ಮರಣದ ಬಗ್ಗೆ ಭಯವಿರಲಿಲ್ಲ, ಪ್ರಿಯತಮೆಯೊಂದಿಗೆ ವಸಿಯ್ಯತ್ ಮಾಡಿದ್ದೆ

0
1735

ಏ. ಕೆ. ಕುಕ್ಕಿಲ

(ಗೆಳೆಯ, ಕವಿ, ಹಾಡುಗಾರ ಮತ್ತು ಪತ್ರಕರ್ತ ಅಹ್ಮದ್ ಅನ್ವರ್ ಅವರು ನಿಧನರಾಗಿ ಡಿಸಂಬರ್ ಹನ್ನೊಂದಕ್ಕೆ ಎರಡು ವರ್ಷ ತುಂಬುತ್ತಿದೆ. 2016 ಡಿಸಂಬರ್ 11 ರಂದು ಅವರು ನಿಧನರಾದರು. ಅವರನ್ನು ಸ್ಮರಿಸಿಕೊಂಡು ಎರಡು ವರ್ಷಗಳ ಹಿಂದೆ ಬರೆದ ಲೇಖನವನ್ನು ಇಲ್ಲಿ ನೀಡುತ್ತಿದ್ದೇನೆ.)

ಅಂದು ರಮಝಾನ್ ದಿನ
ಆಸ್ಪತ್ರೆ ಮಂಚದಲ್ಲಿದ್ದೆ
ಕೋಣೆ ತುಂಬಾ ಗದ್ದಲ
ತುಂಬಿದ್ದಾರೆ ಜನ
ಕಾಯುತ್ತಿದ್ದಾರೆ ನನ್ನಂತಿಮ ಕ್ಷಣ

ನಾನು ಸಂಪೂರ್ಣ ಕೃಶನಾಗಿದ್ದೆ
ಚಿತ್ರ-ವಿಚಿತ್ರ ಚಿಕಿತ್ಸೆಗೆ ಒಳಗಾಗಿದ್ದೆ
ನನ್ನ ಚೇತರಿಕೆ ಅಸಾಧ್ಯವೆಂಬ ಭಾವನೆ ವೈದ್ಯರಿಗೆ
ನನ್ನಾತ್ಮ ಗಟ್ಟಿಯಿತ್ತು ಬದುಕಿದೆ.

ಮರಣದ ಬಗ್ಗೆ ಭಯವಿರಲಿಲ್ಲ
ಪ್ರಿಯತಮೆಯೊಂದಿಗೆ ವಸಿಯ್ಯತ್ ಮಾಡಿದ್ದೆ
ಆಕೆಯ ಬದುಕು, ಮಕ್ಕಳ ಭವಿಷ್ಯ ಚಿತ್ರಿಸಿದ್ದೆ

ಮತ್ತೆ ವರುಷ ಉರುಳಿದೆ
ದಾಸನ ಕರುಣೆ ಮರಳಿದೆ
ಅಂತಿಮ ಸಂಕಲ್ಪ ದೇವ ವಿಧಿ
ಆರೋಗ್ಯವಲ್ಲವೇ ದಾಸನ ನಿಧಿ

