ರೋಹಿಂಗ್ಯಾ ನಿರಾಶ್ರಿತರ ಗುಡಿಸಲು ಪದೇ ಪದೇ ಬೆಂಕಿಗಾಹುತಿಯಾಗುತ್ತಿರುವುದು ಯಾಕಾಗಿ?

0
1252

ರಾಕಿಬ್ ಹಮೀದ್ ನಾಯ್ಕ್
ಇಂಗ್ಲಿಷ್ ನಿಂದ ಕನ್ನಡಕ್ಕೆ: ಆಯಿಷತುಲ್ ಅಫೀಫಾ

ನವದೆಹಲಿ: ದೆಹಲಿಯ ಕಾಳಿಂದಿ ಕುಂಜ್ ಪ್ರದೇಶದಲ್ಲಿರುವ ರೋಹಿಂಗ್ಯ ನಿರಾಶ್ರಿತರ 44 ಗುಡಿಸಲುಗಳು ಏಪ್ರಿಲ್ 15 ರಂದು ಬೆಂಕಿಗಾಹುತಿಯಾಗಿದ್ದು, ಇಬ್ಬರಿಗೆ ಸಣ್ಣ ಸುಟ್ಟ ಗಾಯಗಲಾಗಿವೆ.ಈ ಬೆಂಕಿಯಿಂದಾಗಿ ಈ ಗುಡಿಸಲುವಾಸಿಗಳು ನೆಲೆ ಕಳಕೊಂಡಿದ್ದು, ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಮಸೀದಿ ಮತ್ತು ಮದ್ರಸಗಳೂ ಬೆಂಕಿಯಲ್ಲಿ ಸುಟ್ಟುಹೋಗಿವೆ.

ಶಹೀರ್ ಆಲಂ, 37 ರೋಹಿಂಗೀಯ ನಿರಾಶ್ರಿತರೊಬ್ಬ ತನ್ನ ಮಗುವಿಗೆ ತಾತ್ಕಾಲಿಕ ಪರಿಹಾರ ಶಿಬಿರದಲ್ಲಿ ಆಹಾರವನ್ನು ನೀಡುತ್ತಿರುವುದು. (ಫೋಟೋ: ರಾಕಿಬ್ ಹಮೀದ್ ನಾಯಕ್)

