ಮದ್ಯಪಾನ: ಇಬ್ಬರು ಮಕ್ಕಳ ಕತೆ

0
1138

ಸನ್ಮಾರ್ಗ ಸಂಪಾದಕೀಯ

ಕಳೆದವಾರ ಎರಡು ಪ್ರಮುಖ ಸುದ್ದಿಗಳು ಪ್ರಕಟವಾದುವು. ಎರಡರ ಕೇಂದ್ರ ಬಿಂದುವೂ ಮದ್ಯವೇ. ರಾಜ್ಯದ ಚಿಕ್ಕಬಲ್ಲಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಇಬ್ಬರು ಮಕ್ಕಳು ನೆರೆಯ ಆಂಧ್ರ ಪ್ರದೇಶದ ಅನಂತರಪುರ ಜಿಲ್ಲೆಯಲ್ಲಿ ಮಣ್ಣು ತಿಂದು ಸಾವನ್ನಪ್ಪಿದ್ದಾರೆ ಅನ್ನುವುದು ಮೊದಲ ಸುದ್ದಿ. ಎರಡನೇ ಸುದ್ದಿ ಏನೆಂದರೆ, ಕಳೆದ 2010 ರಿಂದ 17ರ ನಡುವೆ ಭಾರತದಲ್ಲಿ ಮದ್ಯ ಸೇವನೆಯ ಪ್ರಮಾಣ ಶೇ. 38ಕ್ಕೆ ಹೆಚ್ಚಳವಾಗಿದೆ ಎಂಬುದು. ಬಾಗೇಪಲ್ಲಿಯ ಇಬ್ಬರು ಮಕ್ಕಳ ಸಾವಿಗೂ ಮದ್ಯಕ್ಕೂ ಸಂಬಂಧ ಇದೆ. ಇಲ್ಲಿನ ಮಹೇಶ್ ಮತ್ತು ನಾಗಮಣಿ ದಂಪತಿಗಳು ಕೂಲಿ ಕೆಲಸಕ್ಕೆಂದು ಆಂಧ್ರಕ್ಕೆ ತೆರಳಿದ್ದರು. ಇವರ ಜೊತೆ ಐದು ಮಕ್ಕಳು ಮತ್ತು ನಾಗಮಣಿಯ ತಾಯಿ ಮತ್ತು ಸೋದರಿಯ ಮಗುವೂ ಇತ್ತೆಂದು ಹೇಳಲಾಗುತ್ತದೆ. ಈ ದಂಪತಿಗಳು ಮತ್ತು ನಾಗಮಣಿಯ ತಾಯಿ ಮಹಾ ಕುಡುಕರು. ನಾಗಮಣಿ ದಂಪತಿಗಳು ಕೆಲಸಕ್ಕೆಂದು ಹೊರಗೆ ಹೋಗುವಾಗ ಅಜ್ಜಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಅಜ್ಜಿಯೂ ಕುಡಿಯುತ್ತಿದ್ದುದರಿಂದ ಮನೆಯಲ್ಲಿ ಅನ್ನ ಬೇಯಿಸುತ್ತಿದ್ದುದು ಕಡಿಮೆ. ಹೀಗಾಗಿ ಹಸಿದ ಮಕ್ಕಳು ಮಣ್ಣು ತಿನ್ನುತ್ತಿದ್ದರು. 6 ತಿಂಗಳ ಹಿಂದೆ 3 ವರ್ಷದ ಮಗು ಮಣ್ಣು ತಿಂದು ತೀರಿಕೊಂಡಿತು. ಇದು ಹೊರಗಿನ ಪ್ರಪಂಚಕ್ಕೆ ಗೊತ್ತಾಗಿರಲಿಲ್ಲ. ಆದರೆ ಇದೀಗ ನಾಗಮಣಿಯ ಸೋದರಿಯ ಮಗನೂ ಹಸಿವೆಯಿಂದ ಮಣ್ಣು ತಿಂದ ಪರಿಣಾಮ ಸಾವನ್ನಪ್ಪಿದ್ದಾನೆ. ಇದು ಅಧಿಕಾರಿಗಳಿಗೆ ಗೊತ್ತಾಗಿದೆ. ಈ ಹೃದಯವಿದ್ರಾವಕ ಸುದ್ದಿಯ ಮೂರು ದಿನಗಳ ಬಳಿಕ ಭಾರತದಲ್ಲಿ ಮದ್ಯ ಸೇವನೆಯ ಸ್ಥಿತಿಗತಿಯ ಕುರಿತಂತೆ ಜರ್ಮನಿಯ ಡ್ರೆಸ್ಡನ್ ವಿಶ್ವವಿದ್ಯಾಲಯದ ಸಂಶೋಧಕರು ಸಿದ್ಧಪಡಿಸಿದ ಅಧ್ಯಯನ ವರದಿಯನ್ನು ದಿ ಲಾನ್ಸೆಟ್ ಜರ್ನಲ್ ಬಿಡುಗಡೆಗೊಳಿಸಿದೆ. 