ಹೀಗೆ ತನ್ನಂತರಂಗವನ್ನು 2015ರ ಜುಲೈ 28 ರಂದು (ಸಂಪುಟ 38, ಸಂಚಿಕೆ 21) ಬಿಡುಗಡೆಗೊಂಡ ಸನ್ಮಾರ್ಗದಲ್ಲಿ ಬಿಚ್ಚಿಟ್ಟಿದ್ದ ಇಷ್ಟದ ಗೆಳೆಯ ಅಹ್ಮದ್ ಅನ್ವರ್ ಇದೀಗ ಇಹಲೋಕ ಜೀವನಕ್ಕೆ ವಿದಾಯ ಕೋರಿದ್ದಾರೆ. ಡಿ. 11 ರಂದು ಬೆಳಿಗ್ಗೆ ಅವರ ನಿಧನ ವಾರ್ತೆಯನ್ನು ಕೇಳಿ ನಾನು ತಳಮಳಗೊಂಡೆ. ಇದಕ್ಕಿಂತ ಎರಡು ದಿನಗಳ ಹಿಂದಷ್ಟೇ (ಡಿ. 9) ನನ್ನ ಮಾವ (ಪತ್ನಿಯ ತಂದೆ) ನಿಧನರಾಗಿದ್ದರು. ಎರಡು ದಿನಗಳ ಅಂತರದಲ್ಲಿ ನಡೆದ ಈ ಎರಡು ಘಟನೆಗಳು ನನ್ನನ್ನು ತೀವ್ರವಾಗಿಯೇ ಕಾಡಿದುವು. ನೋಯಿಸಿದುವು. ಸಾವಿಗೆ ವಿಶೇಷ ಸಾಮರ್ಥ್ಯವಿದೆ. ಅದು ಎಂಥ ಗಟ್ಟಿ ಗುಂಡಿಗೆಯನ್ನೂ ಕರಗಿಸಿ ಬಿಡುತ್ತದೆ. ಅನ್ವರ್ ಅವರ ಸಾವಿನ ಸುದ್ದಿಯನ್ನು ತಕ್ಷಣಕ್ಕೆ ಜೀರ್ಣಿಸಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ಕುಟುಂಬ ವರ್ಗಕ್ಕೆ ಕರೆ ಮಾಡಿ ಖಚಿತಪಡಿಸಿಕೊಂಡೆ. ಹಾಗಂತ ಸಾವು ಅನಿರೀಕ್ಷಿತವಾಗಿತ್ತು ಎಂದಲ್ಲ. ಅನಿರೀಕ್ಷಿತ ಸಾವು ಎಂಬುದು ಇಲ್ಲವೇ ಇಲ್ಲ. ಸಾವು ಎಲ್ಲರಿಗೂ ನಿರೀಕ್ಷಿತ. ಆದರೆ ಕೆಲವೊಮ್ಮೆ ಅದು ಅಪ್ಪಳಿಸುವ ರೀತಿ ನಮ್ಮನ್ನು ಹಾಗೆ ಭ್ರಮಿಸಿಕೊಳ್ಳುವಂತೆ ಮಾಡುತ್ತದೆ. ಮರಣಕ್ಕೆ ಅನ್ವರ್ ಭಯಪಟ್ಟಿರಲಿಲ್ಲ. ಒಂದಕ್ಕಿಂತ ಹೆಚ್ಚು ಬಾರಿ ಸಾವು-ಬದುಕಿನ ಹೋರಾಟವನ್ನು ನಡೆಸಿದ ವ್ಯಕ್ತಿಯೋರ್ವ ಮರಣವನ್ನು ಭಯಾನಕವಾಗಿ ಪರಿಗಣಿಸುವುದಕ್ಕೆ ಸಾಧ್ಯವೂ ಇರಲಿಲ್ಲ. ಅನ್ವರ್ ಹಲವು ಬಾರಿ ಬದುಕು ಮತ್ತು ಶಾಶ್ವತ ಬದುಕಿನ ಬಗ್ಗೆ ನನ್ನೊಂದಿಗೆ ಮಾತಾಡಿದ್ದರು. ಮರಣದ ಬಗ್ಗೆ ಮಾತಾಡುತ್ತಲೇ ಬದುಕಿ ಉಳಿಯುವ ಬಗ್ಗೆ ಅತೀವ ಆತ್ಮವಿಶ್ವಾಸವನ್ನೂ ವ್ಯಕ್ತಪಡಿಸುತ್ತಿದ್ದರು.

