ಶಿಕ್ಷಿಸಬೇಕಾದದ್ದು ಸುದ್ದಿ ಪ್ರಕಟಿಸಿದವರನ್ನೋ ಸುದ್ದಿ ಸೃಷ್ಟಿಸಿದವರನ್ನೋ?

0
1364
      ಮಾಜಿ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅವರ ಪತ್ನಿ ಜಯಲಕ್ಷ್ಮಿಯವರು 2018 ಮಾರ್ಚ್ 31ರಂದು ನಿಧನರಾದರು. ಮರುದಿ ನದಿಂದಲೇ, ಟಿ.ಎನ್. ಶೇಷನ್ ಅವರೂ ನಿಧನರಾದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವನ್ನು ಪಡೆಯಿತು. ಬ್ಲೂಮ್ ಲೈವ್,  ಎಸ್‍ಎಂ. ಹಾಕ್ಸ್‍ಸೇಯರ್, ಡಿಎನ್‍ಎ ಮತ್ತು ಟೈಮ್ಸ್ ನೌನಂತಹ ಪ್ರಮುಖ ವೆಬ್ ತಾಣಗಳಲ್ಲೂ ಟಿ.ಎನ್. ಶೇಷನ್ ನಿಧನವು ಸುದ್ದಿಯಾಯಿತು. ಪತ್ನಿಯ ಸಾವಿನ ಮರುದಿನ ಪತಿಯೂ ನಿಧನರಾದರು ಎಂಬ ಭಾವುಕ ಟಿಪ್ಪಣಿಗಳು, ಪ್ರತಿಕ್ರಿಯೆಗಳು ಹರಿದು ಬಂದುವು.
ಟಿ.ಎನ್. ಶೇಷನ್ ಮತ್ತು ಅವರ ಪತ್ನಿ ಜಯಲಕ್ಷ್ಮಿ
ಈ  ಸುದ್ದಿಯ  ಭರಾಟೆ ಎಷ್ಟಿತ್ತೆಂದರೆ, ಕೇಂದ್ರ ಸಚಿವರಾದ ಸ್ಮøತಿ ಇರಾನಿ ಮತ್ತು ಡಾ| ಜಿತೇಂದ್ರ ಸಿಂಗ್ ಅವರೇ ಟ್ವಿಟರ್ ಮೂಲಕ ಟಿ.ಎನ್. ಶೇಷನ್‍ರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸ್ಮøತಿ ಇರಾನಿಯವರು ‘ಓಂ ಶಾಂತಿ’ ಎಂದು ಬರೆದರು. ಸಿಂಗ್ ಅವರಂತೂ ಶೇಷನ್‍ರಿಗೆ ಮಕ್ಕಳಿಲ್ಲದೇ  ಇದ್ದುದು ಮತ್ತು ಪ್ರಾಮಾಣಿಕ ಅಧಿಕಾರಿಯಾಗಿದ್ದುದನ್ನು ಸ್ಮರಿಸಿಕೊಂಡರು. ನಿಜವಾಗಿ, ಆ ಸುದ್ದಿಯೇ ಸುಳ್ಳಾಗಿತ್ತು. ತಮಿಳುನಾಡಿನ ವೃದ್ಧಾಶ್ರಾಮದಲ್ಲಿದ್ದ ಅವರಿಬ್ಬರಲ್ಲಿ ಶೇಷನ್ ಪತ್ನಿ ನಿಧನರಾಗಿದ್ದರೇ ಹೊರತು ಶೇಷನ್ ನಿಧನರಾಗಿರಲಿಲ್ಲ. ನಿಜ ಸುದ್ದಿ  ಬಹಿರಂಗವಾಗುತ್ತಿರುವಂತೆಯೇ ಸ್ಮøತಿ ಮತ್ತು ಸಿಂಗ್ ತಮ್ಮ ಟ್ವೀಟನ್ನು ಅಳಿಸಿ ಹಾಕಿದರು. ಮಾತ್ರವಲ್ಲ, ಈ ಘಟನೆಯ ನಾಲ್ಕೈದು ದಿನಗಳ  ಬಳಿಕ ಸುಳ್ಳು ಸುದ್ದಿಗಳಿಗೆ ಅಂಕುಶ ಹಾಕುವ ಪತ್ರಿಕಾ ಹೇಳಿಕೆಯನ್ನು ಸ್ಮøತಿ ಇರಾನಿ ಬಿಡುಗಡೆಗೊಳಿಸಿದರು. ಅದರ ಪ್ರಕಾರ,
1. ಯಾವುದೇ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯು ಸುಳ್ಳೆಂದು ಯಾರಾದರೂ ದೂರು ನೀಡಿದರೆ ಆ ದೂರನ್ನು ಪ್ರೆಸ್ ಕೌನ್ಸಿಲ್ ಆಫ್  ಇಂಡಿಯಾಕ್ಕೆ ಪರಿ ಶೀಲನೆಗಾಗಿ ನೀಡಲಾಗುವುದು. ದೃಶ್ಯ ಮಾಧ್ಯಮಕ್ಕೆ ಸಂಬಂಧಿಸಿ ದಾಖಲಾಗುವ ದೂರನ್ನು ನ್ಯೂಸ್ ಬ್ರಾಡ್‍ಕಾಸ್ಟ್ ಅಸೋಸಿಯೇಶನ್‍ಗೆ ನೀಡಲಾಗುವುದು.
