ಸಂಜೋತಾ ಎಕ್ಸ್ ಪ್ರೆಸ್ ನಿಂದ ಮಕ್ಕಾ ಮಸೀದಿ ವರೆಗೆ: ಮೋದಿ ಆಡಳಿತದಲ್ಲಿ ಎನ್ಐಎ ತನಿಖೆ ಹಳ್ಳ ಹಿಡಿದ ಬಗೆ.. 

0
1301

ರಾಹುಲ್ ತ್ರಿಪಾಠಿ 
ಕನ್ನಡಕ್ಕೆ: ಆಯಿಷತುಲ್ ಅಫೀಫಾ 
ಮೂಲ: ದಿ ಇಂಡಿಯನ್ ಎಕ್ಸ್ ಪ್ರೆಸ್ 

ಸೆಪ್ಟೆಂಬರ್ 2006 ರಲ್ಲಿ ಮಹಾರಾಷ್ಟ್ರದ   ಮಾಲೆಗಾಂನಲ್ಲಿ  ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿತ್ತು , ಕನಿಷ್ಠ 30 ಮಂದಿ ಸಾವನ್ನಪ್ಪಿದರು ಮತ್ತು ಅನೇಕ ಮಂದಿ ಗಾಯಗೊಂಡಿದ್ದರು . ಐದು ತಿಂಗಳ ನಂತರ, ಫೆಬ್ರವರಿ 2007 ರಲ್ಲಿ, ದೆಹಲಿ-ಲಾಹೋರ್ ಸಂಜೋತಾ ಎಕ್ಸ್ ಪ್ರೆಸ್ ನ ಎರಡು ಬೋಗಿಗಳಲ್ಲಿ  ಸ್ಫೋಟ ಸಂಭವಿಸಿ 60 ಕ್ಕೂ ಹೆಚ್ಚು ಜನರು ಸಾವಿಗೀಡಾದರು. ಆ ವರ್ಷದ ಮೇ ತಿಂಗಳಲ್ಲಿ, ಹೈದರಾಬಾದ್ ನಲ್ಲಿ 400 ವರ್ಷಗಳಷ್ಟು ಇತಿಹಾಸವಿರುವ   ಮೆಕ್ಕಾ ಮಸೀದಿ ಸ್ಫೋಟ ಮತ್ತು ಆ ಬಳಿಕ ಪೊಲೀಸರು ಮತ್ತು ಜನರ ನಡುವೆ ಸಂಭವಿಸಿದ ಘರ್ಷಣೆಗಳಲ್ಲಿ 15 ಕ್ಕೂ ಹೆಚ್ಚು ಮಂದಿ ಮೃತಪಟ್ಟರು. 2007 ರ ಅಕ್ಟೋಬರ್ 11 ರಂದು ಅಜ್ಮೀರ್ ದರ್ಗಾ ಸಮೀಪ ನಡೆದ  ಸ್ಫೋಟವೊಂದರಲ್ಲಿ ಮೂವರು ಮೃತಪಟ್ಟರು ಮತ್ತು 17 ಕ್ಕಿಂತಲೂ ಹೆಚ್ಚು ಜನರು ಗಾಯಗೊಂಡರು. ಸುಮಾರು ಒಂದು ವರ್ಷದ ನಂತರ, ಸೆಪ್ಟೆಂಬರ್ 2008 ರಲ್ಲಿ ಮೂರು ಬಾಂಬ್ ಸ್ಫೋಟಗಳು – ಮಾಲೆಗಾಂವ್ ನಲ್ಲಿ ಎರಡು ಮತ್ತು ಗುಜರಾತ್ ನ  ಮೊಡಾಸದಲ್ಲಿ ಒಂದು – ಸ್ಫೋಟಗಳಲ್ಲಿ ಏಳು ಜನರು  ಸಾವಿಗೀಡಾದರು.
ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣದ ಕುರಿತು NIA 2011 ರಲ್ಲಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಇದಕ್ಕೂ ಉಳಿದ ಐದು  ಪ್ರಕರಣಗಳಿಗೂ ನಡುವೆ ಇರುವ ಸಾಮಾನ್ಯ ಸಂಬಂಧವನ್ನು ಪಟ್ಟಿಮಾಡಿತ್ತು. ಎಲ್ಲ ಘಟನೆಗಳಲ್ಲಿನ ದಾಳಿಕೋರರು ಸಾಮಾನ್ಯ ಸಿದ್ಧಾಂತದ ಮೂಲಕ ಸಂಬಂಧ ಹೊಂದಿದ್ದಾರೆ ಎಂದು ಸಂಸ್ಥೆ ಹೇಳಿತ್ತು: ಈ ಪ್ರಕರಣಗಳ ಆರೋಪಿಗಳು ಹಿಂದೂ ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದರು, ಅವರು “ಬಲವಾದ ಅಲ್ಪಸಂಖ್ಯಾತ  ವಿರೋಧಿ ಭಾವ”ವನ್ನು  ಹೊಂದಿದ್ದರು ಮತ್ತು ದೇವಾಲಯಗಳ ಮೇಲೆ ಭಯೋತ್ಪಾದಕ ದಾಳಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು NIA ಆರೋಪಪಟ್ಟಿಯಲ್ಲಿ ಹೇಳಿತ್ತು.
ಎಲ್ಲಾ ಸ್ಫೋಟಗಳಲ್ಲಿ ಮುಖ್ಯ ಆರೋಪಿಗಳಾಗಿರುವ – ಸಂದೀಪ್ ಡಾಂಗೆ ಮತ್ತು ರಾಮ್ಜಿ ಕಲ್ಸಂಗ್ರಾ – ಇನ್ನೂ ಬಂಧನಕ್ಕೊಳಪಟ್ಟಿಲ್ಲ. ಅಜ್ಮೀರ್ ಸ್ಫೋಟ ಪ್ರಕರಣದಲ್ಲಿ ಭಾಗಶಃ ಶಿಕ್ಷೆಯಾಗಿದೆ. ಮೆಕ್ಕಾ ಮಸೀದಿ ಪ್ರಕರಣದಲ್ಲಿ, ಎಲ್ಲಾ ಐದು ಪ್ರಮುಖ ಆರೋಪಿಗಳನ್ನು ಕಳೆದವಾರ ಖುಲಾಸೆಗೊಳಿಸಲಾಗಿದೆ  ಮತ್ತು ಗುಜರಾತ್ ನ ಮೊಡಸಾದಲ್ಲಿ ನಡೆದ  ಸ್ಫೋಟ ಪ್ರಕರಣವನ್ನು ಎನ್ಐಎ 2015 ರಲ್ಲಿ ಮುಚ್ಚಿದೆ.
ಗತಿ ಬದಲಾವಣೆ
ಆದರೆ, 2014 ರ ಬಳಿಕ NIA ನಿಲುವಿನಲ್ಲಿ ಮಹತ್ತರ ಬದಲಾವಣೆಗಳು ಕಂಡುಬಂದುವು. 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ  ಸಾಧ್ವಿ ಪ್ರಜ್ಞಾ ಠಾಕೂರ್ ಹೆಸರನ್ನು ಎನ್ಐಎ ಉಲ್ಲೇಖಿಸಲಿಲ್ಲ. ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಎಂಬಾತನಿಗೆ ಕಳೆದ ವರ್ಷ ಜಾಮೀನು ನೀಡಲಾಯಿತು. ಸ್ಫೋಟದಲ್ಲಿ ಬಳಸಲ್ಪಟ್ಟ ಸಾಧ್ವಿ ಗೆ ಸಂಬಂಧಿಸಿದ ಮೋಟಾರ್ ಸೈಕಲ್ ಅನ್ನು ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರು ಪತ್ತೆ ಹಚ್ಚಿದಾಗ ಮಾತ್ರ  ಡಾಂಗೆ ಮತ್ತು ಕಲ್ಸಂಗ್ರಾ ಅವರ ಹೆಸರುಗಳು ಕೇಳಿಬಂದಿತ್ತು.
