ಮಸೀದಿಯಲ್ಲಿ ನಮಾಜ್: 1994 ರ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್ ನಿರ್ಧಾರ

0
1591

ನವದೆಹಲಿ: “ಮಸೀದಿಯಲ್ಲಿ ನಮಾಜ್ ಮಾಡುವುದು ಇಸ್ಲಾಮಿನ ಮೂಲಭೂತ ತತ್ವವಲ್ಲ ಮತ್ತು ಅದರ ಅಭಿನ್ನವಾದ ಭಾಗವಲ್ಲ. ಮುಸ್ಲಿಮರು ಎಲ್ಲಿ ಬೇಕಾದರೂ ನಮಾಜ್ ನಿರ್ವಹಿಸಬಹುದು .. “ಎಂಬ ಸುಪ್ರೀಂ ಕೋರ್ಟ್ ನ 1994 ರ ತೀರ್ಪಿನ ಬಗ್ಗೆ ಮರು ಪರಿಶೀಲಿಸಲು ಬುಧವಾರ ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿ ವಿಚಾರಣೆ ನಡೆಸುತ್ತಿರುವ ಮೂವರು ನ್ಯಾಯಾಧೀಶರುಗಳಾದ, ದೀಪಕ್ ಮಿಶ್ರ, ಅಶೋಕ್ ಭೂಷಣ್ ಮತ್ತು ಅಬ್ದುಲ್ ನಜೀರ್ ಅವರ ಪೀಠವು ಈ ನಿರ್ಧಾರ ಮಾಡಿದೆ. ವಿವಾದಕ್ಕೆ ಸಂಬಂಧಿಸಿ ಮುಸ್ಲಿಮರನ್ನು ಪ್ರತಿನಿಧಿಸುತ್ತಿರುವ ನ್ಯಾಯವಾದಿ ರಾಜೀವ್ ಧವನ್ ಅವರು, ಉನ್ನತ ನ್ಯಾಯಾಲಯದ ಈ ಹಿಂದಿನ ತೀರ್ಪು ಇಸ್ಲಾಮ್ ಧರ್ಮಕ್ಕೆ ಅನುಸಾರವಾಗಿಲ್ಲ ಮತ್ತು ಆ ಬಗ್ಗೆ ಮರು ಪರಿಶೀಲನೆ ಅಗತ್ಯ ಎಂದು ವಾದಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಈ ಹಿಂದೆ 1994 ರಲ್ಲಿ ಮುಖ್ಯ ನ್ಯಾಯಾಧೀಶ ಎಂ ಎನ್ ವೆಂಕಟಾಚಲಯ್ಯ ಅವರ ನೇತೃತ್ವದ ಐವರು ನ್ಯಾಯಾಧೀಶರ ಸಾವಿಂಧಾನಿಕ ಪೀಠವು ಮುಸ್ಲಿಮರು ಎಲ್ಲಿ ಬೇಕಾದರೂ ಮತ್ತು ತೆರೆದ ಜಾಗದಲ್ಲೂ ನಮಾಜ್ ಸಲ್ಲಿಸಬಹುದು, ಮಸೀದಿಯಲ್ಲಿ ನಿರ್ವಹಿಸುವುದು ಮೂಲಭೂತ ಅಗತ್ಯವಲ್ಲ ಎಂಬ ತೀರ್ಪನ್ನು ನೀಡಿತ್ತು.
ಹಿಂದೂಗಳು 1992 ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಕೃತ್ಯವನ್ನು ಮುಸ್ಲಿಮರು ಎಂದೂ ಒಪ್ಪಿಕೊಳ್ಳುವುದಿಲ್ಲ ಎಂದು ವಾದಿಸಿದ ರಾಜೀವ್ ಧವನ್ ರು , ಅಲ್ಲಿ ಮುಸ್ಲಿಮರ ಪ್ರಾರ್ಥನೆಯ ಹಕ್ಕನ್ನು 1994 ರ ತೀರ್ಪಿನ ವೇಳೆ ಪರಿಗಣಿಸಲಾಗಿಲ್ಲ ಎಂದು ಬೊಟ್ಟು ಮಾಡಿದರಲ್ಲದೆ, ಅದೇ ವೇಳೆ, ಹಿಂದೂಗಳ ಪೂಜಿಸುವ ಹಕ್ಕನ್ನು ಕಾನೂನುಬಾಹಿರವಾಗಿ ತೀರ್ಮಾನಿಸಲಾಯಿತು ಎಂದು ವಾದಿಸಿದರು. ಬಾಬರಿ ಮಸೀದಿಯಲ್ಲಿ ಮುಸ್ಲಿಮರ ಪ್ರಾರ್ಥನಾ ಹಕ್ಕನ್ನು 1994 ರಲ್ಲಿ ಸುಪ್ರೀಂ ಕೋರ್ಟ್ ಪರಿಗಣಿಸದಿರುವುದು ಯಾಕಾಗಿ ಎಂದವರು ಪ್ರಶ್ನಿಸಿದರು.