2. ಹದಿನೈದು ದಿನಗಳೊಳಗೆ ಈ ಸಂಸ್ಥೆಗಳು ವರದಿಯನ್ನು ಪರಿಶೀಲಿಸತಕ್ಕದ್ದು. ಆ ಬಳಿಕ ಸುದ್ದಿ ಸುಳ್ಳು ಎಂದು ಸಾಬೀತಾದರೆ ಆ ಸುದ್ದಿಯನ್ನು ಪ್ರಕಟಿಸಿದ ವ್ಯಕ್ತಿಯ ಮಾನ್ಯತೆಯನ್ನು 6 ತಿಂಗಳ ವರೆಗೆ ಅಮಾನತಿನಲ್ಲಿಡಲಾಗುವುದು.
3. 2ನೇ ಬಾರಿ ಆ ವ್ಯಕ್ತಿಯಿಂದ ಇಂಥ ತಪ್ಪು ಸಂಭವಿಸಿದಲ್ಲಿ ಒಂದು ವರ್ಷ ಮತ್ತು ಮೂರನೇ ಬಾರಿ ತಪ್ಪು ಮರುಕಳಿಸಿದಲ್ಲಿ ಶಾಶ್ವತವಾಗಿ  ರದ್ದು ಮಾಡುವುದು.
ಈಗ ಈ ಹಿಂದಿನ ಎರಡು ಹೇಳಿಕೆಗಳನ್ನು ಪರಿಶೀಲಿಸೋಣ.
1. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪಾರ್ಥಿವ ಶರೀರದ ಮೆರವಣಿಗೆ ಮತ್ತು ಬಳಿಕದ ಕಾರ್ಯಗಳಲ್ಲಿ ಪ್ರಧಾನಿ ಜವಾಹರಲಾಲ್  ನೆಹರೂರವರು ಭಾಗವಹಿಸಿಲ್ಲ – ಪ್ರಧಾನಿ ನರೇಂದ್ರ ಮೋದಿ (ವರದಿ: ದೈನಿಕ್ ಭಾಸ್ಕರ್ ಪತ್ರಿಕೆ – 2013 ಅಕ್ಟೋಬರ್)
2. ಅಮೇರಿಕದ ಯೇಲೆ ಯುನಿವರ್ಸಿಟಿಯಿಂದ ತಾನು ಪದವಿ ಪಡೆದಿದ್ದೇನೆ – ಸ್ಮೃತಿ ಇರಾನಿ (ಚುನಾವಣಾ ಮಂಡಳಿಗೆ ಸಲ್ಲಿಸಿದ  ಅಫಿದವಿತ್‍ನಲ್ಲಿ -2014)
ನಿಜವಾಗಿ, ಈ ಎರಡೂ ಹೇಳಿಕೆಗಳು ಪರಮ ಸುಳ್ಳುಗಳೇ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ  ಮತ್ತು ಬಳಿಕದ ಕಾರ್ಯಕ್ರಮಗಳಲ್ಲಿ ಪ್ರಧಾನಿ ನೆಹರೂ ಮತ್ತು ರಾಷ್ಟ್ರಪತಿ ಬಾಬೂ ರಾಜೇಂದ್ರ ಪ್ರಸಾದ್‍ರು ಭಾಗಿಯಾಗಿರುವುದನ್ನು ಮಾಜಿ  ಪ್ರಧಾನಿ ಮೊರಾರ್ಜಿ ದೇಸಾಯಿ ಯವರು ತಮ್ಮThe Story of My life ಎಂಬ ತಮ್ಮ ಜೀವನ ಚರಿತ್ರೆಯ ಭಾಗ 1, ಪುಟ ಸಂಖ್ಯೆ 271ರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವರಲ್ಲದೇ, ಆ ಕುರಿತಾದ ವೀಡಿಯೋವೂ ಇದೆ. ಇನ್ನು, ಸ್ಮೃತಿ ಇರಾನಿಯವರು ಯಾವುದೇ  ಪದವಿ ಸರ್ಟಿಫಿಕೇಟನ್ನು ಪಡೆದೇ ಇಲ್ಲ ಅನ್ನುವುದನ್ನು ಯೇಲೆ ಯುನಿವರ್ಸಿಟಿ ಸ್ಪಷ್ಟಪಡಿಸಿದೆ. ನಾಯಕತ್ವದ ಬಗ್ಗೆ ಸಂಸದರಿಗೆ ತರಬೇತಿ  ನೀಡುವ 6 ದಿನಗಳ ಕಾರ್ಯಕ್ರಮವನ್ನು 2013ರಲ್ಲಿ ಯೇಲೆ ಯುನಿವರ್ಸಿಟಿ ಹಮ್ಮಿಕೊಂಡಿದ್ದು, ಅದರಲ್ಲಿ ಸ್ಮೃತಿ ಇರಾನಿಯೂ ಸೇರಿ  ಭಾರತದ ವಿವಿಧ ರಾಜಕೀಯ ಪಕ್ಷ ಗಳ 11 ಸಂಸದರು ಭಾಗವಹಿಸಿದ್ದರು ಎಂದು ಅದು ನೀಡಿರುವ ಸ್ಪಷ್ಟೀಕರಣವನ್ನು ನ್ಯೂಸ್18 ಸಹಿತ ಬಹುತೇಕ ಎಲ್ಲ ಪತ್ರಿಕೆಗಳೂ ಪ್ರಕಟಿಸಿದುವು. ಅದರ ನೆನಪಿಗಾಗಿ ನೀಡಿದ ಸರ್ಟಿಫಿಕೇಟನ್ನೇ ಸ್ಮೃತಿ ಇರಾನಿಯವರು ಪದವಿ ಸರ್ಟಿಫಿಕೇಟ್  ಎಂದು ಹೇಳಿಕೊಂಡಿದ್ದರು. ಇಲ್ಲಿರುವ ಪ್ರಶ್ನೆ ಏನೆಂದರೆ, ಪ್ರಧಾನಿ ನರೇಂದ್ರ  ಮೋದಿ ಮತ್ತು ಸ್ಮೃತಿ ಇರಾನಿಯವರ ಈ ಸುಳ್ಳುಗಳನ್ನು  ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಯಥಾ ರೀತಿ ಪ್ರಕಟಿಸಿವೆ. ಸ್ಮೃತಿ ಇರಾನಿಯವರು ತರಬಯಸಿರುವ ಕಾನೂನಿನ ಪ್ರಕಾರ ಸುಳ್ಳು ಹೇಳಿದ ನರೇಂದ್ರ ಮೋದಿ ಮತ್ತು ಸ್ಮೃತಿ ಇರಾನಿಯವರಿಗೆ ಯಾವ ಶಿಕ್ಷೆಯೂ ಇಲ್ಲ. ಅದರ ಬದಲು ಆ ಸುಳ್ಳನ್ನು ಪ್ರಕಟಿಸಿದ ಪತ್ರಿಕೆ ಮತ್ತು  ಟಿ.ವಿ. ಚಾನೆಲ್‍ಗಳ ಮೇಲೆ ಶಿಕ್ಷೆ ವಿಧಿಸಲಾಗುತ್ತದೆ. ಬಹುಶಃ, ಮಾಧ್ಯಮ ರಂಗದಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಈ ಪತ್ರಿಕಾ ಹೇ ಳಿಕೆಯನ್ನು ಸ್ಮೃತಿ ಇರಾನಿ ಹಿಂತೆಗೆದುಕೊಂಡುದುದಕ್ಕೆ ಇದೂ ಒಂದು ಕಾರಣವಾಗಿರಬಹುದು ಎಂದು ಅನ್ನಿಸುತ್ತದೆ.