ಈ ಎಲ್ಲಾ ಬದಲಾವಣೆಗಳನ್ನು ಮೊದಲ ಬಾರಿಗೆ 2015 ರಲ್ಲಿ ಮಾಲೆಗಾಂವ್ ಪ್ರಕರಣದಲ್ಲಿ ವಿಶೇಷ ಸಾರ್ವಜನಿಕ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ಬಹಿರಂಗಪಡಿಸಿದರು . “ಕೇಂದ್ರದಲ್ಲಿ ಸರಕಾರದ ಬದಲಾವಣೆಯ ನಂತರ, ಈ ಭಯೋತ್ಪಾದನಾ ಪ್ರಕರಣಗಳಲ್ಲಿ ಮೃದುವಾಗಿ ಹೋಗಲು ಎನ್ಐಎ ನನ್ನನ್ನು ಕೇಳಿದೆ …” ಎಂದು ಆ ವರ್ಷದ ಅಕ್ಟೋಬರ್ ನಲ್ಲಿ ಸಾಲ್ಯಾನ್ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಸಂಜೋತಾ  ಎಕ್ಸ್ ಪ್ರೆಸ್ ಮತ್ತು ಮೆಕ್ಕಾ ಮಸ್ಜಿದ್ ಸ್ಫೋಟ ಪ್ರಕರಣಗಳಲ್ಲಿ ಅಸೀಮಾನಂದ ಅವರಿಗೆ ಕೋರ್ಟು ಜಾಮೀನು ನೀಡಿದ  ನಂತರ ಎನ್ಐಎ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲಿಲ್ಲ. ಅಸೀಮಾನಂದ  ಮತ್ತು ಅಜ್ಮೀರ್ ದರ್ಗಾ ಪ್ರಕರಣದ ಇತರ ಆರೋಪಿಗಳು 2017 ರಲ್ಲಿ ಖುಲಾಸೆಗೊಂಡಾಗಲೂ ಅದು ಮೇಲ್ಮನವಿ ಸಲ್ಲಿಸಲಿಲ್ಲ.   ಈ ಹಿಂದೆ ಪುರೋಹಿತ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ನಲ್ಲಿ  ವಿರೋಧ ವ್ಯಕ್ತಪಡಿಸಿದ್ದ NIA, ಈಗ ಅವರ ಜಾಮೀನು ಅರ್ಜಿಯನ್ನು ವಿರೋಧಿಸುತ್ತಿಲ್ಲ
ಬದಲಾಗಿ, ಎನ್ಐಎಗೆ ಪುರೋಹಿತ್ ಪರವಾಗಿ ಇಬ್ಬರು ಸಾಕ್ಷಿಗಳಾದ ಡಾ ಆರ್ ಪಿ ಸಿಂಗ್ ಮತ್ತು ಯಶ್ಪಾಲ್ ಭಾದಾನಾ ಸಿಕ್ಕಿದ್ದಾರೆ. ಪುರೋಹಿತ್ ವಿರುದ್ಧ ಸಾಕ್ಷ್ಯ ಹೇಳುವಂತೆ ಮಹಾರಾಷ್ಟ್ರ ಎಟಿಎಸ್ ತಮ್ಮ ಮೇಲೆ ಒತ್ತಾಯಿಸಿತ್ತು  ಎಂದು 2008 ಮಾಲೆಗಾಂವ್ ಸ್ಫೋಟಗಳಿಗೆ ಸಂಬಂಧಿಸಿ  ಮ್ಯಾಜಿಸ್ಟ್ರೇಟ್ ಎದುರು ಅವರು ಹೇಳಿಕೆ ದಾಖಲಿಸಿದ್ದಾರೆ.