ಬೆಳಿಗ್ಗಿನ ಜಾವ 3 ಗಂಟೆಯ ಸುಮಾರಿಗೆ ಬೆಂಕಿ ಪ್ರಾರಂಭವಾಯಿತು” ಎಂದು ರೋಹಿಂಗ್ಯ ನಿರಾಶ್ರಿತ ಶಬೀರ್ ಆಲಂ ಹೇಳುತ್ತಾರೆ. ತಾತ್ಕಾಲಿಕ ಮಸೀದಿಗೆ ಸಮೀಪವಿರುವ ಶೌಚಾಲಯಗಳ ಬಳಿ ಬೆಂಕಿ ಪ್ರಾರಂಭವಾಯಿತು ಎಂದು ಅವರು ಹೇಳುತ್ತಾರೆ. ಆ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವ ಉಳಿಸಲು ಓಡುತ್ತಿದ್ದರು. ನಾನು ನನ್ನ 5 ಮಕ್ಕಳನ್ನು ಎತ್ತಿಕೊಂಡು ಓಡಿಹೋದೆ ಮತ್ತು ನಾನು ಹಿಂದಿರುಗಿದಾಗ ಎಲ್ಲವೂ ಬೆಂಕಿಯಲ್ಲಿತ್ತು ಎಂದು ಅವರು ಹೇಳಿದರು.
ಗುಡಿಸಲುಗಳನ್ನು ಬಿದಿರು ಮತ್ತು ಪಾಲಿಥಿನ್ ನಿಂದ ನಿರ್ಮಿಸಲಾಗಿರುವುದೇ ಬೆಂಕಿ ಬೇಗನೆ ಹರಡಿರುವುದಕ್ಕೆ ಕಾರಣ. ಅರ್ಧ ಗ೦ಟೆಯ ನಂತರ ಅಗ್ನಿ ಶಾಮಕ ದಳ ಬಂದಾಗ ಎಲ್ಲವೂ ಸುಟ್ಟು ಬೂದಿಯಾಗಿತ್ತು ಎಂದು ಅವರು ಹೇಳಿದರು.
೩೧ ವರ್ಷದ ಫಯಾಜ್ ಅಹ್ಮದ್ ಬೆಂಕಿಯಲ್ಲಿ ಎಲ್ಲವನ್ನೂ ಕಳೆದುಕೊಂಡವರು. ಕಳೆದ ಐದು ವರ್ಷಗಳಲ್ಲಿ ಅವರು ಗುಜರಿ ಸಂಗ್ರಹಿಸುವ ಮೂಲಕ 80,000 ರೂಪಾಯಿಗಳನ್ನು ಉಳಿಸಿದ್ದರು. “ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ನನ್ನ ಮನೆ, ಹಣ, ಪಾತ್ರೆಗಳು. ಈಗ ಧರಿಸಲು ಬಟ್ಟೆಗಳನ್ನು ಸಹ ಹೊಂದಿಲ್ಲ. ಒಂದು ಶರ್ಟ್ ಖರೀದಿಸಲು ಕೂಡ ನಾನು ಯಾರಲ್ಲಾದರೂ ಯಾಚಿಸಬೇಕಾಗಿದೆ ಎಂದು ಫಯಾಜ್ ತಿಳಿಸಿದರು.
ಓರ್ವ ಸಿವಿಲ್ ಡಿಫೆನ್ಸ್
ನ ಉದ್ಯೋಗಿ ದಹನ ಪ್ರದೇಶ ವನ್ನು ದಾಟಿ ಹೋಗುತ್ತಿರುವುದು. (ಫೋಟೋ: ರಾಕಿಬ್ ಹಮೀದ್ ನಾಯಕ್)

ಅಗ್ನಿಪೀಡಿತ ಪ್ರದೇಶವು 230 ಸದಸ್ಯರನ್ನೊಳಗೊಂಡ 44 ನಿರಾಶ್ರಿತರ ಕುಟುಂಬಗಳನ್ನು ಒಳಗೊಂಡಿದೆ. ಇವರೆಲ್ಲ ಮುಖ್ಯವಾಗಿ ಗುತ್ತಿಗೆದಾರರು, ಕಾರ್ಮಿಕರು, ರಿಕ್ಷಾ ಎಳೆಯುವ ಕೆಲಸ ಮಾಡುವವರಾಗಿದ್ದಾರೆ.
ರಿಕ್ಷಾ ಎಳೆಯುವವನಾದ ಫಯಾಜುಲ್ ಕಲಾಂ ಪ್ರಕಾರ, ಬೆಂಕಿಯಲ್ಲಿ ಅವರು ಕಳೆದುಕೊಂಡಿರುವುದನ್ನು ಮರಳಿ ಕಟ್ಟಲು ವರ್ಷಗಳೇ ತೆಗೆದುಕೊಳ್ಳಬಹುದು. “ಐದು ವರ್ಷಗಳ ಕಾಲ, ನಾನು ಹಗಲು ರಾತ್ರಿ ಕೆಲಸ ಮಾಡಿ , ಮನೆ ನಿರ್ಮಿಸಿ, ಪಾತ್ರೆಗಳನ್ನು ಮತ್ತು ನನ್ನ ಇಬ್ಬರು ಮಕ್ಕಳು ಮತ್ತು ಹೆಂಡತಿಗಾಗಿ ಉಡುಪುಗಳನ್ನು ಖರೀದಿಸಿದೆ. ಆದರೆ ಇಂದು ನಾನು ಎಲ್ಲವನ್ನೂ ಕಳೆದುಕೊಂಡೆ. ಇದು ಮ್ಯಾನ್ ಮಾರ್ ನಲ್ಲಿರುವಂತೆ ನನ್ನ ಎರಡನೆಯ ಮನೆಯಾಗಿತ್ತು ಎಂದು ಅವರು ಹೇಳಿದರು.
ತಾತ್ಕಾಲಿಕ ನಿರಾಶ್ರಿತ ಶಿಬಿರದಲ್ಲಿ ಬೆಂಕಿ ಪೀಡಿತ ಕುಟುಂಬಗಳು. (ಫೋಟೋ: ರಾಕಿಬ್ ಹಮೀದ್ ನಾಯಕ್)