ಸದ್ಯದ ಸಮಸ್ಯೆ ಏನೆಂದರೆ, ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಯಾರು ಅನ್ನುವುದು. ಟಿ.ಎನ್. ಶೇಷನ್ ಅವರ ಸಾವಿನ ಸುದ್ದಿಯನ್ನು  ಮೊತ್ತಮೊದಲು ಹುಟ್ಟು ಹಾಕಿದವರು ಯಾರು? ಅವರನ್ನು ಪತ್ತೆ ಹಚ್ಚಿ ಶಿಕ್ಷಿಸುವುದಕ್ಕೆ ನಮ್ಮಲ್ಲಿ ಯಾವ ನಿಯಮಾವಳಿಗಳಿವೆ? 2017 ಆಗಸ್ಟ್  30ರಂದು ‘Power cut at Jama Masjid’ ಎಂಬ ಶೀರ್ಷಿಕೆಯಲ್ಲಿ ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿ.ವಿ.ಯಲ್ಲಿ ಸುದ್ದಿ  ಬಿತ್ತರವಾಯಿತು. ಅದರ ಮೇಲೆ ಚರ್ಚೆಯೂ ನಡೆಯಿತು. ‘ಇಮಾಮ್ ಬುಖಾರಿ ಐಷಾರಾಮಿ ಕಾರುಗಳಲ್ಲಿ ಸಂಚರಿಸುತ್ತಾರೆ. ಆದರೆ  ವಿದ್ಯುತ್ ಬಿಲ್ ಕಟ್ಟುವುದಿಲ್ಲ. ಜಾಮಾ ಮಸೀದಿ ಕತ್ತಲಲ್ಲಿದೆ’ ಎಂದು ಅದು ಮತ್ತೆ ಮತ್ತೆ ಸುದ್ದಿ ಬರೆಯಿತು. ಸಾಮಾಜಿಕ ಜಾಲತಾಣಗಳಲ್ಲಿ  ಬುಖಾರಿಯವರನ್ನು ವ್ಯಂಗ್ಯ, ಲೇವಡಿ, ಅಪಹಾಸ್ಯಕ್ಕೆ ಒಳಪಡಿಸುವ ಅಸಂಖ್ಯ ಬರಹಗಳು ಪ್ರಕಟವಾದವು. ನಿಜವಾಗಿ, ಈ ಸುದ್ದಿಯ  ಮೂಲ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯಲ್ಲಿ 2012ರಲ್ಲಿ ಪ್ರಕಟವಾದ ಒಂದು ಬರಹವಾಗಿತ್ತು. ದೆಹಲಿ ವಕ್ಫ್ ಬೋರ್ಡ್ ಮತ್ತು ಜಾಮಾ  ಮಸೀದಿಯ ನಡುವಿನ ವಿವಾದದಿಂದಾಗಿ 4.12 ಕೋಟಿ ರೂ. ವಿದ್ಯುತ್ ಬಿಲ್ ಕಟ್ಟಲಾಗಿಲ್ಲ ಅನ್ನುವುದು ಒಟ್ಟು ಸುದ್ದಿಯ ಸಾರಾಂಶ.  ಆದರೆ ಆ ಬಳಿಕ ಆ ವಿವಾದವನ್ನು ಬಗೆಹರಿಸಲಾಗಿತ್ತು ಮತ್ತು ಜಾಮಾ ಮಸೀದಿಯ ವಿದ್ಯುತನ್ನು ಒಮ್ಮೆಯೂ ಕಡಿತಗೊಳಿಸಿರಲಿಲ್ಲ. ಆದರೆ  ಅದೇ ಸುದ್ದಿಗೆ ಸುಳ್ಳನ್ನು ಸೇರಿಸಿ ರಿಪಬ್ಲಿಕ್ ಟಿ.ವಿ. ಬ್ರೇಕಿಂಗ್ ನ್ಯೂಸ್ ಪ್ರಸಾರ ಮಾಡಿತು. ಪೋಸ್ಟ್ ಕಾರ್ಡ್‍ನಂಥ ಬಲಪಂಥೀಯ ವೆಬ್  ಪತ್ರಿಕೆಗಳು ಕುಚೋದ್ಯದ ಭಾಷೆಯಲ್ಲಿ ಆ ಸುದ್ದಿಯನ್ನು ಎಲ್ಲೆಡೆ ಹಂಚಿತು.