ಆಮೆಗತಿಯ ತನಿಖೆ
2008 ರ ಮಾಲೆಗಾಂವ್ ಸ್ಫೋಟಗಳ ನಂತರ ಕರ್ಕರೆ ನೇತೃತ್ವದ ಮಹಾರಾಷ್ಟ್ರ ಎಟಿಎಸ್ ಆ ವರ್ಷ ಸೆಪ್ಟೆಂಬರ್ ನಲ್ಲಿ ಸಾಧ್ವಿ ಪ್ರಜ್ಞಾ ಮತ್ತು ಪುರೋಹಿತ್ ನನ್ನು ಬಂಧಿಸಿತು. ಮಾಲೆಗಾಂವ್ ನಲ್ಲಿ ಸ್ಫೋಟಕಗಳನ್ನು ಸಾಗಿಸಲು ಸಾಧ್ವಿಯ  ಮೋಟರ್ ಬೈಕ್ ಬಳಸಲಾಗಿತ್ತು .ಆದರೆ ಇದಾಗಿ ಒಂದು ತಿಂಗಳೊಳಗೆ ಅಂದರೆ 2008 ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಕರ್ಕರೆ ಕೊಲ್ಲಲ್ಪಟ್ಟರು. 2007 ರ ಅಜ್ಮೀರ್ ದರ್ಗಾ ಪ್ರಕರಣವನ್ನು ತನಿಖೆ ನಡೆಸುತ್ತಿದ್ದ  ರಾಜಸ್ಥಾನ ಎಟಿಎಸ್ – ಲೋಕೇಶ್ ಶರ್ಮಾ ಮತ್ತು ದೇವೇಂದ್ರ ಗುಪ್ತಾ ಎಂಬ ಇಬ್ಬರನ್ನು ಮೆಕ್ಕಾ ಮಸೀದಿ, ಅಜ್ಮೀರ್ ದರ್ಗಾ, ಸಂಜೋತಾ ಎಕ್ಸ್ ಪ್ರೆಸ್ ಮತ್ತು ಮಾಲೆಗಾಂವ್ ಸ್ಫೋಟ ಪ್ರಕರಣಗಳ ಆರೋಪದಲ್ಲಿ ಬಂಧಿಸಿತು.  (ಇವರಿಗೆ  ಆರೆಸ್ಸೆಸ್ ಜೊತೆ ಸಂಬಂಧ ಇದೆ ಎಂದು ಆರೋಪಿಸಿತ್ತು).  2007 ರಲ್ಲಿ ಕೊಲೆಯಾದ ಮಾಜಿ ಆರೆಸ್ಸೆಸ್ ಪ್ರಚಾರಕ ಸುನೀಲ್ ಜೋಶಿಯು ಈ ದಾಳಿಯನ್ನು ನಡೆಸಿದ ಗುಂಪಿನ ನಾಯಕನಾಗಿದ್ದ ಎಂದು ಆರೋಪಿಸಲಾಗಿದೆ.
2006 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ, ಮಹಾರಾಷ್ಟ್ರ ಎಟಿಎಸ್ ಅಡಿಯಲ್ಲಿ ಒಂಬತ್ತು ಜನರನ್ನು ಬಂಧಿಸಿತ್ತು . ನಿಷೇಧಿತ ಸಿಮಿಯು ಈ  ಸ್ಫೋಟಗಳನ್ನು ನಡೆಸಿದೆ  ಎಂದು ಹೇಳಲಾಗಿತ್ತು. ಎಟಿಎಸ್ ನಿಂದ  ತನಿಖೆಯನ್ನು ವಹಿಸಿದ  ಸಿಬಿಐ ಕೂಡ ಒಂಬತ್ತು ಮಂದಿ ಈ ಸ್ಫೋಟಗಳನ್ನು ನಡೆಸಿದ್ದಾರೆಂದು ತೀರ್ಮಾನಿಸಿತ್ತು . ಅಸೀಮಾನಂದ ತಪ್ಪೊಪ್ಪಿಕೊಂಡರು ಮತ್ತು ಬಳಿಕ ಅದನ್ನು ಹಿಂತೆಗೆದುಕೊಂಡರು. ಇದು ಬಂಧಿತ ಮುಸ್ಲಿಂ ಯುವಕರಿಗೆ  ಜಾಮೀನು ಪಡೆಯಲು ಸಹಾಯ ಮಾಡಿತು. ಸಂಜೋತಾ  ಸ್ಫೋಟ ಪ್ರಕರಣದಲ್ಲಿ ಎನ್ಐಎ ಸಲ್ಲಿಸಿದ ಆರೋಪಪಟ್ಟಿ  ಪ್ರಕಾರ, ಹೆಚ್ಚಿನ ಪ್ರಯಾಣಿಕರು ಪಾಕಿಸ್ತಾನಿ  ಮುಸ್ಲಿಮರಾಗಿದ್ದರಿಂದ ಡಾಂಗೆ ಮತ್ತು ಜೋಶಿ ರೈಲು ಆಯ್ಕೆ ಮಾಡಿದರು.