ಬೆಂಕಿ ಪೀಡಿತ ಕುಟುಂಬಗಳಿಗೆ ವಿವಿಧ ಸರ್ಕಾರಿ ಸಂಸ್ಥೆಗಳು ಆಹಾರ ಮತ್ತು ಬಟ್ಟೆಗಳನ್ನು ಒದಗಿಸುತ್ತಿವೆ. ಜಮಿಅತ್ ಉಲೇಮಾ-ಎ-ಹಿಂದ್ ಸದಸ್ಯರು ಕೂಡ ಸ್ಥಳದಲ್ಲಿದ್ದಾರೆ ಮತ್ತು ಸಹಾಯ ಅಗತ್ಯವಿರುವ ಕುಟುಂಬಗಳ ಸಮೀಕ್ಷೆ ಮಾಡುತ್ತಿದ್ದಾರೆ.
ನಾವು ಅವರಿಗೆ ಅಗ್ನಿನಿರೋಧಕ ಡೇರೆಗಳನ್ನು ನಿರ್ಮಿಸುತ್ತೇವೆ ಮತ್ತು ಪಾತ್ರೆಗಳು, ಬಟ್ಟೆಗಳನ್ನು ಒದಗಿಸುತ್ತೇವೆ. ಈ ಕೆಲಸವು ಒಂದೆರಡು ದಿನಗಳಲ್ಲಿ ಪ್ರಾರಂಭವಾಗುತ್ತೆ. ಈಗ ನಾವು ಅವರಿಗಾಗಿ ಬೇರೆ ಏನು ಮಾಡಬಹುದೆಂದು ಸಮೀಕ್ಷೆ ಮಾಡುತ್ತಿದ್ದೇವೆ ಎಂದು ಜಮೀಅತ್ ಸದಸ್ಯರಾದ ಘುಯೂರ್ ಅಹ್ಮದ್ ತಿಳಿಸಿದರು.
ಕಳೆದ ಕೆಲವು ವರ್ಷಗಳಲ್ಲಿ, ದೇಶದಾದ್ಯಂತ ರೋಹಿಂಗ್ಯ ಕೊಳೆಗೇರಿಗಳು ತಮ್ಮ ಡೇರೆಗಳು ಬೆಂಕಿಯಲ್ಲಿ ಬೂದಿಯಾಗುವ ಹಲವಾರು ಘಟನೆಗಳನ್ನು ಕಂಡಿದೆ. 2017 ರ ಏಪ್ರಿಲ್ ನಲ್ಲಿ ರೋಹಿಂಗ್ಯ ನಿರಾಶ್ರಿತರ ಐದು ಗುಡಿಸಲುಗಳು ಹರಿಯಾಣದ ನಂಗಲಿ ಪ್ರದೇಶದ ನೂಹ್ ನ ಮೇವಾತ್ ನಲ್ಲಿ ಬೆಂಕಿ ಹೊತ್ತಿ ಒಬ್ಬ ವ್ಯಕ್ತಿ ತೀವ್ರವಾಗಿ ಸುಟ್ಟುಹೋದರು . ನವೆಂಬರ್ 2016 ರಲ್ಲಿ ಜಮ್ಮುವಿನ ನಾರ್ವಲ್ ಪ್ರದೇಶದಲ್ಲಿ ನಿರಾಶ್ರಿತರಿಗೆ ಸೇರಿದ 80 ಕ್ಕೂ ಹೆಚ್ಚು ಗುಡಿಸಲುಗಳಿಗೆ ಬೆಂಕಿ ಹೊತ್ತಿ ನಾಲ್ಕು ನಿರಾಶ್ರಿತರ ಸಾವಿಗೆ ಕಾರಣವಾಯಿತು.
ಬೆಂಕಿಗೆ ಆಹುತಿಯಾದ ನಿರಾಶ್ರಿತರ
ಶಿಬಿರ (ಫೋಟೋ: ರಾಕಿಬ್ ಹಮೀದ್ ನಾಯಕ್)

