನಾಚಿಕೆ ಪಡುತ್ತಾರೆ. ಇಸ್ಲಾಮೀ ಚೌಕಟ್ಟಿನೊಳಗಿನ ಹೆಣ್ಣಿನ ವಸ್ತ್ರಧಾರಣೆಯನ್ನು ಅವರ ಮೇಲೆ ಒತ್ತಾಯ ಪಡಿಸಬೇಕೆಂದೇನಿಲ್ಲ. ಅವರು ಸ್ವಂತ ಇಷ್ಟದೊಂದಿಗೆ ಅದನ್ನು ಪಾಲಿಸ ತೊಡಗುತ್ತಾರೆ. ಆದ್ದರಿಂದ ಸಣ್ಣ ಮಕ್ಕಳ ಸಣ್ಣ ಇಷ್ಟಗಳಿಗೆ ಬೇಲಿ ಕಟ್ಟದಿರೋಣ.

1 COMMENT

  1. ಹಾಸ್ಯಭರಿತವಾದ ಬಾಲ್ಯದ ನೆನಪನ್ನು ಹಾಸ್ಯಭರಿತವಾಗಿ ಬರವಣಿಗೆಯ ನಮ್ಮ ಬಾಲ್ಯವನ್ನು ನೆನಪಿಸುವುದರ ಜೊತೆಗೆ ಒಂದೋಳ್ಳೆ ಸಂದೇಶವು ಇದೆ ಧನ್ಯವಾದ

Comments are closed.