“ಇದಕ್ಕಾಗಿ ನಮಗೆ  ಬೇರೆ ರೀತಿಯ ಬಾಂಬ್ ಅಗತ್ಯವಿದೆ, ವಿವಿಧ ರಾಸಾಯನಿಕಗಳನ್ನು ಜೋಡಿಸಬೇಕಾಗಿದೆ. ಚಲಿಸುತ್ತಿರುವ  ರೈಲಿನಲ್ಲಿ  ಏಕಕಾಲಕ್ಕೆ ಅನೇಕ ಸ್ಫೋಟಗಳು ಸಂಭವಿಸಲು  ಸಿಮ್ ಕಾರ್ಡ್ ಬಾಂಬುಗಳು ಪ್ರಯೋಜನಕಾರಿ ಅಲ್ಲ” ಎಂದು ಸುನೀಲ್ ಜೋಶಿ ಹೇಳಿರುವುದನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತುತ ಹರಿಯಾಣದ ಪಂಚಕುಲ ನ್ಯಾಯಾಲಯದಲ್ಲಿ ರೈಲು ಸ್ಫೋಟ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಸೀಮಾನಂದ 2015 ರಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿದ್ದರೆ.
ಮಾಹಿತಿ ಕಲೆಹಾಕುವಿಕೆ :
ಈ ಆರೂ ಪ್ರಕರಣಗಳಲ್ಲೂ ಬಲಪಂಥೀಯ ಗುಂಪುಗಳ ಪಾತ್ರವು ನಿಚ್ಚಳವಾಗಿತ್ತು. ಎನ್ಐಎ ಪ್ರಕಾರ, ದಾಳಿಯನ್ನು ಕೈಗೊಳ್ಳುವ ಯೋಜನೆಯನ್ನು 2001 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಕೆಲವು ಆರೋಪಿಗಳು ಅಕ್ಟೋಬರ್ 26, 2005 ರಂದು ಜೈಪುರದಲ್ಲಿ ಭೇಟಿಯಾದರು. ಈ ಸಭೆಯ ನಂತರ ಶೀಘ್ರದಲ್ಲೇ ದೇವೇಂದ್ರ ಗುಪ್ತಾ, ಲೋಕೇಶ್ ಶರ್ಮಾ ಮತ್ತು ಸುನಿಲ್ ಜೋಶಿಯವರು  ದಾಳಿಯಲ್ಲಿ ಉಪಯೋಗಿಸಲಾದ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡುಗಳ ವ್ಯವಸ್ಥೆ ಮಾಡಿದರು.
ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ನಿಂದ  ನಕಲಿ ಐಡಿ ಕಾರ್ಡ್ ಗಳನ್ನು ಉಪಯೋಗಿಸಿ 11 ಸಿಮ್ ಕಾರ್ಡುಗಳನ್ನು ಖರೀದಿಸಲಾಯಿತು. ಜೋಶಿ ಮತ್ತು ಡಾಂಗೆ ಮತ್ತಿತರರು ಬಾಂಬುಗಳನ್ನು ಹೇಗೆ ತಯಾರಿಸಬೇಕೆಂದು ಕಲಿಸಿದರು ಎಂದು ಆರೋಪಿಸಲಾಗಿದೆ
ಏಕ ಪ್ರಕಾರದ ಬಾಂಬುಗಳು :
ಮೆಕ್ಕಾ ಮಸೀದಿ, ಅಜ್ಮೀರ್ ದರ್ಗಾ ಮತ್ತು ಮಾಲೆಗಾಂವ್ ಸ್ಫೋಟಗಳಲ್ಲಿ ಬಳಸಲಾದ  ಬಾಂಬ್ ಗಳ ಮಧ್ಯೆ ಹಲವು ಸಾಮಾನ್ಯ ಲಕ್ಷಣಗಳಿದ್ದುವು. ಸಂಜೋತಾ ಸ್ಫೋಟಗಳನ್ನು ಹೊರತುಪಡಿಸಿದರೆ, ಬಹುತೇಕ ಎಲ್ಲಾ ಬಾಂಬುಗಳಲ್ಲಿ ಲೋಹದ ಕೊಳವೆಗಳು ಇದ್ದುವು ಮತ್ತು ಅವು ಒಂದು ಬದಿಯಲ್ಲಿ ಏಕ ಸಾಲುಗಳಲ್ಲಿ ಚಡಿಗಳನ್ನು ಹೊಂದಿದ್ದುವು.
