ಬಿಜೆಪಿಯ ಭದ್ರಕೋಟೆಗೆ ಕನ್ನ ಕೊರೆಯಲು ಯಶಸ್ವಿಯಾಗುವುದೇ ಕಾಂಗ್ರೆಸ್?

0
1254

ಪಿ.ಕೆ.ಅಬ್ದುಲ್ ರೆಹೆಮಾನ್, ವಿರಾಜಪೇಟೆ

ವಿರಾಜಪೇಟೆ: ವಿಧಾನಸಭಾ ಚುನಾವಣೆಗೆ ದಿನ ನಿಗದಿಯಾಗದಿದ್ದರೂ ಗಡಿ ವಿಧಾನಸಭಾ ಕ್ಷೇತ್ರವಾದ ವಿರಾಜಪೇಟೆಯಲ್ಲಿ ಈಗಾಗಲೇ ಪ್ರಮುಖ ಮೂರು ಪಕ್ಷಗಳಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಪ್ರಾರಂಭಗೊಂಡಿದೆ. ಅಚ್ಚರಿಯ ಬೆಳವಣಿಗೆಯೇನೂ ಸಂಭವಿಸದೆ ಇದ್ದಲ್ಲಿ ವಿರಾಜಪೇಟೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಚುನಾವಣಾ ವೇಳಾಪಟ್ಟಿಗೆ ಮುಂಚಿತವಾಗಿಯೇ ಜೆ.ಡಿ.ಎಸ್.ಪಕ್ಷ ಅಭ್ಯರ್ಥಿಯನ್ನು ಘೋಷಿಸಿದೆ. ಪಕ್ಷದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ.

ಜೆ.ಡಿ.ಎಸ್.ಪಕ್ಷ ಅಭ್ಯರ್ಥಿ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್

ಬಿ.ಜೆ.ಪಿ.ಪಕ್ಷದಿಂದ ಹಾಲೀ ಶಾಸಕ ಕೆ.ಜಿ.ಬೋಪಯ್ಯನವರೇ ಬಹುತೇಕ ಅಭ್ಯರ್ಥಿಯಾಗಲಿದ್ದಾರೆ.

ಬಿ.ಜೆ.ಪಿಯ ಶಾಸಕ ಕೆ.ಜಿ.ಬೋಪಯ್ಯ

ಬಿ.ಜೆ.ಪಿಗೆ ಹೋಲಿಸಿದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ದಂಡು ದೊಡ್ಡದು. ಈಗಾಗಲೇ 8 ಜನ ಆಕಾಂಕ್ಷಿಗಳಾಗಿ ಹೊರಹೊಮ್ಮಿದ್ದಾರೆ. ಹೈಕಮಾಂಡ್ ನಿರ್ಧಾರ ಯಾರ ಕಡೆಗೆ ಎನ್ನುವುದು ಕುತೂಹಲಕಾರಿ. ವಿಧಾನಪರಿಷತ್ ಮಾಜೀ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಕೆ.ಹರೀಶ್ ಬೋಪಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ರಾಜ್ಯ ಅರಣ್ಯ ಅಭಿವೃದ್ದಿ ನಿಗಮ ಉಪಾಧ್ಯಕ್ಷೆ ಎಂ.ಪದ್ಮಿನಿ ಪೊನ್ನಪ್ಪ, ಜಿಲ್ಲಾ ಪಂಚಾಯತ್ ಸದಸ್ಯೆ ಸರಿತಾ ಪೂಣಚ್ಚ, ಬಿ.ಎಸ್.ತಮ್ಮಯ್ಯ, ತಾರಾ ಅಯ್ಯಮ್ಮ ಹಾಗೂ ವಿಟ್ಲ ಮಾಜೀ ಶಾಸಕ ಕೆ.ಎಂ.ಇಬ್ರಾಹೀಮ್ ಮಾಸ್ಟರ್ ಈಗ ಪಟ್ಟಿಯಲ್ಲಿ ಇರುವವರು.