ನಾನು ಪ್ರತಿ ಭೇಟಿಯ ಸಂದರ್ಭದಲ್ಲೂ, ‘ಹೇಗಿದ್ದೀರಿ’ ಎಂದು ಪ್ರಶ್ನಿಸುತ್ತಿದ್ದೆ. ನನಗೆ ಸಂಬಂಧಿಸಿ ಅದೊಂದು ಸಹಜ ಕ್ರಿಯೆ. ಮೊದಲು ಸಲಾಮ್ ಹೇಳುವುದು, ಬಳಿಕ ಹೇಗಿದ್ದೀರಿ ಎಂದು ಪ್ರಶ್ನಿಸುವುದು. ಆದರೆ ನನ್ನ ಸಲಾಮನ್ನು ಮತ್ತು ಬಳಿಕದ ಪ್ರಶ್ನೆಯನ್ನು ಸ್ವೀಕರಿಸಬೇಕಾದ ಅನ್ವರ್ ನನ್ನ ಪ್ರತಿ ಭೇಟಿಯ ಸಂದರ್ಭದಲ್ಲೂ ಭಿನ್ನ ಭಿನ್ನ ಆರೋಗ್ಯ ಸ್ಥಿತಿಯಲ್ಲಿರುತ್ತಿದ್ದರು. ಒಮ್ಮೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ, ಇನ್ನೊಮ್ಮೆ ನಿತ್ರಾಣರಾಗಿರುತ್ತಿದ್ದರು. ಇನ್ನೊಮ್ಮೆ ವಾಂತಿಯಲ್ಲಿರುತ್ತಿದ್ದರು. ಆಸ್ಪತ್ರೆಯ ಮಂಚದಲ್ಲಿ ಗ್ಲುಕೋಸ್ ಮತ್ತಿತರವುಗಳನ್ನು ಚುಚ್ಚಿಸಿಕೊಂಡು ಮಾತೂ ಆಡದಷ್ಟು ಸಂಕಟದಲ್ಲಿರುತ್ತಿದ್ದರು. ಆದರೆ ಪ್ರತಿ ಸಂದರ್ಭದಲ್ಲೂ ಅವರು ನನಗೆ ಉತ್ತರಿಸುತ್ತಿದ್ದುದು ಸಕಾರಾತ್ಮಕವಾಗಿಯೇ. ಅಲ್ ಹಮ್ದುಲಿಲ್ಲಾಹ್ ಎಂಬ ಉತ್ತರವನ್ನು ಪಡೆಯದ ಒಂದೇ ಒಂದು ಭೇಟಿ ನನ್ನ ಮತ್ತು ಅವರ ನಡುವೆ ನಡೆದಿಲ್ಲ. ಆರೋಗ್ಯದ ಪ್ರತಿ ಏರುಪೇರನ್ನೂ ಅವರು ಸಕಾರಾತ್ಮಕವಾಗಿಯೇ ಸ್ವೀಕರಿಸಿದ್ದರು. ಹಾಗಂತ,

ಕ್ಯಾನ್ಸರ್‍ ನ ಜೊತೆ ಕಳೆದ 5 ವರ್ಷಗಳಿಂದ ಸೆಣಸುತ್ತಿರುವ ವ್ಯಕ್ತಿ ಎಂಬ ನೆಲೆಯಲ್ಲಿ, ಅವರಿಗೆ ಇದು ಸುಲಭ ಆಗಿರಲಿಲ್ಲ. ಇದನ್ನು ಅವರು ಹೇಳಿಕೊಂಡೂ ಇದ್ದರು. ಆದರೆ ಓರ್ವ ಸತ್ಯವಿಶ್ವಾಸಿಯು ಸಹನೆಗೆಡಬಾರದು ಎಂದೂ ಹೇಳುತ್ತಿದ್ದರು. ಜೊತೆಗೆ ಕಾನ್ಸರ್‍ ನ ಯಾತನಾಮಯ ನೋವಿನ ಬಗೆಗೂ ಹೇಳಿಕೊಳ್ಳುತ್ತಿದ್ದರು. ನಾನು ಕಳೆದ ಸುಮಾರು ಮೂರೂವರೆ ವರ್ಷಗಳಿಂದ ಪ್ರತಿವಾರ ಅವರನ್ನು ಭೇಟಿಯಾಗಿದ್ದೇನೆ. ಈ ಭೇಟಿ ಒಂದು ರೀತಿಯಲ್ಲಿ ನಮ್ಮಿಬ್ಬರಿಗೂ ಚಟದಂತೆ ಅಭ್ಯಾಸವಾಗಿತ್ತು. ನನ್ನ ದಿನಚರಿಯ ವೇಳಾಪಟ್ಟಿಯಲ್ಲಿ ಅದಕ್ಕೆಂದೇ ಸಮಯವನ್ನು ನಿಗದಿಪಡಿಸಿದ್ದೆ. ನಿಗದಿತ ದಿನ ಭೇಟಿಯಾಗದಿದ್ದರೆ ಅವರು ಕರೆ ಮಾಡುತ್ತಿದ್ದರು. ನಾನು ಕೊನೆಯದಾಗಿ ಭೇಟಿಯಾದದ್ದು ನಿಧನಕ್ಕಿಂತ ನಾಲ್ಕು ದಿನಗಳ ಮೊದಲು. ಇದೇ ಡಿ. 23ರಂದು ಬಿಡುಗಡೆ ಯಾಗಲಿರುವ `ಪಯಣಿಗನ ಪದ್ಯಗಳು’ ಎಂಬ ಕವನ ಸಂಕಲನದ ಮುದ್ರಣ ತಯಾರಿ ಎಲ್ಲಿಯವರೆಗೆ ಮುಟ್ಟಿದೆಯೆಂದು ಆವತ್ತು ಅವರು ವಿಚಾರಿಸಿದ್ದರು. ಮಾತ್ರವಲ್ಲ, ತಾನು ಹಾಸಿಗೆಗೆ ಸೀಮಿತವಾಗಿರುವುದರಿಂದ ಬಿಡುಗಡೆಯ ಸಮಯದಲ್ಲಿ ತನ್ನ ಮಾತುಗಳನ್ನು ಓದಿ ಹೇಳಬೇಕೆಂದು ಹೇಳಿ ಬರೆದುಕೊಳ್ಳುವಂತೆ ನನ್ನಲ್ಲಿ ವಿನಂತಿಸಿದ್ದರು. ನಾನು ಈಗ ಬೇಡ ಎಂದಿದ್ದೆ. ಬಿಡುಗಡೆಗೆ ಇನ್ನೂ 15 ದಿನಗಳಿರುವುದರಿಂದ ಮುಂದಿನ ವಾರದ ಭೇಟಿಯ ಸಂದರ್ಭದಲ್ಲಿ ಬರೆಯೋಣ ಎಂದಿದ್ದೆ. ಆದರೆ ಅವರು ಈಗಲೇ ಬರೀಬೇಕು ಎಂದು ಒತ್ತಾಯಿಸಿ ಬರೆಸಿದ್ದರು. ಈ ಹೇಳಿಕೆಯ ಉದ್ದಕ್ಕೂ ಅವರು ಹೇಳಿಕೊಂಡದ್ದು ಕ್ಯಾನ್ಸರ್‍ ನ  ಬಗ್ಗೆ ಮತ್ತು ಅದರ ಯಾತನೆಯ ಬಗ್ಗೆ. ತನ್ನ ಪತ್ನಿಯ ಸೇವೆಯನ್ನು ಸ್ಮರಿಸುತ್ತಾ ಅವರು ಆ ಸಂದರ್ಭದಲ್ಲಿ ಕಣ್ಣೀರಾಗಿದ್ದರು. ಹಾಗಂತ,