1990 ರಿಂದ 2017ರ ನಡುವೆ ಜಾಗತಿಕವಾಗಿ ಮದ್ಯಸೇವನೆಯ ಪ್ರಮಾಣ ಹೇಗಿದೆ ಎಂಬ ಬಗ್ಗೆ 189 ರಾಷ್ಟ್ರಗಳಲ್ಲಿ ಅಧ್ಯಯನ ನಡೆಸಿದ ಬಳಿಕ ಬಿಡುಗಡೆಗೊಳಿಸಲಾದ ಈ ವರದಿಯ ಅಂಶಗಳೇನೂ ಆಶಾದಾಯಕವಾಗಿಲ್ಲ. 2025ರ ವೇಳೆಗೆ ಮದ್ಯ ಸೇವನೆಯ ಪ್ರಮಾಣವನ್ನು ಶೇ. 10 ರಷ್ಟು ಕಡಿಮೆಗೊಳಿಸಲು ವಿಶ್ವಸಂಸ್ಥೆ ಒಂದು ಕಡೆ ಗುರಿ ಇಟ್ಟುಕೊಂಡಿದ್ದರೆ ಇನ್ನೊಂದು ಕಡೆ ಈ ಗುರಿಯನ್ನು ಅಪಹಾಸ್ಯ ಮಾಡುವಂತೆ ಮದ್ಯ ಸೇವನೆಯ ಪ್ರಮಾಣದಲ್ಲಿ ಏರಿಕೆ ಆಗುತ್ತಲೇ ಇದೆ. ವಿಶೇಷ ಏನೆಂದರೆ, 1990ಕ್ಕೂ ಮೊದಲು ಶ್ರೀಮಂತ ರಾಷ್ಟ್ರಗಳಲ್ಲಿ ಮದ್ಯ ಸೇವನೆಯ ಪ್ರಮಾಣ ಅಧಿಕವಿರುತ್ತಿತ್ತು. ಆದರೆ ಆ ಬಳಿಕದ ಈ ಎರಡೂವರೆ ದಶಕಗಳಲ್ಲಿ ವಾತಾವರಣ ಸಂಪೂರ್ಣ ಬದಲಾಗಿದೆ. ಹೆಚ್ಚು ಆದಾಯಕ್ಕೂ ಮದ್ಯ ಸೇವನೆಗೂ ಸಂಬಂಧ ಇಲ್ಲ ಎಂಬ ಅಘಾತಕಾರಿ ಬದಲಾವಣೆಯೊಂದು ಈ ಕ್ಷೇತ್ರದಲ್ಲಿ ಕಾಣಿಸಿಕೊಂಡಿದೆ. ಯುರೋಪ್ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ, ಚೀನಾ, ವಿಯೆಟ್ನಾಂ ಸೇರಿದಂತೆ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ತಲಾವಾರು ಆದಾಯ ಕಡಿಮೆ. ಆದರೆ, ಈ ರಾಷ್ಟ್ರಗಳಲ್ಲೇ ಈಗ ಮದ್ಯ ಸೇವನೆಯ ಪ್ರಮಾಣ ಹೆಚ್ಚಾಗಿದೆ ಎಂಬುದಾಗಿ ಅಧ್ಯಯನ ವರದಿ ಹೇಳುತ್ತಿದೆ. 1990 ರಿಂದ 2017ರ ತನಕ ಜಾಗತಿಕ ಮಟ್ಟದಲ್ಲಿ ಮದ್ಯ ಸೇವನೆಯಲ್ಲಿ ಶೇ. 70 ರಷ್ಟು ಹೆಚ್ಚಳವಾಗಿದೆ ಎಂಬ ದಂಗು ಬಡಿಸುವ ಸುದ್ದಿಯನ್ನು ದಿ ಲಾನ್ಸೆಟ್ ಜರ್ನಲ್ ಬಹಿರಂಗ ಪಡಿಸಿದೆ.

