ಸಣ್ಣ ಕಥೆ -ಗುಣಾಂತರ

0
1201

ಸಣ್ಣ ಕಥೆ

ಗುಣಾಂತರ

ಪಟ್ಟಣದಲ್ಲಿ ಕೋಮು ದಂಗೆ ಆರಂಭವಾಗಿದೆ. ಎರಡು ಕೋಮಿನ ಜನರು ತಮ್ಮ ತಮ್ಮ ಏರಿಯಾಗಳಲ್ಲಿ ತಲವಾರು, ಮಚ್ಚು ಹಾಗೂ ಕತ್ತಿ ಮತ್ತಿತರ ಆಯುಧಗಳೊಂದಿಗೆ ತಯಾರಾಗಿದ್ದಾರೆ. ಪರ ಕೋಮಿನ ಯಾರೊಬ್ಬರು ಕಾಣಸಿಕ್ಕಿದರೆ ಸಾಕು, ಸೀಳಿ ಬಿಡುವ ಆತುರದಲ್ಲಿದ್ದಾರೆ.

ಮಗುವಿನ ಆರೋಗ್ಯ ಬಹಳವಾಗಿ ಕೆಟ್ಟಿರುವುದರಿಂದ ಆತ ಬಹಳ ಜಾಗರುಕನಾಗಿ ಮನೆಯ ಹೊರಗೆ ಕಾಲಿಟ್ಟಿದ್ದ. ಡಾಕ್ಟ್ರ ಮನೆ ಪಟ್ಟಣದ ಇನ್ನೊಂದು ಮೂಲೆಯಲ್ಲಿರುವುದು. ದುರಾದೃಷ್ಟವಶಾತ್, ಆ ಧರ್ಮರಕ್ಷಕರ ಕೈಗೆ ಆತ ಸಿಕ್ಕಿ ಬಿದ್ದನು.

ಸೀಳಿ ಬಿಡು, ನಾಯಿ… ಮಗ, ಸೂ… ಮಗ, ಪೀಸ್ ಪೀಸ್ ಮಾಡ್ಬಿಡೋಣ…..

ಆತನ ಅಂಗಲಾಚುವಿಕೆ, ರೋದನ, ಆಕ್ರಂದನಗಳಿಗೆ ಯಾವುದೇ ಬೆಲೆ ಸಿಗಲೇ ಇಲ್ಲ. ಕೈ-ಕಾಲು ಹಿಡಿದರೂ  ಧರ್ಮ-ಸಂಸ್ಕೃತಿ ರಕ್ಷಕರಿಗೆ ಕ್ಯಾರೇ ಅನಿಸಲಿಲ್ಲ. ರಕ್ತದ ಹೊಳೆ ಹರಿಯಿತು.

*****

ಬೆಳಗ್ಗಿನ ಪ್ರಶಾಂತ ವಾತವರಣದಲ್ಲಿ ನಾಯಿಯೊಂದು ಬೊಗಳಿತು. ಆ ನಾಯಿಯ  ಬೊಗಳುವಿಕೆಗೆ ಪ್ರತಿಕ್ರಯಿಸುತ್ತಾ ಆ ಏರಿಯಾದ ಎಲ್ಲಾ ನಾಯಿಗಳು ಬೊಗಳಲಾರಂಭಿಸಿದವು. ಎಲ್ಲಾ ನಾಯಿಗಳು ಒಂದು ಕಡೆ ಬಂದು ಸೇರಿದವು. ಬೇರೆ ಏರಿಯಾದ ನಾಯಿಯೊಂದು ಈ ಏರಿಯಾಕ್ಕೆ ಬಂದಿತ್ತು.

ಈ ಎಲ್ಲಾ ನಾಯಿಗಳ ಬೊಗಳುವಿಕೆಗೆ ಎದೆ ಝಲ್ ಎನ್ನುತಿತ್ತು, ಮೃಗೀಯತೆಯ ತುತ್ತತುದಿಯಲ್ಲಿದ್ದ ಆ ನಾಯಿಗಳ ಮುಖವನ್ನು ನೋಡಲೂ ಭಯಂಕರ ಭಯವಾಗುತಿತ್ತು. ಆ ಬಡಪಾಯಿ ನಾಯಿ ತನ್ನ ಬಾಲವನ್ನು ಒತ್ತಿಕೊಂಡು ದೈನ್ಯತೆಯಿಂದ ಈ ’ಶತ್ರು’ ಗುಂಪಿನ ಕಡೆ ನೋಡಿ, ತನ್ನದೇ ಭಾಷೆಯಲ್ಲಿ ಕುಂಯ್ಯ್ ಕುಂಯ್ಯ್ ಎನ್ನುತ್ತಿತ್ತು. ಅದೇನನ್ನಿತು ಗೊತ್ತಿಲ್ಲ, ಈ ದೈತ್ಯ ಗುಂಪು ಆ ಬಡಪಾಯಿ ನಾಯಿ ಜೊತೆ ಜಗಳವಾಡದೆ ತಮ್ಮ ಏರಿಯಾದ ಗಡಿಯವರೆಗೆ ಅಟ್ಟಿಸಿಕೊಂಡು ಹೋಗಿ ಅದರ ಗಡಿಪಾರನ್ನು ಖಾತ್ರಿ ಪಡಿಸಿಕೊಂಡವು.

ನಾಯಿಗಳೆಲ್ಲವು ತಮ್ಮ ತಮ್ಮ ಗಲ್ಲಿಗಳಿಗೆ, ಮನೆಗಳಿಗೆ ಹಿಂತಿರುಗಿದವು.

ಇಮೂ, ಬೆಂಗಳೂರು