ಮೂರನೇ ರಂಗ ಜಾತ್ಯತೀತ ಮತ ವಿಭಜನೆಗೆ ದಾರಿಯೇ?

0
1233

: ಸಲೀಮ್ ಬೋಳಂಗಡಿ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇತರ ಮೂರನೇ ರಂಗ ರಚನೆಗೆ ತೃಣಮೂಲ ಕಾಂಗ್ರೆಸ್ ಅಸಹಮತ ವ್ಯಕ್ತ ಪಡಿಸಿದೆ. ಮೂರನೇ ರಂಗದ ರಚನೆಯು ಬಿಜೆಪಿಯೇತರ ಮತಗಳ ವಿಭಜನೆಗೆ ಕಾರಣವಾಗಬಹುದು. ಅವಿಶ್ವಾಸ ಗೊತ್ತುವಳಿ ಬಿದ್ದು ಹೋದರೂ ಸರಕಾರದ ಲೋಪಗಳನ್ನು ಎತ್ತಿ ತೋರಿಸಲು ಇದು ಪ್ರತಿಪಕ್ಷಗಳಿಗೆ ಸಹಾಯಕವಾಗಬಹುದು. ಬಿಜೆಪಿ ಮತ್ತು ಕಾಂಗ್ರೆಸೇತರ ಮೂರನೇ ರಂಗದ ಸ್ಥಾಪನೆಯ ಪ್ರಯತ್ನದಲ್ಲಿ ಕೆಲ ರಾಜಕೀಯ ಪಕ್ಷಗಳು ರಾಷ್ಟ ಮಟ್ಟದಲ್ಲಿ ಪ್ರಯತ್ನದಲ್ಲಿ ತೊಡಗಿರುವಾಗ ಇಂತಹ ಒಂದು ಹೇಳಿಕೆ ಬಂದಿರುವುದು ಸ್ವಾಗತಾರ್ಹ.

ಎನ್.ಡಿ.ಎಯಲ್ಲಿನ ಭಿನ್ನಮತ ಮತ್ತು ಉಪಚುನಾವಣೆಯಲ್ಲಿ ಬಿಜೆಪಿ ಉಂಡ ಸೋಲುಗಳು ಮೂರನೇ ರಂಗದ ಆಸೆ ಕೆಲ ಪಕ್ಷದಲ್ಲಿ ಚಿಗುರೊಡೆದಿತ್ತು. ತೆಲಂಗಾಣದ ಮುಖ್ಯಮಂತ್ರಿ ಚಂದ್ರ ಶೇಖರ ರಾವ್ ಈ ಕುರಿತು ಮಮತಾರನ್ನು ಭೇಟಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಮುಂದಿನ ಲೋಕಸಬಾ ಚುನಾವಣೆಯಲ್ಲಿ ಬಿಜೆಪಿಯೇತರ ಮಹಾಮೈತ್ರಿಯೊಂದನ್ನು ಸ್ಥಾಪಿಸುವ ಕುರಿತು ರಾಹುಲ್ ಗಾಂಧಿ ಪ್ರಸ್ತಾಪವಿಟ್ಟಿದ್ದರು. ಈ ಪ್ರಯತ್ನದಲ್ಲಿ ರಾಹುಲ್ ಗಾಂಧಿ ತೊಡಗಿಸಿ ಕೊಳ್ಳುವ ಸಿದ್ದತೆಯಲ್ಲಿರುವಾಗಲೇ ತೆಲಂಗಾಣದ ಚಂದ್ರಶೇಖರ ರಾವ್‍ರ ಈ ನಡೆಯನ್ನು ಪ್ರಾಮಾಣಿಕ ಎನ್ನಲು ಕಷ್ಟವಾಗುತ್ತಿದೆ. ಬಿಹಾರದ ಉಪಚುನಾವಣೆಯಲ್ಲಿನ ಸೋಲು ನಿತೀಶ್‍ ಕುಮಾರ್ ರಿಗೂ ಆತಂಕ ಮೂಡಿಸಿದೆ. ಅವರು ಕೂಡಾ ತಮ್ಮ ಹೇಳಿಕೆಯ ವರಸೆಗಳನ್ನು ಬದಲಿಸುವ ಮನಸ್ಸು ಮಾಡಿದ್ದಾರೆ.

ಉಪ ಚುನಾವಣೆಯಲ್ಲಿ ಆರ್.ಜೆ.ಡಿ ಗೆಲುವಿನ ನಂತರ ಪ್ರಚೋದನಾಕಾರಿ ರೀತಿಯಲ್ಲಿ ಗಿರಿರಾಜ್ ಕಿಶೋರ್ ವಿವಾದಾತ್ಮಕ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್ “ಸಮಾಜದಲ್ಲಿ ಭಿನ್ನತೆ ಸೃಷ್ಟಿಸುವಂತಹ ಹೇಳಿಕೆ ನೀಡುವುದನ್ನು ಒಪ್ಪಲಾಗದು” ಎಂದು ಹೇಳಿದ್ದರು. ಹೌದು ತನ್ನ ಸಂಪುಟದ ಸಹ ಮಂತ್ರಿಗಳ ಹೇಳಿಕೆಯ ವಿರುದ್ಧದ ಪ್ರತಿಭಟನೆ ತೀವ್ರವಾದಾಗ ಮೌನ ಮುರಿದ ನಿತೀಶ್ ಬಿಜೆಪಿ ನಾಯಕರನ್ನು ಟೀಕಿಸಿ ರಂಗಕ್ಕಿಳಿದಿದ್ದರು. ಇಂತಹ ಮಾತುಗಳ ಮೂಲಕ ಒಡಕುಂಟು ಮಾಡಿ ಮತ್ತೆ ರಂಗ ಬದಲಿಸಿದರೂ ಆಶ್ಚರ್ಯವಿಲ್ಲ. ಯಾಕೆಂದರೆ ಸ್ವಾರ್ಥ ಹಿತಾಸಕ್ತಿಗಾಗಿ ಯಾವ ರಾಜಕೀಯದಾಟವನ್ನು ಆಡಲು ಸಿದ್ದವಾದ ಕಾಲವಿದು ಎಂಬುದು ಈಗಾಗಲೇ ಬಹಿರಂಗವಾಗಿದೆ. ತೆಲುಗು ದೇಶಮ್ ಎನ್.ಡಿ.ಎ. ಮೈತ್ರಿಕೂಟ ತೊರೆದ ಬಳಿಕದ ತೆಲಂಗಾಣದ ಈ ನಡೆ ಸಂಶಯಾಸ್ಪದವಲ್ಲವೇ? ಪ್ರತಿ ಪಕ್ಷಗಳನ್ನು ಒಡೆದು ಓಟು ಹರಿ ಹಂಚಾಗಿಸುವ ಪ್ರಯತ್ನ ಎಂಬುದಾಗಿ ಚಿಂತಿಸಿದರೆ ತಪ್ಪಾಗಬಹುದೇ? 2019ರ ಚುನಾವಣೆ ಆಸನ್ನವಾಗುವಾಗ ಇಂತಹ ಹಲವು ಕಸರತ್ತುಗಳು ನಡೆಯಬಹುದು.