ಮೊದಲು ಕೇಂದ್ರ ಸರಕಾರ ಬದಲಾಗಲಿ, ಆಮೇಲೆ ರಾಜ್ಯ ಬದಲಿಸೋಣ

0
1503

: ಸಲೀಮ್ ಬೋಳಂಗಡಿ

ಕರ್ನಾಟಕದಲ್ಲಿ ಚುನಾವಣೆಯ ಪ್ರಚಾರದ ಭರಾಟೆ ಅಂತಿಮ ಹಂತದಲ್ಲಿದೆ. ರಾಜಕೀಯ ಪಕ್ಷಗಳು ಜನರ ಮನ ಗೆಲ್ಲಲು ನಾನಾ ರೀತಿಯ ಕಸರತ್ತುಗಳನ್ನು ಮಾಡತೊಡಗಿದೆ. ದೇಶವನ್ನಾಳುವವರು ಕರ್ನಾಟಕದಲ್ಲಿ ಬೀಡುಬಿಟ್ಟು  “ಸರಕಾರ ಬದಲಿಸಿ ಬದಲಿಸಿ” ಎಂದು ಕೂಗಾಡುತ್ತಿದ್ದಾರೆ, ಬೆಂಬಲಿಗರ ಕರತಾಡನಗಳ ಮಧ್ಯೆ ದೇಶವನ್ನೇ ಮರೆಯುತ್ತಿದ್ದಾರೆ. ನಿಜವಾಗಿ ಬದಲಾಗಬೇಕಾದವರು ಯಾರು ಎಂಬ ವಾಸ್ತವ ಮರೆಯಾಗುತ್ತದೆ. ಸುಳ್ಳಿನ ಸೌಧಗಳನ್ನು ಜನರ ಮುಂದೆ ಬಿಂಬಿಸಲಾಗುತ್ತಿದೆ. ಮತದಾರರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ನಿಜವಾಗಿ ಯಾವುದನ್ನು ಬದಲಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಅಚ್ಚೇದಿನ್ ಹಳತಾಯಿತು. ಇನ್ನು ಅಚ್ಚೇದಿನ್ ಆಯೇಗಾ ಎಂದು ಹೇಳಿದರೆ ಮೊಟ್ಟೆ ತೂರಿ ಬರಬಹುದೆಂಬ ಆತಂಕ ಕಾಡಿರಲೂ ಬಹುದು. ಅಚ್ಚೇದಿನದ ಘೋಷಣೆ ಅದಕ್ಕೀಗ ಸರಕಾರ ಬದಲಿಸಿ ಎಂದು ರಾಗ ಎಳೆಯತೊಡಗಿದ್ದಾರೆ. ಜನರಿಗೆ ಅನ್ನ ಭಾಗ್ಯ, ರೈತರ ಸಾಲ ಮನ್ನಾ ಮಾಡಿದವರನ್ನು ಬದಲಾಯಿಸಬೇಕಾ? ತೈಲದರ ಹೆಚ್ಚಿಸಿ ಜನರ ಅಗತ್ಯ ಸಾಮಾನುಗಳ ದರಗಳು ಮುಗಿಲಿಗೇರುವಂತೆ ಮಾಡಿ ಬಡಜನರ ಜೀವನವನ್ನೇ ಕಮಗಾಲಾಗಿಸುವಂತೆ ಮಾಡಿದ ಕೇಂದ್ರ ಸರಕಾರದ ಯಾವ ಒಳ್ಳೆಯತನ ನೋಡಿ ಚುನಾಯಿಸಬೇಕು ಎಂದು ಮತದಾರರು ಕೇಳಿದರೆ ಪ್ರಾಮಾಣಿಕವಾಗಿ ಬಿಜೆಪಿ ನೇತಾರರು ಏನು ಉತ್ತರ ಕೊಡಬಲ್ಲರು. ಕೋಮು ವೈಷಮ್ಯವನ್ನೇ ಬಂಡವಾಳ ಮಾಡಿದರೆ ರಾಜ್ಯ ಅಭಿವೃದ್ದಿ ಸಾಧಿಸಬಲ್ಲುದೇ? ಬಡ ಮಧ್ಯಮವರ್ಗದ ಯುವಕರ ಕೈಗೆ ಶಸ್ತ್ರಾಸ್ತ್ರ ನೀಡಿ ಹೊಡೆದಾಡುವಂತೆ ಮಾಡುವುದು ಧರ್ಮದ ಕಾರ್ಯವೇ? ಈ ಅಧರ್ಮದ ಕಾರ್ಯ ಮಾಡುತ್ತಾ ಧರ್ಮದ ಹೆಸರಲ್ಲಿ ರಾಜಕೀಯ ಮಾಡಿ ರಾಜ್ಯದ ಗದ್ದುಗೆ ಏರುವುದನ್ನು ಅಭಿವೃದ್ದಿ ಎನ್ನಲು ಸಾಧ್ಯವೇ? ವಾಸ್ತವದಲ್ಲಿ ಇಲ್ಲಿ ಅಭಿವೃದ್ದಿ ಹೊಂದಿದವರು ಯಾರು? ಕಳೆದ ಬಾರಿ ಜನರು ಬಿಜೆಪಿಗೆ ಅಧಿಕಾರ ನೀಡಿದಾಗ ಎಂಥಹ ಆಡಳಿತ ನಡೆಸಿದರು ಎಂಬ ಚಿತ್ರಣ ನಮ್ಮ ಕಣ್ಣ ಮುಂದಿದೆ. ಸಾಲು ಸಾಲು ಸಚಿವರ ಜೈಲುವಾಸ, ಲೈಂಗಿಕ ಹಗರಣಗಳು ಮಾತ್ರವಲ್ಲ ಪವಿತ್ರವಿಧಾನ ಸೌಧದಲ್ಲಿಯೇ ನೀಲಿಚಿತ್ರ ನೋಡಿ ಚಪಲ ತೀರಿಸಿಕೊಂಡ ಘಟನೆಯೂ ನಡೆಯಿತು. ಅತ್ಯಂತ ನಾಚಿಕೆ ಗೇಡಿನ ರಾಜಕೀಯ ನಡೆಯಿತು. ಪರಸ್ಪರ ಒಳಜಗಳದಿಂದ ಮೂವರು ಮುಖ್ಯಮಂತ್ರಿಗಳನ್ನೂ ಕಾಣಬೇಕಾಯಿತು. ಹಿಗೆಲ್ಲಾ ಜನರನ್ನು ಸತಾಯಿಸಿದಾಗ ಜನರು ಬೇಸತ್ತು ಅವರನ್ನು ಮನೆಗೆ ಕಳುಹಿಸಿದರು. ನಂತರ ಗೆದ್ದು ಬಂದಂತಹ ಸಿದ್ದರಾಮಯ್ಯ ನಿಜಕ್ಕೂ ಪರವಾಗಿಲ್ಲ ಎನ್ನುವಂತಹ ಆಡಳಿತ ನೀಡಿದರು.  ಪಕ್ಷದ ಕೆಲಪುಡಾರಿಗಳಿಂದ ತೊಂದರೆ ಯಾಗಿಲ್ಲ ಎಂದಲ್ಲ. ಸರಕಾರಕ್ಕೆ ಮಸಿ ಬಳಿಯುವ ಪ್ರಯತ್ನವೂ ನಡೆಯಿತು. ನಿಜವಾಗಿ ಬಡವರ ಪಾಲಿಗೆ ಅನ್ನ ಭಾಗ್ಯ ಯೋಜನೆಯು ವರದಾನವಾಗಿದೆ. ಇಂತಹ ಹಲವು ಭಾಗ್ಯಗಳ ಮೂಲಕ ಜನಮನ ಗೆದ್ದಿದ್ದಾರೆ, ಐಟಿ ದಾಳಿಗಳ ಮುಖಾಂತರ ಕಾಂಗ್ರೆಸ್ಸನ್ನು ಬೆದರಿಸುವ ತಂತ್ರಗಳೂ ನಡೆಯುತ್ತಿದೆ. ಏನೆಲ್ಲಾ ಸಾಧ್ಯವೋ ಅವೆಲ್ಲ ಅಡ್ಡ ದಾರಿಯನ್ನು ಅವರು ತುಳಿಯುತ್ತಿದ್ದಾರೆ. ಈಗ ಚುನಾವಣೆಯ ಅಂತಿಮ ಹಂತದಲ್ಲಿರುವಾಗ ರಾಜ್ಯ ಸರಕಾರದ ವಿರುದ್ಧ ಏನೆಲ್ಲಾ ಸುಳ್ಳು ಭಾಷಣಗಳನ್ನು ಬಿಗಿದು ಜನರನ್ನು ವಂಚಿಸುವ ಪ್ರಕ್ರಿಯೆ ನಡೆಯುತ್ತಿದೆ. ಜನರು ಮಾತ್ರ ಈ ಭಾಷಣಗಳಿಗೆ ಮರುಳಾಗಬಾರದು. ನಿಜವಾದ ಅಭಿವೃದ್ದಿ ರಾಜ್ಯ ಸರಕಾರದಿಂದ ಆಗಿದೆಯೇ?  ಕೇಂದ್ರ ಸರಕಾರದಿಂದ ಆಗಿದೆಯೇ ಎಂದು ಜನರು ಪ್ರಾಮಾಣಿಕವಾಗಿ ಚಿಂಥನ ಮಂಥನ ನಡೆಸಿ ಪರಾಮರ್ಶಿಸಬೇಕು.