ಕಾಂಗ್ರೆಸ್ ಪಕ್ಷ ಆಕಾಂಕ್ಷಿಗಳು

ಕ್ಷೇತ್ರ ವಿಂಗಡಣೆಗೆ ಮುಂಚೆ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ವಿರಾಜಪೇಟೆ ಕ್ಷೇತ್ರದಲ್ಲಿ 1994ರಲ್ಲಿ ಮೊದಲ ಬಾರಿಗೆ ಕಮಲ ಅರಳಿತು. ಎಸ್.ಟಿ ಮೀಸಲು ಕ್ಷೇತ್ರವಾಗಿದ್ದ ವಿರಾಜಪೇಟೆಯಿಂದ ಬಿ.ಜೆ.ಪಿ.ಯ ಹೆಚ್.ಡಿ.ಬಸವರಾಜು ಮೊದಲಬಾರಿಗೆ ಶಾಸಕರಾಗಿ ಆಯ್ಕೆ ಹೊಂದಿದರು. 1999ರ ಚುನಾವಣೆಯಲ್ಲಿ ಕ್ಷೇತ್ರ ಪುನಃ ಕಾಂಗ್ರೆಸ್ ಪಾಲಾಯ್ತು. ಮಾಜೀ ಸಚಿವೆ ಶ್ರೀಮತಿ ಸುಮಾ ವಸಂತ್ ಶಾಸಕರಾಗಿ ಆಯ್ಕೆಯಾದರು. ಅದು ಸುಮಾ ವಸಂತರ ಕೊನೆಯ ಚುನಾವಣೆಯೂ ಆಯ್ತು. 2004ರಿಂದೀಚೆಗೆ ಬಿ.ಜೆ.ಪಿ.ಯದೇ ದರ್ಬಾರು. 2008ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಕೆ.ಜಿ.ಬೋಪಯ್ಯ ವಿಧಾನಸಭಾ ಅಧ್ಯಕ್ಷರಾದರು. ರಾಜ್ಯದಲ್ಲೇ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆ ಹೊಂದಿದ ಸ್ಪೀಕರ್ ಎಂಬ ಕೀರ್ತಿ ಬೋಪಯ್ಯನವರದ್ದು.

