ರೊನಾಲ್ಡಿನೋ ಜಾಗದಲ್ಲಿ ಜೈನುದ್ದೀನ್ ಜೈದಾನ್ ಇರುತ್ತಿದ್ದರೆ…

0
3134
© LUIS SEVILLANO FUTBOL, COPA DE EUROPA: REAL MADRID - ARSENAL.

ಏ. ಕೆ. ಕುಕ್ಕಿಲ

ವಿವಿಧ ಜಾತಿ, ಧರ್ಮ, ವರ್ಗ, ಪಂಗಡಗಳಲ್ಲಿ ವಿವಾಹ, ವಿವಾಹ ವಿಚ್ಛೇದನ, ಕೌಟುಂಬಿಕ ರೀತಿ, ರಿವಾಜುಗಳ ಕುರಿತಂತೆ ಭಿನ್ನ ಭಿನ್ನವಾದ ನಿಲುವುಗಳಿವೆ. ಈ ಎಲ್ಲ ಸಮುದಾಯಗಳ ಒಳಹೊಕ್ಕು ಅಧ್ಯಯನ ನಡೆಸಿದರೆ ವಿವಾಹ , ವಿಚ್ಛೇದನ ಮತ್ತಿತರ ಕೌಟುಂಬಿಕ ವಿಷಯಗಳಲ್ಲಿ ಕುತೂಹಲಕಾರೀ ಮಾಹಿತಿಗಳು ಲಭ್ಯವಾಗಬಹುದು. ಆದರೆ, ಮಾಧ್ಯಮಗಳು ಅತ್ಯಂತ ಹೆಚ್ಚು ಫೋಕಸ್ ಮಾಡುವುದು ಮುಸ್ಲಿಮರ ವಿವಾಹ ಮತ್ತು ವಿವಾಹ ವಿಚ್ಛೇದನಗಳ ಬಗ್ಗೆ ಮಾತ್ರ. ಮುಸ್ಲಿಮರ ವಿವಾಹ ಪದ್ಧತಿಯನ್ನು ಮತ್ತು ವಿವಾಹ ವಿಚ್ಛೇದನ ವಿಧಾನವನ್ನು ತಮಾಷೆ ಮಾಡುವುದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಮುಖ್ಯವಾಹಿನಿ ಮಾಧ್ಯಮಗಳ ನಿರೂಪಕರು ಮತ್ತು ಅಂಕಣಕಾರರವರೆಗೆ ಎಲ್ಲರೂ ಅತಿ ಉತ್ಸಾಹದಿಂದ ಭಾಗಿಯಾಗುತ್ತಾರೆ. “ಹಮ್ ಪಾಂಚ್, ಹಮಾರೆ ಪಚ್ಚಿಸ್” ಎಂಬ ಪ್ರಧಾನಿ ಮೋದಿಯವರ ಹೇಳಿಕೆ ಈ ಅತಿ ಉತ್ಸಾಹದ ಮಾತುಗಳಲ್ಲಿ ಒಂದು. ಆದರೆ, ಬ್ರೆಜಿಲ್ ನ ಖ್ಯಾತ ಫುಟ್ಬಾಲ್ ಆಟಗಾರ ರೊನಾಲ್ಡಿನೋ ಬಗ್ಗೆ ಮಾಧ್ಯಮಗಳಲ್ಲಿ ನಿನ್ನೆಯಿಂದ ಪ್ರಕಟವಾಗುತ್ತಿರುವ ಸುದ್ದಿ ಮತ್ತು ವರದಿಗಳನ್ನು ನೋಡಿದರೆ ಅಚ್ಚರಿ ಮತ್ತು ಆಘಾತ ಎರಡೂ ಉಂಟಾಗುತ್ತದೆ. ಇಬ್ಬರು ಪ್ರೇಯಸಿಯರನ್ನು ಒಂದೇ ಸಮಯದಲ್ಲಿ ವಿವಾಹವಾಗಲಿರುವ ರೊನಾಲ್ಡಿನೋ ಬಗ್ಗೆ ಇವೇ ಮಾಧ್ಯಮಗಳು ರಸವತ್ತಾಗಿ, ಯಾವ ಆಕ್ಷೇಪಾರ್ಹ ಪದಪ್ರಯೋಗವೂ ಇಲ್ಲದೆ ಮತ್ತು ಈ ಮದುವೆಯಲ್ಲಿ ಯಾವ ಅನಾಗರಿಕತೆ, ಮೂಲಭೂತವಾದವನ್ನೂ ಪತ್ತೆಹಚ್ಚದೇ ಖುಷಿ ಖುಷಿಯಾಗಿ ವಿವರಿಸುತ್ತಿವೆ. ಯಾರಿಗೂ ಈ ಮದುವೆಯ ಬಗ್ಗೆ ದೂರುಗಳಿಲ್ಲ. ಈ ಇಬ್ಬರು ಮಡದಿಯರಿಂದ ಐದೈದು ಮಕ್ಕಳಾಗಿ ಜನಸಂಖ್ಯಾ ಸ್ಪೋಟವಾಗುವ ಕುರಿತು ಯಾರೂ ಭಯಪಡುತ್ತಿಲ್ಲ. ಒಂದು ವೇಳೆ, ರೊನಾಲ್ಡಿನೋನ ಜಾಗದಲ್ಲಿ ಜೈನುದ್ದೀನ್ ಜೈದಾನ್ ಇರುತ್ತಿದ್ದರೆ ಏನಾಗುತ್ತಿತ್ತು?