     2017 ಜುಲೈಯಲ್ಲಿ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಬಿದುರಿಯಾ ನಗರದಲ್ಲಿ ಹಿಂದೂ-ಮುಸ್ಲಿಮ್ ಘರ್ಷಣೆ ನಡೆಯಿತು.  ಪ್ರವಾದಿ ಮುಹಮ್ಮದ್(ಸ)ರನ್ನು ಅವಹೇಳಿಸುವ ವ್ಯಂಗ್ಯಚಿತ್ರವೊಂದನ್ನು ಹದಿಹರೆಯದ ಯುವಕನೋರ್ವ ಫೇಸ್ ಬುಕ್‍ನಲ್ಲಿ ಪೋಸ್ಟ್  ಮಾಡಿರುವುದು ಆ ಘರ್ಷಣೆಗೆ ಮೂಲ ಕಾರಣವಾಗಿತ್ತು. ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸುದ್ದಿಗಳು ಪ್ರ ಸರವಾಗತೊಡಗಿದುವು. ಅದರಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ವಿಜೇತ್ ಮಲಿಕ್ ಅವರು ಹಂಚಿಕೊಂಡ ವೀಡಿಯೋ ಮತ್ತು  ಚಿತ್ರಗಳೂ ಸೇರಿದ್ದುವು. ಬಿಳಿ ಬಟ್ಟೆಯನ್ನು ಧರಿಸಿರುವ ಓರ್ವ ಮಧ್ಯ ವಯಸ್ಕ ವ್ಯಕ್ತಿಯು ನೆರೆದ ಜನರ ಸಮ್ಮುಖದಲ್ಲಿ ಮಹಿಳೆಯ ಸೆರಗನ್ನು  ಎಳೆಯುತ್ತಿರುವ ದೃಶ್ಯ. ವಿಜೇತ್ ಮಲಿಕ್ ಹಂಚಿಕೊಂಡ ಈ ಚಿತ್ರವಂತೂ ಯಾರನ್ನೇ ಆಗಲಿ ಕೆರಳಿಸುವಷ್ಟು ಪ್ರಚೋದನಕಾರಿಯಾಗಿತ್ತು.  ವ್ಯಂಗ್ಯಚಿತ್ರ ರಚಿಸಿದ ಯುವಕನ ತಾಯಿಯನ್ನು ಮುಸ್ಲಿಮರು ವಿವಸ್ತ್ರಗೊಳಿಸುವ ದೃಶ್ಯ ಎಂಬ ರೀತಿಯಲ್ಲಿ ಆ ಚಿತ್ರ ವ್ಯಾಪಕ ಪ್ರಚಾರವನ್ನು  ಗಿಟ್ಟಿಸಿಕೊಂಡಿತು. ನಿಜ ಏನೆಂದರೆ, ಆ ಯುವಕನ ತಾಯಿ ಆತನ ಎಳವೆಯಲ್ಲೇ ತೀರಿ ಹೋಗಿದ್ದರು. ಅದನ್ನು ಯುವಕನೇ  ಮಾಧ್ಯಮದೊಂದಿಗೆ ಹೇಳಿಕೊಂಡ. ಈ ಪ್ರಕ್ರಿಯೆಯಿಂದ ರೋಸಿ ಹೋದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಫೇಸ್‍ಬುಕ್ ಅನ್ನು  ಫೇಕ್‍ಬುಕ್ ಎಂದು ಪತ್ರಿಕಾಗೋಷ್ಠಿ ಕರೆದು ಜರೆದರು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳು ಪ್ರಾಬಲ್ಯ ಪಡೆದಿರುವುದಕ್ಕಾಗಿ ವಿಷಾದಿ ಸಿದರು. ನಿಜವಾಗಿ, ಆ ಚಿತ್ರ ಭೋಜ್‍ಪುರಿ ಸಿನಿಮಾವೊಂದರಿಂದ ಪಡೆದುದಾಗಿತ್ತು. ಇನ್ನೊಂದು ವೀಡಿಯೋವಂತೂ ಬಂಗ್ಲಾ ದೇಶದ  ರೊಮಿಲ್ಲಾ ಎಂಬಲ್ಲಿ ನಡೆದ ಘಟನೆಗೆ ಸಂಬಂಧಿಸಿದ್ದು. ಆದರೆ, ಈ ಸತ್ಯಗಳೆಲ್ಲಾ ಹೊರಬರುವ ವೇಳೆಗೆ ಸುಳ್ಳು ಸುದ್ದಿಯೊಂದು ಏನು  ಮಾಡಿಬಿಡಬಲ್ಲುದೋ ಅವೆಲ್ಲವನ್ನೂ ಮಾಡಿಯಾಗಿತ್ತು.
