ವಿಶ್ವಾಸಮತ ಗೆದ್ದರೂ ಸೋತರೂ ಅಂತಿಮವಾಗಿ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಯೇ ಹೆಚ್ಚು

0
1706

ನ್ಯೂಸ್ ಡೆಸ್ಕ್

ಸದನದಲ್ಲಿ ವಿಶ್ವಾಸ ಮತ ಗೆದ್ದರೂ ಸೋತರೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಭವಿಷ್ಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
1. ವಿಶ್ವಾಸಮತ ಗೆದ್ದರೆ- ಒಕ್ಕಲಿಗ ಸಮುದಾಯದ ಕುಮಾರಸ್ವಾಮುಯವರು ಮುಖ್ಯಮಂತ್ರಿ ಆಗದಂತೆ ತಡೆದ ಕಳಂಕವೊಂದು ಶಾಶ್ವತವಾಗಿ ಯಡಿಯೂರಪ್ಪರ ಮೇಲೆ ಅಂಟಿಕೊಳ್ಳುತ್ತದೆ.
2. ಇದು ಸಿದ್ದರಾಮಯ್ಯನವರ ಸಮುದಾಯವಾದ ಕುರುಬರು ಮತ್ತು ಒಕ್ಕಲಿಗರನ್ನು ಬಿಜೆಪಿ ವಿರುದ್ಧ ಜಂಟಿ ವಿರೋಧಿಗಳಾಗಿ ಮಾರ್ಪಡಿಸುವಲ್ಲಿ ಕೆಲಸ ಮಾಡುತ್ತದೆ.
3. ವಿಶ್ವಾಸ ಮತ ಯಾಚನೆಯಲ್ಲಿ ಯಡಿಯೂರಪ್ಪ ಸೋತರೆ, ಆಗಲೂ ಅದು ಕುಮಾರಸ್ವಾಮಿಗೆ ಲಾಭವನ್ನೇ ತಂದುಕೊಡುವ ಸಾಧ್ಯತೆಯೇ ಹೆಚ್ಚಿದೆ. ಒಕ್ಕಲಿಗನೊರ್ವ ಮುಖ್ಯಮಂತ್ರಿ ಆಗದಂತೆ ರಾಜ್ಯಪಾಲರು ಮತ್ತು ಯಡಿಯೂರಪ್ಪರ ಬಿಜೆಪಿಯು ಶತಾಯ ಗತಾಯ ಕುತಂತ್ರ ನಡೆಸಿತು ಅಂತ ಅವರು ಹೇಳಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕೆ ಪ್ರಯತ್ನ ಪಡುವ ಸಾಧ್ಯತೆ ಇದೆ.
4. ಆಪರೇಷನ್ ಕಮಲದ ಮೂಲಕ ಯಡಿಯೂರಪ್ಪ ವಿಶ್ವಾಸಮತ ಗೆದ್ದರೂ ಅದು ಒಕ್ಕಲಿಗ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಸ್ಥಾನದಿಂದ ಹೊರಗಿಡಲು ಬಿಜೆಪಿಯ ಲಿಂಗಾಯತ ವರ್ಗ ನಡೆಸಿದ ಸಂಚಾಗಿ ಗುರುತಿಸಿಕೊಂಡು ಮುಂದಿನ ದಿನಗಳಲ್ಲಿ ಅದು ಜಾತಿ ಧ್ರುವೀಕರಣಕ್ಕೆ ಕಾರಣವಾಗಬಹುದು. ಹೀಗೆ ಒಕ್ಕಲಿಗರು, ಕುರುಬರು ಮತ್ತು ಅಹಿಂದ ಕೂಟ ಒಂದು ಕಡೆಯಲ್ಲೂ ಮತ್ತು ಲಿಂಗಾಯತ ವರ್ಗ ಇನ್ನೊಂದು ಕಡೆಯಲ್ಲೂ ವಿಭಜನೆ ಹೊಂದಿ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವ ಎಲ್ಲ ಸಾಧ್ಯತೆಯೂ ಇದೆ.