ಈ ಕಣ್ಣೀರು ಅದು ಮೊದಲ ಬಾರಿಯೇನೂ ಅಲ್ಲ. ಪತ್ನಿಯ ಸೇವೆಯನ್ನು ನೆನಪಿಸಿಕೊಂಡು ಅವರು ಹಲವು ಬಾರಿ ನನ್ನೊಂದಿಗೆ ಕಣ್ಣೀರಿಳಿಸಿದ್ದಿದೆ. ಭಾವುಕರಾದದ್ದಿದೆ. ಪತ್ನಿಗಾಗಿ ಪ್ರಾರ್ಥಿಸಿದ್ದಿದೆ. ಇಂಥ ಪತ್ನಿಯನ್ನು ಪಡೆದುದು ತನ್ನ ಭಾಗ್ಯವೆಂದು ಹೇಳಿದ್ದೂ ಇದೆ. ಅನ್ವರ್ ಅವರು ಜಮಾಅತೆ ಇಸ್ಲಾಮೀ ಹಿಂದ್‍ನ ಮೇಲೆ ಅಪಾರ ಅಭಿಮಾನವನ್ನು ಹೊಂದಿದ್ದರು. ತಾನು ಚೇತರಿಕೆ ಹೊಂದಿದರೆ ಹೆಚ್ಚಿನ ಸಮಯವನ್ನು ಜಮಾಅತ್‍ಗಾಗಿ ಮೀಸಲಿಡುವು ದಾಗಿಯೂ ಹೇಳಿಕೊಂಡಿದ್ದರು. ಜಮಾಅತ್‍ನ ಯಾವುದೇ ಕಾರ್ಯಕ್ರಮಕ್ಕೂ ಛಾಯಾಚಿತ್ರ ಗ್ರಾಹಕರಾಗಿದ್ದವರು ಅವರೇ. ನಿಜವಾಗಿ, ಪೋಟೋಗ್ರಫಿಯಲ್ಲಿ ಮುಸ್ಲಿಮ್ ಸಮುದಾಯದ ಪ್ರಾತಿನಿಧ್ಯ ತೀರಾ ಶೂನ್ಯ ಅನ್ನುವ ಸಮಯದಲ್ಲಿ ಅನ್ವರ್ ಕ್ಯಾಮರಾವನ್ನು ಕೈಗೆತ್ತಿಕೊಂಡಿದ್ದರು. ಅವರ ವಿಶೇಷತೆ ಏನೆಂದರೆ, ಅವರು ಬರೇ ಪೋಟೋಗ್ರಾಫರ್ ಆಗಿರಲಿಲ್ಲ. ಸಾಮಾಜಿಕ ಬದ್ಧತೆಯನ್ನು ಜರ್ನಲಿಸಂನೊಂದಿಗೆ ಬೆರೆಸಿ ಹಂಚಿದ ಪತ್ರಕರ್ತರವರು. ಕೋಮುಗಲಭೆಯ ಸಮಯದಲ್ಲಿ ಅವರು ಹಗಲಿರುಲು ಕ್ಯಾಮರಾದೊಂದಿಗೆ ಓಡಾಡಿದ್ದಿದೆ. ಪೋಟೋ ಕ್ಲಿಕ್ಕಿಸುವುದರ ಜೊತೆಗೆ ಸಂತ್ರಸ್ತರಿಗೆ ನೆರವಾಗುವುದನ್ನು ಅವರು ಬದುಕಿನ ಕರ್ತವ್ಯವಾಗಿ ಮಾಡುತ್ತಲೇ ಬಂದಿದ್ದಾರೆ. ಅವರೊಳಗೆ ಓರ್ವ ಸಮಾಜ ಪ್ರೇಮಿ ಮತ್ತು ಸಮುದಾಯ ಪ್ರೇಮಿ ಇದ್ದ. ಅವರಿಬ್ಬರನ್ನೂ ಜೊತೆ ಜೊತೆಯಾಗಿಸಿಕೊಂಡು ಅವರು ಬದುಕುತ್ತಿದ್ದರು.
`

ಜನರಿಗೆ ಮಾರ್ಗದರ್ಶನ ಮಾಡದ, ಮಂದಿರ ಏತಕೆ, ಮಸೀದಿ ಏತಕೆ, ಜಗದ್ಗುರುಗಳೇತಕೆ, ಧರ್ಮ ಬೀರುಗಳೇತಕೆ-‘
ಎಂದವರು ಕವನವೊಂದರಲ್ಲಿ ಪ್ರಶ್ನಿಸಿದ್ದಿದೆ. ಅವರು ಸಬಲೀಕರಣಗೊಂಡ ಮುಸ್ಲಿಮ್ ಸಮುದಾಯದ ಬಗ್ಗೆ ಮತ್ತು ಸೌಹಾರ್ದ ಸಮಾಜದ ಬಗ್ಗೆ ಬಹು ನಿರೀಕ್ಷೆಯನ್ನು ಹೊಂದಿದ್ದರು. ಆ ಬಗ್ಗೆ ತಮ್ಮ ಕವನ ಮತ್ತು ಲೇಖನಗಳಲ್ಲಿ ಚರ್ಚಿಸುತ್ತಿದ್ದರು. ಕ್ಯಾನ್ಸರ್‍ಗೆ ತುತ್ತಾಗಿ ಹಾಸಿಗೆಗೆ ಸೀಮಿತವಾದ ಬಳಿಕವೂ ಅವರು ತಮ್ಮ ನಿರೀಕ್ಷೆ ಮತ್ತು ಆತ್ಮವಿಶ್ವಾಸವನ್ನು ಕಳಕೊಂಡಿರಲಿಲ್ಲ. ನನ್ನ ಪ್ರತಿವಾರದ ಭೇಟಿಯ ವೇಳೆ ಅವರು ಸನ್ಮಾರ್ಗದಲ್ಲಿ ಏನೇನು ವಿಷಯ ಚರ್ಚಿಸಲಾಗಿದೆ ಎಂದು ಪ್ರಶ್ನಿಸುತ್ತಿದ್ದರು. ನಾನು ಶೀರ್ಷಿಕೆಯನ್ನು ಓದಿ ಹೇಳುತ್ತಿದ್ದೆ. ದಿನದ ಬೆಳವಣಿಗೆಗಳ ಬಗ್ಗೆ ಅಪ್‍ಡೆಟ್ ಆಗಿರಲು ಯತ್ನಿಸುತ್ತಿದ್ದರು. ಸನ್ಮಾರ್ಗದ ವಿಶೇಷಾಂಕಕ್ಕಾಗಿ ಅವರು ನನ್ನನ್ನು ಪಕ್ಕದಲ್ಲಿ ಕೂರಿಸಿ ಕವನ ಹೇಳಿದ್ದಿದೆ. ನಾನು ಬರೆದು ಕೊಂಡದ್ದೂ ಇದ್ದೆ. ನಾವಿಬ್ಬರೂ,