ಯಾವುದೇ ಒಂದು ವಸ್ತುವಿನ ಮಾರಾಟಕ್ಕೆ ಸರಕಾರ ಅನುಮತಿಯನ್ನು ಕೊಡುವಾಗ ಅದರ ಅಗತ್ಯ-ಅನಗತ್ಯಗಳ ಕುರಿತಂತೆ ಪರಾಮರ್ಶೆಯೊಂದು ಖಂಡಿತ ನಡೆಯುತ್ತದೆ. ಗಾಂಜಾ, ಅಫೀಮ್ ನಂತಹ ಮಾದಕ ವಸ್ತುಗಳನ್ನು ಯಾಕೆ ನಿಷೇಧಿಸಲಾಗಿದೆಯೆಂದರೆ, ಅದು ಜನರ ಆರೋಗ್ಯಕ್ಕೆ ಹಾನಿಕಾರಕ ಎಂಬುದರಿಂದ. ಮದ್ಯ ಸೇವನೆಯಿಂದ ಸಾಂಕ್ರಾಮಿಕ ರೋಗಗಳೂ ಸೇರಿದಂತೆ ಸುಮಾರು 200ಕ್ಕೂ ಅಧಿಕ ರೋಗಗಳು ಅಂಟಿಕೊಳ್ಳುವ ಸಾಧ್ಯತೆ ಇದೆಯೆಂದು ದಿ ಲಾನ್ಸೆಟ್ ಜರ್ನಲ್ ಬಿಡುಗಡೆಗೊಳಿಸಿದ ವರದಿಯಲ್ಲೇ ಇದೆ. ಹಾಗಂತ, ಇದು ಈ ವರೆಗೆ ಗೊತ್ತಿಲ್ಲದ ಸಂಗತಿಯಲ್ಲ. ಮದ್ಯ ಸೇವನೆಯಿಂದ ಸಮಾಜದ ಆರೋಗ್ಯ ಕೆಡುತ್ತದೆ ಅನ್ನುವುದು ಅದನ್ನು ಸೇವಿಸುವವರಿಗೂ ಗೊತ್ತು. ಅದನ್ನು ಮಾರಾಟ ಮಾಡುವುದಕ್ಕೆ ಅನುಮತಿ ನೀಡಿರುವ ಸರಕಾರಕ್ಕೂ ಗೊತ್ತು. ಹಾಗಿದ್ದರೂ ಸರಕಾರ ಈ ಮದ್ಯ ಮಾರಾಟಕ್ಕೆ ಯಾಕೆ ಅನುಮತಿ ಕೊಟ್ಟಿದೆಯೆಂದರೆ ಅದರಿಂದ ಬರುವ ಬಹುದೊಡ್ಡ ಆದಾಯವನ್ನು ಪರಿಗಣಿಸಿ. ಈ ಆದಾಯವನ್ನು ಬಳಸಿಯೇ ಶಿಕ್ಷಕರಿಗೆ ವೇತನವೂ ಸೇರಿದಂತೆ ವಿವಿಧ ರೀತಿಯ ಕಾಮಗಾರಿ, ಅಭಿವೃದ್ಧಿ ಯೋಜನೆಗಳನ್ನು ನಿರ್ವಹಿಸಲಾಗುತ್ತಿದೆ ಎಂಬ ಸಮರ್ಥನೆ ಕೇಳಿ ಬರುತ್ತಿದೆ. ನಿಜವಾಗಿ, ಪ್ರಶ್ನೆಯಿರುವುದು ಆದಾಯದ್ದಲ್ಲ, ಬದುಕಿನದ್ದು. ಶಿಕ್ಷಕರಿಗೋ ಅಭಿವೃದ್ಧಿ ಯೋಜನೆಗಳಿಗೋ ಹಣ ಸಂಗ್ರಹಿಸಬೇಕಾದದ್ದು ಜನರನ್ನು ಅನಾರೋಗ್ಯಕ್ಕೆ ತಳ್ಳಿಯೋ? ಸರಕಾರದ ಹೊಣೆಗಾರಿಕೆ ಏನು?