ಈಗ ಬಿ.ಜೆ.ಪಿ.ಗೆ ಜಿಲ್ಲೆಯ ಎರಡೂ ಕ್ಷೇತ್ರಗಳನ್ನು ಈ ಹಿಂದಿನಂತೆಯೇ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಒಟ್ಟು 2,15,000 ಮತದಾರರ ಪೈಕಿ ಸುಮಾರು 50 ಸಾವಿರ ಮತದಾರರನ್ನು ಹೊಂದಿರುವ ಕೊಡವ ಜನಾಂಗದವರಿಗೆ ಪಕ್ಷದಿಂದ ಟಿಕೆಟ್ ನೀಡಬೇಕು ಎಂಬ ವಾದ ಕೊಡವರು ಮುಂದೆ ಇಟ್ಟಿದೆ. ಆದರೆ ಕಳೆದ ತಿಂಗಳಿನಲ್ಲಿ ಜಿಲ್ಲೆಗೆ ಭೇಟಿ ನೀಡಿದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಹಾಲೀ ಶಾಸಕರೇ ಜಿಲ್ಲೆಯ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳುವುದರ ಮೂಲಕ ಕೊಡವ ಜನಾಂಗದವರಲ್ಲಿ ಮುಜುಗರ ಉಂಟು ಮಾಡಿಸಿದೆ. ಕೊಡವರಿಗೆ ಪ್ರಾಬಲ್ಯವಿರುವ ವಿರಾಜಪೇಟೆಯಲ್ಲಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‍ರವರಿಗೆ ಟಿಕೆಟ್ ನೀಡಿ ಅರೆಭಾಷೆ ಗೌಡ ಜನಾಂಗದವರಾದ ಕೆ.ಜಿ.ಬೋಪಯ್ಯನವರನ್ನು ಮಡಿಕೇರಿಯಲ್ಲಿ ಸ್ಪರ್ಧಿಸುವಂತೆ ಮಾಡುವ ಚಿಂತನೆಯೂ ತೆರೆ ಮರೆಯಲ್ಲಿ ನಡೆಯುತ್ತಿದೆ. ಆದರೆ ಕಮಲದ ಭದ್ರಕೋಟೆಯಲ್ಲಿ ಹೊಸ ಪ್ರಯೋಗ ನಡೆಸಿ ಕೈ ಸುಟ್ಟುಕೊಳ್ಳಲು ಬಿ.ಜೆ.ಪಿ.ಯ ವರಿಷ್ಠರು ತಯಾರಿಲ್ಲ ಎಂದು ತಿಳಿದು ಬಂದಿದೆ. ಈ ಹಿಂದೆ ಬಿ.ಜೆ.ಪಿ.ಜಿಲ್ಲಾಧ್ಯಕ್ಷರಾಗಿ ಉತ್ತಮ ಸಂಘಟಕರೆಂದೆನಿಸಿರುವ ಮಾಚಿಮಂಡ ಎಂ.ರವೀಂದ್ರ ಬಿ.ಜೆ.ಪಿ.ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ. ಹಾಗೆಯೇ ಹಾಲಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‍ರವರ ಸಹೋದರ ಸುಜಾ ಕುಶಾಲಪ್ಪನವರೂ ಟಿಕೆಟ್ ಮೇಲೆ ಕಣ್ಣಾಯಿಸಿದ್ದಾರೆ. ಕೊಡವ ಜನಾಂಗದವರನ್ನು ಕಣಕ್ಕೆ ಇಳಿಸಿ ಕ್ಷೇತ್ರದಲ್ಲಿ ಹೆಚ್ಚು ಲಾಭ ಗಳಿಸುವುದಾದಲ್ಲಿ ಅದಕ್ಕೂ ಪಕ್ಷ ಹಿಂಜರಿಯುವುದಿಲ್ಲ ಎಂಬುದು ವಾಸ್ತವ.

ಬಿ.ಜೆ.ಪಿ.ಮಟ್ಟಿಗೆ ಕೆ.ಜಿ.ಬೋಪಯ್ಯ ಪ್ರಬಲ ಅಭ್ಯರ್ಥಿ. ಮಾತ್ರವಲ್ಲ ಜೆ.ಡಿ.ಎಸ್. ನ ಸಂಕೇತ್ ಪೂವಯ್ಯನವರ ರಂಗ ಪ್ರವೇಶದಿಂದಾಗಿ ಹಾದಿ ಇನ್ನಷ್ಟು ಸುಲಭವಾಗಲಿದೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜೆ.ಡಿ.ಎಸ್.ನ ಮಾದಪ್ಪ 5,880 ಮತಗಳನ್ನು ಪಡೆದಿದ್ದರು. ಈ ಬಾರಿ ಸಂಕೇತ್‍ರವರು 15ರಿಂದ 20 ಸಾವಿರ ಮತಗಳನ್ನು ಪಡೆಯುವ ನಿರೀಕ್ಷೆ ಇದೆ. ಸಂಕೇತ್‍ರವರು ಹೆಚ್ಚಿಗೆ ಮತ ಪಡೆದ ದಷ್ಟು ಕಾಂಗ್ರೆಸ್‍ಗೆ ಹಾನಿಯಾಗುವುದು ಖಚಿತ. ಸಂಕೇತ್‍ರವರು ಹೆಚ್ಚು ಬಿ.ಜೆ.ಪಿ.ಯ ಕೊಡವ ಮತಗಳನ್ನು ಪಡೆಯುವುದಾದಲ್ಲಿ ಮಾತ್ರ ಬಿ.ಜೆ.ಪಿ.ಗೆ ಪರೋಕ್ಷವಾಗಿ ಹಾನಿ ಉಂಟಾಗುತ್ತದೆ. ಆದರೆ ಸದ್ಯದ ಮಟ್ಟಿಗೆ ಅದು ಕಷ್ಟ ಸಾಧ್ಯ.

