ಫಿರ್ ಔನ್ ನ ಪತ್ನಿ ಆಸಿಯಾರ ಪ್ರಾರ್ಥನೆ ನೆನಪಿದೆಯೇ ಮನೆ ಮಾಲಕರೇ?

0
1199

ಖದೀಜಾ ನುಸ್ರತ್ ಅಬುಧಾಬಿ

ಸ್ವಂತ ಮನೆಯೆಂಬುದು ಎಲ್ಲರ ಕನಸಾಗಿರುತ್ತದೆ. ಮೂಲಭೂತ ಸೌಕರ್ಯಗಳಿರುವ ಮನೆ ಇಹಲೋಕ ಜೀವನದ ಅತಿ ದೊಡ್ಡ ಅನುಗ್ರಹವಾಗಿರುತ್ತದೆ. ಅರಬಿಯಲ್ಲಿ ಮನೆಗೆ ಮಸ್ಕನ್ ಎಂದು ಹೇಳಲಾಗುತ್ತದೆ. ಮನೆಯೆಂಬುದು ಶಾಂತಿ ಮತ್ತು ನೆಮ್ಮದಿಯ ಕೇಂದ್ರ. ಪರಸ್ಪರ ಪ್ರೀತಿ, ಗೌರವ, ಹೊಂದಾಣಿಕೆ ಮತ್ತು ಕರುಣೆಯಿಂದ ಮಾತ್ರ ನೆಮ್ಮದಿಯ ಶಾಂತಿಧಾಮವನ್ನು ನಿರ್ಮಿಸಲು ಸಾಧ್ಯ.

   ಮನೆಯು ಸುಲಭವಾಗಿ ಶುಚಿಗೊಳಿಸಲು ಸಾಧ್ಯವಿರುವಂತಹದ್ದೂ, ನಿರ್ವಹಣಾ ವೆಚ್ಚವು ಕಡಿಮೆ ದರದಲ್ಲಿ ಆಗುವಂತಿರಬೇಕು. ಮನೆ ನಿರ್ಮಾಣದ ಮುಖ್ಯ ಉದ್ದೇಶವೇನು? ಬಿಸಿಲು, ಮಳೆ, ಚಳಿಯಿಂದ ರಕ್ಷಣೆ ಪಡೆಯುವುದಾಗಿದೆ. ನಮ್ಮ ಮನೆ ಯಾರಿಗೆ? ನಮಗೆ ವಾಸಿಸಲಿಕ್ಕೆ ಇರುವುದೋ? ಅಥವಾ ಜನರ ಮಧ್ಯೆ ಅಭಿಮಾನ ಪಡಲಿಕ್ಕೆ ಇರುವುದೋ? ಅಥವಾ ಜನರಿಗೆ ತೋರಿಸಲಿಕ್ಕೆ ಇರುವುದೋ?
ಇಂದು ಮನೆ ನಿರ್ಮಾಣದ ಮುಖ್ಯ ಉದ್ದೇಶ ಬಿಸಿಲು ಮಳೆಯಿಂದ ರಕ್ಷಣೆ ಪಡೆಯುವುದು ಮಾತ್ರವಲ್ಲ. ಮನೆಗೆ ಬಂದ ನೆಂಟರಿಗೆಲ್ಲಾ ಎಲ್ಲಾ ಕೊಠಡಿ, ಪೀಠೋಪಕರಣ, ಇನ್ಟೀರಿಯರ್ ಡಿಸೈನ್, ಸ್ನಾನಗೃಹವನ್ನು ಕೂಡಾ ತೋರಿಸುತ್ತಾ ಮನೆಯ ಕಲೆ ವಾಸ್ತುಶಿಲ್ಪ, ಮನೆ ನಿರ್ಮಾಣಕ್ಕೆ ಉಪಯೋಗಿಸಿದ ಕಲ್ಲು, ಮರಳು, ಮರ, ಕಂಬಿ, ಸಿಮೆಂಟ್, ಪೈಂಟ್,ಟ್ಯಾಪ್, ಟೈಲ್ಸ್, ಗ್ರಾನೈಟ್ ನ ಗುಣ ಮಟ್ಟ, ಬ್ರಾಂಡ್ ನ್ನು ಹೊಗಳುತ್ತಾ ಜನರ ಮಧ್ಯೆ ಹೆಮ್ಮೆಯಿಂದ ಅಭಿಮಾನಪಡುವುದಾಗಿದೆ. ಮನೆಯ ಸೌಂದರ್ಯ, ಸೌಕರ್ಯದ ಬಗ್ಗೆ ಅಭಿಮಾನ ಪಡುವುದು ಅರ್ಥಶೂನ್ಯವೆಂಬುದು ಎಲ್ಲರಿಗೂ ತಿಳಿದ ವಿಷಯ. ಮರ, ಕಲ್ಲು, ಮಣ್ಣಿನಿಂದ ತಮ್ಮೆಡೆಗೆ ಗಮನ ಸೆಳೆಯಲು ಪ್ರಯತ್ನಿಸುವುದು ಮೂರ್ಖತನವಾಗಿದೆ. ಹಾಗಂತ,