ಕಳೆದ ವರ್ಷ ಆಗಸ್ಟ್ 19 ರಂದು ಕೇಂದ್ರ ಕಾನೂನು ಸಚಿವಾಲಯವು ಅನಧಿಕೃತ ರೋಹಿಂಗ್ಯಾಗಳನ್ನು ಗುರುತಿಸಿ ಗಡಿಪಾರು ಮಾಡುವಂತೆ ಎಲ್ಲಾ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿತು. ಈ ಕುರಿತಂತೆ ರೋಹಿಂಗ್ಯ ಪರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಈಗ ಪರಿಶೀಲಿಸುತ್ತಿದೆ.
ಪ್ರಸ್ತುತ, ನಾಲ್ಕು ರಾಜ್ಯಗಳಲ್ಲಿ 40,000 ಕ್ಕಿಂತ ಹೆಚ್ಚು ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರು ವಾಸಿಸುತ್ತಿದ್ದಾರೆ : ಜಮ್ಮು, ಹರಿಯಾಣ, ರಾಜಸ್ಥಾನ ಮತ್ತು ದೆಹಲಿಯಲ್ಲಿ. ಅದರಲ್ಲೂ ಹೆಚ್ಚಿನವರು ಜಮ್ಮುನಲ್ಲಿ ವಾಸಿಸುತ್ತಿದ್ದಾರೆ.
ತನ್ನ ಮನೆ, ಪಾತ್ರೆಗಳು, ಬಟ್ಟೆ ಮತ್ತು 80,000 ರೂಪಾಯಿಗಳನ್ನು ಬೆಂಕಿಯಲ್ಲಿ ಕಳೆದುಕೊಂಡ ಫಯಾಜ್ ಅಹ್ಮದ್, 31 ಒಬ್ಬ ಬೀದಿ ವ್ಯಾಪಾರಿ. (ಫೋಟೋ: ರಾಕಿಬ್ ಹಮೀದ್ ನಾಯಕ್)

ಸುಮಾರು ಐದು ವರ್ಷಗಳ ಹಿಂದೆಯೇ ಮಯನ್ಮಾರ್ ಹಿಂಸಾಚಾರದಿಂದ ತಪ್ಪಿಸಿಕೊಂಡು ಶಾಂತಿ ಮತ್ತು ಭದ್ರತೆಯ ಭರವಸೆಯೊಂದಿಗೆ ಸಾವಿರಾರು ರೋಹಿಂಗ್ಯರು ಭಾರತಕ್ಕೆ ಆಗಮಿಸಿದ್ದರು . ಮೊದಲಿಗೆ, ನಿರಾಶ್ರಿತರನ್ನು ಸ್ಥಳೀಯರು ಸ್ವಾಗತಿಸಿದರು. ಆದರೆ ಕಳೆದ ಕೆಲವು ವರ್ಷಗಳಿಂದ ಹಗೆತನ ಕ್ರಮೇಣ ಹೆಚ್ಚಾಗಿದೆ.
ಮೂಲ: ಟು ಸರ್ಕಲ್ ಡಾಟ್ ನೆಟ್