ಮನುಷ್ಯರಿಗೇ ಗಾಳ ‘ಹಾಕಿದ’ ಮೀನು

0
2112

ನೀರಿನಿಂದ ಹೊರತೆಗೆದ ತಕ್ಷಣ ಮೀನುಗಳು ವಿಲವಿಲನೆ ಒದ್ದಾಡುತ್ತವೆ. ಮಾತ್ರವಲ್ಲ, ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೇ ಅವು ಸಾವನ್ನೂ ಅಪ್ಪುತ್ತವೆ. ಸದ್ಯ ಮೀನುಪ್ರಿಯರಲ್ಲಿ ಇಂಥದ್ದೊಂದು ಒದ್ದಾಟ ಪ್ರಾರಂಭವಾಗಿದೆ. ನೀರಿನಿಂದ ಮೀನುಗಳನ್ನು ಹೊರತೆಗೆದು ಒದ್ದಾಡಿಸುವ ಮನುಷ್ಯರನ್ನು ಮೀನುಗಳು ಒದ್ದಾಡಿಸಲಿದೆಯೇ ಎಂಬ ಆತಂಕ ಕಾಡತೊಡಗಿದೆ. ಆದರೆ ಈ ಆತಂಕಕ್ಕೆ ಯಾವ ನೆಲೆಯಲ್ಲೂ ಮೀನುಗಳು ಕಾರಣವಲ್ಲ. ಮೀನುಗಳು ಈಗಲೂ ಕೂಡ ಪರಮ ಶುದ್ಧ ಮತ್ತು ಅತ್ಯಂತ ವಿಶ್ವಾಸಾರ್ಹ. ಪುರಾತನ ಕಾಲದಿಂದಲೂ ಮತ್ಸ್ಯವರ್ಗದ ಮೇಲೆ ಮನುಷ್ಯ ದಾಳಿ ಮಾಡುತ್ತಿದ್ದರೂ ಮತ್ತು ವಿವಿಧ ಸಂಚುಗಳ ಮೂಲಕ ಅವನ್ನು ನೀರಿನಿಂದೆತ್ತಿ ಜೇಬು ತುಂಬಿಸುತ್ತಿದ್ದರೂ ಅವು ಎಂದೂ ಮನುಷ್ಯರಿಗೆ ದ್ರೋಹ ಬಗೆದಿಲ್ಲ. ತನ್ನನ್ನು ಸಾಯಿಸುವ ಮನುಷ್ಯರನ್ನು ಸಾಯಿಸಬೇಕೆಂಬ ಉದ್ದೇಶದಿಂದ ಅವೆಂದೂ ಷಡ್ಯಂತ್ರ ರಚಿಸಿಲ್ಲ. ಆದರೆ, ಈ ನಿಷ್ಪಾಪಿ ಮೀನುಗಳ ವಿಷಯದಲ್ಲೂ ಮನುಷ್ಯ ಪರಮ ಭ್ರಷ್ಟನಾಗುತ್ತಿದ್ದಾನೆ. ಮೀನುಗಳನ್ನು ನೀರಿನಿಂದೆತ್ತಿ ಒದ್ದಾಡಿಸುವ ಆತ ಇದೀಗ ಅವುಗಳಿಗೆ ರಾಸಾಯನಿಕಗಳನ್ನು ಸೇರಿಸಿ ಮನುಷ್ಯರನ್ನೂ ಒದ್ದಾಡಿಸುವ ಮತ್ತು ಸಾವಿನೆಡೆಗೆ ದೂಡುವ ಪರಮ ಕ್ರೌರ್ಯಕ್ಕೆ ಇಳಿದಿದ್ದಾನೆ. ಮೀನುಗಳನ್ನು ಬಹುಕಾಲ ಕೆಡದಂತೆ ರಕ್ಷಿಸುವುದಕ್ಕಾಗಿ ಸೋಡಿಯಂ ಬೆಂಝೋಟ್, ಅಮೋನಿಯಾ ಮತ್ತು ಫಾರ್ಮಾಲಿನ್‍ನಂಥ ಮಾರಕ ರಾಸಾಯನಿಕಗಳನ್ನು ಬಳಸಲಾಗುತ್ತಿದೆ ಅನ್ನುವ ಅಧಿಕೃತ ವರದಿಗಳು