ದೊಡ್ಡ ದೊಡ್ಡ ಐಶಾರಾಮದ ಮನೆಯನ್ನು ನಿರ್ಮಿಸಿ ಅಭಿಮಾನ ಪಡುವಂತಹ ಸ್ವಭಾವ ನಿನ್ನೆ ಮೊನ್ನೆ ಆರಂಭವಾದುದಲ್ಲ. ಸಾವಿರಾರು ವರ್ಷಗಳ ಹಿಂದೆ ಅಲ್ಲಾಹನ ಕ್ರೋಧಕ್ಕೆ ಬಲಿಯಾಗಿ ಇಹಲೋಕದಲ್ಲೇ ನಿರ್ಣಾಮಗೊಳಿಸಲ್ಪಟ್ಟ ಆದ್ ಮತ್ತು ಸಮೂದ್ ಗೋತ್ರದ ಚರಿತ್ರೆಯು ನಮಗೆಲ್ಲರಿಗೂ ತಿಳಿದಿದೆ. ಅತ್ಯುನ್ನತ ಸ್ಥಂಭದ ಉನ್ನತ ಕಟ್ಟಡಗಳನ್ನು ಕಟ್ಟುವುದು ಆದ್ ಜನಾಂಗದ ವೈಶಿಷ್ಟ್ಯವಾಗಿತ್ತು. ಆದ್ ಜನಾಂಗವು ತೀವ್ರ ಚಂಡಮಾರುತದಿಂದ ನಾಶಗೊಳಿಸಲ್ಪಟ್ಟರು. ಪರ್ವತಗಳನ್ನು ಕೊರೆದು ಅವುಗಳೊಳಗೆ ಕಟ್ಟಡಗಳನ್ನು ಮತ್ತು ಬಯಲು ಪ್ರದೇಶಗಳಲ್ಲಿ ಭವ್ಯ ಅರಮನೆಗಳನ್ನು ನಿರ್ಮಿಸುವುದು ಸಮೂದ್ ಜನಾಂಗದ ವೈಶಿಷ್ಟ್ಯವಾಗಿತ್ತು. ಸಮೂದ್ ಜನಾಂಗವು ಭಯಾನಕ ಭೂಕಂಪ, ಭೀಕರ ಸ್ಪೋಟದಿಂದ ನಾಶಗೊಳಿಸಲ್ಪಟ್ಟರು. ಲೋಕಾಂತ್ಯದವರೆಗೆ ಬರುವ ಜನರಿಗೆ ಪಾಠವಾಗಿ ಸಮೂದ್ ಜನಾಂಗದ ಅವಶೇಷಗಳನ್ನು ಸೌದಿ ಅರೇಬಿಯಾದ ಹಿಜ್ರ್ ಎಂಬ ಪ್ರದೇಶದಲ್ಲಿ ಇಂದಿಗೂ ಯಾರಿಗೂ ಕಾಣಬಹುದಾಗಿದೆ.

