ಮಸೀದಿ ಕೊಳದ ಮೀನುಗಳು ಮತ್ತು ನಮಾಜ್

1
1976

ಏ. ಕೆ. ಕುಕ್ಕಿಲ

ವುಝೂ (ಅಂಗಶುದ್ಧಿ) ಮಾಡುವ ಉದ್ದೇಶದಿಂದ ಆತ ಮಸೀದಿಯ ನೀರಿನ ಕೊಳದ (ಹೌಲ್) ದಂಡೆಯಲ್ಲಿ ಕುಳಿತ. ಹಳೆಯ ಪರಿಚಯವೆಂಬಂತೆ ಮೀನುಗಳು ಆತನ ಬಳಿಯೇ ಗುಂಪುಗೂಡಿದುವು. ಒಂದು ಮೀನು ನೀರಿನಿಂದ ಮೇಲಕ್ಕೆ ಚಿಮ್ಮಿ ಸ್ವಾಗತವನ್ನು ಕೋರಿತು. ಆ ಬಳಿಕ ಒಂದೊಂದೇ ಮೀನುಗಳು ಅವುಗಳದ್ದೇ ಆದ ಶೈಲಿಯಲ್ಲಿ ನರ್ತನಕ್ಕಿಳಿದವು. ಆಕಾರ, ಗಾತ್ರ, ಜಾತಿಗಳಿಗೆ ಹೊಂದಿಕೊಂಡು ಈ ನರ್ತನಗಳಲ್ಲಿ ವ್ಯತ್ಯಾಸಗಳೂ ಇದ್ದುವು. ಆತ ಅವುಗಳ ಸಂಖ್ಯೆಯನ್ನು ಎಣಿಸಲು ಪ್ರಯತ್ನಿಸಿದ. ಸಾಧ್ಯವಾಗಲಿಲ್ಲ. ಒಂದನ್ನಾದರೂ ಹಿಡಿದು ಮುದ್ದಿಸಬೇಕು ಅಂದುಕೊಂಡ. ಅದೂ ಕೈಗೂಡಲಿಲ್ಲ. ಆ ಮೀನುಗಳ ಮೇಲೆ ಯಾಕೋ ಆತನಲ್ಲಿ ಮೋಹ ಉಕ್ಕಿತು. ಭಾವಪರವಶತೆಯಲ್ಲಿ ಮೀನುಗಳೊಂದಿಗೆ ಲೀನವಾಗಿ ಹೋದ…

ಮಧ್ಯಾಹ್ನದ ನಮಾಜ್ ಮುಗಿಸಿ ಭಕ್ತರು ಮಸೀದಿಯಿಂದ ಹೊರಹೋಗುವ ಸದ್ದು ಆತನನ್ನು ವಾಸ್ತವಕ್ಕೆ ತಂದಿತು. ಮಸೀದಿಯ ಗುರುಗಳು ಪ್ರವಚನ ನೀಡುತ್ತಿದ್ದರು:
“ಚಿತ್ರ ಇರುವ ಬಟ್ಟೆ ಧರಿಸಿ ನಮಾಜ್ ನಿರ್ವಹಿಸಬೇಡಿ, ಅದರಿಂದ ಇತರರ ಏಕಾಗ್ರತೆಗೆ ಭಂಗ ಉಂಟಾಗುತ್ತದೆ…” ಅವರ ಪ್ರವಚನ ಮುಂದುವರಿದಿತ್ತು. ಆತ- ತನ್ನ ನಮಾಜ್ ಗೆ ಭಂಗ ತಂದ ಮೀನುಗಳತ್ತ ನೋಡಿದ. ಅವು ನಕ್ಕಂತೆ ಅನಿಸಿತು.

ಆತ ಸರಸರನೆ ವುಝೂ ನಿರ್ವಹಿಸಲಾರಂಭಿಸಿದ.

1 COMMENT

Comments are closed.