ಸಂಜೋತಾ ದಾಳಿಯಲ್ಲಿ ಬಳಸಲಾದ ಪೊಟಾಶಿಯಂ ಕ್ಲೋರೇಟ್, ಮೆಕ್ಕಾ ಮಸೀದಿ ಮತ್ತು ಅಜ್ಮೀರ್ ಸ್ಫೋಟಗಳಲ್ಲಿ ಬಳಸಲಾಗಿತ್ತು ಮತ್ತು  ಒಂದು ಶಸ್ತ್ರಾಸ್ತ್ರ ಸಾಧನದೊಂದಿಗೆ ಸೂಟ್ ಕೇಸ್ ನಲ್ಲಿ ಇರಿಸಲಾಗಿತ್ತು.
ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿನ ಆರೋಪಪಟ್ಟಿಯಲ್ಲಿ ಎನ್ ಐ ಎ ಹೀಗೆ ಹೇಳಿದೆ-
“ಮೊಬೈಲ್ ಮತ್ತು ಸಿಮ್ ಕಾರ್ಡುಗಳನ್ನು ಟೈಮರ್ ರೂಪದಲ್ಲಿ ಬಳಸಲಾಗಿದೆ, ಕಂಟೇನರ್ ಗಳು ಒಂದೇ ಆಗಿವೆ, ಲಾಕ್ ಸಿಸ್ಟಮ್ ಒಂದೇ ಆಗಿವೆ, ಮುದ್ರಿತ ಸರ್ಕ್ಯೂಟ್ ಬೋರ್ಡ್ ಗಳು  ಒಂದೇ ಆಗಿವೆ. ಇದು ಒಂದೇ ಗುಂಪಿನ ಸದಸ್ಯರು ಬಾಂಬ್ ಸ್ಫೋಟಗಳನ್ನು  ನಡೆಸಿದ್ದಾರೆನ್ನುವುದಕ್ಕೆ ಪುರಾವೆಯಾಗಿದೆ.”
ಸಂಜೋತಾ ಎಕ್ಸ್ ಪ್ರೆಸ್ ನಿಂದ  ಪಡೆಯಲಾದ ಎರಡು ಸ್ಪೋಟಿಸದ  ಐಇಡಿಗಳ ಫೋರೆನ್ಸಿಕ್ ವಿಶ್ಲೇಷಣೆಯು ಈ ಸಾಮ್ಯತೆಯನ್ನು ಪಟ್ಟಿಮಾಡಿದೆ. ಅದೇನೆಂದರೆ, ಸ್ಫೋಟಗಳನ್ನು  ಜೋಡಿಸುವ  ಉದ್ದದ ತಂತಿಗಳು ಎರಡೂ ಸ್ಫೋಟಗಳಲ್ಲಿ (ಮೆಕ್ಕಾ ಮತ್ತು ಅಜ್ಮೀರ್) ಮೊಬೈಲ್ ಫೋನ್ ಗಳಲ್ಲಿ ಎರಡೂ ಪಾರ್ಶ್ವ ಭಾಗದಿಂದ ಜೋಡಿಸಲಾಗಿತ್ತು.  ಈ  ಎರಡೂ ಪ್ರಕರಣಗಳಲ್ಲಿ ಬಾಂಬು ಸಂಬಂಧಿ ಕಬ್ಬಿಣದ ಕೊಳವೆಗಳನ್ನು  ಕಪ್ಪು ಬಣ್ಣದೊಂದಿಗೆ ಮಾಡಲಾಗಿತ್ತು ….