ಮಗನ ಸ್ಟೇಟಸ್ ನಲ್ಲಿ ಆ ಕುರ್ ಆನ್ ವಚನವನ್ನು ಕಂಡು ಅಮ್ಮ ಕಂಗಾಲಾದರು…

0
5107

ದಿನದ ಮಿಂಚು- 83

ಏ. ಕೆ. ಕುಕ್ಕಿಲ

ಆ ಅಮ್ಮ ಮಗದೊಂದು ಬಾರಿ ಗಡಿಯಾರವನ್ನು ನೋಡಿದರು. ಸಮಯ ಮೀರಿರುವುದಂತೂ ಖಚಿತ. ಮನಸ್ಸಿನೊಳಗೆ ಅವ್ಯಕ್ತ ಭಯವೊಂದು ಗೂಡುಕಟ್ಟತೊಡಗಿತು. ಅವರು ಕಾರಣವಿಲ್ಲದೇ ಅತ್ತಿತ್ತ ನಡೆದರು. ಮುಚ್ಚಿದ್ದ ಕದವನ್ನು ತೆರೆದು ಹೊರಗೆ ಇಣುಕಿದರು. ಸಾಲದೆಂದು ಗೇಟಿನವರೆಗೆ ನಡೆದು ರಸ್ತೆಯನ್ನು ಉದ್ದಕ್ಕೆ ಒಮ್ಮೆ ಅಳೆದರು. ಗೆಳೆಯರ ಜೊತೆ ಬೆಳ್ಳಂಬೆಳಗ್ಗೆ ಕಾರಲ್ಲಿ ಹೊರಡುವಾಗ ಜಾಗ್ರತೆ, ಜಾಗ್ರತೆ ಎಂದು ಈ ಅಮ್ಮ ಮಗನೊಂದಿಗೆ ಎಷ್ಟು ಬಾರಿ ಹೇಳಿದ್ದರೋ? ಗಲ್ಫ್ ನಿಂದ ಊರಿಗೆ ಬಂದು ವಾರ ಒಂದು ಆಗಿದ್ದರೂ ಮಗ ಮನೆಯಲ್ಲಿ ಉಳಿದದ್ದು ತೀರಾ ಕಡಿಮೆ. ಮದುವೆ ಮಾಡದಿದ್ದರೆ ಗಂಡು ಮಕ್ಕಳು ಮನೆಯಲ್ಲಿ ನಿಲ್ಲುವುದಿಲ್ಲ, ಇನ್ನು ಹೊರಗೆ ಸುತ್ತಾಟಕ್ಕೆ ಬಿಡಬಾರದು… ಎಂದು ತೀರ್ಮಾನಿಸುತ್ತಾ ಮೊಬೈಲ್ ನಿಂದ ಕರೆ ಮಾಡಿದರು. ಬ್ಯುಜಿ. ಮತ್ತೊಮ್ಮೆ ಪ್ರಯತ್ನಿಸಿದರು. ನಾಟ್ ರೀಚೆಬಲ್. ಅವರೊಳಗಿನ ಭಯ ಇನ್ನಷ್ಟು ಹೆಚ್ಚಾಯಿತು. ಅಪಘಾತದ ಬೇರೆ ಬೇರೆ ಘಟನೆಗಳು ಅವರ ಕಣ್ಮುಂದೆ ಸುಳಿದು ಹೋದವು. ಅಮ್ಮ ಬೆವರಿದರು. ಸಂದೇಶ ಕಳುಹಿಸಲೆಂದು ವಾಟ್ಸಪ್ ತೆರೆದರು. ಆಗಲೇ ಮಗನ ಸ್ಟೇಟಸ್ ಅನ್ನು ಅವರು ನೋಡಿದ್ದು.
“ತನಗೆ ಯಾವ ಭೂಭಾಗದಲ್ಲಿ ಮರಣ ಬರುವುದೆಂಬ ಅರಿವು ಯಾವ ಜೀವಿಗೂ ಇಲ್ಲ.. ” ( ಪವಿತ್ರ ಕುರ್ ಆನ್ – 31: 34)
ಅಮ್ಮ ಕಂಗಾಲಾದರು. ‘ದೇವಾ, ನನಗಿರುವ ಒಬ್ಬನೇ ಮಗನನ್ನು ಕಸಿದುಕೊಳ್ಳಬೇಡ’ ಎಂದು ಪ್ರಾರ್ಥಿಸಿದರು. ಗಬಗಬನೆ ವುಝು (ಅಂಗಸ್ನಾನ) ಮಾಡಿ ಸುನ್ನತ್ ನಮಾಜ್ ಗೆ ನಿಂತರು. ಧಾರಾಕಾರ ಕಣ್ಣೀರು. ನಮಾಜ್ ಮುಗಿಯುತ್ತಿರುವಂತೆಯೇ ಮೊಬೈಲ್ ರಿಂಗುಣಿಸಿತು. ಕರೆ ಮಗನದ್ದೇ. ಸ್ವೀಕರಿಸಿದರು. ಧ್ವನಿ ಮಾತ್ರ ಬೇರೆ. ದೇಹ ಕಂಪಿಸತೊಡಗಿತು. ಉಸಿರಾಟ ಕಷ್ಟವಾದಂತಾಯಿತು. “ನಿಮ್ಮ ಮಗ ಆಸ್ಪತ್ರೆ…” ಎಂದು ಆ ಧ್ವನಿ ಹೇಳಿದ್ದಷ್ಟೇ ಅವರಿಗೆ ಗೊತ್ತು. ಅವರು ಕುಸಿದು ಬಿದ್ದರು. ಆ ಧ್ವನಿ ಮುಂದುವರಿಯಿತು..
“ನಿಮ್ಮ ಮಗ ಆಸ್ಪತ್ರೆಗೆ ಹೋಗಿದ್ದಾನೆ. ಕಾರು ನಿಲ್ಲಿಸಿ ಮೂತ್ರ ಮಾಡಲೆಂದು ಆತ ಇಳಿದು ಹೋದ ವೇಳೆ ಕಾರಿಗೆ ಲಾರಿಯೊಂದು ಢಿಕ್ಕಿ ಹೊಡೆದು ಇಬ್ಬರು ಸಾವಿಗೀಡಾಗಿದ್ದಾರೆ. ಗಾಯಾಳುಗಳ ಜೊತೆ ಆತ ಆಸ್ಪತ್ರೆಗೆ ಹೋಗುವಾಗ ನಿಮಗೆ ಕರೆ ಮಾಡೆಂದು ಹೇಳಿ ಈ ಮೊಬೈಲ್ ಕೊಟ್ಟು ಹೋಗಿದ್ದಾನೆ. ಅಮ್ಮ, ನೀವು ಹೆದರಬೇಡಿ…
ಅಮ್ಮ, ಅಮ್ಮಾ…”