ಪೆಂಗ್ ಶುಲಿನ್‍ನ ಬಗ್ಗೆ, ಲಿಸಾರೇ ಬಗ್ಗೆ, ಯುವರಾಜ್ ಸಿಂಗ್‍ರ ಬಗ್ಗೆ ಚರ್ಚಿಸಿದ್ದೇವೆ. ಕ್ಯಾನ್ಸರ್ ಅನ್ನು ಅವರು ಎದುರಿಸಿದ ಅನುಭವಗಳನ್ನು ಹಂಚಿ ಕೊಂಡಿದ್ದೇವೆ. ಅನ್ವರ್ ಅವರು ನಕಾರಾತ್ಮಕವಾಗಿ ಮಾತಾಡಿದ್ದು ತೀರಾ ತೀರಾ ಕಡಿಮೆ. ತನಗೆ ಗೊತ್ತಿರುವ ವ್ಯಕ್ತಿಯೊಬ್ಬರ ಬಗ್ಗೆ ಅವರು ನನ್ನೊಂದಿಗೆ ಹೇಳಿಕೊಂಡಿದ್ದರು. ರೋಗಪೀಡಿತರಾದ ಆ ವ್ಯಕ್ತಿ 80 ಕೆ.ಜಿ.ಯಿಂದ 13 ಕೆ.ಜಿ.ಗೆ ಕುಸಿದದ್ದು ಮತ್ತು ಹಾಸಿಗೆಗೆ ಸೀಮಿತವಾದದ್ದು, ಕೊನೆಗೆ ಫಿಸಿಯೋಥೆರಪಿಯಿಂದಾಗಿ ಗುಣಮುಖ ರಾಗಿ ಪುನಃ 50 ಕೆ.ಜಿ.ಗಿಂತ ಮೇಲೇರಿದ್ದನ್ನು ಸ್ಮರಿಸಿಕೊಂಡಿದ್ದರು. ಅವರಲ್ಲಿ ಕ್ಯಾನ್ಸರನ್ನು ಗೆಲ್ಲುವ ಆತ್ಮವಿಶ್ವಾಸವಿತ್ತು ಅಥವಾ ಆ ಆತ್ಮಾವಿಶ್ವಾಸವೇ ಅವರನ್ನು ಕಳೆದ 5 ವರ್ಷಗಳ ವರೆಗೆ ಜೀವಂತವಾಗಿರಿಸಿತ್ತು ಎಂದೂ ಹೇಳಬಹುದು. ಈ ಸ್ಥಿತಿಯಲ್ಲೂ ಅವರು ತನ್ನ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸುವ ಆಸಕ್ತಿ ತೋರಿದರು. ತನ್ನ ಕವನಗಳನ್ನು ಸಂಗ್ರಹಿಸಿ ಕೃತಿ ರೂಪದಲ್ಲಿ ತರುವುದಕ್ಕೆ ಮುಂದಾದರು. ಒಂದು ಕಡೆ ದೈಹಿಕ ಅಸಾಮರ್ಥ್ಯ, ಇನ್ನೊಂದು ಕಡೆ ಅಪಾರ ಜೀವನ ಪ್ರೇಮ.. ಇವೆರಡನ್ನೂ ಜೊತೆಯಾಗಿರಿಸಿಕೊಂಡು ಬದುಕಿದವರೇ ಅಹ್ಮದ್ ಅನ್ವರ್. ಸಾಮಾನ್ಯವಾಗಿ,