    ಪಶ್ಚಿಮ ಬಂಗಾಳದ ಅಸನ್ಸೋಲ್‍ನಲ್ಲಿ ನಡೆದ ಹಿಂಸೆಗೆ ಸಂಬಂಧಿಸಿ ಇತ್ತೀಚೆಗೆ ಒಂದು ವೀಡಿಯೋವನ್ನು ಬಿಜೆಪಿಯ ಐಟಿ ವಿಭಾಗದ  ಕಾರ್ಯದರ್ಶಿ ತರುಣ್ ಸೇನ್ ಗುಪ್ತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಮುಸ್ಲಿಮ್ IAS ಅಧಿಕಾರಿಯೊಬ್ಬರು  ಹನುಮಾನ್ ಭಕ್ತರನ್ನು ಥಳಿಸುತ್ತಿರುವ ವೀಡಿಯೋ ಎಂಬುದಾಗಿ ಅದಕ್ಕೆ ಒಕ್ಕಣೆಯನ್ನು ಕೊಡಲಾಗಿತ್ತು. ನಿಜವಾಗಿ, ಅಸನ್ಸೋಲ್‍ನಲ್ಲಿ  ಅಂಥಹದ್ದೋಂದು ಘಟನೆ ನಡೆದೇ ಇರಲಿಲ್ಲ. ಅದು ಯೂಟ್ಯೂಬ್‍ನಿಂದ ಎತ್ತಿಕೊಂಡ ಹಳೆಯ ವೀಡಿಯೋ ಆಗಿತ್ತು. ಆದರೆ, ಆ ವೀಡಿಯೋ  ಅಸನ್ಸೋಲ್ ಅನ್ನು ಉರಿಸಿದ್ದು ಮತ್ತು ಮೌಲಾನಾ ಇಮ್ದಾದುಲ್ಲಾರ 16ರ ಹರೆಯದ ಮಗನನ್ನು ಗುಂಪು ಥಳಿಸಿ ಕೊಂದುದು ಎಲ್ಲರಿಗೂ  ಗೊತ್ತು. ಇತ್ತೀಚೆಗೆ ಕೇರಳದ ಕಣ್ಣೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತರೋರ್ವರ ಹತ್ಯೆ ನಡೆಯಿತು. ಆ ಬಳಿಕ ರಾಜ ಶೇಖರ್ ಎಂಬವರು  ಒಂದು ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಯುವಕರು ಸಂಭ್ರಮಿಸುತ್ತಿರುವ ವೀಡಿಯೋ. ಕಣ್ಣೂರಿನ  ಹತ್ಯೆಗೆ ಇವರೆಲ್ಲ ಹೀಗೆ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ ಎಂದು ಟಿಪ್ಪಣಿಯಲ್ಲಿ ಹೇಳಲಾಗಿತ್ತು. ನಿಜವಾಗಿ, ಆ ಹತ್ಯೆಗೂ ಈ ಸಂಭ್ರಮಕ್ಕೂ  ಯಾವ ಸಂಬಂಧವೂ ಇರಲಿಲ್ಲ. ಕ್ರಿಕೆಟ್‍ನಲ್ಲಿ ಜಯಗಳಿಸಿದುದಕ್ಕೆ ಆ ಯುವಕರು ಸಂತೋಷ ವ್ಯಕ್ತಪಡಿಸಿದ್ದರು.