ಜೆಡಿಎಸ್ ಪಕ್ಷವು ದೇವೇ ಗೌಡ ಮತ್ತು ಅವರ ಪರಿವಾರ ಎಂಬಂತಿದ್ದರೂ ಒಕ್ಕಲಿಗ ಸಮುದಾಯ ಈಗಲೂ ತಮ್ಮ ಅಸ್ಮಿತೆಯ ಕುರುಹಾಗಿ ಈ ಬಳಗವನ್ನು ನೋಡುತ್ತಿದೆ. ಆದರಿಂದ ಕುಮಾರಸ್ವಾಮಿ ಆ ಸಮುದಾಯದ ನಾಯಕರಾಗಿಯೇ ಉಳಿದಿದ್ದಾರೆ. ಅಲ್ಲದೆ, ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯರಿಗೆ ಹೋಲಿಸಿದರೆ ಕುಮಾರಸ್ವಾಮಿಯವರೇ ಒಂದು ಕೈ ಮೇಲು. ಯಾಕೆಂದರೆ, ಸಿದ್ದರಾಮಯ್ಯರಿಗೆ ಸೈದ್ಧಾಂತಿಕ ಇತಿ ಮಿತಿಗಳಿವೆ. ಪ್ರಗತಿಪರ ವಿಚಾರಧಾರೆಗೆ ಎದುರಾಗಿ ಏನನ್ನೂ ಮಾಡಲಾರದ ಇಮೇಜು ಅವರದು. ಯಡಿಯೂರಪ್ಪ ಮತ್ತು ಬಿಜೆಪಿ ಯ ಪಾಲಿಗೆ ಇದು ಪ್ಲಸ್ ಪಾಯಿಂಟ್ ಆಗಿತ್ತು. ಉದಾಹರಣೆಗೆ ಮೀನು ತಿಂದು ದೇವಾಲಯ ಪ್ರವೇಶಿಸಿದರು ಎಂಬ ಮಾತು. ಸಿದ್ದರಾಮಯ್ಯರ ವಿರುದ್ಧ ಬಿಜೆಪಿ ಈ ಅಸ್ತ್ರವನ್ನು ಸಾಕಷ್ಟು ಬಲವಾಗಿಯೇ ಪ್ರಯೋಗಿಸಿತ್ತು. ಉಪವಾಸ ಹಿಡಿದು ದೇವಾಲಯ ಪ್ರವೇಶಿಸಿದ ಮೋದಿಯವರನ್ನು ಸಿದ್ದರಾಮಯ್ಯ ರ ವಿರುದ್ಧ ನಿಲ್ಲಿಸಿ ಜನರ ಭಾವನೆಯೊಂದಿಗೆ ಅದು ಆಟ ಆಡಿತ್ತು. ಹಾಗಂತ ಸಿದ್ದರಾಮಯ್ಯರಿಗೆ ಉಪವಾಸ ಹಿಡಿದು ದೇವಾಲಯ ಪ್ರವೇಶಿಸುವುದು ಆಗದ ಮಾತು. ಅವರು ಸೈದ್ಧಾಂತಿಕವಾಗಿ ಅಪಾರ ಬದ್ಧತೆ ಉಳ್ಳವರು. ಈ ಹಿನ್ನೆಲೆಯಲ್ಲಿ ನೋಡಿದರೆ, ಕುಮಾರಸ್ವಾಮಿ ಪಕ್ಕಾ ಧಾರ್ಮಿಕವಾದಿ. ಎಷ್ಟೆಂದರೆ, ಯಡಿಯೂರಪ್ಪರಿಗಿಂತಲೂ ಒಂದು ಕೈ ಮೇಲು. ಮಾಟ, ಮಂತ್ರ, ಹೋಮ, ಹವನ ಎಲ್ಲದರಲ್ಲೂ ನಂಬಿಕೆ ಉಳ್ಳವರೆಂದು ಕುಮಾರಸ್ವಾಮಿ ಗುರುತಿಸಿಕೊಳ್ಳೋರು. ಆದ್ದರಿಂದ, ಸಿದ್ದರಾಮಯ್ಯರ ವಿರುದ್ಧ ಪ್ರಚಾರ ಕೈಗೊಂಡಂತೆ, ಕುಮಾರಸ್ವಾಮಿಯವರ ವಿರುದ್ಧ ಭಾವನಾತ್ಮಕ ಪ್ರಚಾರ ಕೈಗೊಳ್ಳಲು ಬಿಜೆಪಿಗೆ ಸಾಧ್ಯವಿಲ್ಲ. ಅಲ್ಲದೆ, ಕುಮಾರಸ್ವಾಮಿ ಭಾವುಕ ವ್ಯಕ್ತಿ. ಯಡಿಯೂರಪ್ಪರಿಗಿಂತ ಹೆಚ್ಚು ಕಣ್ಣೀರಿಳಿಸಲೂ ಮಾತಿನಲ್ಲೇ ಭಾವುಕಗೊಳಿಸಲೂ ಬಲ್ಲವರು. ಈ ಬಾರಿಯ ಚುನಾವಣಾ ಪ್ರಚಾರದ ವೇಳೆ ಅವರು ಹೇಳಿದ್ದನ್ನೇ ಇಲ್ಲಿ ನೆನಪಿಸಿಕೊಳ್ಳಬಹುದು. ಈ ಬಾರಿ ಗೆಲ್ಲಿಸದಿದ್ದರೆ, ನಾನು ಸಾಯಬಹುದು ಎಂಬ ಧಾಟಿಯಲ್ಲಿ ಅವರು ಮಾತಾಡಿದ್ದರು.
ಈ ಎಲ್ಲ ಹಿನ್ನೆಲೆಯಲ್ಲಿ ನೋಡುವುದಾದರೆ, ವಿಶ್ವಾಸಮತ ದಲ್ಲಿ ಸೋತರೂ ಗೆದ್ದರೂ ಬಿಜೆಪಿಗೆ ಹಿನ್ನಡೆಯೇ ಹೊರತು ಮುನ್ನಡೆಯ ಸಾಧ್ಯತೆ ಕಡಿಮೆಯೆಂದೇ ಅನಿಸುತ್ತದೆ.