ಅನ್ನ, ಶಿಕ್ಷಣ ಮತ್ತು ಆರೋಗ್ಯ- ಇವು ಮೂರೂ ಜನರ ಪಾಲಿನ ಮೂಲಭೂತ ಬೇಡಿಕೆಗಳು. ಯಾವುದೇ ಸರಕಾರ ಇವುಗಳ ಲಭ್ಯತೆಗೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕೇ ಹೊರತು ಜನರ ಆರೋಗ್ಯವನ್ನು ನಾಶಮಾಡಿ ಅಭಿವೃದ್ಧಿ ನಡೆಸುವುದಲ್ಲ. ಈ ಹಿಂದೆ ಆಂಧ್ರಪ್ರದೇಶದಲ್ಲಿ ಮದ್ಯಪಾನ ನಿಷೇಧ ಮಾಡಲಾಗಿತ್ತು. ಒಂದುವೇಳೆ, ಇವತ್ತಿಗೂ ಅದು ಮುಂದುವರಿದಿರುತ್ತಿದ್ದರೆ ಈ ಮಕ್ಕಳು ಮಣ್ಣು ತಿನ್ನುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ?

ಆದಾಯ ಮತ್ತು ಆರೋಗ್ಯ- ಈ ಎರಡರ ನಡುವೆ ಆಯ್ಕೆಯ ಪ್ರಶ್ನೆ ಬಂದಾಗಲೆಲ್ಲ ಸರಕಾರಗಳು ಅದಾಯವನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಕೆಲವು ತಿಂಗಳುಗಳ ಹಿಂದೆ ಚಿತ್ರದುರ್ಗದಿಂದ ಮಹಿಳೆಯರ ಬೃಹತ್ ಪ್ರತಿಭಟನಾ ರ್ಯಾಲಿಯೊಂದು ಬೆಂಗಳೂರಿಗೆ ತಲುಪಿತ್ತು. ಗ್ರಾಮೀಣ ಪ್ರದೇಶದ ಸಾವಿರಾರು ಮಹಿಳೆಯರು ತಮ್ಮೆಲ್ಲ ಕಷ್ಟಗಳನ್ನು ಕಡೆಗಣಿಸಿ ಕಾಲ್ನಡಿಯಲ್ಲಿ ಬೆಂಗಳೂರಿಗೆ ತಲುಪಿ ಮದ್ಯ ನಿಷೇಧಕ್ಕೆ ಒತ್ತಾಯ ಮಾಡಿದ್ದರು. ತಂತಮ್ಮ ಮನೆಯ ಪರಿಸ್ಥಿತಿಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದರು. ಪ್ರತಿ ಮನೆಯ ಕತೆಯೂ ಕರುಣಾಜನಕವೇ. ಕುಡಿತವು ಬರೇ ಕುಡಿದವರನ್ನಷ್ಟೇ ಕಾಡುವುದಲ್ಲ, ಅವರನ್ನು ಅವಲಂಬಿಸಿದವರನ್ನೂ ಕಾಡುತ್ತದೆ. ಒಂದು ಮನೆಯ ಪುರುಷ ಕುಡುಕನಾಗಿದ್ದರೆ ಆತನ ಮನೆಯ ಮಹಿಳೆ, ಮಕ್ಕಳು ಮತ್ತು ನೆರೆಕರೆಯವರೂ ಅದರ ಅಡ್ಡಪರಿಣಾಮವನ್ನು ಎದುರಿಸಬೇಕಾಗುತ್ತದೆ. ಮನೆಯ ಖರ್ಚು ವೆಚ್ಚಗಳಿಗೆ ವಿನಿಯೋಗವಾಗಬೇಕಿದ್ದ ದೊಡ್ಡದೊಂದು ಮೊತ್ತವು ಮದ್ಯದಂಗಡಿಯ ಡ್ರಾವರ್ ಸೇರಿಕೊಳ್ಳುತ್ತದೆ. ಮಕ್ಕಳ ಶೀಕ್ಷಣದ ಮೇಲೂ ಅದು ಪರಿಣಾಮವನ್ನು ಬೀರುತ್ತದೆ. ಈ ಬಗ್ಗೆ ಬೆಳಕು ಚೆಲ್ಲುವ ವರದಿಗಳು ನೂರಾರು ಬಂದಿವೆ. ಮದ್ಯಪಾನವನ್ನು ನಿಷೇಧಿಸಿ ಎಂದು ಜನರು ಅಸಂಖ್ಯ ಬಾರಿ ಬೀದಿಗಿಳಿದು ಒತ್ತಾಯಿಸಿದ್ದಾರೆ. ಆದರೆ ಸರಕಾರ ಕೈ ತಪ್ಪುವ ಭಾರೀ ಪ್ರಮಾಣದ ಆದಾಯವೊಂದನ್ನೇ ತೋರಿಸಿ ನಿರಾಕರಿಸುತ್ತಿದೆ. ಜನರ ಆರೋಗ್ಯವನ್ನು ಕಾಪಾಡುವುದನ್ನೇ ಆದ್ಯತೆಯಾಗಿ ಮಾಡಿಕೊಳ್ಳಬೇಕಿದ್ದ ಸರಕಾರಗಳು ಆದಾಯವನ್ನೇ ಆಧ್ಯತೆಯ ವಿಷಯವಾಗಿ ಆರಿಸಿಕೊಳ್ಳುತ್ತಿರುವುದು ಅತ್ಯಂತ ವಿಷಾದಕರ. ಇದು ಬದಲಾಗಬೇಕು. ಮದ್ಯದ ಆದಾಯಕ್ಕೆ ಬದಲಾಗಿ ಪರ್ಯಾದ ಆದಾಯ ಮೂಲವನ್ನು ಸರಕಾರ ಹುಡುಕಬೇಕು. ಈಗಾಗಲೇ ಬಿಹಾರದಂಥ ರಾಜ್ಯಗಳಲ್ಲಿ ಮದ್ಯಪಾನಕ್ಕೆ ನಿಷೇಧವಿದೆ. ಈ ಬಗ್ಗೆ ರಾಜ್ಯ ಸರಕಾರ ಅಧ್ಯಯನ ನಡೆಸಬೇಕು. ಅಬಕಾರಿ ಕ್ಷೇತ್ರದ ಆದಾಯವಿಲ್ಲದೇ ಬಿಹಾರದಲ್ಲಿ ಸರಕಾರ ನಡೆಯಬಹುದೆಂದಾದರೆ ಕರ್ನಾಟಕದಲ್ಲಿ ಯಾಕೆ ಸಾಧ್ಯವಿಲ್ಲ ಎಂಬ ಬಗ್ಗೆ ಗಂಭೀರ ಚರ್ಚೆ ನಡೆಯಬೇಕು. ಮದ್ಯದ ಆದಾಯಕ್ಕೆ ಬದಲಾಗಿ ಪರ್ಯಾಯ ಆದಾಯ ಮೂಲವನ್ನು ಕಂಡುಕೊಳ್ಳುವ ಅವಕಾಶಗಳನ್ನು ತಜ್ಞರು ಮಂಡಿಸಬೇಕು. ಮದ್ಯ ಸೇವನೆಯು ಮಕ್ಕಳಿಗೆ ಅನ್ನದ ಬದಲು ಮಣ್ಣನ್ನು ತಿನ್ನಿಸುತ್ತದೆ. ಇದು ಹೃದಯ ವಿದ್ರಾವಕ. ಇದಕ್ಕೆ ಸರಕಾರವೇ ನೇರ ಹೊಣೆ.