ಬಿ.ಜೆ.ಪಿ.ಗೆ ಕ್ಷೇತ್ರ ಉಳಿಸಿಕೊಳ್ಳುವುದು ಮುಖ್ಯವಾದರೂ ಹಲವು ಅಡೆತಡೆಗಳಿವೆ. ಕಳೆದ ಬಾರಿ ಕೇವಲ 3,414 ಅಲ್ಪ ಮತಗಳ ಅಂತರದಿಂದ ಮಾತ್ರ ಪಕ್ಷ ಗೆದ್ದಿತ್ತು. ರಾಜ್ಯ ಸರಕಾರಗಳ ಅಭಿವೃದ್ಧಿ ಕಾರ್ಯಗಳು ಗ್ರಾಮೀಣ ಜನತೆಯಲ್ಲಿ ಅಲ್ಪಸಂಖ್ಯಾತರಲ್ಲಿ ಹೆಚ್ಚು ಜನಪ್ರಿಯವಾಗಿದೆ ಎಂಬುದರಲ್ಲಿ ಎರಡು ಮತಿಲ್ಲ. ಅಭಿವೃದ್ದಿ ಕಾರ್ಯಗಳಲ್ಲಿ ಬಿ.ಜೆ.ಪಿ.ಶಾಸಕರು ಸರಕಾರದ ಪ್ರತಿನಿಧಿಗಳೊಂದಿಗೆ ಸಹಕರಿಸುತ್ತಿಲ್ಲ ಎಂಬ ಮಾತು ಶಾಸಕರಿಗೆ ತಿರುಗೇಟು ಆಗಲಿದೆ. ಪೊನ್ನಂಪೇಟೆ ತಾಲೂಕು ರಚನಾ ಹೋರಾಟದ ಬಗ್ಗೆಯೂ ಶಾಸಕರು ನಿರೀಕ್ಷಿತ ಮಟ್ಟಕ್ಕೆ ಜನರೊಂದಿಗೆ ಬೆರೆತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಜನಪ್ರಿಯ ನಾಯಕ ಬಿ.ಟಿ.ಪ್ರದೀಪ್‍ರವರನ್ನು ಕಣಕ್ಕೆ ಇಳಿಸಿ ಉತ್ತಮ ಹೋರಾಟ ನೀಡಿದ ಕಾಂಗ್ರೆಸ್‍ನಲ್ಲಿ ಪ್ರದೀಪ್‍ರವರಿಗೆ ಸರಿಸಾಟಿಯಾಗುವ ಅಭ್ಯರ್ಥಿ ಇಲ್ಲ ಎನ್ನುವುದು ಕೊರತೆ. ಪ್ರದೀಪ್‍ರವರ ಅನಿರೀಕ್ಷಿತ ಸಾವಿನ ಶಾಕ್‍ನಿಂದ ಪಕ್ಷ ಇನ್ನೂ ಚೇತರಿಸಿಕೊಂಡಿಲ್ಲ.

ವಿರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡವ ಜನಾಂಗದವರಿಗೆ ಎಂಬುದು ನಿಚ್ಚಳವಾದ ಬೆನ್ನಲ್ಲೇ, ಸುಮಾರು 42,000 ಮತಗಳನ್ನು ಹೊಂದಿರುವ ಎರಡನೇ ಪ್ರಮುಖ ಜನಾಂಗವಾದ ಮುಸ್ಲಿಮರು ಕಾಂಗ್ರೆಸ್ ಟಿಕೆಟ್ ತಮ್ಮ ಸಮುದಾಯದವರಿಗೆ ನೀಡಬೇಕೆಂಬ ಬೇಡಿಕೆಯನ್ನು ವರಿಷ್ಠರ ಮುಂದೆ ಇಟ್ಟಿದೆ. ವಿಟ್ಲ ಮಾಜೀ ಶಾಸಕರೂ ಹಿರಿಯ ಸಮುದಾಯ ನಾಯಕರೂ ಆದ ಕೆ.ಎಂ.ಇಬ್ರಾಹೀಮ್‍ರವರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಮುಸ್ಲಿಮ್ ಸಮಾಜ ಪಕ್ಷದ ಮುಂದೆ ಇಟ್ಟಿದೆ. ಕೊಡವ ಮುಸ್ಲಿಂ ಅಸೋಸಿಯೇಷನ್ ಕೂಡ ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶ ಮುಸ್ಲಿಮರಿಗೆ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಪಕ್ಷದ ಟಿಕೆಟ್ ಲಭ್ಯವಾಗದಿದ್ದಲ್ಲಿ ಪಕ್ಷೇತರರಾಗಿ ವ್ಯಕ್ತಿಯೊಬ್ಬರನ್ನು ಕಣಕ್ಕೆ ಇಳಿಸಿ ಶಕ್ತಿ ಪ್ರದರ್ಶಿಸುವ ಚಿಂತನೆಯೂ ನಡೆಯುತ್ತಿದೆ.

ದಿಡ್ಡಳ್ಳಿ ನಿರಾಶ್ರಿತರು
ಡಿ.ವೈ.ಎಸ್.ಪಿ.ಗಣಪತಿ

ಈ ಬಾರಿಯ ಚುನಾವಣೆಯಲ್ಲಿ ದಿಡ್ಡಳ್ಳಿ ನಿರಾಶ್ರಿತರ ಸಮಸ್ಯೆ , ಆನೆ-ಮಾನವ ಸಂಘರ್ಷ, ಕೊಡಗಿಗೆ ರೈಲು ಮಾರ್ಗದ ಯೋಜನೆ, ಎರಡು ಹೊಸ ತಾಲೂಕುಗಳ ರಚನೆ, ಟಿಪ್ಪು ಜಯಂತಿ ಕುರಿತ ಪಕ್ಷಗಳ ನಿಲುವು, ಕರಿಮೆಣಸು ಕಲಬೆರಕೆ ವಿವಾದ, ಕಸ್ತೂರಿ ರಂಗನ್ ವರದಿ, ಡಿ.ವೈ.ಎಸ್.ಪಿ.ಗಣಪತಿ ಆತ್ಮಹತ್ಯೆಯಲ್ಲಿ ಸರಕಾರದ ಪಾತ್ರ ಮುಂತಾದ ವಿಷಯಗಳು ಚರ್ಚೆಯಾಗಲಿವೆ. ಒಟ್ಟಿನಲ್ಲಿ ಕಳೆದ ಚುನಾವಣೆಗೆ ಹೋಲಿಸಿದಲ್ಲಿ ಈ ಚುನಾವಣೆ ವಿರಾಜಪೇಟೆ ಕ್ಷೇತ್ರದಲ್ಲಿ ಹೆಚ್ಚು ವಿಷಯಾಧಾರಿತವಾಗಲಿದೆ ಎಂಬುದು ವಿಶೇಷ.

ಕ್ಷೇತ್ರದ ಒಟ್ಟು ಮತದಾರರು 2,15,000
ಜಾತಿವಾರು

ಕೊಡವರು 49,500

 ಮುಸ್ಲಿಮ್ 41,900

ಪರಿಶಿಷ್ಟ ಜಾತಿ-ಪಂಗಡ 21,000

 ಅರೆಭಾಷೆ ಗೌಡರು 27,000

     ಮಲಯಾಳಿ ಹಿಂದುಗಳು 12,000

2013 ರ ಚುನಾವಣೆ ಫಲಿತಾಂಶ
• ಕೆ.ಜಿ.ಬೋಪಯ್ಯ(ಬಿ.ಜೆ.ಪಿ) 67,250
• ಬಿ.ಟಿ.ಪ್ರದೀಪ್(ಕಾಂ) 63,836
• ಡಿ.ಎಸ್.ಮಾದಪ್ಪ(ಜೆ.ಡಿ.ಎಸ್) 5,880
• ಅಂತರ 3,414