ಅಂದಹಾಗೆ, ಇವತ್ತು ಇಂಥ ವೀಡಿಯೋ ಮತ್ತು ಚಿತ್ರಗಳು ಮತ್ತೆ ಮತ್ತೆ ಜನರ ಬಳಿಗೆ ತಲುಪುತ್ತಲೇ ಇವೆ. ಅದು ಸುಳ್ಳು ಎಂದು  ಗೊತ್ತಾಗುವ ಮೊದಲೇ ಅದು ಬಹುದೊಡ್ಡ ಅನಾಹುತವನ್ನು ಮಾಡಿಯಾಗಿರುತ್ತದೆ. ಅನೇಕ ಬಾರಿ ತಾವು ವೀಕ್ಷಿಸಿದ ವೀಡಿಯೋ ಸುಳ್ಳು  ಎಂಬುದು ವೀಕ್ಷಕರಿಗೆ ಗೊತ್ತೂ ಇರುವುದಿಲ್ಲ. ಸುಳ್ಳು ಸುದ್ದಿ ವ್ಯಾಪಿಸಿದಷ್ಟು ವೇಗವಾಗಿ ಸತ್ಯ ಸುದ್ದಿ ವ್ಯಾಪಿಸುವುದಕ್ಕೂ ಕೆಲವೊಮ್ಮೆ  ವಿಫಲವಾಗುತ್ತದೆ. ಅಲ್ಲದೇ, ಒಂದು ಚಿತ್ರ ಅಥವಾ ಒಂದು ವೀಡಿಯೋ ಸತ್ಯವೋ ಸುಳ್ಳೋ ಅನ್ನುವುದನ್ನು ಪರಿಶೀಲಿಸಬೇಕಾದರೆ, ಸಮಯ  ತಗಲುತ್ತದೆ. ಹಾಗೆ ಪರಿಶೀಲಿಸು ತ್ತಿರುವಾಗ ಆ ವೀಡಿಯೋ ಅಥವಾ ಚಿತ್ರಗಳು ಅಸಂಖ್ಯ ಮಂದಿಯನ್ನು ತಲುಪಿರುತ್ತದೆ. ಆ ಬಳಿಕ ಅದು  ಸುಳ್ಳು ಎಂದು ಪತ್ತೆಯಾದರೂ ಸುಳ್ಳು ಹರಿದಾಡಿದಷ್ಟು ವೇಗದಲ್ಲಿ ಆ ಬಳಿಕ ಸತ್ಯ ಸುದ್ದಿ ಪ್ರಸಾರವಾಗುವುದಿಲ್ಲ. ಇತ್ತೀಚೆಗೆ ಮೌಲವಿಯೊಬ್ಬರು  ಹಿಂದೂ ಸನ್ಯಾಸಿಗೆ ಮದ್ಯವನ್ನು ಸುರಿದು ಕೊಡುವ ಚಿತ್ರ ಭಾರೀ ಸುದ್ದಿ ಮಾಡಿತ್ತು. ಖ್ಯಾತ ಬರಹಗಾರ್ತಿ ತಸ್ಲೀಮಾ ನಸ್ರೀನ್ ಮತ್ತು ಸಿನಿಮಾ ನಟ ರಿಷಿ ಕಪೂರ್ ಕೂಡ ಆ ಚಿತ್ರದಿಂದ ಪ್ರಭಾವಿತರಾಗಿದ್ದರು. ಅವರು ಆ ಚಿತ್ರವನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದರು. ಹಾಗಂತ,  ಅದು ನಿಜ ಚಿತ್ರ ಆಗಿರಲಿಲ್ಲ. ಯಾರೋ ಸೃಷ್ಟಿಸಿದ ಸುಳ್ಳು ಫೋಟೋ. ಆದ್ದರಿಂದಲೇ,
ಸ್ಮೃತಿ ಇರಾನಿಯವರ ಹೇಳಿಕೆಗೆ ಪ್ರತಿಭಟನೆ ವ್ಯಕ್ತವಾಗಿರುವುದು. ಸುಳ್ಳು ಸುದ್ದಿಯನ್ನು ಪ್ರಕಟಿಸುವ ಪತ್ರಿಕೆಗಳಿಗಿಂತ ಆ ಸುದ್ದಿಯನ್ನು ಸೃಷ್ಟಿ ಸಿದವರು ಮೊದಲು ಶಿಕ್ಷೆಗೆ ಅರ್ಹರು. ಈ ಪತ್ತೆ ಕಾರ್ಯ ಸಾಧ್ಯವೇ? ಪ್ರಧಾನಿ ಮೋದಿ ಮತ್ತು ಸ್ಮೃತಿ ಇರಾನಿಯವರೇ ಸುಳ್ಳು ಸೃಷ್ಟಿಕರ್ತರ  ಪಟ್ಟಿಯಲ್ಲಿದ್ದಾರೆ ಅನ್ನುವುದೇ ಬಹುದೊಡ್ಡ ವ್ಯಂಗ್ಯ.