   ನಮ್ಮ ಮನೆಯ ಬಗ್ಗೆ ಒಮ್ಮೆ ನಾವೇ ಅವಲೋಕನ ನಡೆಸುವ. ನಮ್ಮ ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಕೊಠಡಿ, ಸ್ನಾನಗೃಹಗಳಿವೆಯೇ? ಕೇವಲ ಐದಾರು ಮಂದಿಗೆ ಆಹಾರ ಬೇಯಿಸಲು ವಿಶಾಲವಾದ ಎರಡು ಮೂರು ಅಡುಗೆ ಕೋಣೆಗಳಿವೆಯೇ? ವರ್ಷದಲ್ಲಿ ಒಮ್ಮೆಯಾದರೂ ಉಪಯೋಗಿಸದ ಮನೆ ಬಳಕೆಯ ವಸ್ತುಗಳೆಷ್ಟಿದೆ? ನಮ್ಮ ಮನೆಯ ಮುಂದಿನ ಭಾಗದ ವಿನ್ಯಾಸ, ಮುಂಬಾಗಿಲಿಗೆ ಎಷ್ಟು ಹಣ ಖರ್ಚು ಮಾಡಿದ್ದೇವೆ? ಟೇಬಲ್, ಕುರ್ಚಿ, ಸೋಫಾ, ಮಂಚ ಇತ್ಯಾದಿಗಳಿಗೆ ಎಷ್ಟು ಹಣ ಖರ್ಚು ಮಾಡಿದ್ದೇವೆ? ಕುಳಿತುಕೊಳ್ಳಲು, ಮಲಗಲು ಬೆಲೆಬಾಳುವ ಐಶಾರಾಮದ ಕುರ್ಚಿ, ಮಂಚವೇ ಬೇಕೆ? ಅಷ್ಟು ಖರ್ಚು ಮಾಡುವ ಅವಶ್ಯಕತೆ ಇತ್ತೇ? ನಮ್ಮ ಮನೆಯಲ್ಲಿ ಪ್ರದರ್ಶನಕ್ಕೆ ಇಟ್ಟ ವಸ್ತುಗಳೆಷ್ಟಿದೆ? ಅದನ್ನು ಶುಚಿಗೊಳಿಸಲು ಸಮಯವೆಷ್ಟು ವ್ಯರ್ಥವಾಗುತ್ತಿದೆ? ನಮ್ಮ ಸಮಾಜದಲ್ಲಿ ಒಂದು ವಿಭಾಗ ಜನರು ಬಿಸಿಲು, ಮಳೆ, ಚಳಿಯಿಂದ ರಕ್ಷಣೆ ಪಡೆಯಲು ಸಾಧ್ಯವಾಗದೇ ಮೂಲಭೂತ ಸೌಕರ್ಯಗಳಿರುವ ಮನೆಯಿಲ್ಲದಿರುವವರ ಬಗ್ಗೆ ಒಮ್ಮೆಯಾದರೂ ನಾವು ಆಲೋಚಿಸಿದ್ದೇವೆಯೇ? ಮನೆ ನಿರ್ಮಾಣಕ್ಕಾಗಿ ಹಣ ಕೂಡಿಡುವಾಗ ಬಡವರ, ನಿರ್ಗತಿಕರ, ಅನಾಥರ ಹಕ್ಕನ್ನು ನೀಡಲು ನಿರಾಕರಿಸಿದ್ದೇನೆಯೇ? ಪವಿತ್ರ ಕುರ್ ಆನ್ ಶೈತಾನನ ಸಹೋದರರು ಎಂದು ವಿಶ್ಲೇಷಿಸಿದ ದುಂದುವೆಚ್ಚ, ಅಲ್ಲಾಹನು ಇಷ್ಟಪಡದ ಆತ್ಮಸ್ತುತಿಗೈಯುವ ಅಥವಾ ಅಂತ್ಯ ದಿನದಂದು ವಿಚಾರಣೆಯ ವೇಳೆ ಮನೆಗೆ ಖರ್ಚು ಮಾಡಿದ ಹಣದ ಬಗ್ಗೆ ಉತ್ತರಿಸಲು ಕಷ್ಟಪಡಬೇಕಾದ ಯಾವುದಾದರೂ ನಮ್ಮ ಮನೆ ನಿರ್ಮಾಣ ಅಥವಾ ಪೀಠೋಪಕರಣದಲ್ಲಿ ಇದೆಯಾ? ಐಶಾರಾಮದ ಮನೆಯಲ್ಲಿ ಜೀವಿಸಬೇಕೆಂಬ ಅತ್ಯಾಸೆಯು ಅಧರ್ಮ, ಅಕ್ರಮ ಮಾರ್ಗದಿಂದ ಹಣ ಸಂಪಾದಿಸಲು ಪ್ರೇರೇಪಿಸಿದೆಯೇ? ಅಥವಾ ಬಡ್ಡಿ ಕೊಟ್ಟು ಬ್ಯಾಂಕ್ ನಿಂದ ಲೋನ್ ಪಡೆಯಲು ಪ್ರೇರೇಪಿಸಿದೆಯೇ? ಅಥವಾ ಸಂಬಂಧಿಕರಿಂದ, ಗೆಳೆಯರಿಂದ ಸಾಲ ಪಡೆದು ಹಿಂದಿರುಗಿಸಲಾಗದೆ ಸಂಬಂಧ ಕಡಿದು ಹೋದದ್ದು ಇದೆಯೇ?

ಮನೆ ನಿರ್ಮಿಸುವಾಗ ಮನೆಯ ಹತ್ತಿರ ಮಸೀದಿ ಇದೆಯೇ ಎಂದು ನೋಡಿದ್ದೇವೆಯೇ? ಮನೆಯಲ್ಲಿ ಎಲ್ಲರಿಗೂ ಓದಲು, ಜ್ಞಾನಾರ್ಜನೆಯನ್ನು ಮಾಡಲು ಸಾಕಷ್ಟು ಧಾರ್ಮಿಕ ಪುಸ್ತಕಗಳಿವೆಯೇ? ನಮ್ಮ ಮನೆಯ ಎಲ್ಲ ಕೊಠಡಿಗಳಲ್ಲಿ ದೇವಸ್ಮರಣೆ, ಸಾಷ್ಟಾಂಗ, ಕುರ್ ಆನ್ ಪಾರಾಯಣಗಳಿವೆಯೇ?

