ಪ. ಬಂಗಾಳ : ರಮಝಾನ್ ಮುಂಚಿತವಾಗಿ ಚುನಾವಣೆ ನಡೆಸಲು ಒತ್ತಾಯ

0
1099

ಕೋಲ್ಕತಾ: ರಮಝಾನ್ ಗೆ  ಮುಂಚಿತವಾಗಿ ಪಂಚಾಯತ್ ಚುನಾವಣೆ ನಡೆಸಲು ಕರೆ ನೀಡಿದ್ದ ತೃಣಮೂಲ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ ಮುಸ್ಲಿಂ ಸಂಘಟನೆಗಳ ನಿಯೋಗವು ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯುಕ್ತ ಅಮರೇಂದ್ರ ಕುಮಾರ್ ಸಿಂಗ್ ಅವರಿಗೆ ಇದೇ ಬೇಡಿಕೆಯನ್ನು ಒತ್ತಾಯಿಸಿ ಮನವಿ ಸಲ್ಲಿಸಿತು.
ನಖೋಡಾ ಮಸೀದಿಯ ಇಮಾಮ್ ಮೌಲಾನಾ ಶಫೀಕ್ ಖಾಸ್ಮಿ  ನೇತೃತ್ವದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳ ನಿಯೋಗವು ಮನವಿ ಸಲ್ಲಿಸಿದ್ದು , ರಮಝಾನ್ ಅವಧಿಯಲ್ಲಿ ಮತದಾನ ನಡೆಸಿದರೆ ಕೋರ್ಟ್ ಮೆಟ್ಟಿಲೇರುವುದಾಗಿಯೂ ಪ್ರತಿನಿಧಿಗಳ ಪೈಕಿ ಒಬ್ಬರು ಬೆದರಿಕೆ ಹಾಕಿದ್ದಾರೆ.
ನಿಯೋಗದಲ್ಲಿದ್ದ ಬಿರ್ಭುಮ್ ನಲ್ಹಾಟಿ  ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಶಾಸಕ ಮತ್ತು ರಾಜ್ಯ ಸಚಿವ ಮೊಯಿನುದ್ದೀನ್ ಶಮ್ಸ್  ರಾಜ್ಯ ಚುನಾವಣಾ ಸಮಿತಿಯ ಅಧಿಕಾರಿಗಳನ್ನು  ಭೇಟಿ ಮಾಡಿ,  ರಮಝಾನ್  ಮೊದಲು ಗ್ರಾಮೀಣ ಚುನಾವಣೆ ಮುಗಿಸುವಂತೆ ಮನವಿ ಸಲ್ಲಿಸಿ ಮಾತನಾಡುತ್ತಾ , “ರಮಝಾನ್ ಮುಸ್ಲಿಮರಿಗೆ ಪವಿತ್ರ ತಿಂಗಳು. ಈ ತಿಂಗಳಲ್ಲಿ ಮತದಾನವನ್ನು ನಿಗದಿಪಡಿಸಿದರೆ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ತೊಂದರೆ ಎದುರಿಸಬೇಕಾಗುತ್ತದೆ. ” ಹಾಗೆಯೇ ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗವು ರಮಝಾನ್ ಮೊದಲು ಮತದಾನ ನಡೆಯಲಿದೆ ಎಂಬುವುದು ಶೀಘ್ರದಲ್ಲೇ  ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಮಾತನಾಡಿದ , ನಖೋಡಾ ಮಸೀದಿಯ ಇಮಾಮ್ ಮೌಲಾನಾ ಶಫೀಕ್ ಖಾಸ್ಮಿ ” ನಾವು ರಾಜ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ್ದೇವೆ ಮತ್ತು ರಮಝಾನ್ ಸಮಯದಲ್ಲಿ ಚುನಾವಣೆಗಳನ್ನು ನಿಗದಿಪಡಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅವರಿಗೆ ಮನವಿ ಸಲ್ಲಿಸಿದ್ದು ಅವರು ರಮಝಾನ್ ಗೂ  ಮೊದಲೇ ಚುನಾವಣೆ ನಡೆಯುವಂತೆ ಹೊಸ ದಿನಾಂಕಗಳನ್ನು ನಿಗದಿಪಡಿಸುವಲ್ಲಿ ಪ್ರಯತ್ನ ಪಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಏತನ್ಮಧ್ಯೆ, ಇತ್ತೀಚೆಗೆ ನಡೆಯಬೇಕಿದ್ದ  ರಾಜ್ಯ ಚುನಾವಣಾ ಸಮಿತಿ ಮತ್ತು ರಾಜ್ಯ ಸರಕಾರಗಳ ನಡುವಿನ ಸಭೆಯು ಇದುವರೆಗೆ ನಡೆಯಲಿಲ್ಲ ಎಂದು ತಿಳಿದುಬಂದಿದೆ.