ಕಾಯಿಲೆ ಎಂಬುದು ನಮ್ಮಿಂದ ಎಲ್ಲವನ್ನೂ ಕಸಿದುಕೊಳ್ಳುತ್ತದೆ. ಬದುಕಿನ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ತೀವ್ರ ನಿರಾಶರಾಗುವಂತೆ ಮಾಡುತ್ತದೆ. ಅದರಲ್ಲೂ ಕ್ಯಾನ್ಸರ್ ಎಂಬುದು ಅನೇಕ ಬಾರಿ ಸಾವನ್ನು ಖಚಿತಪಡಿಸಿಕೊಂಡು ಬರುವ ಅತಿಥಿ. ಆದ್ದರಿಂದಲೇ ಅನ್ವರ್ ಅವರ ಜೀವನ ಪ್ರೇಮ ಮುಖ್ಯವೆನಿಸುತ್ತದೆ. ಅವರಲ್ಲೊಂದು ಹವ್ಯಾಸವಿತ್ತು. ಅದು ಹಾಡುಗಾರಿಕೆ. ‘ಹೇ ದೇವಾ ನೀನೊಡೆಯನು, ಮಹಾ ಮಹಿಮನೂ..’ ಎಂಬ ಕವನವನ್ನು (ದಿ. ಅಬ್ದುಲ್ ಗಪ್ಫಾರ್ ಸುಳ್ಯ ವಿರಚಿತ) ಅವರು ಇಷ್ಟಪಟ್ಟು ಹಾಡುತ್ತಿದ್ದರು. ಕವಿಗೋಷ್ಠಿಗಿಂತ ಮೊದಲು ಸ್ತುತಿಗೀತೆ ಎಂಬ ನೆಲೆಯಲ್ಲಿ ಅವರು ಹಾಡುತ್ತಿದ್ದುದೇ ಈ ಕವನವನ್ನು. ನನ್ನ ಕಚೇರಿಗೆ ಬಂದರೆಂದರೆ ಅವರ ಗಝಲ್‍ಗಾರಿಕೆ ಆರಂಭವಾಗುತ್ತಿತ್ತು. ಅವರು ನನ್ನ ಕೊಠಡಿಗೆ ಬಂದು ಹಾಡಲು ತೊಡಗುತ್ತಿದ್ದರು. ಒಂದರ್ಧ ಗಂಟೆ ನಮ್ಮಿಬ್ಬರ ಗಾಯನಗೋಷ್ಠಿ ನಡೆಯುತ್ತಿತ್ತು. ಹಳೆ ಗಝಲ್‍ಗಳನ್ನು ಅವರು ಹಾಡಿ ನನಗೆ ಕೇಳಿಸುತ್ತಿದ್ದರು. ಅವರದೇ ಹೊಸ ಹಾಡುಗಳಿಗೆ ರಾಗ ಹಾಕಿ ಹಾಡುತ್ತಿದ್ದರು. `ನೀನಾರಿಗಾದೆ ಮಾನವಾ… ನಿನಗಾರು ಇಲ್ಲಿ ಹೇಳು…’ ಎಂಬ ಜನಪ್ರಿಯ ಹಾಡು ಇವರದೇ. ಅವರು ಲೌಕಿಕ ಮತ್ತು ಆಧ್ಯಾತ್ಮಿಕವನ್ನು ಸರಿಸಮಾನರಾಗಿ ಅನುಭವಿಸಿ ಬದುಕಿದರು, ಬರೆದರು.
ಈ ಐಹಿಕ ಜೀವನ / ಯಾರಿಗ್ಗೊತ್ತು ಎಷ್ಟು ದಿನ / ಲೋಕ ಗಳಿಸುವ ತವಕದಿ / ಎಷ್ಟೋ ಜನ ಮರೆತೇ ಬಿಟ್ಟಿದ್ದಾರೆ / ಮಹಾ ದೇವನ.

ಹೀಗೆ ಹಾಡಿ ಹೊರಟುಹೋದ ಅಹ್ಮದ್ ಅನ್ವರ್ ಅವರನ್ನು ಆ ಮಹಾದೇವನು ಅನುಗ್ರಹಿಸಲಿ.