ಉತ್ತರದ ರಾಜ್ಯಗಳು ಉಷ್ನ ಗಾಳಿಯಿಂದ ತತ್ತರಿಸುತ್ತಿದೆ. ಮುಖ್ಯ ಮಂತ್ರಿಗಳು ಬೇಜವಾಬ್ದಾರಿತನದಿಂದ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅಲ್ಲಿನ ಜನರ ನೋವುಗಳನ್ನು ಆಲಿಸಿ ಪರಿಹರಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಬದಲು ಕರ್ನಾಟಕದಲ್ಲಿ ಸರಕಾರ ಬದಲಿಸುವ ಮಾತುಗಳನ್ನಾಡುತ್ತಿರುವುದು ವ್ಯಂಗ್ಯವಲ್ಲವೇ? ಬಿಜೆಪಿ ಆಡಳಿತದ ಎಲ್ಲಾ ರಾಜ್ಯಗಳ ಮುಖ್ಯ ಮಂತ್ರಗಳು ಇಲ್ಲಿ ಠಿಕಾಣಿ ಹೂಡಿ ಕರ್ನಾಟಕದಲ್ಲಿ ಕೇಂದ್ರಾಡಳಿತವೇ ತುಂಬಿದೆ. ನಿಜವಾಗಿ ಇವರು ಪ್ರಾಮಾಣಿಕರಾಗಿದ್ದರೆ ಇಷ್ಟೆಲ್ಲಾ ಬಿರುಸಿನ ಪ್ರಚಾರ ಮಾಡಬೇಕಾದ ಅಗತ್ಯವಿತ್ತೇ? ಸುಳ್ಳುಗಳನ್ನು ಪೋಣಿಸಿದ ಬಾಷಣಗಳನ್ನು ಬಿಗಿಯುವ ಅಗತ್ಯವಿತ್ತೇ? ಅದರಲ್ಲಿಯೇ ಇವರ ಸಾಚಾತನವನ್ನು ಅರ್ಥೈಸಬಹುದಲ್ಲವೇ? ಬದಲಾಯಿಸಿ ಎಂದು ಹೇಳತ್ತಿರುವವರೇ ಮೊದಲು ಬದಲಾಗಬೇಕು. ಬದಲಿಸಬೆಕಾದುದು ಸರಕಾರವನ್ನಲ್ಲ ನಿಮ್ಮ ಮನಸ್ಸುಗಳಲ್ಲಿ ತುಂಬಿದ ಕೆಟ್ಟ ಯೋಚನೆಗಳನ್ನಾಗಿದೆ. ಆ ಮೂಲಕ ದೇಶವನ್ನು ಬದಲಾಯಿಸಬೇಕಾಗಿದೆಯೇ ಹೊರತು ಬದಲಿಸಿ ಬದಲಿಸಿ ಎಂದು ಕೂಗಾಡಿದರೆ ಮುಂದೆ ಕೇಂದ್ರವನ್ನೇ ಬಲಾಯಿಸಿಯಾರು.