ಗಲ್ಫ್ ನಲ್ಲಿ 10-12 ವರ್ಷಗಳ ಕಾಲ ದುಡಿದ ಸಂಪಾದನೆಯನ್ನೆಲ್ಲಾ ಮನೆ ನಿರ್ಮಾಣಕ್ಕೆ ಬಳಸಿ ಉದ್ಯೋಗ ಕಳೆದುಕೊಂಡು ಊರಿಗೆ ಬಂದರೆ ಮನೆಯನ್ನು ಸಂರಕ್ಷಿಸಲು ಕೂಡ ಸಾಧ್ಯವಾಗದ ಅದೆಷ್ಟೋ ಜನರಿದ್ದಾರೆ. ಅಥವಾ ಆರೋಗ್ಯಕಾಲದ ಸಂಪಾದನೆಯನ್ನೆಲ್ಲಾ ಮನೆಕಟ್ಟಲು ಉಪಯೋಗಿಸಿ ನಂತರ ಖೇದಿಸುವವರೂ ಕಡಿಮೆಯಿಲ್ಲ. ಕೆಲವು ಜನರಿಗೆ ಹಲವಾರು ವರ್ಷಗಳ ತಮ್ಮ ಸಂಪಾದನೆಯಲ್ಲಿ ನಿರ್ಮಿಸಿದಂತಹ ಭವ್ಯ ಭವನಗಳಲ್ಲಿ ವಾಸಿಸುವಂತಹ ಸೌಭಾಗ್ಯ ಸಿಗುವುದಿಲ್ಲ. ಕೆಲವೊಮ್ಮೆ ವಿದೇಶದಿಂದ ಮೃತ ಶರೀರವನ್ನು ಹೊಸ ಮನೆಗೆ ತಂದಂತಹ ಅನೇಕ ಘಟನೆಗಳು ನಮಗೆ ಕಾಣಸಿಗುತ್ತದೆ.

ಮನೆ ನಿರ್ಮಿಸಲು, ಅಲಂಕರಿಸಲು ಖರ್ಚು ಮಾಡಿದ ಒಂದು ರೂಪಾಯಿ ಕೂಡ ಮರಳಿ ಸಿಗುವುದಿಲ್ಲವೆಂಬುದನ್ನು ಯಾವಾಗಲೂ ನೆನಪಿಡಬೇಕು. ಇನ್ ವರ್ಟರ್, ಸಿಸಿಟಿವಿ, ಇನ್ಟರ್ ನೆಟ್, ಹವಾ ನಿಯಂತ್ರಣ, ಈಜುಕೊಳ, ಜಿಮ್ ಹೀಗೆ ಎಲ್ಲ ಮನರಂಜನೆಗಳನ್ನೊಳಗೊಂಡ ಸಕಲ ಸೌಕರ್ಯಗಳಿರುವ ಮನೆಯಲ್ಲಿ ವಾಸಿಸುತ್ತಿದ್ದೇನೆಂಬ ಅಭಿಮಾನವಿದ್ದರೆ ನಾನು ಈ ಮನೆಯ ಶಾಶ್ವತ ನಿವಾಸಿಯಲ್ಲ, ಯಾವುದೇ ಸಮಯದಲ್ಲೂ ತನ್ನ ಸೃಷ್ಟಿಕರ್ತನ ಕರೆಗೆ ಓಗೊಟ್ಟು ಮರಳಬೇಕು ಎಂಬ ಕಹಿವಾಸ್ತವವನ್ನು ಮರೆಯಬಾರದು.
ಪವಿತ್ರ ಕುರ್ ಆನ್ ಸತ್ಯವಿಶ್ವಾಸಿಯರಿಗೆಲ್ಲ ಮಾದರಿಯೆಂದು ತಿಳಿಸಿದ ಫಿರ್ ಔನ್ ನ ಪತ್ನಿ ಆಸಿಯಾ ಸಕಲ ಸೌಕರ್ಯಗಳಿರುವ ಅರಮನೆಯಲ್ಲಿ ಪ್ರಾರ್ಥಿಸಿದ ಪ್ರಾರ್ಥನೆ “ಓ ನನ್ನ ಪ್ರಭೂ, ನನಗಾಗಿ ನಿನ್ನ ಸ್ವರ್ಗದಲ್ಲೊಂದು ಭವನವನ್ನು ನಿರ್ಮಿಸಿಕೊಡು”(ಅತ್ತಹ್ ರೀಮ್: 11) ಯನ್ನು ನಾವು ಇಲ್ಲಿ ನೆನಪಿಸಬೇಕಾಗಿದೆ.