ಹೊರಬಿದ್ದಿವೆ. ಹೈದರಾಬಾದ್‍ನಿಂದ ಕಂಟೈನರ್ ನಲ್ಲಿ ಸಾಗಿಸುತ್ತಿದ್ದ ಮೀನುಗಳನ್ನು ಕಳೆದವಾರ ತಿರುವನಂತಪುರದ ಪಾಲಕ್ಕಾಡ್ ಜಿಲ್ಲೆಯ ಚೆಕ್ ಪೋಸ್ಟ್ ನಲ್ಲಿ ತಡೆದು ತಪಾಸಿಸಲಾದ ಬಳಿಕ ಈ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ. ಕೇರಳದ ಆಹಾರ ಸುರಕ್ಷತಾ ಆಯುಕ್ತರ ನೇತೃತ್ವದಲ್ಲಿ ನಡೆದ ಈ ದಾಳಿಗಿಂತ ವಾರ ಮೊದಲು ಇಂಥದ್ದೇ ಇನ್ನೊಂದು ದಾಳಿಯಾಗಿತ್ತು. ಆ ದಾಳಿಯಲ್ಲಿ 12 ಕ್ವಿಂಟಾಲ್ ಮೀನುಗಳಲ್ಲಿ ವಿಷಕಾರಿ ಅಂಶಗಳನ್ನು ಪತ್ತೆ ಹಚ್ಚಲಾಗಿತ್ತು. ದಿನದ ಹಿಂದೆ ಕೊಲ್ಲಮ್ ಜಿಲ್ಲೆಯ ಆರ್ಯನ್ ಕಾವು ಚೆಕ್ ಪೋಸ್ಟ್ ನಲ್ಲಿ ಫಾರ್ಮಾಲಿನ್ ವಿಷ ಲೇಪಿತ ಹತ್ತು ಟನ್ ಮೀನುಗಳನ್ನು ವಶಪಡಿಸಲಾಗಿದೆ. ಫಾರ್ಮಾಲಿನ್ ಅನ್ನುವುದು ಹೆಣಗಳನ್ನು ಕೆಡದಂತೆ ಕಾಪಾಡಲು ಬಳಸುವ ರಾಸಾಯನಿಕ. ಸಾಮಾನ್ಯವಾಗಿ ಆಸ್ಪತ್ರೆಯ ಶವಾಗಾರಗಳಲ್ಲಿ ಈ ರಾಸಾಯನಿಕವನ್ನು ಬಳಸಿ ಹೆಣಗಳು ದೀರ್ಘಕಾಲ ಕೆಡದಂತೆ ಉಳಿಸಿಕೊಳ್ಳುವ ಕ್ರಮ ಇದೆ. ಈ ರಾಸಾಯನಿಕವು ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ. ಅಮೋನಿಯ ಮತ್ತು ಸೋಡಿಯಂ ಬೆಂಝೋಟ್‍ಗಳ ಮಿಶ್ರಣವೂ ಮನುಷ್ಯರ ದೇಹಕ್ಕೆ ಅತ್ಯಂತ ಅಪಾಯಕಾರಿ. ಮೀನುಗಳಿಗೆ ಈ ರಾಸಾಯನಿಕಗಳನ್ನು ಸಿಂಪಡಿಸಿದರೆ ಮೀನುಗಳು ತಾಜಾವಾಗಿ ಉಳಿಯುತ್ತವೆಯಷ್ಟೇ ಅಲ್ಲ, ಅವುಗಳು ತಮ್ಮ ಪ್ರಕೃತಿದತ್ತವಾದ ವಾಸನೆ, ಮೃದುತ್ವ ಮತ್ತು ಮಾಂಸದಲ್ಲಿನ ಹದವನ್ನು ಕಳಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ಒಂದು ರೀತಿಯಲ್ಲಿ, ನಾವು ಸೇವಿಸುವ ಆಹಾರ ವಸ್ತುಗಳಲ್ಲಿ ಹೆಚ್ಚಿನವು ರಾಸಾಯನಿಕ ಲೇಪಿತವೇ. ಮನುಷ್ಯರ ಬಟ್ಟಲಿನಲ್ಲಿ ಕಡ್ಡಾಯ ಸ್ಥಾನ ಪಡೆದಿರುವ ಅಕ್ಕಿಯೂ ಈ ರಾಸಾಯನಿಕದಿಂದ ಹೊರತಾಗಿಲ್ಲ. ಅಕ್ಕಿಗೆ ಹೊಳಪು ಕೊಡುವುದಕ್ಕಾಗಿ ರಾಸಾಯನಿಕವನ್ನು ಸಿಂಪಡಿಸಲಾಗುವುದು ಇವತ್ತು ರಹಸ್ಯವಾಗಿ ಉಳಿದಿಲ್ಲ. ತರಕಾರಿಗಳನ್ನು ತಾಜಾವಾಗಿಸುವುದಕ್ಕೆ ಮತ್ತು ಹಣ್ಣುಹಂಪಲುಗಳನ್ನು ಕೆಡದಂತೆ ರಕ್ಷಿಸುವುದಕ್ಕೆ ಒಂದಲ್ಲ ಒಂದು ಬಗೆಯ ರಾಸಾಯನಿಕಗಳನ್ನು ಬಳಸಲಾಗುತ್ತಿರುವುದೂ ನಿಜ. ಹಣ್ಣು-ಹಂಪಲುಗಳು ಬೇಗನೇ ಮಾಗುವಂತೆ ಮಾಡುವುದಕ್ಕೂ ರಾಸಾಯನಿಕದ ಮೊರೆ ಹೋಗಲಾಗುತ್ತಿದೆ. ಅಂದಹಾಗೆ, ಇಂಥ ಸಂಗತಿಗಳು ಬೆಳಕಿಗೆ ಬಂದ ಆರಂಭದಲ್ಲಿ ಸಾರ್ವಜನಿಕವಾಗಿ ವಿರೋಧಗಳು ವ್ಯಕ್ತವಾದರೂ ನಿಧಾನಕ್ಕೆ ಅವು ತಣ್ಣಗಾಗುತ್ತಾ ಹೋಗುತ್ತವೆ. ಇವತ್ತು ಅಕ್ಕಿ, ಹಣ್ಣು-ಹಂಪಲು, ತರಕಾರಿಗಳಿಗೆ ಸಿಂಪಡಿಸುವ ರಾಸಾಯನಿಕಗಳ ಬಗ್ಗೆ ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳಲ್ಲಿ ಗಂಭೀರ ಚರ್ಚೆಗಳಾಗುತ್ತಿಲ್ಲ ಎಂಬುದಕ್ಕೆ ಅವೆಲ್ಲ ಈಗ ರಾಸಾಯನಿಕ ಮುಕ್ತವಾಗಿ ಮಾರುಕಟ್ಟೆಗೆ ಬರುತ್ತಿವೆ ಎಂಬುದು ಕಾರಣವಲ್ಲ. ಆ ಕುರಿತಾದ ಚರ್ಚೆ ಈಗ ಪ್ರಸ್ತುತತೆಯನ್ನು ಕಳಕೊಳ್ಳತೊಡಗಿದೆ. ರಾಸಾಯನಿಕವಿಲ್ಲದ ಯಾವುದೂ ಮಾರುಕಟ್ಟೆಯಲ್ಲಿಲ್ಲ ಅನ್ನುವ ನಿರಾಶವಾದವೊಂದು ಸಾರ್ವಜನಿಕರಲ್ಲಿ ಮನೆ ಮಾಡಿಬಿಟ್ಟಿದೆ. ಆದ್ದರಿಂದ, ಒಂದು ವೇಳೆ ಮೀನಿನ ಬಗೆಗೂ ಸಾರ್ವಜನಿಕವಾಗಿ ಇಂಥದ್ದೇ ಉದಾಸೀನಭಾವ ಕಾಣಿಸಿಕೊಂಡು ಬಿಟ್ಟರೆ ಮುಂದಿನ ದಿನಗಳಲ್ಲಿ ಮನುಷ್ಯರೂ ಮೀನಿನಂತೆ ವಿಲವಿಲನೆ ಒದ್ದಾಡಬೇಕಾದೀತು.
ಬಸಳೆ, ತೊಂಡೆಕಾಯಿ, ಸೌತೆಕಾಯಿ, ಬೀಟ್ರೋಟ್, ಬಟಾಟೆ ಇತ್ಯಾದಿ ತರಕಾರಿಗಳಿಗೆ ಹೋಲಿಸಿದರೆ ಮೀನು ತೀರಾ ಭಿನ್ನ. ಬಸಳೆ, ತೊಂಡೆಕಾಯಿ ಇತ್ಯಾದಿಗಳು ಸಸ್ಯಾಹಾರ ಮತ್ತು ಮೀನು ಮಾಂಸಾಹಾರ ಅನ್ನುವುದು ಈ ಭಿನ್ನತೆಗೆ ಕಾರಣವಲ್ಲ. ಬಸಳೆ, ಬೆಂಡೆಕಾಯಿ, ಸೌತೆ.. ಇತ್ಯಾದಿ ಯಾವುದೇ ಗಿಡ ಅಥವಾ ಬಳ್ಳಿಗಳು ಫಲವನ್ನು ಕೊಡುವ ಹಂತಕ್ಕೆ ಬೆಳೆಯಬೇಕಾದರೆ ಅದಕ್ಕೆ ಪೋಷಣೆ ಬೇಕೇ ಬೇಕು. ಮನುಷ್ಯನಿಂದ ಗೊಬ್ಬರ, ನೀರು, ಆರೈಕೆಗಳನ್ನು ಪಡೆದುಕೊಂಡ ಬಳಿಕವೇ ಇವು ಪ್ರತಿಯಾಗಿ ಫಲಗಳನ್ನು ನೀಡುತ್ತವೆ. ಆರೈಕೆಯಲ್ಲಿ ವ್ಯತ್ಯಾಸವಾದರೆ ಫಲಗಳಲ್ಲೂ ವ್ಯತ್ಯಾಸವಾಗುತ್ತದೆ. ಆದರೆ ಮೀನು ಹಾಗಲ್ಲ. ಮನುಷ್ಯನ ಆರೈಕೆಯಿಲ್ಲದೆ ಫಲ ಕೊಡುವ ಜೀವಿಯದು. ಮೀನಿನ ಹೊಟ್ಟೆ ತುಂಬಿಸುವುದಕ್ಕಾಗಿ ಮನುಷ್ಯ ಸಮುದ್ರಕ್ಕೆ ಅಕ್ಕಿ ಸುರಿಯುವುದಿಲ್ಲ. ಔಷಧ ಸಿಂಪಡಿಸುವುದಿಲ್ಲ. ಇಷ್ಟಿದ್ದೂ, ಮನುಷ್ಯ ತೃಪ್ತನಾಗಿಲ್ಲವೆಂದರೆ ಏನನ್ನಬೇಕು? ಪುಕ್ಕಟೆ ಸಿಗುವ ಮೀನಿಗೆ ಅಪಾಯಕಾರಿ ರಾಸಾಯನಿಕವನ್ನು ಸೇರಿಸಿ ಮಾರಾಟ ಮಾಡುವ ಆತನ ದಂಧಾಮನಸ್ಸನ್ನು ಯಾವ ಹೆಸರಿಟ್ಟು ಕರೆಯಬೇಕು? ಹಾಗಂತ, ಈ ದಂಧೆಯನ್ನು ದೂರದ ತಮಿಳುನಾಡು, ಹೈದರಾಬಾದ್‍ಗೆ ಅಥವಾ ಕೇರಳಕ್ಕೆ ಸೀಮಿತಗೊಳಿಸಿ ನೋಡಬೇಕಿಲ್ಲ. ಕರಾವಳಿ ಭಾಗದಲ್ಲಿ ಈಗಾಗಲೇ ಈ ಕ್ರಿಯೆ ಚಾಲ್ತಿಯಲ್ಲಿದೆ ಎಂದು ನಂಬಲರ್ಹ ಮೂಲಗಳು ಖಚಿತಪಡಿಸಿವೆ. ಇಲ್ಲಿ ಸುಮಾರು 25% ದಿಂದ 30% ದಷ್ಟು ಮೀನುಗಳು ಈ ರಾಸಾಯನಿಕ ಲೇಪನಕ್ಕೆ ಒಳಗಾಗುತ್ತಿವೆ ಎಂಬುದನ್ನೂ ಆ ಮೂಲಗಳು ಸ್ಪಷ್ಟಪಡಿಸಿವೆ. ಆದ್ದರಿಂದ, ಮೀನು ಪ್ರಿಯರೆಲ್ಲ ಈಗಾಗಲೇ ಒಂದಷ್ಟು ವಿಷವನ್ನು ತಮ್ಮೊಳಗೆ ಇಳಿಸಿಕೊಂಡಿದ್ದಾರೆ. ಇನ್ನಿರುವ ಮಾರ್ಗ ಏನೆಂದರೆ, ಇನ್ನಷ್ಟು ವಿಷಗಳು ನಮ್ಮ ದೇಹ ಸೇರದಂತೆ ನೋಡಿಕೊಳ್ಳುವುದು. ಅದಕ್ಕಾಗಿ ವ್ಯವಸ್ಥೆಯ ಮೇಲೆ ಒತ್ತಡ ತರುವ ಪ್ರಯತ್ನಗಳು ಸಾರ್ವಜನಿಕರಿಂದ ನಡೆಯಬೇಕು. ಮೀನುಗಳು ಮಾರುಕಟ್ಟೆಗೆ ಬರುವುದಕ್ಕಿಂತ ಮೊದಲು ತಪಾಸಣೆಗೆ ಒಳಗಾಗುವ ಏರ್ಪಾಟುಗಳು ಆಗಬೇಕು. ಮೀನು ಕೇಂದ್ರಗಳಿಗೆ ದಿಢೀರ್ ದಾಳಿ ನಡೆಸಿ ತಪಾಸಿಸುವ ಪ್ರಾಮಾಣಿಕ ಅಧಿಕಾರಿಗಳನ್ನು ಆಹಾರ ಇಲಾಖೆಗೆ ಸೇರಿಸಬೇಕು. ಮುಖ್ಯವಾಗಿ ಕೇರಳದಿಂದ ಕರ್ನಾಟಕಕ್ಕೆ ತರಿಸಿಕೊಳ್ಳಲಾಗುವ ಮೀನುಗಳು ಮತ್ತು ರಾಜ್ಯದ ಕರಾವಳಿ ಭಾಗದಲ್ಲಿ ಹಿಡಿಯಲಾಗುವ ಮೀನುಗಳ ಮೇಲೆ ನಿಗಾ ಇಡುವ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಈ ರಾಜ್ಯದ ನಾನಾ ಭಾಗಗಳಿಗೆ ಮತ್ತು ಹೊರ ರಾಜ್ಯಗಳಿಗೆ ಮೀನುಗಳನ್ನು ಸಾಗಿಸುವ ದೊಡ್ಡ ಮೀನುಗಾರಿಕ ಪ್ರದೇಶಗಳಲ್ಲಿ ಮಂಗಳೂರೂ ಒಂದಾಗಿದ್ದು, ಇಲ್ಲಿ ಸುಸಜ್ಜಿತ ತಪಾಸಣಾ ಕೇಂದ್ರ ಮತ್ತು ಲ್ಯಾಬ್‍ಗಳ ನಿರ್ಮಾಣವಾಗಬೇಕು.
ಭ್ರಷ್ಟ ಮನಸ್ಸು ಹೇಗೆ ಇಡೀ ಮಾನವ ಕುಲಕ್ಕೇ ಅಪಾಯಕಾರಿ ಅನ್ನುವುದಕ್ಕೆ ಮೀನು ಒಂದು ತಾಜಾ ಉದಾಹರಣೆ. ‘ಅತಿ ಬಯಕೆ’ ಯಾವಾಗಲೂ ಅಪಾಯಕಾರಿ. ಅವು ಅಕ್ಕಿಯನ್ನೂ ಕೆಡಿಸುತ್ತದೆ. ತರಕಾರಿಯನ್ನೂ ಕೆಡಿಸುತ್ತದೆ. ಮೀನನ್ನೂ ಕೆಡಿಸುತ್ತದೆ. ಕೊನೆಗೆ ಸ್ವತಃ ತನ್ನನ್ನೇ ಬಲಿ ಪಡೆಯುತ್ತದೆ. ಮೀನಿನ ಮೂಲಕ ಈ ಸತ್ಯ ಮತ್ತೊಮ್ಮೆ ಸಾಬೀತಾಗಿದೆ. ಈ ಭ್ರಷ್ಟರನ್ನು ತಡೆಯುವ ಶ್ರಮ ನಡೆಯದಿದ್ದರೆ ಸಮುದ್ರ ದಂಡೆಯಲ್ಲಾಗುವ ಒದ್ದಾಟವು ಸಮುದ್ರದ ಹೊರಗಿನ ಭೂಮಿಯಲ್ಲೂ ಆಗಬಹುದು. ಅಲ್ಲಿ ಮೀನಿದ್ದರೆ ಇಲ್ಲಿ ಮನುಷ್ಯ. ಅಷ್ಟೇ ವ್ಯತ್ಯಾಸ.